Chandrayaan-3: ಇಸ್ರೋ ಮಾತ್ರವಲ್ಲ ವಿಕ್ರಮನ ಬೆನ್ನುಬಿದ್ದಿದೆ ನಾಸಾ, ಯುರೋಪಿಯನ್ ಸ್ಪೇಸ್ ಏಜೆನ್ಸಿ!
ಮೊದಲೇ ಹೇಳಿದ ಹಾಗೆ ಬಾಹ್ಯಾಕಾಶ ಅನ್ನೋದು ಯುದ್ಧಭೂಮಿಯಲ್ಲ. ಇಡೀ ವಿಶ್ವ ಒಗ್ಗಟ್ಟಾಗಿರುವ ಒಂದೇ ಒಂದು ಸ್ಥಳ ಎಂದರೆ ಬಹುಶಃ ಅದು ಬಾಹ್ಯಾಕಾಶ ಮಾತ್ರ. ಚಂದ್ರನ ಮೇಲೆ ಲ್ಯಾಡಿಂಗ್‌ಗೆ ಅಣಿಯಾಗುತ್ತಿರುವ ವಿಕ್ರಮ್‌ನ ಬೆನ್ನುಬಿದ್ದಿರೋದು ಇಸ್ರೋ ಮಾತ್ರವಲ್ಲ, ನಾಸಾ ಹಾಗೂ ಇಎಸ್‌ಎ ಕೂಡ ಇದರ ಹಿಂದೆ ಬಿದ್ದಿದೆ.
ಬೆಂಗಳೂರು (ಆ.21): ಇಡೀ ಜಗತ್ತಿನ ಕಣ್ಣುಗಳೀಗ ವಿಕ್ರಮ್ ಲ್ಯಾಂಡರ್ ಮೇಲಿದೆ. ಆಗಸ್ಟ್ 23ರ ಸಂಜೆ 6.04 ನಿಮಿಷಕ್ಕೆ ವಿಕ್ರಮ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್ ಆಗಬೇಕಿದೆ. ಜುಲೈ 14 ರಂದು ಶ್ರೀಹರಿಕೋಟಾದಿಂದ ಉಡಾವಣೆಗೊಂಡಿದ್ದ ವಿಕ್ರಮ್ ಲ್ಯಾಂಡರ್ ಈಗ ಚಂದ್ರನ ಮೇಲೆ ಲ್ಯಾಂಡ್ ಆಗುವ ಸೂಕ್ತ ಸ್ಥಳದ ಹುಡುಕಾಟದಲ್ಲಿದೆ. ಯಾವ ಸ್ಥಳ ಸೂಕ್ತ ಎನ್ನುವ ನಿಟ್ಟಿನಲ್ಲಿ ಭೂಮಿಯಲ್ಲಿರುವ ಇಸ್ರೋದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ಇಸ್ಟ್ರಾಕ್) ಸಂಪರ್ಕದಲ್ಲಿದೆ. ಚಂದ್ರನಲ್ಲಿರುವ ಲ್ಯಾಂಡರ್ ನೇರವಾಗಿ ಇಸ್ಟ್ರಾಕ್‌ಗೆ ಸಂಪರ್ಕ ಸಾಧಿಸುವುದಿಲ್ಲ. ಅದರ ಕಮಾಂಡ್‌ಗಳು ತಲುಪುವುದು ರಾಮನಗರದ ಬ್ಯಾಲಾಳುವಿನಲ್ಲಿರುವ ಐಡಿಎಸ್‌ಎನ್ ಕೇಂದ್ರಕ್ಕೆ. ಐಡಿಎಸ್‌ಎನ್ ಅಂದರೆ ಇಂಡಿಯನ್ ಡೀಪ್ ಸ್ಪೇಸ್ ನೆಟ್‌ವರ್ಕ್. ಅರ್ಥಾತ್ ಭಾರತೀಯ ಗಾಢಾಂತರಿಕ್ಷ ಜಾಲ. ಅಲ್ಲಿನ ಅಂಟೇನಾಗಳು ಪಡೆದುಕೊಳ್ಳುವ ಮಾಹಿತಿ ನೇರವಾಗಿ ಇಸ್ಟ್ರಾಕ್‌ಗೆ ತಲುಪುತ್ತದೆ. ಇಸ್ಟ್ರಾಕ್‌ನಲ್ಲಿ ವಿಜ್ಞಾನಿಗಳು ನೀಡುವ ಕಮಾಂಡ್‌ಅನ್ನು ಐಡಿಎಸ್‌ಎನ್, ವಿಕ್ರಮ್ ಲ್ಯಾಂಡರ್‌ಗೆ ತಲುಪಿಸುತ್ತದೆ. ಹಾಗಂತ ವಿಕ್ರಮ್‌ನ ಬೆನ್ನುಬಿದ್ದಿರುವುದು ಇಸ್ರೋ ಮಾತ್ರವಲ್ಲ, ನಾಸಾ ಹಾಗೂ ಇಎಸ್‌ಎ ಎಂದು ಹೇಳಲಾಗುವ ಯುರೋಪಿಯನ್ ಸ್ಪೇಸ್ ಏಜೆನ್ಸಿ ಕೂಡ ಬೆನ್ನು ಬಿದ್ದ ಬೇತಾಳನಂತೆ ವಿಕ್ರಮ್‌ನ ಹಿಡಿದುಕೊಂಡಿದೆ. ತನಗೆ ಸಿಕ್ಕಂತ ಎಲ್ಲಾ ಮಾಹಿತಿಗಳನ್ನು ಇದು ಇಸ್ಟ್ರಾಕ್‌ಗೆ ರವಾನೆ ಮಾಡುತ್ತದೆ.
ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಸೇರಿದಂತೆ ಕೆಲವು ವಿದೇಶಿ ಬಾಹ್ಯಾಕಾಶ ಸಂಸ್ಥೆಗಳ ಸಹಾಯದಿಂದ ಭಾರತದ ಮೂರನೇ ಚಂದ್ರನ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಭಾರತದ ಬಾಹ್ಯಾಕಾಶ ಕಾರ್ಯಾಚರಣೆಗೆ ನಾಸಾ ಹೇಗೆ ಸಹಾಯ ಮಾಡುತ್ತಿದೆ ಎಂದು ನೀವು ಆಶ್ಚರ್ಯ ಪಡುತ್ತಿರಬಹುದು. ಆದರೆ, ಚಂದ್ರಯಾನ-3 ನೌಕೆ ಉಡಾವಣೆ ಆದಾಗಿನಿಂದ, ನೌಕೆಯ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಇಸ್ರೋಗೆ ನಾಸಾ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ನಾಸಾದ ಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ ಇಂಟರ್‌ಪ್ಲಾನೆಟರಿ ನೆಟ್‌ವರ್ಕ್ ಡೈರೆಕ್ಟರೇಟ್ ಕಸ್ಟಮರ್ ಇಂಟರ್‌ಫೇಸ್ ಮ್ಯಾನೇಜರ್ ಸಮಿ ಅಸ್ಮಾರ್, ಚಂದ್ರಯಾನ-3 ನೌಕೆಯ ಮೇಲ್ವಿಚಾರಣೆಗೆ ನಾಸಾ ತನ್ನ ಡೀಪ್ ಸ್ಪೇಸ್ ನೆಟ್‌ವರ್ಕ್ ಅಂಟೇನಾಗಳನ್ನು ಬಳಸಿಕೊಳ್ಳುತ್ತಿದೆ. ಇದು ತನಗೆ ಸಿಕ್ಕ ಟೆಲಿಮೆಟ್ರಿ ಮತ್ತು ಟ್ರ್ಯಾಕಿಂಗ್ ಕವರೇಜ್ಅನ್ನು ಇಸ್ಟ್ರಾಕ್‌ಗೆ ನೀಡುತ್ತಿದೆ. ಅದಕ್ಕಾಗಿ ಆಸ್ಟ್ರೇಲಿಯಾದ ಕ್ಯಾನ್‌ಬೆರಾ ಡೀಪ್ ಸ್ಪೇಸ್ ಕಮ್ಯುನಿಕೇಷನ್ ಕಾಂಪ್ಲೆಕ್ಸ್‌ನಲ್ಲಿರುವ ಡಿಎಸ್‌ಎಸ್-26 ಅಂಟೇನಾ ಹಾಗೂ ಮ್ಯಾಡ್ರಿಡ್ ಡೀಪ್ ಸ್ಪೇಸ್ ಕಮ್ಯುನಿಕೇಷನ್ ಸಂಕೀರ್ಣದಲ್ಲಿರುವ ಡಿಎಸ್‌ಎಸ್-65 ಅಂಟೇನಾ ಬಳಸಿಕೊಳ್ಳಲಾಗುತ್ತಿದೆ ಎಂದಿದ್ದಾರೆ.
ನಾಸಾದೊಂದಿಗೆ ಯುರೋಪಿಯನ್ ಸ್ಪೇಸ್ ಏಜೆನ್ಸಿ ಕೂಡ ಭಾರತಕ್ಕೆ ಸಹಾಯ ಮಾಡುತ್ತಿದೆ. ESTRACK ನೆಟ್‌ವರ್ಕ್‌ನಲ್ಲಿರುವ ಎರಡು ಭೂಕೇಂದ್ರಗಳ ಮೂಲಕ ಉಪಗ್ರಹವನ್ನು ಟ್ರ್ಯಾಕ್ ಮಾಡುತ್ತದೆ. ESA ಬಾಹ್ಯಾಕಾಶ ನೌಕೆಯಿಂದ ಟೆಲಿಮೆಟ್ರಿಯನ್ನು ಸ್ವೀಕರಿಸುತ್ತದೆ ಮತ್ತು ಅದನ್ನು ಬೆಂಗಳೂರಿನ ಮಿಷನ್ ಆಪರೇಷನ್ ಸೆಂಟರ್‌ಗೆ ರವಾನಿಸುತ್ತದೆ ಮತ್ತು ಬೆಂಗಳೂರಿನಿಂದ ಹಾರುವ ಉಪಗ್ರಹಕ್ಕೆ ಕಳುಹಿಸಲಾದ ಕಮಾಂಡ್‌ಗಳನ್ನು ಫಾರ್ವರ್ಡ್ ಮಾಡುತ್ತದೆ ಎಂದು ಜರ್ಮನಿಯ ಇಎಸ್‌ಓಸಿ ಡಾರ್ಮ್‌ಸ್ಟಾಡ್ಟ್‌ನ ಗ್ರೌಂಡ್ ಆಪರೇಷನ್ ಇಂಜಿನಿಯರ್ ರಮೇಶ್ ಚೆಲ್ಲತುರೈ ಹೇಳಿದ್ದಾರೆ.
ಬಾಹ್ಯಾಕಾಶ ಯುದ್ಧಭೂಮಿಯಲ್ಲ..ರಷ್ಯಾದ ಲೂನಾ ಸೋಲು ಸಂಭ್ರಮ ಪಡುವ ವಿಚಾರವಲ್ಲ!
ಚಂದ್ರಯಾನ-3ರ ಲ್ಯಾಂಡರ್‌ನ ಚಂದ್ರಸ್ಪರ್ಶ ಸಮೀಪಿಸುತ್ತಿದ್ದಂತೆ, ಈ ಏಜೆನ್ಸಿಗಳ ಭೂ ಕೇಂದ್ರಗಳ ಬೆಂಬಲವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ESTRACK ನೆಟ್‌ವರ್ಕ್‌ನಲ್ಲಿ ಮೂರನೇ ಭೂಕೇಂದ್ರ ನಿಲ್ದಾಣವನ್ನು ಚಂದ್ರನ ಅವರೋಹಣ ಹಂತದಲ್ಲಿ ಲ್ಯಾಂಡರ್ ಮಾಡ್ಯೂಲ್‌ನೊಂದಿಗೆ ಟ್ರ್ಯಾಕ್ ಮಾಡಲು ಮತ್ತು ಸಂವಹನ ಮಾಡಲು ಸ್ಥಾಪಿಸಲಾಗಿದೆ.
Chandrayaan-3 Landing: ಚಂದ್ರನ ಮೇಲೆ ಭಾರತದ ಸಾಫ್ಟ್ ಲ್ಯಾಂಡಿಗ್, ನೀವು ಎಲ್ಲೆಲ್ಲಾ ವೀಕ್ಷಿಸಬಹುದು?