ಹಿಂದೂ ಧರ್ಮದಲ್ಲಿ ತ್ರಿಮೂರ್ತಿಗಳಲ್ಲಿ ಮಹಾವಿಷ್ಣು ಮತ್ತು ಮಹಾಶಿವನಿಗೆ ನಾವು ಪೂಜೆ ಸಲ್ಲಿಸುತ್ತೇವೆ. ಆದರೆ ಬ್ರಹ್ಮನಿಗೆ ಸಲ್ಲಿಸುವುದಿಲ್ಲ. ಗಣಪತಿ, ಕಾರ್ತಿಕೇಯ, ಪಾರ್ವತಿ, ಲಕ್ಷ್ಮಿ, ಬ್ರಹ್ಮನ ಪತ್ನಿಯಾದ ಸರಸ್ವತಿಗೂ ಪೂಜೆ ಸಲ್ಲುತ್ತದೆ. ಆದರೆ ಬ್ರಹ್ಮನಿಗಿಲ್ಲ! ಹೀಗೇಕೆ?
ಬ್ರಹ್ಮನು ಸೃಷ್ಟಿಕರ್ತ. ಆದರೆ ನಮ್ಮಲ್ಲಿ ಎಲ್ಲಾ ದೇವತೆಗಳಿಗೂ ಪೂಜೆಯನ್ನು ನಡೆಸಿದರೂ ಸೃಷ್ಟಿಕರ್ತ ಬ್ರಹ್ಮನಿಗೆ ಮಾತ್ರ ಯಾವ ಪೂಜೆಯನ್ನು ಮಾಡುತ್ತಿಲ್ಲ. ತ್ರಿಮೂರ್ತಿಗಳಲ್ಲಿ ಒಬ್ಬರಾಗಿರುವ ಬ್ರಹ್ಮನಿಗೆ ವಿಷ್ಣು ಮತ್ತು ಶಿವನಿಗಿರುವಂತಹ ಗೌರವವಿಲ್ಲ ಪೂಜೆ ಪುನಸ್ಕಾರಗಳಿಲ್ಲ. ಬ್ರಹ್ಮನಿಗೆ ಮೀಸಲಾಗಿರುವ ಯಾವುದೇ ದೇವಸ್ಥಾನವಿಲ್ಲ. ಇದಕ್ಕೆ ಕಾರಣವೇನು ಎಂಬುದು ನಿಮ್ಮ ಪ್ರಶ್ನೆಯಾಗಿರಬಹುದಲ್ವಾ? ಇದಕ್ಕೆ ಪುರಾಣದ ಕಥೆಗಳಲ್ಲಿ ಉತ್ತರ ಇದೆ.
ಕಥೆ 1
ವಿಶ್ವವನ್ನು ಸೃಷ್ಟಿಸುವುದರ ಜೊತೆಗೆ ಬ್ರಹ್ಮನು ಪುತ್ರಿ ಶತ್ರುಪಳನ್ನು ಸೃಷ್ಟಿಸುತ್ತಾರೆ. ಸರಸ್ವತಿ ಎಂಬ ಹೆಸರೂ ಇವಳಿಗೆ ಇದೆ. ಆಕೆ ತುಂಬಾ ಸುಂದರಿ. ಬ್ರಹ್ಮನಿಗೆ ಆಕೆಯ ಮೇಲೆ ಮನಸ್ಸಾಗುತ್ತದೆ. ಬ್ರಹ್ಮನ ಈ ಉದ್ಧೇಶವು ಶತ್ರುಪನಿಗೆ ಸರಿ ಎನಿಸುವುದಿಲ್ಲ. ಆತನಿಂದ ತಪ್ಪಿಸಿಕೊಳ್ಳಲು ಆಕೆ ಭೂಮಿಗೆ ತೆರಳುತ್ತಾಳೆ. ಅಲ್ಲಿ ಕೂಡ ಆಕೆಗೆ ರಕ್ಷಣೆ ದೊರೆಯುವುದಿಲ್ಲ. ಬ್ರಹ್ಮ ತನ್ನ ಐದು ತಲೆಯನ್ನು ಬಳಸಿಕೊಂಡು ಆಕೆಯ ಮೇಲೆ ಕಣ್ಣಿಡುತ್ತಾನೆ. ಶತ್ರುಪನು ಬ್ರಹ್ಮನಿಂದ ತಪ್ಪಿಸಿಕೊಳ್ಳಲು ಸಂಚರಿಸುತ್ತಲೇ ಇರುತ್ತಾಳೆ. ತನ್ನನ್ನು ಸೃಷ್ಟಿಸಿದವನನ್ನು ತಂದೆಯ ಸ್ಥಾನದಲ್ಲಿ ಆಕೆ ನೋಡುತ್ತಾಳೆ. ಬ್ರಹ್ಮನ ವರ್ತನೆಯಿಂದ ಬೇಸತ್ತ ಸರಸ್ವತಿಯು ಬ್ರಹ್ಮನಿಗೆ ಪೂಜೆ ಸಲ್ಲಲೇಬಾರದು ಎಂದು ಶಪಿಸುತ್ತಾಳೆ.
ಕಥೆ 2
ಒಮ್ಮೆ ವಿಷ್ಣು ಮತ್ತು ಬ್ರಹ್ಮನಿಗೆ ತಮ್ಮ ನಡುವೆ ಯಾರು ಶ್ರೇಷ್ಠ ಎಂಬ ಬಗ್ಗೆ ಚರ್ಚೆಯಾಗುತ್ತಿರುತ್ತದೆ. ಚರ್ಚೆ ಮುಂದುವರಿದು ತಮ್ಮ ನಡುವೆ ತರ್ಕ ಬೇಡ, ಶಿವನನ್ನೇ ಈ ಬಗ್ಗೆ ಕೇಳೋಣವೆಂದು ಅವರಿಬ್ಬರು ಶಿವನನ್ನು ತಲುಪುತ್ತಾರೆ. ಶಿವನ ತಲೆಯನ್ನು ಯಾರು ಮೊದಲು ನೋಡುತ್ತಾರೋ ಅವರೇ ಶ್ರೇಷ್ಠ ಎಂಬುದಾಗಿ ಶಿವನು ತಿಳಿಸುತ್ತಾರೆ. ಇದಕ್ಕಾಗಿ ಶಿವನು ಲಿಂಗ ರೂಪವನ್ನು ಧರಿಸುತ್ತಾರೆ. ಮತ್ತು ವಿಶ್ವವನ್ನೂ ಮೀರಿ ಬೆಳೆಯುತ್ತಾರೆ. ಇದರ ಆರಂಭವನ್ನು ಅರಿಯುವುದು ಅಷ್ಟು ಸುಲಭವಲ್ಲ ಎಂಬುದು ಬ್ರಹ್ಮ ಮತ್ತು ವಿಷ್ಣುವಿಗೆ ತಿಳಿಯುತ್ತದೆ. ವಿಷ್ಣುವು ಬುದ್ಧಿವಂತನಾಗಿದ್ದು ಶಿವನನ್ನು ಪ್ರಾರ್ಥಿಸಿ ಅವರ ಪಾದಕ್ಕೆ ಎರಗಿ ಶಿವನನ್ನು ಒಲಿಸಿಕೊಳ್ಳುತ್ತಾರೆ. ಅವರನ್ನು ಮೇಲಕ್ಕೆತ್ತಲು ಶಿವನು ತಲೆಬಾಗುತ್ತಾರೆ. ಹೀಗೆ ವಿಷ್ಣುವು ಪಂದ್ಯದಲ್ಲಿ ಗೆಲ್ಲುತ್ತಾರೆ. ಆದರೆ ಬ್ರಹ್ಮನು ಕುಟಿಲ ಮಾರ್ಗದಿಂದ ಪಂದ್ಯದಲ್ಲಿ ಗೆಲುವನ್ನು ಪಡೆದುಕೊಳ್ಳಲು ಬಯಸುತ್ತಾರೆ. ಕೇತಕಿ ಹೂವಿಗೆ ತನಗೆ ಸಹಾಯ ಮಾಡುವಂತೆ ಬ್ರಹ್ಮನು ಕೇಳಿಕೊಳ್ಳುತ್ತಾರೆ. ತಾನು ಶಿವನ ತಲೆಯನ್ನು ಕಂಡಿದ್ದೇನೆಂದು ಹೂವಿಗೆ ಸುಳ್ಳು ಹೇಳುವಂತೆ ಬ್ರಹ್ಮನು ಕೇಳಿಕೊಳ್ಳುತ್ತಾರೆ. ಹೀಗೆಯೇ ಹೂವು ಶಿವನಲ್ಲಿ ಸುಳ್ಳು ಹೇಳುತ್ತದೆ. ಸುಳ್ಳಿನಿಂದ ಕ್ರೋಧಗೊಂಡ ಶಿವನು ಹೂವು ಮತ್ತು ಬ್ರಹ್ಮನನ್ನು ಶಪಿಸುತ್ತಾರೆ. ಬ್ರಹ್ಮನನ್ನು ಯಾರೂ ಪೂಜಿಸಬಾರದು, ಅವರಿಗೆ ಯಾರೂ ಮನ್ನಣೆ ನೀಡಬಾರದು ಎಂದಾಗಿರುತ್ತದೆ. ಅಂತೆಯೇ ಕೇತಕಿ ಹೂವನ್ನು ಯಾರೂ ಪೂಜೆಗೆ ಬಳಸಬಾರದು ಎಂದಾಗಿ ಶಾಪವನ್ನು ನೀಡುತ್ತಾರೆ.
Maha Shivratri 2025: ಶಿವನಿಗೆ ಗಣೇಶ, ಷಣ್ಮುಖ ಮಾತ್ರವಲ್ಲ, ಇನ್ನೂ ಆರು ಮಕ್ಕಳಿದ್ದಾರೆ!
ಕಥೆ 3
ಒಮ್ಮೆ ಭೃಗು ಮಹರ್ಷಿಗಳು ತ್ರಿಮೂರ್ತಿಗಳಲ್ಲಿ ಯಾರ ಶ್ರೇಷ್ಠರು ಎಂದು ಪರೀಕ್ಷಿಸಲು ಬ್ರಹ್ಮ ವಿಷ್ಣು ಹಾಗೂ ಮಹೇಶ್ವರರ ಲೋಕಗಳಿಗೆ ಭೇಟಿ ನೀಡಲು ಹೋಗುತ್ತಾರೆ. ಶಿವನಲ್ಲಿಗೆ ಬರುತ್ತಾರೆ. ಶಿವ ಹಾಗೂ ಪಾರ್ವತಿ ಆಗ ಏಕಾಂತದಲ್ಲಿರುತ್ತಾರೆ. ಭೃಗುವ್ನು ನಂದಿ ಒಳಗೆ ಬಿಡುವುದಿಲ್ಲ. ಇದರಿಂದ ಸಿಟ್ಟಿಗೆದ್ದ ಭೃಗು, ಶಿವನಿಗೆ ಭೂಲೋಕದಲ್ಲಿ ಲಿಂಗಕ್ಕೆ ಮಾತ್ರ ಪೂಜೆ ಸಲ್ಲಲಿ ಎಂದು ಶಾಪ ಕೊಡುತ್ತಾರೆ. ನಂತರ ವಿಷ್ಣುವಿನಲ್ಲಿಗೆ ಬರುತ್ತಾರೆ. ವಿಷ್ಣು ಕೂಡ ಅನ್ಯಮನಸ್ಕನಾಗಿರುತ್ತಾನೆ. ಆಗಲೂ ಸಿಟ್ಟಿಗೆದ್ದ ಭೃಗು, ನೀನು ಭೂಲೋಕದಲ್ಲಿ ನಾನಾ ಜನ್ಮಗಳನ್ನು ತಾಳುವಂತಾಗಲಿ ಎಂದು ಶಪಿಸುತ್ತಾರೆ. ನಂತರ ಬ್ರಹ್ಮನಲ್ಲಿಗೆ ಬರುತ್ತಾರೆ. ಬ್ರಹ್ಮನು ಸೃಷ್ಟಿಕಾರ್ಯದಲ್ಲಿ ಮಗ್ನನಾಗಿರುತ್ತಾನೆ. ಋಷಿಯನ್ನು ಗಮನಿಸುವುದಿಲ್ಲ. ಸಿಟ್ಟಿಗೆದ್ದ ಭೃಗು, ನಿನ್ನನ್ನು ಯಾರೂ ಪೂಜಿಸದೇ ಇರಲಿ ಎಂದು ಶಪಿಸುತ್ತಾರೆ. ಹಾಗಾಗಿ ಬ್ರಹ್ಮನಿಗೆ ಪೂಜೆಯಿಲ್ಲ.
Maha Shivaratri 2025: ಈಶ್ವರನ ಬಳಿ ಸದಾ ಇರುವ ಇವುಗಳ ರಹಸ್ಯ ನಿಮಗೆ ಗೊತ್ತೆ?
