ರೋವರ್‌ನ ಮತ್ತೊಂದು ವಿಡಿಯೋ ಬಿಡುಗಡೆ: ಪ್ರಜ್ಞಾನ್ ಸಂಚರಿಸುತ್ತಿರುವ ದೃಶ್ಯ ಲಭ್ಯ
ಚಂದ್ರಯಾನದ 3 ಉದ್ದೇಶಗಳ ಪೈಕಿ 2 ಉದ್ದೇಶಗಳನ್ನು ಸಾಧಿಸಲಾಗಿದೆ ಎಂದು ಇಸ್ರೋ ಘೋಷಿಸಿದ್ದು, 3ನೇ ಉದ್ದೇಶ ಸಾಧನೆಯು ಪ್ರಗತಿಯಲ್ಲಿದೆ, ಚಂದ್ರನ ವೈಜ್ಞಾನಿಕ ಪ್ರಯೋಗ ನಡೆಸುತ್ತಿದ್ದೇವೆ ಎಂದು ಹೇಳಿದೆ.
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಶನಿವಾರ ಚಂದ್ರಯಾನ-3 ಮಿಷನ್‌ನ ಮತ್ತೊಂದು ವಿಡಿಯೋವನ್ನು ಬಿಡುಗಡೆ ಮಾಡಿದೆ. ಅದರಲ್ಲಿ ‘ಪ್ರಜ್ಞಾನ್’ ರೋವರ್ ಚಂದ್ರನ ಮೇಲ್ಮೈನಲ್ಲಿ ಮುಂದಕ್ಕೆ ಸಾಗಿದ ಮತ್ತು ಪಕ್ಕಕ್ಕೆ ಸಂಚರಿಸಿದ ದೃಶ್ಯಗಳಿವೆ. ಇದೇ ವೇಳೆ, ಚಂದ್ರಯಾನದ 3 ಉದ್ದೇಶಗಳ ಪೈಕಿ 2 ಉದ್ದೇಶಗಳನ್ನು ಸಾಧಿಸಲಾಗಿದೆ ಎಂದು ಇಸ್ರೋ ಘೋಷಿಸಿದ್ದು, 3ನೇ ಉದ್ದೇಶ ಸಾಧನೆಯು ಪ್ರಗತಿಯಲ್ಲಿದೆ, ಚಂದ್ರನ ವೈಜ್ಞಾನಿಕ ಪ್ರಯೋಗ ನಡೆಸುತ್ತಿದ್ದೇವೆ ಎಂದು ಹೇಳಿದೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಪ್ರಜ್ಞಾನ್ ರೋವರ್, ಶಿವಶಕ್ತಿ ಪಾಯಿಂಟ್ ಸುತ್ತಲೂ ತಿರುಗುತ್ತಿದೆ! ಎಂದು ಇಸ್ರೋ ಶನಿವಾರ ಬೆಳಗ್ಗೆ ಟ್ವೀಟ್ ಮಾಡಿದೆ. ದೃಶ್ಯದಲ್ಲಿ ಪ್ರಜ್ಞಾನ್ ಸಂಚರಿಸುತ್ತಿರುವುದು ಹಾಗೂ ಅದರ ಚಕ್ರದ ಅಚ್ಚುಗಳು ಚಂದ್ರನ ಮಣ್ಣಿನಲ್ಲಿ ಮೂಡುತ್ತಿರುವುದು ಕಾಣಿಸುತ್ತದೆ. ಇನ್ನು ಶನಿವಾರ ಸಂಜೆ ಇನ್ನೊಂದು ಟ್ವೀಟ್ ಮಾಡಿರುವ ಇಸ್ರೋ 3 ಉದ್ದೇಶಗಳ ಪೈಕಿ 2 ಉದ್ದೇಶಗಳ ಸಾಧನೆ ಬಗ್ಗೆ ಹೇಳಿದೆ. ಚಂದ್ರನ ಮೇಲ್ಮೈನಲ್ಲಿ ಸುರಕ್ಷಿತ ಮತ್ತು ಮೃದುವಾದ ಲ್ಯಾಂಡಿಂಗ್ ಮಾಡಲಾಗಿದ್ದು, ಮೊದಲ ಉದ್ದೇಶ ಸಾಧಿಸಿದ್ದೇವೆ. ಇನ್ನು ಚಂದ್ರನ ಮೇಲೆ ರೋವರ್ ಸುಗಮ ಸಂಚಾರ ನಡೆಸಿದ್ದು, 2ನೇ ಉದ್ದೇಶವನ್ನೂ ಸಾಧಿಸಿದಂತಾಗಿದೆ. ಇನ್ನು 3ನೇ ಉದ್ದೇಶವು ಚಂದ್ರನ ಸ್ಥಳದಲ್ಲಿ ವೈಜ್ಞಾನಿಕ ಪ್ರಯೋಗ. ಅದಿನ್ನೂ ಪ್ರಗತಿಯಲ್ಲಿದೆ. ಎಲ್ಲ ಪೇಲೋಡ್‌ಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದಿದೆ.
Chandrayaan-3: ಇಸ್ರೋ ಮಾತ್ರವಲ್ಲ ವಿಕ್ರಮನ ಬೆನ್ನುಬಿದ್ದಿದೆ ನಾಸಾ, ಯುರೋಪಿಯನ್ ಸ್ಪೇಸ್ ಏಜೆನ್ಸಿ!
ಚಂದ್ರಯಾನ-3ರ ವಿಕ್ರಮ ಲ್ಯಾಂಡರ್, ಚಂದ್ರನ ಮೇಲೆ ಇಳಿಯುವ ಸ್ಥಳವನ್ನು ಇನ್ನು ಶಿವಶಕ್ತಿ ಪಾಯಿಂಟ್ ಎಂದು ಕರೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಳಗ್ಗೆ ಬೆಂಗಳೂರು ಇಸ್ರೋ ಕಚೇರಿಗೆ ಭೇಟಿ ನೀಡಿದಾಗ ಘೋಷಿಸಿದ್ದರು. ಅಲ್ಲದೆ, ಏತನ್ಮಧ್ಯೆ, 2019 ರಲ್ಲಿ ಚಂದ್ರಯಾನ-2 ಲ್ಯಾಂಡರ್ ಚಂದ್ರನ ಮೇಲೆ ಕ್ರಾಶ್ ಲ್ಯಾಂಡ್ ಆದ ಸ್ಥಳವನ್ನು ತಿರಂಗಾ ಪಾಯಿಟ್ (Tiranga Point) ಎಂದೂ ಕರೆದಿದ್ದರು. ಶುಕ್ರವಾರವಷ್ಟೇ ಇಸ್ರೋ, ರೋವರ್‌ನ ಎಲ್ಲ ಚಲನೆಗಳನ್ನು ಪರಿಶೀಲಿಸಲಾಗಿದೆ ಮತ್ತು ಅದು ಸುಮಾರು 8 ಮೀಟರ್ ದೂರವನ್ನು ಯಶಸ್ವಿಯಾಗಿ ಕ್ರಮಿಸಿದೆ ಎಂದಿತ್ತು.
ಲ್ಯಾಂಡರ್ ಡಿಸೈನ್ ತನ್ನದೆಂದ ಸೂರತ್ ವ್ಯಕ್ತಿ ವಿರುದ್ಧ ತನಿಖೆ ಶುರು
ಚಂದ್ರನ ದಕ್ಷಿಣ ಧ್ರುವದಲ್ಲಿ (South Pole of the Moon) ಯಶಸ್ವಿಯಾಗಿ ಇಳಿದ ಚಂದ್ರಯಾನ-3 ಯೋಜನೆಯ ಲ್ಯಾಂಡರ್‌ನ ವಿನ್ಯಾಸ ನಾನೇ ಮಾಡಿದ್ದು ಸೂರತ್‌ನ ವ್ಯಕ್ತಿಯೊಬ್ಬ ಹೇಳಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಸತ್ಯತೆ ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚಂದ್ರಯಾನ-3 ಯೋಜನೆ ಯಶಸ್ವಿಯಾದಾಗಿನಿಂದಲೂ ಮಿತುಲ್ ತ್ರಿವೇದಿ (Mitul trivedi) ಎಂಬ ವ್ಯಕ್ತಿ ಸ್ಥಳೀಯ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದು, ಚಂದ್ರಯಾನ ಲ್ಯಾಂಡರ್ ಮಾದರಿಯನ್ನು ನಾನೇ ತಯಾರಿಸಿದ್ದು ಎಂದು ಹೇಳುತ್ತಿದ್ದಾರೆ. ಇದು ಪತ್ರಿಕೆಗಳಲ್ಲಿ ಪ್ರಕಟವಾದ ಬಳಿಕ ತನಿಖೆ ಆರಂಭಿಸಿರುವ ಪೊಲೀಸರು, ಇದರ ಸತ್ಯತೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ತ್ರಿವೇದಿ ತನ್ನನ್ನು ತಾನು ಪಿಎಚ್‌ಡಿ ಪದವೀಧರ ಎಂದು ಹೇಳಿಕೊಳ್ಳುತ್ತಿದ್ದು, ಇಸ್ರೋದಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಅವರು ಒದಗಿಸಿಲ್ಲ ಎಂದು ಡಿಸಿಪಿ ಹೀತಲ್ ಪಟೇಲ್ ಹೇಳಿದ್ದಾರೆ.