ಕರ್ನಾಟಕ ಸಚಿವ ಸಂಪುಟವು ಸರ್ಕಾರಿ ಉದ್ಯೋಗ ನೇಮಕಾತಿಯ ಗರಿಷ್ಠ ವಯೋಮಿತಿಯನ್ನು ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 5 ವರ್ಷಗಳ ಕಾಲ ಸಡಿಲಿಸಲು ಅನುಮೋದಿಸಿದೆ. ಈ ಸಡಿಲಿಕೆಯು 31/12/2027 ರವರೆಗಿನ ಅಧಿಸೂಚನೆಗಳಿಗೆ ಅನ್ವಯವಾಗಲಿದೆ. ಹೊಸ ವಯೋಮಿತಿ ತಿಳಿಯಲು ಕ್ಲಿಕ್ ಮಾಡಿ.
ಬೆಂಗಳೂರು (ಜ.22): ರಾಜ್ಯ ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಬೃಹತ್ ಸಿಹಿಸುದ್ದಿ ನೀಡಿದೆ. ಕರ್ನಾಟಕ ಸಿವಿಲ್ ಸೇವಾ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು 5 ವರ್ಷಗಳ ಕಾಲ ಸಡಿಲಿಸಲು ಸಚಿವ ಸಂಪುಟ ಇಂದು ಮಹತ್ವದ ಅನುಮೋದನೆ ನೀಡಿದೆ.
ಯಾರಿಗೆ ಎಷ್ಟು ವಯೋಮಿತಿ?
- ಈ ಹೊಸ ತೀರ್ಮಾನದ ಅನ್ವಯ, ವಿವಿಧ ವರ್ಗಗಳ ಅಭ್ಯರ್ಥಿಗಳಿಗೆ ವಯೋಮಿತಿ ಈ ಕೆಳಗಿನಂತೆ ಇರಲಿದೆ:
- ಸಾಮಾನ್ಯ ವರ್ಗ (General): ಈಗಿರುವ 35 ವರ್ಷಗಳಿಂದ 40 ವರ್ಷಕ್ಕೆ ಏರಿಕೆ.
- ಪರಿಶಿಷ್ಟ ಜಾತಿ / ಪಂಗಡ (SC/ST): ಈಗಿರುವ 38 ವರ್ಷಗಳಿಂದ 43 ವರ್ಷಕ್ಕೆ ವಿಸ್ತರಣೆ.
- ಹಿಂದುಳಿದ ವರ್ಗಗಳು (OBC): ಇವರಿಗೂ ಸಹ ನಿಯಮಾನುಸಾರ 5 ವರ್ಷಗಳ ವಿನಾಯಿತಿ ಲಭ್ಯವಾಗಲಿದೆ.
ಈ ಸಡಿಲಿಕೆಯು ಮುಂದಿನ 31/12/2027 ರವರೆಗೆ ಹೊರಡಿಸಲಾಗುವ ಎಲ್ಲಾ ಸರ್ಕಾರಿ ನೇಮಕಾತಿ ಅಧಿಸೂಚನೆಗಳಿಗೆ ಅನ್ವಯವಾಗಲಿದೆ. ಕಳೆದ ಕೆಲವು ವರ್ಷಗಳಿಂದ ಕೋವಿಡ್ ಹಾಗೂ ಇತರೆ ಕಾರಣಗಳಿಂದ ನೇಮಕಾತಿ ವಿಳಂಬವಾಗಿದ್ದರಿಂದ ವಯೋಮಿತಿ ಮೀರಿದ್ದ ಲಕ್ಷಾಂತರ ಅಭ್ಯರ್ಥಿಗಳಿಗೆ ಈ ನಿರ್ಧಾರವು ಸಂಜೀವಿನಿಯಾದಂತಾಗಿದೆ.
ದಲಿತ ಹಾಗೂ ಹಿಂದುಳಿದ ವರ್ಗಗಳ 22 ಮಠಗಳಿಗೆ ಭೂಮಿ ಮಂಜೂರು
ಇದೇ ಸಚಿವ ಸಂಪುಟ ಸಭೆಯಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಸಂಬಂಧಿಸಿದ ಮತ್ತೊಂದು ಪ್ರಮುಖ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲೂಕಿನ ದಾಸನಪುರ ಹೋಬಳಿಯಲ್ಲಿ ದಲಿತ ಮತ್ತು ಹಿಂದುಳಿದ ವರ್ಗಗಳ 22 ಮಠಗಳಿಗೆ ಜಾಗ ಮಂಜೂರು ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ.
ಎಲ್ಲಿದೆ ಈ ಜಾಗ?
ದಾಸನಪುರ ಹೋಬಳಿಯ ರಾವುತ್ತನಹಳ್ಳಿ ಗ್ರಾಮದ ಸರ್ವೇ ನಂಬರ್ 57 ಮತ್ತು 58 ರಲ್ಲಿರುವ ಸರ್ಕಾರಿ ಜಮೀನನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುವುದು. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಮತ್ತು ಶೋಷಿತ ವರ್ಗಗಳ ಮಠಗಳ ಶೈಕ್ಷಣಿಕ ಹಾಗೂ ಧಾರ್ಮಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಈ ಮಂಜೂರಾತಿ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಈ ನಿರ್ಧಾರವು ಮಠಾಧೀಶರು ಹಾಗೂ ಆಯಾ ಸಮುದಾಯಗಳ ಜನರ ದಶಕಗಳ ಬೇಡಿಕೆಗೆ ಸಿಕ್ಕ ಜಯವಾಗಿದೆ.


