ಜೈಪುರದ ಪ್ರಸಿದ್ಧ ಹವಾ ಮಹಲ್‌ನ ಇತಿಹಾಸ, 953 ಜರೋಖಾಗಳು, ಐದು ಅಂತಸ್ತಿನ ವಿನ್ಯಾಸ ಮತ್ತು ರಜಪೂತ-ಮೊಘಲ್ ವಾಸ್ತುಶಿಲ್ಪದ ವಿಶೇಷತೆಗಳನ್ನು ತಿಳಿಯಿರಿ. ‘ಗಾಳಿಯ ಅರಮನೆ’ ಎಂದು ಕರೆಯಲು ಕಾರಣವೇನು?

ಭಾರತದ ರಾಜಸ್ಥಾನ ರಾಜ್ಯದ ರಾಜಧಾನಿ ಜೈಪುರದಲ್ಲಿರುವ ಅತ್ಯಂತ ಪ್ರಸಿದ್ಧ ಐತಿಹಾಸಿಕ ಸ್ಮಾರಕವಾಗಿದೆ. ಇದು ತನ್ನ ವಿಶಿಷ್ಟ ವಾಸ್ತುಶಿಲ್ಪ ಮತ್ತು ಗುಲಾಬಿ ಬಣ್ಣದ ಕಲ್ಲಿನಿಂದ ಜಗತ್ಪ್ರಸಿದ್ಧವಾಗಿದೆ. ಕ್ರಿಶ 1799 ರಲ್ಲಿ ಮಹಾರಾಜ ಸವಾಯಿ ಪ್ರತಾಪ್ ಸಿಂಗ್ ಅವರು ಇದನ್ನು ನಿರ್ಮಿಸಿದ್ದು, ರಜಪೂತರ ಹೆಗ್ಗುರುತಾಗಿ ಖ್ಯಾತಿ ಹೊಂದಿದೆ. ಈ ಕಟ್ಟಡವು ಅಷ್ಟಭುಜಕೃತಿಯಲ್ಲಿದ್ದು, ಮರಲುಗಲ್ಲಿನ ಕಿಟಕಿಗಳನ್ನು ಹೊಂದಿದೆ. ಇದರ ವಿನ್ಯಾಸವನ್ನು ಲಾಲ್ ಚಂದ್ ಉಸ್ತಾದ್ ಮಾಡಿದ್ದರು.

ಇದು ಶ್ರೀಕೃಷ್ಣನ ಕಿರೀಟದ ಆಕಾರದಲ್ಲಿದೆ. ಐದು ಅಂತಸ್ತಿನ ಈ ಕಟ್ಟಡದಲ್ಲಿ ಸುಮಾರು 953 ಸಣ್ಣ ಕಿಟಕಿಗಳಿವೆ, ಇವುಗಳನ್ನು ''ಜರೋಖಾಗಳು'' ಎಂದು ಕರೆಯಲಾಗುತ್ತದೆ. ಆಗಿನ ಕಾಲದಲ್ಲಿ ರಜಪೂತ ರಾಜಮನೆತನದ ಹೆಣ್ಣುಮಕ್ಕಳು ಸಾಮಾನ್ಯವಾಗಿ ಕೆಲವು ಕಟ್ಟಲೆಗಳನ್ನು ಹೊಂದಿದ್ದರು, ರಜಪೂತ ರಾಣಿಯರು ಮತ್ತು ಮಹಿಳೆಯರು ಬೀದಿಯಲ್ಲಿ ನಡೆಯುವ ಮೆರವಣಿಗೆಗಳು ಮತ್ತು ದೈನಂದಿನ ಚಟುವಟಿಕೆಗಳನ್ನು ಹೊರಗಿನವರಿಗೆ ಕಾಣದಂತೆ ನೋಡಲು ಆಗ ಈ ಕಿಟಕಿಗಳನ್ನು ನಿರ್ಮಿಸಲಾಗಿತ್ತು. ಈ ಅರಮನೆಯಲ್ಲಿ ಸಾವಿರಾರು ಸಣ್ಣ ಕಿಟಕಿಗಳಿರುವುದರಿಂದ, ಬೇಸಿಗೆಯಲ್ಲೂ ಒಳಗೆ ಗಾಳಿ ಬೀಸುತ್ತಿರುತ್ತದೆ,

"ಪಿಂಕ್ ಸಿಟಿ"

ಆದ್ದರಿಂದಲೇ ಇದನ್ನು ''ಹವಾ ಮಹಲ್'' (ಗಾಳಿಯ ಅರಮನೆ) ಎಂದು ಕರೆಯುತ್ತಾರೆ. ಹವಾ ಮಹಲ್ ಕೆಂಪು ಹಾಗೂ ಗುಲಾಬಿ ಮಿಶ್ರಿತ ಮರಳುಗಲ್ಲಿನಿಂದ ನಿರ್ಮನವಾಗಿದೆ, ಈ ಕಾರಣದಿಂದ ಜೈಪುರವನ್ನೂ "ಪಿಂಕ್ ಸಿಟಿ" (ಗುಲಾಬಿ ನಗರ) ಎಂದು ಕರೆಯಲಾಗುತ್ತದೆ. ಹವಾ ಮಹಲ್‌ನಲ್ಲಿ ಮೆಟ್ಟಿಲುಗಳ ಬದಲಿಗೆ, ಐದು ಅಂತಸ್ತುಗಳನ್ನು ಸಂಪರ್ಕಿಸಲು ಇಳಿಜಾರಾದ ಹಾದಿಗಳನ್ನು (Ramps) ಬಳಸಲಾಗಿದೆ. ಇದರ ಒಳಭಾಗದಲ್ಲಿ ಕಾರಿಡಾರ್‌ಗಳು ಮತ್ತು ಸಣ್ಣ ಕೋಣೆಗಳಿವೆ.

ರಾಜ್ಯದ ಕಿರೀಟ

ಒಟ್ಟಾರೆಯಾಗಿ ಹವಾ ಮಹಲ್ ಕೇವಲ ಸೌಂದರ್ಯದ ಸಂಕೇತವಲ್ಲ, ಬದಲಾಗಿ ಇದು ರಜಪೂತ ವಾಸ್ತುಶಿಲ್ಪದ (ಕಮಾನುಗಳು, ಛತ್ರಿಗಳು) ಮತ್ತು ಮೊಘಲ್ ಶೈಲಿಯ (ಜಾಲರಿ ಕೆಲಸ) ಪರಿಪೂರ್ಣ ಮಿಶ್ರಣವಾಗಿದೆ. ಪ್ರತಿನಿತ್ಯವೂ ಜೈಪುರದ ಹೆಮ್ಮೆಯ ಸಂಕೇತ, ರಾಜಸ್ಥಾನ ರಾಜ್ಯದ ಕಿರೀಟದಂತಿರುವ ಹವಾ ಮಹಲ್ ಅನ್ನು ವೀಕ್ಷಿಸಲು ಸಾವಿರಾರು ಪ್ರವಾಸಿಗರು, ಸಂಶೋಧಕರು ಭೇಟಿ ನೀಡಿ ಈ ಕಟ್ಟಡದ ವಾಸ್ತುಶೈಲಿಯ ಬಗ್ಗೆ ಮರು ಹೋಗುತ್ತಾರೆ.