ಮಹಾವಿಷ್ಣುವಿನ ವಾಹನವಾದ ಗರುಡನ ಕತೆ ಎಂದರೆ ಬಡವನಾಗಿ ಹುಟ್ಟಿ ಸೋಲು ಅವಮಾನಗಳ ಮೂಲಕ ಬೆಳೆದು ಹೋರಾಟದಿಂದ ಎತ್ತರದ ಪದವಿಗೆ ಏರಿದ ಕತೆ. ಈ ಕತೆ ಸಾಧನೆಯ ಹಾದಿಯಲ್ಲಿ ಪಯಣಿಸುತ್ತಿರುವ ನಮ್ಮ ನಿಮ್ಮೆಲ್ಲರಿಗೂ ರಿಲೇಟ್ ಆಗುವಂತಿದೆ.
ಕಶ್ಯಪ ಋಷಿಯ ಅನೇಕ ಪತ್ನಿಯರಲ್ಲಿ ಇಬ್ಬರು ವಿನತೆ ಮತ್ತು ಕದ್ರು. ಈ ಇಬ್ಬರಿಗೂ ಪರಸ್ಪರ ಅಸೂಯೆ. ಇಬ್ಬರಿಗೂ ಮಕ್ಕಳಿರಲಿಲ್ಲ. ಕಶ್ಯಪರು ಇಬ್ಬರಿಗೂ ಸಂತಾನ ಭಾಗ್ಯದ ವರ ನೀಡಿದನು. ವಿನತೆ ಇಬ್ಬರು ಶಕ್ತಿಶಾಲಿ ಪುತ್ರರನ್ನು ಕೇಳಿದಳು. ಕದ್ರು ಸಾವಿರ ನಾಗಪುತ್ರರನ್ನು ಕೇಳಿದಳು. ಕದ್ರುವಿಗೆ ಸಾವಿರ ಗಂಡು ಮಕ್ಕಳು ಮೊಟ್ಟೆಯಿಂದ ಸರ್ಪರೂಪದಲ್ಲಿ ಜನಿಸಿದರು. ಇಷ್ಟಾದರೂ ವಿನತೆಗೆ ಮಕ್ಕಳಾಗಲಿಲ್ಲ. ಅವಸರದಲ್ಲಿ ವಿನತೆ ಹೊಟ್ಟೆಯನ್ನು ಹಿಸುಕಿಕೊಂಡಳು. ಅರೆ ಬೆಳೆದ ಮಗು ಮೊಟ್ಟೆಯಿಂದ ಹೊರಹೊಮ್ಮಿತು. ಆ ಮಗುವಿನ ಹೆಸರೇ ಅರುಣ. ಈತ ಮುಂದೆ ಸೂರ್ಯನ ಸಾರಥಿಯಾದ. ಈತನ ಶಾಪದಿಂದ ವಿನತೆ, ಕದ್ರುವಿಗೆ ದಾಸಿಯಾದಳು.
ವಿನತೆಯ ಎರಡನೇ ಮೊಟ್ಟೆ ಬಹಳ ಸಮಯದ ನಂತರ ಒಡೆದು ಅದರಿಂದ ದೈತ್ಯಾಕಾರದ ಹದ್ದೊಂದು ಹೊರಹೊಮ್ಮಿತು. ಅದರ ಮುಖ ಪಕ್ಷಿಯಂತಿತ್ತು ಮತ್ತು ದೇಹದ ಉಳಿದ ಭಾಗ ಮನುಷ್ಯನಂತೆ ಇತ್ತು. ಪಕ್ಕೆಲುಬುಗಳಲ್ಲಿ ಬೃಹತ್ ರೆಕ್ಕೆಗಳಿದ್ದವು. ಗರುಡನಿಗೆ ತನ್ನ ತಾಯಿ ಆಕೆಯ ತಂಗಿಯ ದಾಸಿ ಎಂದು ತಿಳಿದಾಗ, ಅವನು ತನ್ನ ತಾಯಿಯನ್ನು ಮುಕ್ತಿಗೊಳಿಸುವಂತೆ ತನ್ನ ಚಿಕ್ಕಮ್ಮ ಕದ್ರು ಮತ್ತು ಹಾವಿನ ರೂಪದಲ್ಲಿದ್ದ ಆಕೆಯ ಪುತ್ರರನ್ನು ಕೇಳಿಕೊಳ್ಳುತ್ತಾನೆ.
ಸರ್ಪ ದಾಸ್ಯದಿಂದ ನಿನ್ನ ತಾಯಿಯಿಂದ ಮುಕ್ತಿಗೊಳಿಸಬೇಕಾದರೆ ನೀವು ಅಮೃತ ಮಂಥನದಿಂದ ತೆಗೆದ ಅಮೃತವನ್ನು ನಮಗೆ ತಂದು ಕೊಡಬೇಕೆಂದು ಕದ್ರುವಿನ ಮಕ್ಕಳಾದ ಸರ್ಪಗಳು ಹೇಳಿದವು. ಅಮೃತವನ್ನು ತರಲು ಗರುಡ ತಕ್ಷಣವೇ ಸ್ವರ್ಗಲೋಕಕ್ಕೆ ಹೊರಟ. ಅಮೃತದ ರಕ್ಷಣೆಗಾಗಿ ದೇವತೆಗಳು ಮೂರು ಹಂತಗಳ ಕಠಿಣ ರಕ್ಷಣಾ ಕವಚವನ್ನು ನಿರ್ಮಿಸಿದ್ದರು. ಮೊದಲ ಹಂತದಲ್ಲಿ ಬೆಂಕಿಯ ದೊಡ್ಡ ಪರದೆಗಳನ್ನು ಹಾಕಲಾಯಿತು. ಎರಡನೆಯದು ಮಾರಣಾಂತಿಕ ಆಯುಧಗಳ ನಡುವಿನ ಘರ್ಷಣೆಯ ಗೋಡೆ ಮತ್ತು ಅಂತಿಮವಾಗಿ ಎರಡು ವಿಷಕಾರಿ ಹಾವುಗಳನ್ನು ಕಾವಲುಗಾರರನ್ನಾಗಿ ಇಡಲಾಗಿತ್ತು. ಅಲ್ಲಿಗೂ ತಲುಪುವ ಮುನ್ನ ದೇವತೆಗಳೊಂದಿಗೆ ಪೈಪೋಟಿ ನಡೆಸಬೇಕಿತ್ತು. ಗರುಡನು ದೇವತೆಗಳನ್ನು ಚದುರಿಸಿದನು. ಗರುಡನು ಅನೇಕ ನದಿಗಳ ನೀರನ್ನು ತನ್ನ ಬಾಯಿಯಲ್ಲಿ ತೆಗೆದುಕೊಂಡು ಮೊದಲ ಹಂತದ ಬೆಂಕಿಯನ್ನು ನಂದಿಸಿದನು. ಮುಂದಿನ ಮಾರ್ಗದಲ್ಲಿ ಗರುಡನು ತನ್ನ ರೂಪವನ್ನು ತಗ್ಗಿಸಿದನು ಮತ್ತು ಯಾವ ಆಯುಧವೂ ತನಗೆ ಹಾನಿಯಾಗದಂತೆ ಮೂರನೇ ಹಂತವನ್ನು ತಲುಪಿದನು. ತನ್ನ ಎರಡೂ ಕಾಲುಗಳಲ್ಲಿ ಹಾವುಗಳನ್ನು ಹಿಡಿದುಕೊಂಡು ತನ್ನ ಬಾಯಿಯಲ್ಲಿ ಅಮೃತದ ಕಲಶವನ್ನು ಎತ್ತುಕೊಂಡು ಭೂಮಿಯತ್ತ ನಡೆದನು.
ನಂತರ ವಿಷ್ಣುವು ದಾರಿಯಲ್ಲಿ ಗರುಡನಿಗೆ ಅಡ್ಡಲಾಗಿ ಬಂದ. ಬಾಯಿಯಲ್ಲಿ ಅಮೃತದ ಕಲಶವಿದ್ದರೂ ತನ್ನ ಮನಸ್ಸಿನಲ್ಲಿ ಯಾವುದೇ ಕೆಟ್ಟ ಆಲೋಚನೆಯನ್ನು ಹೊಂದಿರದ ಗರುಡನನ್ನು ಕಂಡು ವಿಷ್ಣು ಸಂತೋಷಪಟ್ಟ. ನಿನಗೆ ಯಾವ ವರ ಬೇಕೆಂದು ಕೇಳು ಎನ್ನುತ್ತಾನೆ. ಆಗ ಗರುಡನು ನನ್ನನ್ನು ನಿಮ್ಮ ವಾಹನವನ್ನಾಗಿ ಸ್ವೀಕರಿಸಬೇಕೆನ್ನುವ ವರವನ್ನು ಕೇಳುತ್ತಾನೆ. ಆಗ ವಿಷ್ಣು ಅದಕ್ಕೆ ಒಪ್ಪಿ ಗರುಡನನ್ನು ತನ್ನ ವಾಹನವನ್ನಾಗಿಸಿಕೊಳ್ಳುತ್ತಾನೆ. ನಂತರ ಇಂದ್ರ ದೇವನು ಕೂಡ ನಿನಗೆ ಹಾವುಗಳನ್ನು ಆಹಾರವಾಗಿ ತಿನ್ನುವ ಅಪಾರ ಶಕ್ತಿ ದೊರೆಯಲಿ ಎಂದು ಆಶೀರ್ವಾದವನ್ನು ಮಾಡುತ್ತಾನೆ. ಇದಾದ ಬಳಿಕ ಗರುಡನು ತನ್ನ ತಾಯಿಯನ್ನು ದಾಸಿ ಸ್ಥಾನದಿಂದ ಮುಕ್ತಗೊಳಿಸಿ ಈ ಅಮೃತದ ಕಲಶವನ್ನು ಸುರಕ್ಷಿತವಾಗಿ ಹಿಂತಿರುಗಿಸುವುದಾಗಿ ಭರವಸೆ ನೀಡಿದನು.
Maha Shivratri 2025: ಶಿವನಿಗೆ ಗಣೇಶ, ಷಣ್ಮುಖ ಮಾತ್ರವಲ್ಲ, ಇನ್ನೂ ಆರು ಮಕ್ಕಳಿದ್ದಾರೆ!
ಕೊನೆಗೆ ಗರುಡನು ಅಮೃತವನ್ನು ಹಾವುಗಳಿಗೆ ಕೊಟ್ಟು ನೆಲದ ಮೇಲೆ ಇಟ್ಟು ಇದೇ ಅಮೃತ ಕಲಶ, ಸ್ನಾನ ಮಾಡಿ ಬನ್ನಿ ಎಂದು ಹೇಳಿದ. ಎಲ್ಲಾ ಹಾವುಗಳು ಸ್ನಾನ ಮಾಡಲು ಹೋದಾಗ ಇದ್ದಕ್ಕಿದ್ದಂತೆ ಇಂದ್ರನು ಅಲ್ಲಿಗೆ ಆಗಮಿಸಿ ಅಮೃತದ ಕಲಶವನ್ನು ಹಿಂತೆಗೆದುಕೊಂಡ. ಆದರೆ ನೆಲದ ಮೇಲೆ ದರ್ಭೆಯ ಮೇಲೆ ಬಿದ್ದ ಒಂದೆರಡು ಅಮೃತದ ಹನಿಗಳನ್ನು ಹಾವುಗಳು ನೆಕ್ಕಿದವು. ಇದರಿಂದ ಅವುಗಳ ನಾಲಿಗೆ ಸೀಳಾಯಿತು. ಹೀಗೆ ತಾಯಿಯನ್ನು ರಕ್ಷಿಸಲು ಅಮೃತ ತರಲು ಹೋದ ಗರುಡ ಭಗವಾನ್ ವಿಷ್ಣು ಮತ್ತು ಇಂದ್ರನ ವರವನ್ನು ಪಡೆದುಕೊಂಡ.
Maha Shivaratri 2025: ಈಶ್ವರನ ಬಳಿ ಸದಾ ಇರುವ ಇವುಗಳ ರಹಸ್ಯ ನಿಮಗೆ ಗೊತ್ತೆ?


