40 ವರ್ಷ ವಯಸ್ಸಿನ ಪಾಕಿಸ್ತಾನಿ ಯುದ್ಧ ವಿಮಾನ ಪೈಲಟ್ ಆದ ಮುಹಮ್ಮದ್ ಜೀಶನ್ ಅಲಿ ಭೂಮಿಯ ಕಕ್ಷೆಯನ್ನು ಪ್ರವೇಶಿಸಿದ ಮೊದಲ ಪಾಕಿಸ್ತಾನಿ ಗಗನಯಾತ್ರಿ ಎನಿಸಿಕೊಂಡಿದ್ದಾರೆ.ಪಾಕಿಸ್ತಾನಿ ಗಗನಯಾತ್ರಿ ಅಲಿ ಜೊತೆಗೆ, ಚೀನಾದ ಮಿಷನ್ ಕಮಾಂಡರ್ ಟಾಂಗ್ ಹೊಂಗ್ಬೊ, ಮತ್ತು ಫ್ಲೈಟ್ ಇಂಜಿನಿಯರ್ ವು ಯಿ ಸಹ ತೆರಳಿದ್ದಾರೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ನವೆಂಬರ್ (ನ.25) , ಭಾರತೀಯ ಕಾಲಮಾನದಲ್ಲಿ (ಐಎಸ್ಟಿ) ಬೆಳಗ್ಗೆ 5:48ರ ವೇಳೆಗೆ, ಚೀನಾದ ಲಾಂಗ್ ಮಾರ್ಚ್ - 2ಎಫ್ ರಾಕೆಟ್ ಗೋಬಿ ಮರುಭೂಮಿಯ ಜಿಯುಕ್ವಾನ್ ಸ್ಯಾಟಲೈಟ್ ಲಾಂಚ್ ಸೆಂಟರ್ನಿಂದ ಆಗಸಕ್ಕೆ ಚಿಮ್ಮಿತು. ಇದರಲ್ಲಿದ್ದ ಶೆನ್ಜೌ಼-24 ಬಾಹ್ಯಾಕಾಶ ನೌಕೆಯೊಳಗಿದ್ದ ಮೂವರು ಗಗನಯಾತ್ರಿಗಳ ಪೈಕಿ, ಓರ್ವ ಗಗನಯಾತ್ರಿ ತನ್ನ ಸಂಪೂರ್ಣ ದೇಶದ ಕನಸುಗಳ ಪ್ರತಿನಿಧಿಯಾಗಿದ್ದ.
40 ವರ್ಷ ವಯಸ್ಸಿನ ಪಾಕಿಸ್ತಾನಿ ಯುದ್ಧ ವಿಮಾನ ಪೈಲಟ್ ಆದ ಮುಹಮ್ಮದ್ ಜೀಶನ್ ಅಲಿ ಭೂಮಿಯ ಕಕ್ಷೆಯನ್ನು ಪ್ರವೇಶಿಸಿದ ಮೊದಲ ಪಾಕಿಸ್ತಾನಿ ಗಗನಯಾತ್ರಿ ಎನಿಸಿಕೊಂಡಿದ್ದಾರೆ. ಈ ಮೂಲಕ, ಚೀನಾದ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿದ ಮೊದಲ ವಿದೇಶೀ ಗಗನಯಾತ್ರಿ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಚಳಿಗಾಲದ ಕೊರೆಯುವ ಮುಂಜಾನೆಯಲ್ಲಿ, ಸೂರ್ಯೋದಯಕ್ಕೂ ಮುನ್ನ ಈ ಐತಿಹಾಸಿಕ ಉಡಾವಣೆಯನ್ನು ವೀಕ್ಷಿಸಲು ನೂರಾರು ಜನರು ಕಾತರಿಸಿದ್ದರು. ಬಾಹ್ಯಾಕಾಶ ನೌಕೆ ತನ್ನ ಉದ್ದೇಶಿತ ಕಕ್ಷೆಯನ್ನು ತಲುಪಿದೆ ಎಂದು ಚೀನೀ ಅಧಿಕಾರಿಗಳು ಖಚಿತಪಡಿಸಿದ್ದು, ಉಡಾವಣೆ ಯಶಸ್ವಿಯಾಗಿದೆ ಎಂದು ಘೋಷಿಸಿದ್ದಾರೆ.
ಯಶಸ್ವಿಯಾಗಿ ಡಾಕಿಂಗ್
ಬಹುತೇಕ ಮೂರೂವರೆ ಗಂಟೆಗಳ ಪ್ರಯಾಣದ ಬಳಿಕ, ಭಾರತೀಯ ಕಾಲಮಾನದಲ್ಲಿ ಬೆಳಗ್ಗೆ 9:18ರ ಸುಮಾರಿಗೆ, ಬಾಹ್ಯಾಕಾಶ ನೌಕೆ ಟಿಯಾಂಗಾಂಗ್ ಜೊತೆ ಯಶಸ್ವಿಯಾಗಿ ಡಾಕಿಂಗ್ ನಡೆಸಿತು. ಡಾಕಿಂಗ್ ಎಂದರೆ ಬಾಹ್ಯಾಕಾಶ ನೌಕೆ ಬಾಹ್ಯಾಕಾಶದಲ್ಲಿ ಚಲಿಸುವ ಪ್ರಯೋಗಾಲಯವಾದ ಬಾಹ್ಯಾಕಾಶ ನಿಲ್ದಾಣಕ್ಕೆ ಭೌತಿಕವಾಗಿ ಸಂಪರ್ಕಿಸುವ ಪ್ರಕ್ರಿಯೆಯಾಗಿದೆ.
ಪಾಕಿಸ್ತಾನಿ ಗಗನಯಾತ್ರಿ ಅಲಿ ಜೊತೆಗೆ, ಚೀನಾದ ಮಿಷನ್ ಕಮಾಂಡರ್ ಟಾಂಗ್ ಹೊಂಗ್ಬೊ, ಮತ್ತು ಫ್ಲೈಟ್ ಇಂಜಿನಿಯರ್ ವು ಯಿ ಸಹ ತೆರಳಿದ್ದಾರೆ. ಇದು ವು ಅವರ ಮೊದಲ ಬಾಹ್ಯಾಕಾಶ ಪ್ರಯಾಣವಾದರೆ, ಟಾಂಗ್ ಮೂರನೇ ಬಾರಿಗೆ ತೆರಳಿದ್ದಾರೆ. ಈ ಮೂಲಕ ಟಿಯಾಂಗಾಂಗ್ಗೆ ಮೂರನೇ ಭೇಟಿ ನೀಡಿದ ಮೊದಲ ಗಗನಯಾತ್ರಿ ಎನ್ನುವ ಸಾಧನೆ ನಿರ್ಮಿಸಿದ್ದಾರೆ.
ಈ ಪ್ರಯಾಣದ ಸಂದರ್ಭದಲ್ಲಿ, ಗಗನಯಾತ್ರಿಗಳು ತಮ್ಮ ರಕ್ಷಣಾ ಮುಖ ಗವಸುಗಳನ್ನು ತೆಗೆದಿಟ್ಟಿದ್ದರು. ಈ ಮೂಲಕ ಬಾಹ್ಯಾಕಾಶ ನೌಕೆಯೊಳಗಿನ ಪರಿಸ್ಥಿತಿ ವಾಸಯೋಗ್ಯವಾಗಿದೆ, ಸ್ಥಿರವಾಗಿದೆ ಎನ್ನುವ ಸಂದೇಶ ನೀಡಿದರು. ಇದೇ ವೇಳೆ, ಮೇ 2026ರಲ್ಲಿ ಶೆನ್ಜೌ಼-23 ಯೋಜನೆಯ ಭಾಗವಾಗಿ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಮೂವರು ಗಗನಯಾತ್ರಿಗಳು ತಮ್ಮ ನಿಲ್ದಾಣದಿಂದಲೇ ಈ ಉಡಾವಣೆಯ ನೇರ ಪ್ರಸಾರವನ್ನು ವೀಕ್ಷಿಸಿದರು.
ಕುತೂಹಲಕಾರಿ ವಿಚಾರವೆಂದರೆ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಪ್ರಾವೀಣ್ಯತೆ ಸಾಧಿಸುವುದಕ್ಕಿಂತಲೂ, ಮ್ಯಾಂಡರಿನ್ ಭಾಷೆಯನ್ನು ಕಲಿಯುವುದು ಅಲಿ ಪಾಲಿಗೆ ಬಹುದೊಡ್ಡ ಸವಾಲಾಗಿತ್ತು!
ಭೂಮಿಯಿಂದ ನೂರಾರು ಕಿಲೋಮೀಟರ್ ಎತ್ತರದ ಬಾಹ್ಯಾಕಾಶದಲ್ಲಿ ಏನೋ ಒಂದು ತುರ್ತು ಪರಿಸ್ಥಿತಿ ಎದುರಾಯಿತು ಎಂದುಕೊಳ್ಳಿ. ಆದರೆ, ಅಲ್ಲಿ ಎಲ್ಲ ನಿಯಂತ್ರಣ ವ್ಯವಸ್ಥೆಗಳು, ಕಂಪ್ಯೂಟರ್ ಸೂಚನೆಗಳು, ಮತ್ತು ಧ್ವನಿ ಮುನ್ನೆಚ್ಚರಿಕೆಗಳು, ಎಲ್ಲವೂ ಒಂದು ಅಪರಿಚಿತ ಭಾಷೆಯಲ್ಲಿರುತ್ತದೆ!
25 ಕೋಟಿ ನಾಗರಿಕರ ಪ್ರತಿನಿಧಿಸಿದ ಗಗನಯಾತ್ರಿ
ಬೀಜಿಂಗ್ನಲ್ಲಿ ಏಳು ತಿಂಗಳ ಕಾಲ ಸಿದ್ಧತೆ, ತರಬೇತಿ ಪಡೆದ ಅಲಿ, ಮಾತನಾಡಲು ಮತ್ತು ತಾಂತ್ರಿಕ ಬಳಕೆಗೆ ಅವಶ್ಯಕವಾದ ಮ್ಯಾಂಡರಿನ್ ಕಲಿತಿದ್ದಾರೆ. ಇದರೊಡನೆ, ಚೀನೀ ಹಾಡುಗಳು ಮತ್ತು ಕವಿತೆಗಳನ್ನು ಕಲಿತಿದ್ದು, ಸಾಂಪ್ರದಾಯಿಕ ಚೀನೀ ಬರವಣಿಗೆ ಕಲಿತು, ಟೇಬಲ್ ಟೆನಿಸ್ ಆಟದಲ್ಲೂ ತೊಡಗಿದ್ದರು.
ಅಲಿ ಪಡೆದ ತರಬೇತಿಗಳಲ್ಲಿ, ಸೆಂಟ್ರಿಫ್ಯೂಜ್ ತರಬೇತಿಯೂ ಸೇರಿತ್ತು. ಇದರಲ್ಲಿ, ಗಗನಯಾತ್ರಿಗಳನ್ನು ಕ್ಷಿಪ್ರವಾಗಿ ತಿರುಗಿಸಿ, ಉಡಾವಣೆಯ ಸಂದರ್ಭದಲ್ಲಿ ಉಂಟಾಗುವ ತೀವ್ರ ಬಲಗಳಿಗೆ ಅವರನ್ನು ಸಿದ್ಧಗೊಳಿಸಲಾಗುತ್ತದೆ. ಅಲಿ ಇದರೊಡನೆ ರಕ್ಷಣೆ, ಉಳಿಯುವಿಕೆ, ಮತ್ತು ತುರ್ತು ಪ್ರತಿಕ್ರಿಯೆ ತರಬೇತಿಗಳನ್ನೂ ಪಡೆದರು. ಇನ್ನೊರ್ವ ಪಾಕಿಸ್ತಾನಿ ಅಭ್ಯರ್ಥಿ, ಖುರ್ರಮ್ ದಾವೂದ್ ಸಹ ಅಲಿಯೊಡನೆ ತರಬೇತಿ ಪಡೆದು, ಅಂತಿಮ ಆಯ್ಕೆಯ ಹಂತವನ್ನು ತಲುಪಿದ್ದರು.
ಉಡಾವಣೆಗೂ ಮುನ್ನ ಭಾವನಾತ್ಮಕವಾಗಿ ಮಾತನಾಡಿದ ಅಲಿ, ಪಾಕಿಸ್ತಾನ ಮತ್ತು ಅದರ 25 ಕೋಟಿ ನಾಗರಿಕರನ್ನು ಪ್ರತಿನಿಧಿಸುವ ಹೆಮ್ಮೆಯನ್ನು ವ್ಯಕ್ತಪಡಿಸಿದರು. ಪಾಕಿಸ್ತಾನದ ಯೋಜನಾ ಮತ್ತು ಅಭಿವೃದ್ಧಿ ಸಚಿವರಾದ ಅಹ್ಸಾನ್ ಇಕ್ಬಾಲ್ ಈ ಕ್ಷಣವನ್ನು ಚೀನಾ - ಪಾಕಿಸ್ತಾನದ ಸ್ನೇಹದಲ್ಲಿ ಮಹತ್ವದ ಘಟ್ಟ ಎಂದು ಬಣ್ಣಿಸಿದರು.
ಆದರೆ, ಅಲಿ ಬಾಹ್ಯಾಕಾಶವನ್ನು ತಲುಪಿದ ಮೊದಲ ಪಾಕಿಸ್ತಾನಿ ವ್ಯಕ್ತಿಯಲ್ಲ!
ಅಕ್ಟೋಬರ್ 2023ರಲ್ಲಿ, ಮೊನಾಕೊ ಮೂಲದ ಪಾಕಿಸ್ತಾನಿ ಧ್ರುವ ಪ್ರದೇಶದ ಅನ್ವೇಷಣಾ ಸಾಹಸಿ ನಮೀರಾ ಸಲೀಮ್ ವರ್ಜಿನ್ ಗ್ಯಾಲಾಕ್ಟಿಕ್ ಸಂಸ್ಥೆಯ ಗ್ಯಾಲಾಕ್ಟಿಕ್ 04 ವಾಣಿಜ್ಯಿಕ ಬಾಹ್ಯಾಕಾಶ ಹಾರಾಟದ ಭಾಗವಾಗಿದ್ದರು. ಅವರು 2006ರಲ್ಲಿ 2 ಲಕ್ಷ ಡಾಲರ್ ಪಾವತಿಸಿ ತನ್ನ ಟಿಕೆಟ್ ಖರೀದಿಸಿದ್ದರು.
ಆ ಯೋಜನೆಯಲ್ಲಿ ಕಂಪನಿಯ ಮೂವರು ಸಿಬ್ಬಂದಿಗಳು ಮತ್ತು ಮೂವರು ಪಾವತಿಸುವ ಪ್ರಯಾಣಿಕರು ತೆರಳಿದ್ದರು. ಪ್ರಯಾಣಿಕರಲ್ಲಿ ಸಲೀಂ, ಅಮೆರಿಕದ ರಾನ್ ರೊಸಾನೊ ಮತ್ತು ಬ್ರಿಟನ್ನಿನ ಟ್ರೆವರ್ ಬಿಯಾಟ್ಟೀ ಸೇರಿದ್ದರು.
ಅವರ ಪ್ರಯಾಣ ಸಬ್ ಆರ್ಬಿಟಲ್ ಆಗಿತ್ತು. ಅಂದರೆ, ಬಾಹ್ಯಾಕಾಶ ನೌಕೆ ಬಾಹ್ಯಾಕಾಶವನ್ನೇನೋ ತಲುಪಿತ್ತು. ಆದರೆ, ಭೂಮಿಯ ಪರಿಭ್ರಮಣೆ ನಡೆಸಲು ಬೇಕಾಗುವಷ್ಟು ವೇಗವನ್ನು ಅದು ಹೊಂದಿರಲಿಲ್ಲ. ಮೇಲಕ್ಕೆ ಎಸೆದ ಚೆಂಡು ಕ್ರಮೇಣ ನೆಲಕ್ಕೆ ಮರಳಲೇ ಬೇಕಲ್ಲ? ಈ ಪ್ರಕ್ರಿಯೆಯೂ ಅದೇ ರೀತಿಯದಾಗಿತ್ತು. ಆದರೆ ಅಲಿ ತೆರಳಿರುವ ಯೋಜನೆ ಒಂದು ನಿರ್ದಿಷ್ಟ ಕಕ್ಷೆಯನ್ನು ತಲುಪಿತು. ಈ ಮೂಲಕ ಅಲಿ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಪಾಕಿಸ್ತಾನದ ಮೊದಲ ವೃತ್ತಿಪರ ತರಬೇತಿ ಹೊಂದಿದ ಗಗನಯಾತ್ರಿ ಎನಿಸಿಕೊಂಡರು.
ಪೇಲೋಡ್ ತಜ್ಞನ ಪಾತ್ರ ಹೊಂದಿರುವ, ವೈಜ್ಞಾನಿಕ ಪ್ರಯೋಗಗಳ ಜವಾಬ್ದಾರಿ ಹೊಂದಿರುವ ಅಲಿ, ಚೀನಾ ಮತ್ತು ಪಾಕಿಸ್ತಾನಗಳ ನಾಲ್ಕು ಜಂಟಿ ಸಂಶೋಧನಾ ಯೋಜನೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಇವುಗಳಲ್ಲಿ ಸಯನೋಬ್ಯಾಕ್ಟೀರಿಯಾ ಎಂಬ ಸೂಕ್ಷ್ಮ ಜೀವಿಗಳ ಅಧ್ಯಯನವೂ ಸೇರಿದೆ. ಇವು ಸೂರ್ಯನ ಬೆಳಕನ್ನು ಬಳಸಿಕೊಂಡು ಶಕ್ತಿಯನ್ನು ಉತ್ಪಾದಿಸುವುದರ ಜೊತೆಗೆ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಕ್ವಿನೋವಾ ಬೀಜಗಳು ಬಾಹ್ಯಾಕಾಶದ ವಿಕಿರಣ ಮತ್ತು ಬಹುತೇಕ ತೂಕವಿಲ್ಲದ ವಾತಾವರಣಕ್ಕೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನೂ ಸಂಶೋಧಕರು ಪರಿಶೀಲಿಸಲಿದ್ದಾರೆ.
ಇತರ ಪ್ರಯೋಗಗಳಲ್ಲಿ ಗ್ರಾಫೀನ್ ಸಂಯುಕ್ತಗಳು ಮತ್ತು ಸ್ವಯಂ ದುರಸ್ತಿ ಮಾಡಿಕೊಳ್ಳುವ ವಸ್ತುಗಳ ಅಧ್ಯಯನವೂ ಸೇರಿದೆ. ಗ್ರಾಫೀನ್ ಸಂಯುಕ್ತಗಳು ಹಗುರವಾಗಿದ್ದರೂ ಹೆಚ್ಚು ಬಲಿಷ್ಠವಾಗಿರುತ್ತವೆ. ಸ್ವಯಂ ದುರಸ್ತಿ ವಸ್ತುಗಳು ಸಣ್ಣಪುಟ್ಟ ಹಾನಿಗಳನ್ನು ತಾವಾಗಿಯೇ ಸರಿಪಡಿಸಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಇಂತಹ ತಂತ್ರಜ್ಞಾನಗಳು ಭವಿಷ್ಯದಲ್ಲಿ ಹೆಚ್ಚು ಸುರಕ್ಷಿತ ಬಾಹ್ಯಾಕಾಶ ನೌಕೆಗಳ ನಿರ್ಮಾಣಕ್ಕೆ ನೆರವಾಗಬಹುದು.
ಇನ್ನು ಯೋಜನೆಯ ವ್ಯಾಪ್ತಿ 90ಕ್ಕೂ ಹೆಚ್ಚು ಪ್ರಯೋಗಗಳು ಮತ್ತು ತಂತ್ರಜ್ಞಾನ ಪರೀಕ್ಷೆಗಳನ್ನು ಹೊಂದಿದ್ದು, ಮಾನವ ಆರೋಗ್ಯ, ಬಾಹ್ಯಾಕಾಶ ಔಷಧಿ, ಮತ್ತು ಬಹುತೇಕ ತೂಕಾರಾಹಿತ್ಯ ಪರಿಸ್ಥಿತಿಗಳಲ್ಲಿ ವಸ್ತುಗಳು ಹೇಗೆ ದಹಿಸುತ್ತವೆ ಎನ್ನುವುದರ ಅಧ್ಯಯನ ನಡೆಸಲಿವೆ. ಬಾಹ್ಯಾಕಾಶದಲ್ಲಿ ರಕ್ತನಾಳಗಳು ಹೇಗೆ ವಯಸ್ಸಾಗುತ್ತವೆ ಎನ್ನುವುದನ್ನೂ ತನಿಖೆ ನಡೆಸಲಿದ್ದು, ಅದು ಭೂಮಿಯಲ್ಲಿ ಉತ್ತಮ ಚಿಕಿತ್ಸೆಯನ್ನು ಅಭಿವೃದ್ಧಿ ಪಡಿಸಲು ನೆರವಾಗಲಿದೆ.
ಟಿಯಾಂಗಾಂಗ್ ನಲ್ಲಿ ಸುಮಾರು ಒಂದು ವಾರ ಕಳೆದ ಬಳಿಕ ಅಲಿ ಭೂಮಿಗೆ ಮರಳಲಿದ್ದಾರೆ. 2026ರ ಮೇ ತಿಂಗಳಲ್ಲಿ ಬಾಹ್ಯಾಕಾಶ ನಿಲ್ದಾಣಕ್ಕೆ ಆಗಮಿಸಿದ್ದ ಇಬ್ಬರು ಚೀನೀ ಗಗನಯಾತ್ರಿಗಳೊಂದಿಗೆ ಅವರು ಶೆನ್ಜೌ಼-23 ನೌಕೆಯಲ್ಲಿ ಹಿಂದಿರುಗಲಿದ್ದಾರೆ. ಟಾಂಗ್ ಮತ್ತು ವು ಅವರು ಟಿಯಾಂಗಾಂಗ್ನಲ್ಲೇ ಸುಮಾರು ಆರು ತಿಂಗಳು ಉಳಿಯಲಿದ್ದಾರೆ. ಹಿಂದಿನ ತಂಡದ ಮೂರನೇ ಸದಸ್ಯ ಝು ಯಾಂಗ್ಝು ಮಾತ್ರ ಅಲ್ಲಿಯೇ ಉಳಿದು, ದೀರ್ಘಕಾಲದ ಬಾಹ್ಯಾಕಾಶ ಪ್ರಯಾಣಕ್ಕೆ ಮಾನವ ದೇಹ ಹೇಗೆ ಹೊಂದಿಕೊಳ್ಳುತ್ತದೆ ಎಂಬುದರ ಅಧ್ಯಯನ ನಡೆಸುವ ಒಂದು ವರ್ಷದ ಯೋಜನೆಯನ್ನು ಪೂರ್ಣಗೊಳಿಸಲಿದ್ದಾರೆ.
ವೈಜ್ಞಾನಿಕ ಸಾಧನೆಗಳಾಚೆಗೆ, ಈ ಯೋಜನೆ ಗಮನಾರ್ಹ ಭೌಗೋಳಿಕ ರಾಜಕೀಯ ಮಹತ್ವವನ್ನೂ ಹೊಂದಿದೆ. ಗಗನಯಾತ್ರಿಯ ತರಬೇತಿ, ಉಡಾವಣೆ, ವಸತಿ ಮತ್ತು ಸುರಕ್ಷಿತ ವಾಪಸಾತಿ ಸೇರಿದಂತೆ ಎಲ್ಲ ಹಂತಗಳಿಗೂ ಪಾಕಿಸ್ತಾನ ಚೀನಾವನ್ನು ಅವಲಂಬಿಸಿದೆ.
2025ರ ಫೆಬ್ರವರಿಯಲ್ಲಿ ಸಹಿ ಹಾಕಲಾದ ಬಾಹ್ಯಾಕಾಶ ಸಹಕಾರ ಒಪ್ಪಂದದ ಮುಂದುವರಿದ ಭಾಗವಾಗಿ ಈ ಯಾನ ನಡೆದಿದೆ. ಈ ಒಪ್ಪಂದವು ಹಿಂದಿನ ಉಪಗ್ರಹ ಸಹಭಾಗಿತ್ವಗಳನ್ನು ಮತ್ತಷ್ಟು ವಿಸ್ತರಿಸಿದೆ. ಇದೇ ವರ್ಷ ಚೀನಾ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಸಂಬಂಧಗಳ 75ನೇ ವಾರ್ಷಿಕೋತ್ಸವವೂ ಆಚರಣೆಯಾಗುತ್ತಿದೆ.
ಬಹುತೇಕ 50 ದೇಶಗಳ ನಾಗರಿಕರು ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದರೂ, ಕೇವಲ ರಷ್ಯಾ, ಅಮೆರಿಕ ಮತ್ತು ಚೀನಾಗಳು ಮಾತ್ರವೇ ಮಾನವ ಸಹಿತ ಕಕ್ಷೀಯ ಉಡಾವಣಾ ಸಾಮರ್ಥ್ಯವನ್ನು ಹೊಂದಿವೆ.
'ಸ್ವರ್ಗದ ಅರಮನೆ' ಎಂಬ ಅರ್ಥ ನೀಡುವ ಚೀನಾದ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣವು ಕೇಂದ್ರ ವಾಸ್ತವ್ಯ ವಿಭಾಗ ಮತ್ತು ಅದಕ್ಕೆ ಸಂಪರ್ಕ ಹೊಂದಿರುವ ವೈಜ್ಞಾನಿಕ ಪ್ರಯೋಗಾಲಯಗಳನ್ನು ಒಳಗೊಂಡಿದೆ. 2022ರಿಂದ ಈ ನಿಲ್ದಾಣದಲ್ಲಿ ನಿರಂತರವಾಗಿ ಗಗನಯಾತ್ರಿಗಳು ವಾಸಿಸುತ್ತಿದ್ದಾರೆ.
2024ರಲ್ಲಿ ಚಾಂಗ್ಇ-6 ಯೋಜನೆಯ ಮೂಲಕ ಚೀನಾ ತನ್ನ ಹೆಚ್ಚುತ್ತಿರುವ ತಾಂತ್ರಿಕ ಸಾಮರ್ಥ್ಯವನ್ನು ಪ್ರದರ್ಶಿಸಿತ್ತು. ಈ ಯೋಜನೆಯ ಮೂಲಕ ಚಂದ್ರನ ದೂರದ ಭಾಗದಿಂದ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ತಂದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಚೀನಾ ಪಾತ್ರವಾಗಿತ್ತು. 2030ರ ವೇಳೆಗೆ ಚಂದ್ರನ ಮೇಲ್ಮೈಗೆ ಗಗನಯಾತ್ರಿಗಳನ್ನು ಇಳಿಸುವ ಗುರಿಯನ್ನು ಚೀನಾ ಹೊಂದಿದ್ದು, ಬಾಹ್ಯಾಕಾಶ ಅನ್ವೇಷಣೆಯಲ್ಲಿ ಅಮೆರಿಕದ ನಾಯಕತ್ವಕ್ಕೆ ಸವಾಲು ಹಾಕುತ್ತಿದೆ.
ಸ್ವದೇಶಿ ಗಗನಯಾನ ಮಾನವಸಹಿತ ಬಾಹ್ಯಾಕಾಶ ಯೋಜನೆಯನ್ನು ಅಭಿವೃದ್ಧಿಪಡಿಸುತ್ತಿರುವ ಭಾರತಕ್ಕೆ, ಈ ಯೋಜನೆ ಒಂದು ಪ್ರಮುಖ ವ್ಯತ್ಯಾಸವನ್ನು ಎತ್ತಿ ತೋರಿಸುತ್ತದೆ. ಅಂತರರಾಷ್ಟ್ರೀಯ ಸಹಭಾಗಿತ್ವದ ಮೂಲಕ ಬಾಹ್ಯಾಕಾಶವನ್ನು ತಲುಪುವುದು ಒಂದು ಸಾಧನೆಯಾದರೆ, ಅದಕ್ಕಾಗಿ ಅಗತ್ಯವಿರುವ ತಂತ್ರಜ್ಞಾನವನ್ನು ಸ್ವತಂತ್ರವಾಗಿ ಅಭಿವೃದ್ಧಿ ಪಡಿಸುವುದು ಮತ್ತೊಂದು ಮಹತ್ವದ ಸವಾಲಾಗಿದೆ.
ಪಾಕಿಸ್ತಾನದ ಪಾಲಿಗೆ ಅಲಿ ನಡೆಸಿರುವ ಬಾಹ್ಯಾಕಾಶ ಪ್ರಯಾಣ ರಾಷ್ಟ್ರೀಯ ಹೆಮ್ಮೆ ಮತ್ತು ವೈಜ್ಞಾನಿಕ ಅವಕಾಶಗಳ ಪ್ರತಿನಿಧಿಯಾಗಿದೆ. ಚೀನಾ ಪಾಲಿಗೆ ಇದು ತನ್ನ ತಾಂತ್ರಿಕ ಸಾಮರ್ಥ್ಯದ ಮೇಲಿನ ವಿಶ್ವಾಸ, ರಾಜತಾಂತ್ರಿಕ ಪ್ರಭಾವ, ಮತ್ತು ಜಾಗತಿಕ ಮಟ್ಟದಲ್ಲಿ ಬಾಹ್ಯಾಕಾಶ ಅನ್ವೇಷಣೆಯ ಪ್ರಮುಖ ತಾಣವಾಗುವ ಮಹತ್ವಾಕಾಂಕ್ಷೆಯ ಪ್ರದರ್ಶನವಾಗಿದೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
















