ಪೆಸಿಫಿಕ್ ಮಹಾಸಾಗರದಲ್ಲಿ ತೀವ್ರಗೊಳ್ಳುತ್ತಿರುವ 'ಸೂಪರ್ ಎಲ್ ನಿನೋ' ವಿದ್ಯಮಾನವು ಮುಂಬರುವ ತಿಂಗಳುಗಳಲ್ಲಿ ಉತ್ತುಂಗಕ್ಕೇರಲಿದೆ. ಇದು ಜಾಗತಿಕವಾಗಿ ಅಭೂತಪೂರ್ವ ಬಿಸಿಲು, ತೀವ್ರ ಬರಗಾಲ, ಚಂಡಮಾರುತಗಳು ಮತ್ತು ಜಲಪ್ರಳಯದಂತಹ ತೀವ್ರ ಹವಾಮಾನ ವೈಪರೀತ್ಯಗಳಿಗೆ ಕಾರಣವಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಜಾಗತಿಕ ಪರಿಸರ ವ್ಯವಸ್ಥೆಯ ಮೇಲೆ ಭಾರೀ ದುರಂತವನ್ನು ಉಂಟು ಮಾಡುವಂತಹ ಅಪಾಯವೊಂದು ವೇಗವಾಗಿ ಸಮೀಪಿಸುತ್ತಿದೆ. ಪೆಸಿಫಿಕ್ ಮಹಾಸಾಗರದಲ್ಲಿ ಪ್ರಸ್ತುತ ವೇಗವಾಗಿ ತೀವ್ರಗೊಳ್ಳುತ್ತಿರುವ 'ಎಲ್ ನಿನೋ' (El Niño) ವಿದ್ಯಮಾನದ ಪ್ರಭಾವವು ಮುಂಬರುವ ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳ ವೇಳೆಗೆ ತನ್ನ ಉತ್ತುಂಗಕ್ಕೇರಲಿದೆ ಎಂದು ಹವಾಮಾನ ತಜ್ಞರು ತುರ್ತು ಎಚ್ಚರಿಕೆ ನೀಡಿದ್ದಾರೆ.

ಮಾನವನ ಚರಿತ್ರೆಯಲ್ಲಿ ಇದುವರೆಗೂ ಯಾವುದೇ ಸಂದರ್ಭದಲ್ಲಿ ನೋಡದಂತಹ ರೀತಿಯಲ್ಲಿ 'ಸೂಪರ್ ಎಲ್‌ ನಿನೋ' ರುದ್ರ ನರ್ತನ ನಡೆಯಲಿದೆ. ಇದರ ಪ್ರಭಾವ ವಿಶ್ವದಾದ್ಯಂತ ಬಿಸಿಲಿನ ಪ್ರಕೋಪ ಈ ಹಿಂದೆ ಎಂದು ನೋಡದ ಮಟ್ಟದಲ್ಲಿ ಹೆಚ್ಚಾಗಲಿದೆ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.

ಸೂಪರ್ ಎಲ್ ನಿನೋ, ಜಗತ್ತನ್ನು ನಡುಗಿಸಲಿರುವ ಮುನ್ಸೂಚನೆ

ಈಕ್ವಟೋರಿಯಲ್ ಪೆಸಿಫಿಕ್ ಪ್ರದೇಶದಲ್ಲಿ ಸಮುದ್ರದ ಮೇಲ್ಮೈ ತಾಪಮಾನವು ಈಗಾಗಲೇ ಸಾಮಾನ್ಯ ಮಟ್ಟಕ್ಕಿಂತ ಗಣನೀಯವಾಗಿ ಏರಿಕೆಯಾಗಿ, 'ಸೂಪರ್ ಎಲ್ ನಿನೋ' (Super El Niño) ಸ್ಥಿತಿಯನ್ನು ತಲುಪಿದೆ. ಆದರೆ ಅಧಿಕಾರಿಗಳು, ತಜ್ಞರಿಗೆ ಮತ್ತಷ್ಟು ಆತಂಕ ಮೂಡಿಸುತ್ತಿರುವ ಅಂಶ ಎಂದರೆ, ಇದು ಸಾಗರದ ಮೇಲ್ಮೈ ಅಡಿಯಲ್ಲಿ ಅತ್ಯಂತ ಬಿಸಿಯಾದ ನೀರು ಹೆಚ್ಚುತ್ತಾ ಹೋಗುತ್ತಿದೆ. ಈ ಬಿಸಿ ನೀರಿನ ಎಫೆಕ್ಟ್, ಮುಂದಿನ ಕೆಲವು ತಿಂಗಳಿನಲ್ಲಿ ಮೇಲಕ್ಕೆ ಬಂದು, ವಾತಾವರಣದಲ್ಲಿ ಊಹೆಗೂ ನಿಲುಕದ ಬದಲಾವಣೆಗೆ ಕಾರಣವಾಗಲಿದೆ. ಆದರೆ ಈ ಬಾರಿ ಹೆಚ್ಚಾಗುತ್ತಿರುವ ಬಿಸಿ, ನೀರಿನ ಮೇಲ್ಮೈ ಅಡಿಯ ಉಷ್ಣಾಂಶ ಹೆಚ್ಚಳ ಈ ಹಿಂದಿನ ಎಲ್ಲಾ ದಾಖಲೆಗಳನ್ನು ತಲೆಕೆಳಗಾಗಿ ಮಾಡುತ್ತಿದೆ.

ತೀವ್ರ ಬರಗಾಲ, ತುಫಾನ್, ಚಂಡಮಾರುತಗಳು, ತೀವ್ರವಾದ ಉಷ್ಣಾಂಶ, ಬಿಸಿಗಾಳಿ ಪ್ರಭಾವ ನಡುವೆ ಮಧ್ಯ ಮತ್ತು ಪೂರ್ವ ಪೆಸಿಫಿಕ್ ಮಹಾಸಮುದ್ರದಲ್ಲಿ ಸಾಮಾನ್ಯಕ್ಕಿಂತ ಭಿನ್ನವಾಗಿ ಬಿಸಿ ನೀರು ವಿಸ್ತರಣೆ ಆಗುತ್ತಿರುವುದರಿಂದ ಗಾಳಿಯ ಚಾಲನೆಯ ದಿಕ್ಕು ಸಂಪೂರ್ಣವಾಗಿ ತಲೆಕೆಳಗಾಗುತ್ತಿದೆ. ಇದರ ಎಫೆಕ್ಟ್‌ನಿಂದ ಮಳೆ, ಮಾರುತಗಳು, ಜಲಪ್ರಳಯಯ ಜೊತೆಗೆ ತೀವ್ರ ಬರಗಾಲ ನಿರ್ಮಾಣವಾಗಲಿದೆ. ಸದ್ಯದ ಅಂದಾಜಿನ ಅನ್ವಯ, ಈ ಎಲ್‌ ನಿನೋ ತೀವ್ರತೆ ಈ ವರ್ಷದ ಅಂತ್ಯಕ್ಕೆ ಗರಿಷ್ಠ ಮಟ್ಟಕ್ಕೆ ಮುಟ್ಟಲಿದ್ದು, ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಮುಂದಕ್ಕೆ ಮುನ್ನುಗುವ ಎಲ್ಲಾ ಅವಕಾಶಗಳು ಸ್ಪಷ್ಟವಾಗಿ ಕಾಣುತ್ತಿದೆ.

ಮುಂದಿರುವ 18 ತಿಂಗಳ ಗಂಡಾಂತರ, ಪ್ಲಸ್ 2 ಡಿಗ್ರಿ ಉಷ್ಣಾಂಶ!

ಮನುಷ್ಯ ಮಾಡುತ್ತಿರುವ ತಪ್ಪುಗಳಿಂದಲೇ ಭೂಮಿಯ ತಾಪಮಾನ ಹೆಚ್ಚಾಗುತ್ತಿದ್ದು, ಇದಕ್ಕೆ ಅಪಾಯಕಾರಿ ಎಲ್ ನಿನೋ ಜೊತೆಯಾದರೆ ಜಗತ್ತಿನ ಸರಾಸರಿ ಉಷ್ಣಾಂಶ ಈ ಹಿಂದಿನ ದಾಖಲೆಗಳಿಗಿಂತ 2 ಡಿಗ್ರಿ ಸೆಲ್ಸಿಯಸ್ ವರೆಗೂ ಹೆಚ್ಚಾಗುವ ಪ್ರಭಾವವಿದೆ. ಅದರಲ್ಲೂ ಮುಂಬರುವ 12 ರಿಂದ 18 ತಿಂಗಳು ಜಗತ್ತಿಗೆ ಅತ್ಯಂತ ಪ್ರಮುಖ ಸಮಯ ಆಗಲಿದೆ.

ಒಂದೆಡೆ ಜಗತ್ತು ತೀವ್ರ ಬರಗಾಲ ಮತ್ತು ಕ್ಷಾಮಗಳನ್ನು ಎದುರಿಸಬಹುದು ಹಾಗೂ ಇನ್ನೊಂದೆಡೆ ಅಕಾಲಿಕ ಭಾರಿ ಮಳೆ ಮತ್ತು ಅನಿರೀಕ್ಷಿತ ಚಂಡಮಾರುತಗಳನ್ನು ಎದುರಿಸಬೇಕಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಸಾಗರಗಳು ಬಿಸಿಯಾಗುತ್ತಿರುವ ರೀತಿಯನ್ನು ಗಮನಿಸಿದರೆ, ಜಗತ್ತು ಒಂದು ದೊಡ್ಡ ಪರೀಕ್ಷೆಯನ್ನು ಎದುರಿಸಲಿದೆ ಎಂಬುದು ಸ್ಪಷ್ಟವಾಗುತ್ತಿದೆ.