ಚೀನಾದಲ್ಲಿ ಎರಡು ಕುಟುಂಬಗಳ ನಡುವೆ ಕೇವಲ ಕೆಲವೇ ಅಡಿ ಜಾಗಕ್ಕಾಗಿ 1781ರಿಂದ ನಡೆಯುತ್ತಿದ್ದ ಭೂವಿವಾದವನ್ನು ನ್ಯಾಯಾಲಯವು ಇತ್ಯರ್ಥಪಡಿಸಿದೆ. ನ್ಯಾಯಾಧೀಶರು ಇತಿಹಾಸದ ಪ್ರಸಿದ್ಧ ಕಥೆಯೊಂದನ್ನು ನೆನಪಿಸುವ ಮೂಲಕ 240 ವರ್ಷಗಳ ಹಳೆಯ ದ್ವೇಷವನ್ನು ಕೊನೆಗೊಳಿಸಿದ್ದಾರೆ. ಇದರಿಂದ ಉಭಯ ಕುಟುಂಬಗಳು ತಮ್ಮ ಅಹಂಕಾರ ಬಿಟ್ಟು ಸೌಹಾರ್ದತೆಯಿಂದ ರಾಜಿ ಮಾಡಿಕೊಂಡಿವೆ.

ಅದು ಕೆಲವೇ ಅಡಿ ಜಾಗ ಅಷ್ಟೇ. ಆ ಜಾಗಕ್ಕಾಗಿ ಎರಡು ಕುಟುಂಬಗಳ ಮಧ್ಯೆ ಬರೋಬ್ಬರಿ 240 ವರ್ಷಗಳಿಂದ ಕಿತ್ತಡಿಕೊಂಡಿದ್ದವು. ತಲೆಮಾರುಗಳು ಉರುಳಿದವು, ಸರ್ಕಾರಗಳು ಬದಲಾದವು. ಆದರೂ ಜಾಗದ ಮೇಲಿನ ವ್ಯಾಮೋಹ ಮತ್ತು ದ್ವೇಷ ಮಾತ್ರ ಹಾಗೇ ಉಳಿದುಕೊಂಡಿತ್ತು. ಇತ್ತೀಚೆಗೆ ಕೋರ್ಟ್, ಒಂದು ಪುರಾತನ ಕಥೆ ಮತ್ತು ಐತಿಹಾಸಿಕ ಪಾಠ ನೆನಪಿಸುವ ಮೂಲಕ 1781ರಿಂದ ಬಗೆಹರಿಯದ ಪ್ರಕರಣವನ್ನ ಇತ್ಯರ್ಥ ಮಾಡಿದೆ!

ಏನಿದು ವಿಚಿತ್ರ ಘಟನೆ?

ಈ ಸ್ವಾರಸ್ಯಕರ ಘಟನೆ ನಡೆದಿರೋದು ಚೀನಾದ ಶಾಂಕ್ಸಿ ಪ್ರಾಂತ್ಯದ ಕ್ಸಿಯಾನ್ ನಗರದ ಯಾಂತಾ ಜಿಲ್ಲೆಯಲ್ಲಿ. ಇಲ್ಲಿನ ಡೂ ಮತ್ತು ಝಾಂಗ್ ಕುಟುಂಬಗಳ ನಡುವೆ ಗಡಿ ವಿವಾದ ಇತ್ತು. ಇತ್ತೀಚೆಗೆ ಡೂ ಕುಟುಂಬ ಮನೆಯ ಅಡುಗೆ ಕೋಣೆ ನವೀಕರಿಸಲು ಮುಂದಾಗಿತ್ತು. ಇದಕ್ಕೆ ಝಾಂಗ್ ಕುಟುಂಬ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಅಲ್ಲಿ ಎತ್ತರದ ಗೋಡೆ ಕಟ್ಟಿದರೆ ನಮ್ಮ ಮನೆಗೆ ಗಾಳಿ-ಬೆಳಕು ಬರುವುದಿಲ್ಲ. ಒಳಚರಂಡಿ ನೀರು ಹರಿಯಲು ಜಾಗ ಸಿಗೋದಿಲ್ಲ ಎಂದು ತಕರಾರು ತೆಗೆದಿತ್ತು.

ಈ ಗಲಾಟೆ ವಿಕೋಪಕ್ಕೆ ತಿರುಗಿ ಹೊಡೆದಾಟ ಆಗಿತ್ತು. ನಿತ್ಯವೂ ಬೈಗುಳ, ಕೈಕೈ ಮಿಲಾಯಿಸುವ ಹಂತ ತಲುಪಿತ್ತು. ಪೊಲೀಸರು ಹಾಗೂ ಗ್ರಾಮ ಸಮಿತಿ ಅನೇಕ ಬಾರಿ ಎರಡು ಕುಟುಂಬವನ್ನ ಸೇರಿಸಿ ಪಂಚಾಯ್ತಿ ಮಾಡಿತ್ತು. ಆದರೆ ಯಾವುದೇ ಪ್ರಯೋಜನ ಆಗಿರಲಿಲ್ಲ. ನಂತರ ಈ ಕಿತ್ತಾಟ ಕೋರ್ಟ್‌ ಮೆಟ್ಟಿಲೇರಿತು.

1781ರ ಹಳೆಯ ಪತ್ರ.. ತಲೆಮಾರುಗಳ ದ್ವೇಷ..

ವಿಚಾರಣೆ ಆರಂಭಿಸಿದ ಕೋರ್ಟ್‌ಗೆ ದಂಗಾಗಿಸುವ ವಿಚಾರವೊಂದು ಬೆಳಕಿಗೆ ಬಂತು. ಇದು ಕೇವಲ ಇವತ್ತಿನ ಗೋಡೆಯ ಜಗಳ ಅಲ್ಲ. ಬರೋಬ್ಬರಿ 1781ರಿಂದ ಶುರುವಾಗಿರುವ ಜಗಳ. ಕ್ವಿಂಗ್ ರಾಜವಂಶದ ಆಳ್ವಿಕೆಯ ಕಾಲದಲ್ಲಿ ಮಾಡಿಕೊಂಡಿದ್ದ ಆಸ್ತಿ ಪತ್ರದ ಪ್ರಕಾರ.. ಅಂದಿನಿಂದಲೂ ಈ ಎರಡೂ ಮನೆತನಗಳು ಕೆಲವೇ ಅಡಿ ಜಾಗಕ್ಕಾಗಿ ಕಾದಾಡುತ್ತಿದ್ದವು! 1949ರಲ್ಲಿ ಚೀನಾದಲ್ಲಿ ಗಣರಾಜ್ಯ ಉದಯವಾದರೂ ಈ ಎರಡು ಕುಟುಂಬದ ಮಧ್ಯೆ ರಕ್ತಸಿಕ್ತ ಕಾಳಗ ನಡೆದಿದ್ದವು. ಅಂದರೆ ಬರೋಬ್ಬರಿ ಏಳೆಂಟು ತಲೆಮಾರುಗಳಿಂದ ಈ ಹಗೆತನ ಮುಂದುವರಿದುಕೊಂಡು ಬರುತ್ತಿದೆ ಎಂಬ ವಿಚಾರ ಗೊತ್ತಾಯಿತು.

ಕೋರ್ಟ್‌ನಲ್ಲಿ ಏನಾಯ್ತು?

ಹಿಂದಿನ ಕಾಲದ ಪತ್ರವನ್ನು ನೋಡಿ ಕಾನೂನಿನ ಚೌಕಟ್ಟಿನಲ್ಲಿ ತೀರ್ಪು ನೀಡಿದರೆ.. ಈ ದ್ವೇಷ ಮತ್ತಷ್ಟು ಹೆಚ್ಚಾಗಬಹು ಅನ್ನೋದನ್ನು ನ್ಯಾಯಾಧೀಶರು ಅರಿತುಕೊಂಡರು. ಬದಲಾಗಿ ಇತಿಹಾಸದ ಪ್ರಸಿದ್ಧ ಘಟನೆ ಒಂದನ್ನು ನೆನಪಿಸಿದರು.

ಅದು ಪ್ರಾಚೀನ ಕ್ವಿಂಗ್ ರಾಜವಂಶದ ಪ್ರಸಿದ್ಧ ವಿದ್ವಾಂಸ ಹಾಗೂ ಮಂತ್ರಿ ಝಾಂಗ್ ಯಿಂಗ್ ಕಥೆ. ಒಮ್ಮೆ ಝಾಂಗ್ ಯಿಂಗ್ ಕುಟುಂಬ ನೆರೆಹೊರೆಯವರ ಜೊತೆ ಜಾಗದ ವಿಚಾರವಾಗಿ ಜಗಳವಾಡಿದರು. ಬಳಿಕ ದೂರದಲ್ಲಿದ್ದ ಮಂತ್ರಿ ಝಾಂಗ್‌ಗೆ ಸಹಾಯ ಕೋರಿ ಪತ್ರ ಬರೆದಿದ್ದರು. ಅದಕ್ಕೆ ಮಂತ್ರಿ ಝಾಂಗ್ ಯಿಂಗ್ ಪ್ರತಿಯಾಗಿ ಕವಿತೆ ಬರೆದು ಕಳುಹಿಸಿದ್ದ.

ಕೇವಲ ಒಂದು ಗೋಡೆಗಾಗಿ ಅಷ್ಟೊಂದು ದೂರದಿಂದ ಪತ್ರ ಬರೆಯೋದೇ? ನೆರೆಹೊರೆಯವರಿಗಾಗಿ ಮೂರು ಅಡಿ ಜಾಗ ಬಿಟ್ಟುಕೊಟ್ಟರೆ ಏನು ಮುಳುಗಿ ಹೋಗುತ್ತದೆ? ಇಂದಿಗೂ ಚೀನಾದ ಮಹಾಗೋಡೆ ಹಾಗೇ ಎದ್ದು ನಿಂತಿದೆ. ಆದರೆ ಅಷ್ಟು ದೊಡ್ಡ ಗೋಡೆ ಕಟ್ಟಿಸಿದ ಚಕ್ರವರ್ತಿ ಕಿನ್ ಶಿ ಹುವಾಂಗ್ ಇಂದು ಎಲ್ಲಿ ಹೋದ? ಎಂದು ಮಂತ್ರಿ ಪ್ರಶ್ನಿಸಿದ್ದರು. ತಮ್ಮ ಅಹಂಕಾರವನ್ನು ಬಿಟ್ಟು ಮೂರಡಿ ಜಾಗ ಬಿಟ್ಟುಕೊಡುವಂತೆ ಮಂತ್ರಿ ತಿಳಿಸಿದ್ದ. ಮಂತ್ರಿಯ ಆಜ್ಞೆಯಂತೆ ಆ ಕುಟುಂಬ ಮೂರಡಿ ಜಾಗ ಬಿಟ್ಟಿತು. ಇದನ್ನು ನೋಡಿ ನೆರೆಹೊರೆಯವರೂ ಮೂರಡಿ ಬಿಟ್ಟುಕೊಟ್ಟರು. ಪರಿಣಾಮ.. ಅಲ್ಲಿ ಆರು ಅಡಿ ಅಗಲದ ಸುಂದರ ರಸ್ತೆ ನಿರ್ಮಾಣವಾಗಿತ್ತು. ಅದು ಇಂದಿಗೂ ತ್ಯಾಗ ಮತ್ತು ಸೌಹಾರ್ದತೆಯ ಸಂಕೇತವಾಗಿ ಚೀನಾದಲ್ಲಿ ಪ್ರವಾಸಿ ತಾಣವಾಗಿದೆ ಎಂಬುದನ್ನ ನ್ಯಾಯಾಧೀಶರು ವಿವರಿಸಿದರು.

ದ್ವೇಷ ಮರೆತ ಕುಟುಂಬಗಳು

ನ್ಯಾಯಾಧೀಶರು ವಿವರಿಸಿದ ಈ ಕಥೆಯಿಂದ ಎರಡು ಕುಟುಂಬಗಳು ಮನಸು ಬದಲಿಸಿದವು. ಡೂ ಮತ್ತು ಝಾಂಗ್ ಕುಟುಂಬಗಳ ಕಣ್ಣು ತೆರೆಸಿತು. ಸತ್ತ ಮೇಲೆ ಈ ಮಣ್ಣು ನಮ್ಮ ಜೊತೆ ಬರುವುದಿಲ್ಲ. ಅಡಿ ಜಾಗಕ್ಕಾಗಿ ತಲೆಮಾರುಗಳ ನೆಮ್ಮದಿ ಹಾಳುಮಾಡಿಕೊಂಡೆವಲ್ಲಾ ಎಂಬ ಪಶ್ಚಾತ್ತಾಪ ಮೂಡಿತು. ಕೂಡಲೇ ಅಧಿಕಾರಿಗಳು ಎರಡೂ ಮನೆಗಳ ಜಾಗವನ್ನು ಮರು ಅಳತೆ ಮಾಡಿದರು. ಝಾಂಗ್ ಕುಟುಂಬಕ್ಕೆ ತೊಂದರೆ ಆಗದಂತೆ ಡೂ ಕುಟುಂಬದವರು ತಮ್ಮ ಅಡುಗೆಮನೆಯ ಗೋಡೆಯ ನಕ್ಷೆಯನ್ನು ಬದಲಿಸಿಕೊಂಡರು. ಇತ್ತ ಝಾಂಗ್ ಕುಟುಂಬವೂ ಹಳೆಯ ದ್ವೇಷವನ್ನು ಮರೆತು ಯಾವುದೇ ಅಡ್ಡಿಯಿಲ್ಲದೆ ಒಪ್ಪಿಗೆ ನೀಡಿತು. ಕೇವಲ ಒಂದು ಐತಿಹಾಸಿಕ ಕಥೆಯ ಮೂಲಕ 240 ವರ್ಷಗಳ ಜಿದ್ದಾಜಿದ್ದಿಗೆ ಅಂತ್ಯ ಹಾಡಿತು.