ಅಮುರ್ ಫಾಲ್ಕನ್ ಪಕ್ಷಿಗಳ ಸುದೀರ್ಘ ವಾರ್ಷಿಕ ವಲಸೆ ಆರಂಭವಾಗಿದೆ. ಮಣಿಪುರದಲ್ಲಿ ವಿಶ್ರಾಂತಿ ಪಡೆದ ಅಪಾಪಾಂಗ್ ಮತ್ತು ಅಲಾಂಗ್ ಎಂಬ ಪಕ್ಷಿಗಳು ಅರಬ್ಬಿ ಸಮುದ್ರದ ಮೂಲಕ ಆಫ್ರಿಕಾವನ್ನು ತಲುಪಿವೆ. ಈ ಪಕ್ಷಿಗಳ ಅದ್ಭುತ ಪ್ರಯಾಣ ಪ್ರಕೃತಿಯ ವಿಸ್ಮಯವಾಗಿದೆ.
ಅಮುರ್ ಫಾಲ್ಕನ್ ಪಕ್ಷಿಗಳ ಅಧ್ಬುತ ವಾರ್ಷಿಕ ವಲಸೆ ಮತ್ತೆ ಆರಂಭವಾಗಿದೆ. ಸ್ಯಾಟಿಲೈಟ್ ಟ್ಯಾಗ್ ಹೊಂದಿರುವ ಅಪಾಪಾಂಗ್, ಅಲಾಂಗ್ ಎಂಬ ಎರಡು ಅಮರ್ ಫಾಲ್ಕನ್ ಪಕ್ಷಿಗಳು ತಮ್ಮ ಸುದೀರ್ಘ ಪ್ರಯಾಣವನ್ನು ಪ್ರಾರಂಭಿಸಿದೆ. ಮಣಿಪುರದಿಂದ ತಾಮಂಗ್‌ಲಾಂಗ್ ಜಿಲ್ಲೆಯಲ್ಲಿ ಸುಮಾರು 25 ದಿನ ಕಳೆದಿದ್ದ ಈ ಪಕ್ಷಿಗಳು, ಅರಬ್ಬಿ ಸಮುದ್ರದ ಮೂಲಕ ಆಫ್ರಿಕಾ ಖಂಡವನ್ನು ತಲುಪಿದೆ.
ಅಮುರ್ ಫಾಲ್ಕನ್‌ಗಳ ರಹಸ್ಯಮಯ ಪ್ರಯಾಣ
5,700 ಕಿಲೋ ಮೀಟರ್ ದೂರದ ಪ್ರಯಾಣವನ್ನು ಈ ಪಕ್ಷಿಗಳು ಕೇವಲ 101 ಗಂಟೆ ಅಂದರೆ ಸುಮಾರು ನಾಲ್ಕು ದಿನ ಐದು ಗಂಟೆಗಳಲ್ಲಿ ಪೂರ್ಣಗೊಳಿಸಿವೆ. ಈ ಕಾರಣದಿಂದಲೇ ಈ ಅಮುರ್ ಫಾಲ್ಕನ್ ಪಕ್ಷಿಗಳಿಗೆ ವಿಶ್ವದಲ್ಲೇ ಅತಿ ಹೆಚ್ಚು ದೂರ ವಲಸೆ ಹೋಗುವ ಪಕ್ಷಿಗಳು ಎಂದು ಗುರುತಿಸಲಾಗಿದೆ.
ಈ ಕುರಿತಂತೆ ತಮಿಳುನಾಡಿನ ಅರಣ್ಯ ಇಲಾಖೆ ಅಧಿಕಾರಿ ಸುಪ್ರಿಯಾ ಸಾಹೊ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಪಾಪಾಂಗ್ ಪಕ್ಷಿ ಭಾರತವನ್ನು ದಾಟಿ ಪಶ್ಚಿಮ ತೀರದ ಕಡೆಗೆ ಪ್ರಯಾಣ ಬೆಳೆಸಿದೆ. ಅಲಾಂಗ್ ಈಗಾಗಲೇ ಅರಬ್ಬಿ ಸಮುದ್ರವನ್ನು ಪ್ರವೇಶಿಸಿದೆ ಎಂದು ಅವರು ಹೇಳಿದ್ದಾರೆ. ಈ ಪಕ್ಷಿಗಳು ಸುಮಾರು 3 ಸಾವಿರ ಕಿಲೋ ಮೀಟರ್ ದೂರ ಎಲ್ಲಿಯೂ ನಿಲ್ಲದೆ, ಯಾವುದೇ ಆಹಾರವನ್ನು ಸೇವಿಸದೆ ಸಮುದ್ರವನ್ನು ದಾಟಿ ಆಫ್ರಿಕಾವನ್ನು ಸೇರುತ್ತವೆ. ಇದನ್ನು ಪ್ರಕೃತಿಯಲ್ಲಿರುವ ಒಂದು ಅಧ್ಬುತ ಎಂದೇ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಚಿಕ್ಕ ಪಕ್ಷಿಗಳು ಪ್ರಯಾಣವನ್ನು ನಾವು ಆಸಕ್ತಿಯಿಂದ, ಅಚ್ಚರಿಯಿಂದ ಹಾಗೂ ಸ್ವಲ್ಪ ಆತಂಕದಿಂದ ಗಮನಿಸುತ್ತಿದ್ದೇವೆ ಎಂದು ಅಧಿಕಾರಿ ಬರೆದುಕೊಂಡಿದ್ದಾರೆ.
ಇನ್ನು, ಅಮುರ್ ಫಾಲ್ಕನ್ ಪಕ್ಷಿಗಳು ಸಾಮಾನ್ಯವಾಗಿ 150 ಗ್ರಾಂ ತೂಕವನ್ನು ಹೊಂದಿರುತ್ತವೆ. ಇವುಗಳ ವಲಸೆಯನ್ನು ಅಧ್ಯಯನ ಮಾಡಲು ವೈಲ್ಡ್ ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ವಿಜ್ಞಾನಿಗಳು 2025ರಲ್ಲಿ ಇವುಗಳಿಗೆ ಸ್ಯಾಟಿಲೈಟ್ ಟ್ರಾನ್ಸ್ ಮೀಟರ್ಸ್ ಅಳವಡಿಕೆ ಮಾಡಿದ್ದರು. ಕಳೆದ ವರ್ಷ ಅಂದರೆ 2025ರಲ್ಲಿ ವಲಸೆಯ ಭಾಗವಾಗಿ ಅಪಾಪಾಂಗ್ ಕೇವಲ ಆರು ದಿನಗಳಲ್ಲಿ 6100 ಕಿಲೋ ಮೀಟರ್ ದೂರ ತಾಂಜೇನಿಯ, ಅಲಾಂಗ್ 5,600 ಕಿಲೋ ಮೀಟರ್ ಪ್ರಯಾಣಿಸಿ ಕೀನ್ಯಾ ತಲುಪಿತ್ತು.
ಪ್ರತಿ ವರ್ಷ ಪಶ್ಚಿಮ ರಷ್ಯಾದಿಂದ, ಚೀನಾ ಮೂಲಕ ಚಳಿಗಾಲ ಈ ಪಕ್ಷಿಗಳು ವಲಸೆಗೆ ಬರುತ್ತವೆ. ಈ ಸುದೀರ್ಘ ಪ್ರಯಾಣಿಕ್ಕೂ ಮುನ್ನ ನಾಗಾಲ್ಯಾಂಡ್, ಮಣಿಪುರದಲ್ಲಿ ಭೂಮಿಯ ಮೇಲೆ ಇಳಿದು ಆಹಾರ ಸೇವಿಸುತ್ತವೆ. ಅಲ್ಲದೇ ತಮ್ಮ ದೇಹದಲ್ಲಿ ಕೊಬ್ಬಿನ ಅಂಶವನ್ನು ಶೇಖರಿಸಿಕೊಳ್ಳುತ್ತವೆ. ಸದ್ಯ ಅವುಗಳಿಗೆ ಅಳವಡಿಸಿರುವ ಸ್ಯಾಟಿಲೈಟ್ ಟ್ರಾಕಿಂಗ್ ಮೂಲಕ ಅವುಗಳ ವಲಸೆಯನ್ನ ತಿಳಿದುಕೊಳ್ಳಬಹುದಾಗಿದೆ. ಇದರೊಂದಿಗೆ ಪಕ್ಷಿಗಳ ಕುರಿತು ಮತ್ತಷ್ಟು ವೈಜ್ಞಾನಿಕ ಸಂಶೋದನೆ ನಡೆಸಲು ತಜ್ಞರು ಮುಂದಾಗಿದ್ದಾರೆ.
ಮಣಿಪುರದಲ್ಲಿ ಭೂಮಿಯ ಮೇಲೆ ಇಳಿದ ಈ ಪಕ್ಷಿಗಳು ಅಲ್ಲಿ ಗೂಡುಕಟ್ಟುವ ಕೆಲಸವನ್ನು ಮಾಡುತ್ತದೆ. ಅಲ್ಲಿ ಸುಮಾರು 25 ದಿನಗಳ ಕಾಲ ವಿಶ್ರಾಂತಿಯೊಂದಿಗೆ ಆಹಾರ ಪಡೆದು ಸುದೀರ್ಘ ಪ್ರಯಾಣವನ್ನು ಆರಂಭಿಸುತ್ತದೆ. ಮಣಿಪುರ ಮತ್ತು ನಾಗಾಲ್ಯಾಂಡ್ ಅರಣ್ಯ ಪ್ರದೇಶಲ್ಲಿ ಸಿಗುವ ದೊಡ್ಡ ಕೀಟಗಳ ಹಿಂಟು ಇವುಗಳಿಗೆ ಅಗತ್ಯ ಆಹಾರವನ್ನು ಪೂರೈಸುತ್ತವೆ. ಈಶಾನ್ಯ ಭಾರತದಲ್ಲಿ ಇವುಗಳ ವಾಸಸ್ಥಳವನ್ನು ರಕ್ಷಣೆ ಮಾಡಲು ಈ ಸಂಶೋಧನೆಗಳು ಸಹಕಾರಿಯಾಗಿದೆ.
















