ನೇಮಕಾತಿ ವಿಳಂಬದಿಂದ ವಯೋಮಿತಿ ಮೀರುವ ಆತಂಕದಲ್ಲಿದ್ದ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದಿದೆ.  ಪ್ರವರ್ಗದ ಅಭ್ಯರ್ಥಿಗಳಿಗೆ ಸರ್ಕಾರಿ ಸಿವಿಲ್‌ ಹುದ್ದೆಗಳ ನೇಮಕಾತಿಗೆ ಗರಿಷ್ಠ ವಯೋಮಿತಿಯನ್ನು 5 ವರ್ಷ ಕಾಲ ಸಡಿಲಗೊಳಿಸಿ ಆದೇಶ ಹೊರಡಿಸಿದೆ. ಇದು ಲಕ್ಷಾಂತರ ಆಕಾಂಕ್ಷಿಗಳಿಗೆ ವರದಾನವಾಗಿದೆ.

ರಾಜ್ಯ ಸರ್ಕಾರ ನೇಮಕಾತಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವುದು ಅತ್ಯಂತ ಸಕಾಲಿಕ. ಇದು ವಯೋಮಿತಿ ಮೀರುವವರಿಗೆ ವರ.

--

ರಾಜ್ಯ ಸರ್ಕಾರವು ಎಲ್ಲ ರೀತಿಯ ಸರ್ಕಾರಿ ಸಿವಿಲ್‌ ಹುದ್ದೆಗಳ ನೇಮಕಾತಿಗೆ ಎಲ್ಲಾ ಪ್ರವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು 5 ವರ್ಷ ಸಡಿಲಗೊಳಿಸಲು ಒಪ್ಪಿಕೊಂಡಿದೆ. ಇದು ಅತ್ಯಂತ ನ್ಯಾಯೋಚಿತ ಹಾಗೂ ಸಕಾಲಿಕ.

ಕಳೆದ ಕೆಲವು ವರ್ಷಗಳಿಂದ ರಾಜ್ಯ ಸರ್ಕಾರಿ ನೇಮಕಾತಿಗೆ ವಿವಿಧ ಕಾರಣಗಳಿಂದ ತಡೆ ಬಿದ್ದಿತ್ತು. ಒಳ ಮೀಸಲಾತಿ ವಿವಾದ ಸೇರಿ ಹಲವು ಕಾರಣಗಳು ಇದರ ಹಿಂದಿದ್ದವು. ಈ ಹಿನ್ನೆಲೆಯಲ್ಲಿ ಹೋರಾಟಕ್ಕೆ ಇಳಿದಿದ್ದ ಉದ್ಯೋಗ ಆಕಾಂಕ್ಷಿಗಳು ನೇಮಕಾತಿ ವಯೋಮಿತಿಯನ್ನು 5 ವರ್ಷ ಸಡಿಲಿಕೆ ಮಾಡಬೇಕೆಂದು ಒತ್ತಾಯಿಸಿದ್ದರು. ವಿದ್ಯಾಕಾಶಿ ಎಂದೇ ಖ್ಯಾತವಾಗಿರುವ ಧಾರವಾಡದಲ್ಲಿ, ಅನೇಕ ವರ್ಷಗಳಿಂದ ಉದ್ಯೋಗಕ್ಕೆ ಕಾದಿದ್ದವರು ದೊಡ್ಡ ಮಟ್ಟದ ಸರಣಿ ಹೋರಾಟವನ್ನೇ ನಡೆಸಿದ್ದರು. ಈ ಹೋರಾಟಕ್ಕೆ ರಾಜ್ಯಾದ್ಯಂತ ಬೆಂಬಲ ವ್ಯಕ್ತವಾಗಿತ್ತು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲೂ ಹಲವು ಹೋರಾಟಗಳು ನಡೆದಿದ್ದವು.

ಈ ಹೋರಾಟಕ್ಕೆ ಈಗ ಫಲ ದೊರಕಿದೆ. ಡಿಸೆಂಬರ್‌ 31, 2027ವರೆಗಿನ ನೇಮಕಕ್ಕೆ ಅನ್ವಯ ಆಗುವಂತೆ ವಯೋಮಿತಿಯನ್ನು 5 ವರ್ಷ ಸಡಿಲಿಸಲಾಗಿದೆ. ಇದು ಸರ್ಕಾರಿ ನೌಕರಿಗಾಗಿ ಹಲವು ವರ್ಷಗಳಿಂದ ಕಾಯುತ್ತಿರುವವರಿಗೆ ಆಶಾಕಿರಣವಾಗಿ ಪರಿಣಮಿಸಿದೆ. ವಿವಿಧ ಕಾರಣಗಳಿಗಾಗಿ ನೇಮಕಾತಿ ವಿಳಂಬ ಆಗುತ್ತಿದ್ದ ಕಾರಣ ಅನೇಕ ಆಕಾಂಕ್ಷಿಗಳು ವಯೋಮಿತಿ ಮೀರುವ ಆತಂಕದಲ್ಲಿ ಇದ್ದರು. ಒಮ್ಮೆ ವಯೋಮಿತಿ ಮೀರಿದರೆ ಮುಗಿಯಿತು ಮುಂದೆಂದೂ ಅವರಿಗೆ ಸರ್ಕಾರಿ ನೌಕರಿ ದೊರಕುವ ಸಾಧ್ಯತೆಯೇ ಇರಲಿಲ್ಲ. ಜೀವನದಲ್ಲಿ ಸರ್ಕಾರಿ ನೌಕರರಾಗಬೇಕು ಎಂದು ಕನಸು ಕಂಡ ಅದೆಷ್ಟೋ ಜನರಿದ್ದರು. ಇಂಥವರಿಗೆ ಒಂದು ಬಾರಿಗೆ ಅನ್ವಯ ಆಗುವಂತೆ ವಯೋಮಿತಿ ಸಡಿಲಿಸುವ ಮೂಲಕ ರಾಜ್ಯ ಸರ್ಕಾರ ಅವರಿಗೆ ರಿಲೀಫ್‌ ನೀಡಿದೆ.

ಇನ್ನೊಂದು ವಿಷಯ. ಈವರೆಗೆ ಕೆಲವು ನಿರ್ದಿಷ್ಟ ವರ್ಗದವರಿಗೆ ಮಾತ್ರ ಅನ್ವಯ ಆಗುವಂತೆ ಸರ್ಕಾರವು ನೇಮಕಾತಿ ವಯೋಮಿತಿ ಸಡಿಲಿಸಿತ್ತು. ಆದರೆ ಈಗ ಬದಲಾದ ಸನ್ನಿವೇಶದಲ್ಲಿ ಎಲ್ಲ ವರ್ಗದವರಿಗೆ ಅನ್ವಯ ಆಗುವಂತೆ ವಯಸ್ಸು ಸಡಿಲಿಕೆ ಮಾಡಿದೆ. ಇದು ಯಾವುದೇ ತಾರತಮ್ಯವಿಲ್ಲದೆ ಎಲ್ಲ ವರ್ಗದವರಿಗೆ ಸಮಾನ ಅವಕಾಶ ನೀಡಲಿದೆ. ರಾಜ್ಯ ಸರ್ಕಾರದ ಈ ನಡೆ ಮೆಚ್ಚುಗೆಗೆ ಅರ್ಹವಾಗಿದೆ.

ನಿರುದ್ಯೋಗ ಮುಕ್ತ ಕರ್ನಾಟಕ ನಿರ್ಮಾಣ ಆಗಬೇಕು ಎಂದರೆ ಕಾಲಕಾಲಕ್ಕೆ ನೇಮಕಾತಿಗಳು ಆಗಬೇಕು. ಇನ್ನು ಮುಂದಾದರೂ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಸರ್ಕಾರ ನೇಮಕಾತಿಗಳನ್ನು ವಿಳಂಬ ಮಾಡದೆ ಕಾಲಕಾಲಕ್ಕೆ ನೇಮಕಾತಿ ನಡೆಸಲಿ ಎಂಬುದು ಉದ್ಯೋಗಾಕಾಂಕ್ಷಿಗಳ ಒತ್ತಾಯ.