ಫ್ಲೋರಿಡಾದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭೇಟಿ, ಇರಾನ್‌ನ ಪರಮಾಣು ಕಾರ್ಯಕ್ರಮದ ವಿರುದ್ಧ ಕಠಿಣ ಮಿಲಿಟರಿ ಕ್ರಮದ ಎಚ್ಚರಿಕೆ. ಇದಕ್ಕೆ ಇರಾನ್ ಅಧ್ಯಕ್ಷರು ತಿರುಗೇಟು, ಜಾಗತಿಕ ರಾಜಕೀಯದಲ್ಲಿ ಯುದ್ಧದ ಭೀತಿ.
ಫ್ಲೋರಿಡಾ(ಡಿ.30): ಜಾಗತಿಕ ರಾಜಕೀಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿದಿದೆ. ಫ್ಲೋರಿಡಾದ ಮಾರ್-ಎ-ಲಾಗೊದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭೇಟಿಯಾದ ಬೆನ್ನಲ್ಲೇ, ಇರಾನ್ ವಿರುದ್ಧ ಕಠಿಣ ಮಿಲಿಟರಿ ಕ್ರಮದ ಎಚ್ಚರಿಕೆ ಹೊರಬಿದ್ದಿದೆ. ಈ ಭೇಟಿಯು ಈ ವರ್ಷದಲ್ಲಿ ಈ ಇಬ್ಬರು ನಾಯಕರ ನಡುವೆ ನಡೆದ ಐದನೇ ಮಹತ್ವದ ಸಮಾಲೋಚನೆಯಾಗಿದೆ.
ಇರಾನ್ ನಡವಳಿಕೆ ಸುಧಾರಿಸದಿದ್ದರೆ ಪರಿಣಾಮ ಭೀಕರ: ಟ್ರಂಪ್ ವಾರ್ನ್
ನೆತನ್ಯಾಹು ಅವರೊಂದಿಗೆ ಮಾತುಕತೆ ನಡೆಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಇರಾನ್ ತನ್ನ ಪರಮಾಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಗಳನ್ನು ಮುಂದುವರಿಸಿದರೆ ಅಮೆರಿಕ ಸುಮ್ಮನಿರುವುದಿಲ್ಲ ಎಂದು ಗುಡುಗಿದ್ದಾರೆ. 'ಇರಾನ್‌ನ ನಡವಳಿಕೆ ಸುಧಾರಿಸದಿದ್ದರೆ ಅದರ ಪರಿಣಾಮಗಳು ಅತ್ಯಂತ ಭೀಕರವಾಗಿರುತ್ತವೆ. ಈ ಹಿಂದಿನ ದಾಳಿಗಳಿಗಿಂತಲೂ ಈ ಬಾರಿ ಅಮೆರಿಕದ ಪ್ರತಿಕ್ರಿಯೆ ಹೆಚ್ಚು ಕಠಿಣವಾಗಿರಲಿದೆ' ಎಂದು ಟ್ರಂಪ್ ನೇರ ಎಚ್ಚರಿಕೆ ನೀಡಿದ್ದಾರೆ.
'ದಾಳಿಕೋರನು ವಿಷಾದಿಸುತ್ತಾನೆ': ಎಕ್ಸ್ (X) ನಲ್ಲಿ ಇರಾನ್ ಅಧ್ಯಕ್ಷರ ತಿರುಗೇಟು
ಟ್ರಂಪ್ ಅವರ ಎಚ್ಚರಿಕೆಯ ಬೆನ್ನಲ್ಲೇ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಯಾರ ಹೆಸರನ್ನೂ ಎತ್ತದೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. 'ಇರಾನ್‌ನ ಇಸ್ಲಾಮಿಕ್ ಗಣರಾಜ್ಯವು ಯಾವುದೇ ರೀತಿಯ ದಾಳಿಗೆ ಅತ್ಯಂತ ದೃಢವಾಗಿ ಪ್ರತಿಕ್ರಿಯೆ ನೀಡಲಿದೆ. ನಮ್ಮ ಮೇಲೆ ದಾಳಿ ಮಾಡಲು ಬರುವ ದಾಳಿಕೋರನು ಖಂಡಿತವಾಗಿಯೂ ವಿಷಾದಿಸುತ್ತಾನೆ' ಎಂದು ಕೇವಲ ಒಂದೇ ವಾಕ್ಯದಲ್ಲಿ ಸಿಂಹಗರ್ಜನೆ ಮಾಡಿದ್ದಾರೆ.
ಇಸ್ರೇಲ್ ದಾಳಿಗೆ ಅಮೆರಿಕದ ಸಂಪೂರ್ಣ ಬೆಂಬಲ; ಪರಮಾಣು ನೆಲೆಗಳೇ ಗುರಿ!
ಇರಾನ್‌ನ ಕ್ಷಿಪಣಿ ಕಾರ್ಯಕ್ರಮಗಳನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿದರೆ ಅಮೆರಿಕ ಬೆಂಬಲಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, 'ಖಂಡಿತವಾಗಿಯೂ ಬೆಂಬಲಿಸುತ್ತೇವೆ' ಎಂದು ಸ್ಪಷ್ಟಪಡಿಸಿದ್ದಾರೆ. ಇರಾನ್ ತನ್ನ ಪರಮಾಣು ಸಾಮರ್ಥ್ಯಗಳನ್ನು ಪುನರ್ನಿರ್ಮಿಸಲು ಯತ್ನಿಸಿದರೆ, ಅದನ್ನು ತಡೆಯಲು ಇಸ್ರೇಲ್ ನಡೆಸುವ ತಕ್ಷಣದ ದಾಳಿಗೆ ವಾಷಿಂಗ್ಟನ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅವರು ಘೋಷಿಸಿದ್ದಾರೆ.
ಹಿಂದಿನ ದಾಳಿಗಳ ಹಿನ್ನೆಲೆ:
ಈ ವರ್ಷದ ಜೂನ್ ತಿಂಗಳಿನಲ್ಲಿ ನಡೆದ ಭೀಕರ ಸಂಘರ್ಷದ ಸಾವು-ನೋವುಗಳು ಇಂದಿಗೂ ಹಸಿಯಾಗಿವೆ. ಜೂನ್ 13, 2025 ರಂದು ಇಸ್ರೇಲ್ ಸತತ 12 ದಿನಗಳ ಕಾಲ ಇರಾನ್‌ನ ಮಿಲಿಟರಿ ಮತ್ತು ಪರಮಾಣು ನೆಲೆಗಳ ಮೇಲೆ ದಾಳಿ ನಡೆಸಿತ್ತು. ತದನಂತರ, ಜೂನ್ 22 ರಂದು ಅಮೆರಿಕವು ಇರಾನ್‌ನ ಪ್ರಮುಖ ಪರಮಾಣು ತಾಣಗಳಾದ ನಟಾಂಜ್, ಫೋರ್ಡೊ ಮತ್ತು ಇಸ್ಫಹಾನ್ ಮೇಲೆ ಬಾಂಬ್ ದಾಳಿ ನಡೆಸಿತ್ತು. ಈ ಸಂಘರ್ಷವು 24 ದಿನಗಳ ನಂತರ ಕದನ ವಿರಾಮದೊಂದಿಗೆ ಅಂತ್ಯಗೊಂಡಿತ್ತು.
ಮತ್ತೆ ಶುರುವಾಗಲಿದೆಯೇ ಬೃಹತ್ ಮಿಲಿಟರಿ ಕಾರ್ಯಾಚರಣೆ?
'ಇರಾನ್ ಕಳೆದ ಬಾರಿಯೇ ಒಪ್ಪಂದ ಮಾಡಿಕೊಳ್ಳಬೇಕಿತ್ತು, ನಾವು ಅವರಿಗೆ ಅವಕಾಶ ನೀಡಿದ್ದೆವು. ಆದರೆ ಪ್ರತಿ ಬಾರಿಯೂ ಅದು ಸಾಧ್ಯವಿಲ್ಲ' ಎಂದು ಟ್ರಂಪ್ ಹೇಳಿರುವುದು ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದನ್ನು ತೋರಿಸುತ್ತದೆ. ಟೆಹ್ರಾನ್‌ನ ಪ್ರತಿಯೊಂದು ಚಟುವಟಿಕೆಯನ್ನು ಅಮೆರಿಕ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಇರಾನ್ ತನ್ನ ಪರಮಾಣು ಕಾರ್ಯಕ್ರಮ ಪುನರಾರಂಭಿಸಿದರೆ ಮತ್ತೊಂದು ಸುತ್ತಿನ ಬೃಹತ್ ಮಿಲಿಟರಿ ಕಾರ್ಯಾಚರಣೆ ಅನಿವಾರ್ಯವಾಗಬಹುದು ಎಂಬ ಸೂಚನೆ ಸಿಕ್ಕಿದೆ.


