ಇರಾನ್ ನಲ್ಲಿ ಸರ್ವಾಧಿಕಾರಿ ಆಯತೊಲ್ಲಾ ಖಮೇನಿ ವಿರೋಧಿ ಪ್ರತಿಭಟನೆಯ ಕಿಚ್ಚು ದೇಶಾದ್ಯಂತ ಆವರಿಸಿದ್ದು, ಇಡೀ ದೇಶ ಹೊತ್ತಿ ಉರಿಯುವಂತೆ ಮಾಡಿದೆ. ಖಮೇನಿಯ ಕಟ್ಟರ್ ಇಸ್ಲಾಮಿಕ್ ಆಡಳಿತದ ವಿರುದ್ಧ ತಿರುಗಿ ಬಿದ್ದಿರುವ ಜನ ಅವರ ಪದತ್ಯಾಗಕ್ಕೆ ಪಟ್ಟು ಹಿಡಿದು ಲಕ್ಷಾಂತರ ಸಂಖ್ಯೆಯಲ್ಲಿ ಬೀದಿಗಿಳಿದಿದ್ದಾರೆ.

-ದಿವ್ಯಾ ಹೆಗಡೆ ಕಬ್ಬಿನಗದ್ದೆ

ಇರಾನ್ ನಲ್ಲಿ ಸರ್ವಾಧಿಕಾರಿ ಆಯತೊಲ್ಲಾ ಖಮೇನಿ ವಿರೋಧಿ ಪ್ರತಿಭಟನೆಯ ಕಿಚ್ಚು ದೇಶಾದ್ಯಂತ ಆವರಿಸಿದ್ದು, ಇಡೀ ದೇಶ ಹೊತ್ತಿ ಉರಿಯುವಂತೆ ಮಾಡಿದೆ. ಖಮೇನಿಯ ಕಟ್ಟರ್ ಇಸ್ಲಾಮಿಕ್ ಆಡಳಿತದ ವಿರುದ್ಧ ತಿರುಗಿ ಬಿದ್ದಿರುವ ಜನ ಅವರ ಪದತ್ಯಾಗಕ್ಕೆ ಪಟ್ಟು ಹಿಡಿದು ಲಕ್ಷಾಂತರ ಸಂಖ್ಯೆಯಲ್ಲಿ ಬೀದಿಗಿಳಿದಿದ್ದಾರೆ. ಆರಂಭದಲ್ಲಿ ಪ್ರತಿಭಟನೆಯ ರೂಪದಲ್ಲಿದ್ದ ಹೋರಾಟ ಹಿಂಸಾತ್ಮಕ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಸೇನೆ ಪ್ರತಿಭಟನಾಕಾರರನ್ನೇ ಹತ್ಯೆಗೈಯತೊಡಗಿದೆ

. ಈ ನಡುವೆ ಇರಾನ್‌ನಿಂದ ಗಡೀಪಾರಾಗಿ ಅಮೆರಿಕದ ರಾಜಾಶ್ರಯದಲ್ಲಿರುವ ಖಮೇನಿ ವಿರೋಧಿ ಯುವರಾಜ ರೆಜಾ ಪಹ್ಲವಿ, ‘ವಿಶ್ವಾತಘಾತಕ ಖಮೇನಿ ಮಂಡಿಯೂರುವಂತೆ ಮಾಡುವುದು ನಮ್ಮ ಗುರಿ. ಸರ್ಕಾರಿ ಜಾಗಗಳನ್ನು ವಶಪಡಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಪ್ರತಿಭಟನೆ ಕೈಬಿಡಬೇಡಿ. ನಾನು ಶೀಘ್ರ ತಾಯ್ನಾಡಿಗೆ ಮರಳಲಿದ್ದೇನೆ’ ಎಂಬ ಸಂದೇಶ ರವಾನಿಸಿದ್ದಾರೆ. ಇದರಿಂದ ಮತ್ತಷ್ಟು ಪ್ರಚೋದನೆಗೊಳಗಾದ ಜನ ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚುತ್ತಾ ಸಂಘರ್ಷವನ್ನು ತೀವ್ರಗೊಳಿಸಿದ್ದಾರೆ.

ಪ್ರತಿಭಟನೆಗಳು ತಾರಕಕ್ಕೇರುತ್ತಿದ್ದಂತೆ ಸೇನಾ ಪಡೆಗಳು ಪ್ರತಿಭಟನಾಕಾರರನ್ನು ನಿರ್ದಯವಾಗಿ ಸಾಯಿಸುತ್ತಿವೆ. ಕೇವಲ 2 ದಿನದ ಅವಧಿಯಲ್ಲಿ 2,000ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ ಎಂದು ಕೆಲವು ವರದಿಗಳು ಹೇಳಿವೆ. ಇರಾನ್ ನ ಆಸ್ಪತ್ರೆಗಳು ಹೆಣದ ರಾಶಿಗಳಿಂದ ತುಂಬಿ ಹೋಗಿವೆ. ತುರ್ತು ವಾರ್ಡ್ ಗಳಲ್ಲಿ ಒಂದರ ಮೇಲೊಂದು ಹೆಣಗಳನ್ನು ರಾಶಿ ಹಾಕಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಈ ಮಧ್ಯೆ ಅಮೆರಿಕ ಮತ್ತು ಇಸ್ರೇಲ್ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿವೆ. ‘ಇರಾನ್ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದೆ. ಅಮೆರಿಕ ನೆರವು ನೀಡಲು ಸಿದ್ಧವಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಾಂಬ್ ಸಿಡಿಸಿದ್ದಾರೆ. ಇರಾನ್ ಸುತ್ತ ತಮ್ಮ ಸೇನಾ ಪಡೆಗಳ ಜಮಾವಣೆ ಹೆಚ್ಚಿಸಿ, ಯಾವುದೇ ಕ್ಷಣದಲ್ಲಿ ಇರಾನ್ ಮೇಲೆ ಅಮೆರಿಕ ದಾಳಿ ನಡೆಸಬಹುದು ಎಂಬ ಎಚ್ಚರಿಕೆ ನೀಡಿದ್ದಾರೆ. ಇರಾನ್ ದಂಗೆಕೋರರಿಗೆ ತನ್ನ ಬೆಂಬಲವಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಹೇಳಿಕೊಂಡಿದ್ದಾರೆ. ಅತ್ತ ಇರಾನ್ ಕೂಡ ಅಮೆರಿಕ ದಾಳಿ ಮಾಡಿದರೆ ತಾನು ಇಸ್ರೇಲ್ ಮೇಲೆ ಯುದ್ಧ ಸಾರುವುದಾಗಿ ಘೋಷಣೆ ಮಾಡಿದೆ. ಈ ಮೂಲಕ ಇರಾನ್ ನ ಆಂತರಿಕ ದಂಗೆ ಜಾಗತಿಕ ಮಟ್ಟದ ಸಂಘರ್ಷಕ್ಕೆ ನಾಂದಿ ಹಾಡುವ ಎಲ್ಲ ಲಕ್ಷಣಗಳೂ ಗೋಚರವಾಗುತ್ತಿವೆ.

ಟ್ರಂಪ್ ಗೇಕೆ ಇರಾನಿನ ಕಾಳಜಿ?:

ಟ್ರಂಪ್, ‘ಇರಾನ್ ನ ಕ್ರೂರ ನಾಯಕರು ಅಮಾಯಕ ಜನರನ್ನು ಕೊಲ್ಲುತ್ತಿದ್ದಾರೆ. ಇದು ತಪ್ಪು. ಇದನ್ನು ಸಹಿಸುವುದಿಲ್ಲ’ ಎಂಬ ಹೇಳಿಕೆ ನೀಡಿ, ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದ್ದಾರೆ. ನೊಬೆಲ್ ಶಾಂತಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಅವರು ನಿಜವಾಗಿಯೂ ಅಲ್ಲಿ ಶಾಂತಿಸ್ಥಾಪನೆಯ ಉದ್ದೇಶ ಹೊಂದಿದ್ದಾರೆ ಎಂದು ಮೇಲ್ನೋಟಕ್ಕೆ ಅನಿಸಬಹುದು. ಆದರೆ ‘ಮೇಕ್ ಅಮೆರಿಕ ಗ್ರೇಟ್ ಅಗೇನ್’ ಎಂಬ ಗುರಿಯೊಂದಿಗೆ ಅಧಿಕಾರಕ್ಕೇರಿರುವ ಅವರು ಅಷ್ಟು ಮಾತ್ರ ಉದ್ದೇಶವನ್ನು ಹೊಂದಿದ್ದಾರೆ ಎನ್ನಲಾಗದು. ಏಕೆಂದರೆ ಏನೇ ಮಾಡಿದರೂ ಅದರಿಂದ ತನ್ನ ದೇಶಕ್ಕೆ ಲಾಭ ಮಾಡಿಕೊಳ್ಳುವುದು ಟ್ರಂಪ್ ಹುಟ್ಟುಗುಣ. ಇರಾನ್ ವಿಷಯದಲ್ಲೂ ಅವರು ಅದನ್ನೇ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟ.

ಪ್ರಸ್ತುತ ಇರಾನ್ ನ ಖಮೇನಿ ಸರ್ಕಾರ ಅಮೆರಿಕದ ಹಿತಾಸಕ್ತಿಗೆ ಪೂರಕವಾಗಿಲ್ಲ. ಇರಾನ್ ನ ಸದ್ಯದ ರಾಜಕೀಯ ವ್ಯವಸ್ಥೆಯನ್ನು ಅಮೆರಿಕ ಒಪ್ಪಿಕೊಂಡೂ ಇಲ್ಲ. ಆದರೆ 1979ರಲ್ಲಿ ರಾಜಕೀಯ ಕ್ರಾಂತಿ ನಡೆದು, ಪಹ್ಲವಿ ಗಡೀಪಾರಾಗುವ ಮುಂಚೆ ಪರಿಸ್ಥಿತಿ ಹೀಗಿರಲಿಲ್ಲ. ಅಂದಿನ ರಾಜ ಮೊಹಮ್ಮದ್ ರೆಜಾ ಪಹ್ಲವಿ ಪಶ್ಚಿಮ ರಾಷ್ಟ್ರಗಳಿಗೆ ಪೂರಕವಾಗಿ ಆಡಳಿತ ನಡೆಸುತ್ತಾ ಬಂದಿದ್ದರು. ತೈಲ, ರಕ್ಷಣೆ, ಪ್ರಾದೇಶಿಕ ರಾಜಕೀಯ ಮೊದಲಾದ ಎಲ್ಲ ವಿಷಯಗಳಲ್ಲೂ ಪಹ್ಲವಿ ಆಡಳಿತ ಅಮೆರಿಕದ ಹಿತಾಸಕ್ತಿಗೆ ಪೂರಕವಾಗಿಯೇ ಇತ್ತು. ಹೀಗಾಗಿ ಖಮೇನಿಯನ್ನು ಅಧಿಕಾರದಿಂದ ಕೆಳಗಿಳಿಸಿ, ಪಹ್ಲವಿಯನ್ನು ಪುನಃ ಪ್ರತಿಷ್ಠಾಪಿಸುವುದು ಟ್ರಂಪ್ ಗುರಿ. ಅದಕ್ಕಾಗಿ ಅಲ್ಲಿನ ಆಂತರಿಕ ಸಂಘರ್ಷವನ್ನು ಟ್ರಂಪ್ ದಾಳವಾಗಿ ಬಳಸಿಕೊಳ್ಳುತ್ತಿರುವುದು ಬಹಿರಂಗ ರಹಸ್ಯ.

ಅಮೆರಿಕ-ಇರಾನ್ ಸ್ನೇಹ ಭಾರತಕ್ಕೆ ಹಿತವೆ?:

ಜಾಗತಿಕವಾಗಿ ಯಾವುದೇ ಎರಡು ದೇಶಗಳ ಸಂಬಂಧ ಹಳಸಿದರೂ ಅಥವಾ ಉತ್ತಮಗೊಂಡರೂ ಅದು ಆ ಎರಡು ದೇಶಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅವು ಜಗತ್ತಿನ ಇತರ ರಾಷ್ಟ್ರಗಳ ಮೇಲೂ ಸಹಜವಾಗಿ ಪರಿಣಾಮ ಬೀರುತ್ತವೆ. ಪ್ರಸ್ತುತ ಇರಾನ್ ನಲ್ಲಾಗುತ್ತಿರುವ ಬೆಳವಣಿಗೆ ಭಾರತದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ಮುಖ್ಯ. ಅಮೆರಿಕ ಅಂದುಕೊಂಡಂತೆ, ಖಮೇನಿ ಸರ್ಕಾರ ಪತನವಾಗಿ ಮತ್ತೆ ಪಹ್ಲವಿ ಆಡಳಿತವೇ ಮರುಜಾರಿಯಾದರೆ ಭಾರತಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನಬಹುದು.

ಭಾರತದ ವ್ಯಾಪಾರಕ್ಕೆ ಬಹುಮುಖ್ಯವಾದ ಚಬಹಾರ್ ಬಂದರು ಇರಾನ್ ನ ನಿಯಂತ್ರಣದಲ್ಲಿದೆ. ಪಾಕಿಸ್ತಾನದ ಮಾರ್ಗದ ಮೇಲೆ ಅವಲಂಬಿತವಾಗದೆ ಅಫ್ಘಾನಿಸ್ತಾನ, ಮಧ್ಯ ಏಷ್ಯಾ ಮತ್ತು ರಷ್ಯಾಕ್ಕೆ ನೇರವಾಗಿ ಭೂಮಾರ್ಗದ ಮೂಲಕ ವ್ಯಾಪಾರ ಮಾಡಲು ಭಾರತಕ್ಕಿರುವ ಏಕೈಕ ಮಾರ್ಗ ಈ ಬಂದರು. ಭಾರತ ವರ್ಷಗಳಿಂದ ಇದರ ಅಭಿವೃದ್ಧಿಗಾಗಿ ಕೋಟ್ಯಂತರ ಹಣವನ್ನು ಖರ್ಚು ಮಾಡುತ್ತಾ ಬಂದಿದೆ. ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿರುವ ವಿಚಾರಕ್ಕೆ ಈಗಾಗಲೇ ಅಮೆರಿಕ ಮತ್ತು ಭಾರತದ ಸಂಬಂಧ ಹದಗೆಟ್ಟಿದೆ. ಟ್ರಂಪ್ ಭಾರತದ ಸರಕುಗಳ ಮೇಲೆ ಅತಿ ಕಠಿಣವಾದ ಶೇ.50ರಷ್ಟು ತೆರಿಗೆಯನ್ನೂ ವಿಧಿಸಿದ್ದಾರೆ. ಒಂದು ವೇಳೆ ಇರಾನ್ ಮತ್ತು ಅಮೆರಿಕ ಹತ್ತಿರವಾದರೆ ಅಮೆರಿಕದ ಒತ್ತಡಕ್ಕೆ ಸಿಲುಕಿ, ಇರಾನ್ ಭಾರತಕ್ಕೆ ಚಬಹಾರ್ ನ ಬಳಕೆಯನ್ನು ನಿರ್ಬಂಧಿಸಬಹುದು. ಇದರಿಂದ ಭಾರತಕ್ಕೆ ಸರಕು ಸಾಗಾಟ ಕಷ್ಟವಾಗುತ್ತದೆ. ದುಬಾರಿ ವಿಮಾನ ಮಾರ್ಗಗಳ ಮೂಲಕ ಸಾಗಣೆ ಮಾಡುವುದು ಅಥವಾ ಪಾಕಿಸ್ತಾನದ ಮಾರ್ಗಗಳ ಮೇಲೆ ಅವಲಂಬಿತವಾಗುವುದು ಅನಿವಾರ್ಯವಾಗುತ್ತದೆ.

ಇನ್ನು ಇರಾನ್ ಮತ್ತು ಪಾಕಿಸ್ತಾನ 900 ಕಿ.ಮೀ. ಗಡಿಯನ್ನು ಹಂಚಿಕೊಂಡಿವೆ. ಪಾಕಿಸ್ತಾನ ದೀರ್ಘಕಾಲದಿಂದ ಅಪ್ಘಾನಿಸ್ತಾನದಲ್ಲಿ ಭಾರತದ ಪ್ರಭಾವವನ್ನು ತೊಡೆದುಹಾಕಲು ಪ್ರಯತ್ನಿಸುತ್ತಿದೆ. ಇರಾನ್ನ ಸಹಾಯದೊಂದಿಗೆ ಪಾಕ್, ಭಾರತ ಈ ಹಿಂದೆ ಬಲವಾದ ಸಂಪರ್ಕ ಹೊಂದಿದ್ದ ಉತ್ತರ ಅಪ್ಘಾನಿಸ್ತಾನದ ಪ್ರದೇಶಗಳನ್ನು ಭಾರತದಿಂದ ಮತ್ತಷ್ಟು ದೂರಗೊಳಿಸುವ ಸಾಧ್ಯತೆಯಿದೆ. 2021ರಲ್ಲಿ ಆಪ್ಘನ್ನಲ್ಲಿ ತಾಲಿಬಾನ್ ಆಡಳಿತ ಜಾರಿಗೆ ಬಂದ ಬಳಿಕ ಭಾರತದ ಸಂಬಂಧ ರಾತ್ರೋರಾತ್ರಿ ಹದಗೆಟ್ಟಿತು. ಭಾರತ ಅಲ್ಲಿ ತನ್ನ ರಾಯಭಾರ ಕಚೇರಿಯನ್ನು ಮುಚ್ಚಿತು. ತಾಲಿಬಾನ್ ಸರ್ಕಾರವನ್ನು ಭಾರತ ಅಧಿಕೃತವಾಗಿ ಗುರುತಿಸಿಯೂ ಇಲ್ಲ. ಆದರೆ ಇತ್ತೀಚೆಗೆ ಭಾರತ ಮತ್ತು ಅಪ್ಘಾನಿಸ್ತಾನದ ಸಂಬಂಧ ನಿಧಾನವಾಗಿ ಸುಧಾರಿಸುತ್ತಿದೆ. ತಾಲಿಬಾನ್ ಅಧಿಕಾರಕ್ಕೆ ಬಂದ 5 ವರ್ಷಗಳ ನಂತರ ಮೊನ್ನೆಯಷ್ಟೇ ಅಪ್ಘಾನಿಸ್ತಾನ ನವದೆಹಲಿಯಲ್ಲಿ ತನ್ನ ರಾಯಭಾರಿಯನ್ನು ನೇಮಿಸಿದೆ.

ಅಕ್ಟೋಬರ್ ನಲ್ಲಿ ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಭಾರತಕ್ಕೆ ಭೇಟಿ ನೀಡಿ, ಉಭಯ ದೇಶಗಳ ಸಂಬಂಧ ಬಲವರ್ಧನೆಗೆ ಒಲವು ತೋರಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ಇರಾನ್ ಜೊತೆಗೂಡಿ ಪಾಕಿಸ್ತಾನ ಭಾರತವನ್ನು ಅಪ್ಘಾನಿಸ್ತಾನದಿಂದ ದೂರವಿಡುವ ಎಲ್ಲ ಅವಕಾಶ ಬಳಸಿಕೊಳ್ಳುವ ಸಾಧ್ಯತೆಯಿದೆ.

ಪಾಕ್ ಪ್ರೇಮಿ ಪಹ್ಲವಿ ಆತಂಕ:

ಇರಾನ್‌ನಲ್ಲಿ ಖಮೇನಿ ವಿರೋಧಿ ಪ್ರತಿಭಟನೆಗಳು ತೀವ್ರವಾಗುತ್ತಿದ್ದಂತೆ ಗಡೀಪಾರಾಗಿರುವ ಯುವರಾಜ ಪಹ್ಲವಿಯನ್ನು ಹೀರೊ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಆತ ಅಧಿಕಾರಕ್ಕೆ ಬಂದರೆ ಇರಾನ್ ಮತ್ತೆ ಸಮೃದ್ಧ ದಿನಗಳಿಗೆ ಮರಳುತ್ತದೆ ಎಂಬ ಆಶಾವಾದ ವ್ಯಕ್ತವಾಗುತ್ತಿದೆ. ಆದರೆ ಇದು ಭಾರತದ ಪಾಲಿಗೆ ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಏಕೆಂದರೆ ಪಹ್ಲವಿ ಹಿಂದಿನಿಂದಲೂ ಪಶ್ಚಿಮ ರಾಷ್ಟ್ರಗಳು ಮತ್ತು ಪಾಕಿಸ್ತಾನದ ಬಗ್ಗೆ ಹೆಚ್ಚು ಒಲವು ಹೊಂದಿದ್ದಂತಹ ವ್ಯಕ್ತಿ. 1965 ಮತ್ತು 1971ರ ಯುದ್ಧಗಳಲ್ಲಿ ಇವರ ತಂದೆ ಮೊಹಮ್ಮದ್ ಪಹ್ಲವಿ ಬಹಿರಂಗವಾಗಿಯೇ ಪಾಕಿಸ್ತಾನವನ್ನು ಬೆಂಬಲಿಸಿದ್ದರು. ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳ ಕೊರತೆಯಾದಾಗ ತೈಲ, ಯುದ್ಧವಿಮಾನಗಳು, ಮದ್ದುಗುಂಡುಗಳನ್ನು ಪೂರೈಸಿದ್ದರು. 1971ರ ಯುದ್ಧದಲ್ಲಿ ಇರಾನ್ ಪಾಕಿಸ್ತಾನಕ್ಕೆ 12 ಹೆಲಿಕಾಪ್ಟರ್ ಗಳು ಮತ್ತು ಮಿಲಿಟರಿ ಉಪಕರಣಗಳನ್ನು ಕಳಿಸಿಕೊಟ್ಟಿತ್ತು. ‘ಪಾಕಿಸ್ತಾನವನ್ನು ಎಂದಿಗೂ ದುರ್ಬಲವಾಗಲು ಬಿಡುವುದಿಲ್ಲ. ಇರಾನ್ ಮತ್ತು ಪಾಕ್ ಎರಡು ದೇಹ, ಒಂದು ಆತ್ಮ’ ಎಂದು ಪಹ್ಲವಿ ಹೇಳಿಕೆ ನೀಡಿದ್ದರು.

ಆದರೆ 1979ರಲ್ಲಿ ರಾಜಕೀಯ ಕ್ರಾಂತಿಯಾಗಿ ಖಮೇನಿ ಅಧಿಕಾರಕ್ಕೆ ಬಂದ ನಂತರ ಭಾರತದ ಜೊತೆ ಸಂಬಂಧ ಉತ್ತಮಗೊಂಡಿತು. ಆರ್ಥಿಕ ಸಹಯೋಗ, ಚಬಹಾರ್ ಅಭಿವೃದ್ಧಿ ಮತ್ತು ಉಗ್ರವಾದದ ನಿರ್ಮೂಲನೆಯಲ್ಲಿ ಎರಡೂ ದೇಶಗಳು ಸಮಾನ ಆಸಕ್ತಿ ಕಾಯ್ದುಕೊಂಡವು. ಭಾರತವು ಇರಾನ್ ಮೂಲಕ ಅಪ್ಘಾನಿಸ್ತಾನಕ್ಕೆ ಮಾನವೀಯ ನೆರವನ್ನೂ ನೀಡಿದೆ. ಹೀಗಾಗಿ ಇರಾನ್ ನಲ್ಲಿ ಖಮೇನಿ ಆಡಳಿತ ಮುಂದುವರಿಯುವುದೇ ಭಾರತಕ್ಕೆ ಹೆಚ್ಚು ಅನುಕೂಲಕರ.

ಭಾರತದ ಮುಂದಿನ ನಡೆ:

ಒಂದು ವೇಳೆ ಖಮೇನಿ ಸರ್ಕಾರ ಪ್ರತಿಭಟನಾಕಾರರನ್ನು ಹತ್ತಿಕ್ಕಿದರೆ ದೇಶದ ಒಳಗೆ ಸ್ಥಿರತೆಯನ್ನು ಸ್ಥಾಪಿಸಬಹುದು. ಆದರೆ ಅಮೆರಿಕ ಜೊತೆಗಿನ ಸಂಬಂಧ ಮತ್ತಷ್ಟು ಹದಗೆಡುತ್ತದೆ. ಏಕೆಂದರೆ, ‘ಪ್ರತಿಭಟನಾಕಾರರನ್ನು ಹತ್ಯೆ ಮಾಡಿದರೆ ಅಮೆರಿಕ ಹಸ್ತಕ್ಷೇಪ ಮಾಡುತ್ತದೆ’ ಎಂದು ಟ್ರಂಪ್ ಸ್ಪಷ್ಟವಾಗಿ ಹೇಳಿದ್ದಾರೆ. ಈ ಬೆಳವಣಿಗೆಯೇನಾದರೂ ನಡೆದರೆ, ಅಮೆರಿಕ ಇರಾನ್ ಮೇಲೆ ಹೊಸ ನಿಷೇಧಗಳನ್ನು ಹೇರುವ ಸಾಧ್ಯತೆ ಹೆಚ್ಚುತ್ತದೆ. ಇದು ಈಗಾಗಲೇ ಹೇರಿರುವ ನ್ಯೂಕ್ಲಿಯರ್, ತೈಲ, ಶಸ್ತ್ರಾಸ್ತ್ರ ಸಂಬಂಧಿತ ನಿರ್ಬಂಧಗಳನ್ನು ಮತ್ತಷ್ಟು ಕಠಿಣಗೊಳಿಸುತ್ತದೆ.

ಭಾರತ ಇರಾನ್‌ನಿಂದ ತೈಲ ಆಮದು ಮತ್ತು ಇತರ ವ್ಯಾಪಾರ ಸಂಬಂಧಗಳನ್ನೂ ಹೊಂದಿದೆ. ಇರಾನ್‌ನೊಂದಿಗೆ ವ್ಯಾಪಾರ ಮಾಡುವ ದೇಶಗಳ ಮೇಲೆ ಟ್ರಂಪ್ ಈಗಾಗಲೇ ಶೇ.25ರಷ್ಟು ತೆರಿಗೆ ಹೇರಿದ್ದಾರೆ. ಇದು ಭಾರತದ ಮೇಲೆ ದುಷ್ಪರಿಣಾಮ ಬೀರಬಹುದು. ಇದು ಸಾಧ್ಯವಾಗದೆ, ಒಂದು ವೇಳೆ ಪಹ್ಲವಿ ಅಧಿಕಾರಕ್ಕೆ ಬಂದರೆ ಇರಾನ್ ಮೇಲೆ ಅಮೆರಿಕ ನಿಷೇಧ ತೆಗೆದುಹಾಕಿ, ಭಾರತಕ್ಕೆ ತೈಲ ಆಮದು ಮತ್ತು ವ್ಯಾಪಾರ ಸುಲಭವಾಗುವಂತಹ ಒಳ್ಳೆಯ ಅವಕಾಶಗಳೂ ದೊರೆಯಬಹುದು.

ಒಟ್ಟಿನಲ್ಲಿ ಇರಾನ್ ನಲ್ಲಿ ಖಮೇನಿ ಅಧಿಕಾರ ಮುಂದುವರಿದರೂ ಅಥವಾ ಪಹ್ಲವಿ ಆಡಳಿತ ಮರಳಿದರೂ ಭಾರತದ ಮೇಲೆ ಪರಿಣಾಮ ಉಂಟಾಗುವುದು ಸುಳ್ಳಲ್ಲ. ಹೀಗಾಗಿ ಭಾರತ ಯಾವುದೇ ಒಂದು ಪಕ್ಷಕ್ಕೆ ಬೆಂಬಲ ನೀಡದೆ ಕಾದುನೋಡುವ ನಿಲುವು ತೆಗೆದುಕೊಂಡಿದೆ. ಇದು ಭಾರತದ ಸ್ವತಂತ್ರ ನೀತಿ ಮತ್ತು ಬಹುಧ್ರುವೀಯ ರಾಜತಾಂತ್ರಿಕತೆಗೆ ಹೊಂದಿಕೊಳ್ಳುತ್ತದೆ. ಭಾರತದ ಮುಖ್ಯ ಆದ್ಯತೆ ಚಬಹಾರ್ ಬಂದರು, ತೈಲ ಆಮದು, ಇರಾನ್ನಲ್ಲಿರುವ ಭಾರತೀಯರ ರಕ್ಷಣೆ ಮತ್ತು ಗಡಿ ಸಹಯೋಗದಂತಹ ವಿಚಾರಗಳು. ಇವುಗಳ ಹಿತದೃಷ್ಟಿಯಿಂದ ಭಾರತ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ.