ಪಾಂಡವರ ಮಕ್ಕಳು ಐವರು ಉಪಪಾಂಡವರು ಎಂಬುದು ನಮಗೆ ಗೊತ್ತಿದೆ. ಆಗೇ ಅರ್ಜುನನ ಮಕ್ಕಳ ಬಗ್ಗೆಯೂ ಗೊತ್ತಿದೆ. ಆದರೆ ಕರ್ಣನ ಮಕ್ಕಳ ಬಗ್ಗೆ ಗೊತ್ತಾ? ಅವನಿಗೆ ಒಬ್ಬರಲ್ಲ, ಇಬ್ಬರಲ್ಲಿ 11 ಮಕ್ಕಳಿದ್ದರು ಎಂಬುದು ನಿಮಗೆ ಗೊತ್ತೇ? ಗೊತ್ತಿಲ್ಲವಾದರೆ, ಅವರ ಕತೆ ಇಲ್ಲಿದೆ ನೋಡಿ.
ಕರ್ಣನಿಗೆ ಇಬ್ಬರು ಧರ್ಮ ಪತ್ನಿಯರು ಹಾಗೂ ಹನ್ನೊಂದು ಜನ ಮಕ್ಕಳು. ಅವರ ಹೆಸರು ಕ್ರಮವಾಗಿ ವೃಷಸೇನ, ಸುದಾಮ, ಚಿತ್ರಸೇನ, ಸತ್ಯಸೇನ, ಸುಷೇಣ, ಶತ್ರುಂಜಯ, ದ್ವಿಪಾತ, ಬನಸೇನ, ಸುಶರ್ಮ, ಪ್ರಸೇನ ಮತ್ತು ವೃಷಕೇತು. ಅದರಲ್ಲಿ ಪ್ರಮುಖರಾದ ಇಬ್ಬರು ವೃಷಸೇನ ಮತ್ತು ವೃಷಕೇತು. ಕುರುಕ್ಷೇತ್ರ ಯುದ್ಧದಲ್ಲಿ ಕರ್ಣನೊಂದಿಗೆ ಅವನ ಮಕ್ಕಳು ಕೂಡ ಸೇರಿಕೊಂಡು ಪಾಂಡವರ ವಿರುದ್ಧ ಹೋರಾಡಿದರು. ಕರ್ಣ ಧನುರ್ವಿದ್ಯೆ ಕಲಿಯಲು ತಾನು ಅನುಭವಿಸಿದ ಕಷ್ಟವನ್ನು ಮಕ್ಕಳು ಪಡಬಾರದೆಂದು ತಾನೇ ಎಲ್ಲ ಧನುರ್ವಿದ್ಯೆಯನ್ನು ಮಕ್ಕಳಿಗೆ ದಾರೆ ಎರೆದಿದ್ದ.
ಪಾಂಡವರೊಂದಿಗೆ ಯುದ್ಧ ಆರಂಭಿಸಿದ ಕರ್ಣನ ಮೊದಲ ಮಗ ವೃಷಸೇನ ಮಹಾ ಹಾವಳಿ ಎಬ್ಬಿಸುತ್ತಾನೆ. ಪಾಂಡವರ ಸೇನಾಧಿಪತಿ ದೃಷ್ಟದ್ಯುಮ್ನನನ್ನು, ಅರ್ಜುನನ ಶಿಷ್ಯ ಯಾದವ ಯೋಧ ಸಾತ್ಯಕಿಯನ್ನು, ಯುದ್ಧದ 15ನೇ ದಿನ ನಕುಲನನ್ನು ಹಾಗೂ ಮಹಾ ಪರಾಕ್ರಮಿ ಭೀಮಸೇನನನ್ನು ಎದುರಿಸಿ ಅವರನ್ನು ಸೋಲಿಸುತ್ತಾನೆ. ಇದನ್ನು ದೂರದಿಂದಲೇ ನೋಡಿದ ಶ್ರೀಕೃಷ್ಣ, ಅರ್ಜುನನ ರಥವನ್ನು ತಂದು ವೃಷಸೇನನ ಎದುರು ನಿಲ್ಲಿಸಿದ. ವೃಷಸೇನನ್ನು ಹೊಡೆದುಹಾಕುವಂತೆ ಅರ್ಜುನನಿಗೆ ಹೇಳಿದ.
ವೃಷಸೇನನ ಯುದ್ಧ ನೈಪುಣ್ಯಕ್ಕೆ ಅರ್ಜುನನೂ ಮರುಳಾಗುತ್ತಾನೆ. ಧನುರ್ವಿದ್ಯೆಯಲ್ಲಿ ಇವನು ಅಭಿಮನ್ಯುವಿಗೆ ಸಮಾನ ಎಂದು ಹೇಳಿ ಮಗನ ನೆನಪು ಮಾಡಿಸಿ ಅರ್ಜುನ ರೊಚ್ಚಿಗೇಳುವಂತೆ ಕೃಷ್ಣ ಮಾಡುತ್ತಾನೆ. ನಂತರ ವೃಷಸೇನನ ಜೊತೆ ಯುದ್ಧ ಮಾಡಿದ ಅರ್ಜುನ ಆತನ ಮೇಲೆ ಮಹಾಗಣಪತಿಯ ಆಶೀರ್ವಾದಿಂದ ಪಡೆದ ಜಯಾಸ್ತ್ರವನ್ನು ಪ್ರಯೋಗ ಮಾಡುತ್ತಾನೆ. ಅದು ವೃಷಸೇನನ ತಲೆಯನ್ನು ಕತ್ತರಿಸಿ ಹಾಕುತ್ತದೆ.
ಕರ್ಣನ ಇನ್ನೂ ಒಂಬತ್ತು ಮಕ್ಕಳು ಕೂಡ ಯುದ್ಧದಲ್ಲಿ ಸಾಯುತ್ತಾರೆ. ಕೊನೆಯವನಾದ ವೃಷಕೇತು ಉಳಿಯುತ್ತಾನೆ. ಅವನಿಗೆ ಪಾಂಡವರು ಆಶ್ರಯ ನೀಡುತ್ತಾರೆ. ಕರ್ಣನ ಮಗ ಆಗಿದ್ದರಿಂದ ಅವನನ್ನೇ ಪಾಂಡವರ ಉತ್ತರಾಧಿಕಾರಿಯನ್ನು ಮಾಡಲು ಪಾಂಡವರು ವಿನಂತಿಸುತ್ತಾರೆ. ಆದರೆ ಅವನು ಅದಕ್ಕೆ ಒಪ್ಪದೇ ಅಂಗ ರಾಜ್ಯದಲ್ಲೇ ಆಳ್ವಿಕೆ ಮಾಡಿಕೊಂಡಿರುತ್ತೆನೆಂದು ಹೇಳುತ್ತಾನೆ . ಅರ್ಜುನ, ಕರ್ಣ ಪುತ್ರನಾದ ವೃಷಕೇತುವಿಗೆ ಎಲ್ಲ ಧನುರ್ವಿದ್ಯೆಯನ್ನು ಧಾರೆ ಎರೆಯುತ್ತಾನೆ.
ಯುಧಿಷ್ಠಿರನ ಅಶ್ವಮೇಧ ಯಜ್ಞದ ಸಂದರ್ಭದಲ್ಲಿ ಹಲವಾರು ರಾಜರ ವಿರುದ್ಧ ನಡೆದ ಯುದ್ಧಗಳಲ್ಲಿ ಅರ್ಜುನನ ಜೊತೆ ಹೋಗಿದ್ದ ವೃಷಕೇತುವೂ ಭಾಗವಹಿಸಿದ. ಮಣಿಪುರದ ಕದನ ಭೂಮಿಯಲ್ಲಿ ಬಬ್ರುವಾಹನೊಂದಿಗೆ ಏಕಾಂಗಿಯಾಗಿ ಸುಮಾರು ಮೂರು ದಿನಗಳ ಕಾಲ ಯುದ್ಧ ಮಾಡಿದ. ಇವನ ಪರಾಕ್ರಮಕ್ಕೆ ಬಬ್ರುವಾಹನ ಹೆಮ್ಮೆ ಪಟ್ಟ. ಕೊನೆಗೆ ಬಬ್ರುವಾಹನನಿಂದ ಹತನಾದ. ನಂತರ ತಾಯಿ ಉಲೂಪಿಯ ಕೋರಿಕೆ ಮೇರೆಗೆ ಬಬ್ರುವಾಹನನು ನಾಗರಾಜ ಆದಿಶೇಷ ನೀಡಿದ ನಾಗಮಣಿಯಿಂದ ಅರ್ಜುನ ಮತ್ತು ವೃಷಕೇತುವನ್ನು ಬದುಕಿಸಿದ. ವೃಷಕೇತುವಿಗೆ ಮತ್ತೆ ಜೀವ ನೀಡಲು ಶ್ರೀಕೃಷ್ಣನಲ್ಲಿ ಬಬ್ರುವಾಹನ ಬೇಡಿಕೊಂಡಿದ್ದ. ಬಬ್ರುವಾಹನನಿಗೆ ಸೂರ್ಯ ದೇವನ ಮೊಮ್ಮಗ ವೃಷಕೇತುವಿನ ಮೇಲೆ ಅಪಾರ ಹೆಮ್ಮೆ ಇತ್ತು. ನಂತರ ವೃಷಕೇತು ಅಶ್ವಮೇಧ ಯಜ್ಞದಲ್ಲಿ ಸಕ್ರಿಯವಾಗಿ ಭಾಗವಹಿಸಿದ.
Indian Mythology: ಗರುಡ ಮಹಾವಿಷ್ಣುವಿನ ವಾಹನ ಆದದ್ದು ಹೇಗೆ?
ಹಿಂದೆ ಸೋತ ರಾಜರ ಮಕ್ಕಳು ಗೆದ್ದ ರಾಜರ ಬಳಿ ಆಶ್ರಯ ಪಡೆಯುವುದು ಅಸಹಜವೇನೂ ಆಗಿರಲಿಲ್ಲ. ಕುರುಕ್ಷೇತ್ರ ಯುದ್ಧ ಮುಗಿದಾಗಲೇ ಕರ್ಣ ತಮ್ಮ ಹೋದರ ಎಂಬುದು ಪಾಂಡವರಿಗೆ ಗೊತ್ತಾಗಿತ್ತು. ಇದು ನನಗೆ ಮೊದಲೇ ಗೊತ್ತಾಗಿದ್ದರೆ ಯುದ್ಧವೇ ನಡೆಯುತ್ತಿರಲಿಲ್ಲ ಎಂದು ಧರ್ಮರಾಯ ಪೇಚಾಡಿದ್ದ. ನಾನು ಇಡೀ ರಾಜ್ಯವನ್ನು ಕರ್ಣನ ಪದತಲದಲ್ಲಿ ಅರ್ಪಿಸಿ ಆತನ ಸೇವೆ ಮಾಡಿಕೊಂಡು ಇರುತ್ತಿದ್ದೆ ಎಂದು ಹೇಳಿದ್ದ. ಹೀಗಾಗಿ ಕರ್ಣನ ಮಗ ಎಂಬ ವಾತ್ಸಲ್ಯ ವೃಷಕೇತುವಿನ ಮೇಲೆ ಧರ್ಮರಾಯನಿಗೂ ಇತರ ಪಾಂಡವರಿಗೂ ಇತ್ತು. ಜೊತೆಗೆ, ಉಪಪಾಂಡವರು ಆಗಲೇ ಮೃತಪಟ್ಟಿದ್ದರಿಂದ, ಪಾಂಡವರೂ ಅವನ ಮೇಲೆ ಪ್ರೀತಿಯ ಮಳೆಯನ್ನೇ ಸುರಿಸಿದರು.
Indian Mythology: ತ್ರಿಮೂರ್ತಿಗಳಲ್ಲಿ ಬ್ರಹ್ಮನಿಗೆ ಮಾತ್ರ ಏಕೆ ಪೂಜೆ ಸಲ್ಲಿಸುವುದಿಲ್ಲ?
