ರಷ್ಯಾ ಅಧ್ಯಕ್ಷ ಪುಟಿನ್, ಜಗತ್ತಿನ ಅತ್ಯಂತ ಶಕ್ತಿಶಾಲಿ ಎನ್ನಲಾದ ಆರ್‌ಎಸ್-28 ಸರ್ಮಾಟ್ (ಸಟಾನ್ 2) ಪರಮಾಣು ಕ್ಷಿಪಣಿ ಸಿದ್ಧಗೊಳ್ಳುತ್ತಿದೆ ಎಂದು ಘೋಷಿಸಿದ್ದಾರೆ. ಈ ಕ್ಷಿಪಣಿಯು ಯಾವುದೇ ರಕ್ಷಣಾ ವ್ಯವಸ್ಥೆಯನ್ನು ಭೇದಿಸಿ, ಸಾವಿರಾರು ಕಿಲೋಮೀಟರ್ ದೂರದ ಗುರಿಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ.
ಸಟಾನ್ 2 ಕ್ಷಿಪಣಿ: ಪುಟಿನ್ ಕೈಗೆ ಬಂದ ಬ್ರಹ್ಮಾಸ್ತ್ರ!

ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಂಗಳವಾರ ಮಾಸ್ಕೋದಲ್ಲಿ ಒಂದು ವಿಶೇಷ ಘೋಷಣೆ ಮಾಡಿದರು. ರಷ್ಯಾದ ಶಕ್ತಿಶಾಲಿ, ನೂತನ ಪರಮಾಣು ಕ್ಷಿಪಣಿಯಾದ ಆರ್‌ಎಸ್-28 ಸರ್ಮಾಟ್ ಈ ವರ್ಷಾಂತ್ಯದ ವೇಳೆಗೆ ಸಿದ್ಧಗೊಳ್ಳಲಿದೆ ಎಂದರು. 'ಇದು ಜಗತ್ತಿನಲ್ಲೇ ಅತ್ಯಂತ ಶಕ್ತಿಶಾಲಿ ಕ್ಷಿಪಣಿ' ಎಂದು ಪುಟಿನ್ ಹೆಮ್ಮೆಯಿಂದ ಘೋಷಿಸಿದರು. ಕಳೆದ ಹಲವಾರು ವರ್ಷಗಳಿಂದ ನಿರ್ಮಾಣದ ಹಂತದಲ್ಲಿರುವ ಈ ಕ್ಷಿಪಣಿ ವಿವಿಧ ತಾಂತ್ರಿಕ ಸಮಸ್ಯೆಗಳು ಮತ್ತು ವಿಳಂಬಗಳಿಂದಾಗಿ ಇಷ್ಟು ತಡವಾಗಿ ಅಂತಿಮ ಹಂತಕ್ಕೆ ತಲುಪಿದೆ.
ಆರ್‌ಎಸ್-28 ಸರ್ಮಾಟ್ ಕ್ಷಿಪಣಿ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತು, ಅಮೆರಿಕ, ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ ಸಾವಿರಾರು ಮೈಲಿ ದೂರದಲ್ಲಿರುವ ದೇಶಗಳಲ್ಲಿನ ಗುರಿಗಳ ಮೇಲೂ ದಾಳಿ ನಡೆಸುವ ರೀತಿಯಲ್ಲಿ ನಿರ್ಮಾಣಗೊಂಡಿದೆ. ಸರಳವಾಗಿ ವಿವರಿಸುವುದಾದರೆ, ಈ ಕ್ಷಿಪಣಿ ರಷ್ಯಾದ ಶತ್ರುಗಳಿಗೆ ಗಂಭೀರ ಅಪಾಯ ತಂದೊಡ್ಡುವ ರೀತಿಯ ದೀರ್ಘ ವ್ಯಾಪ್ತಿಯ ಆಯುಧವಾಗಿದೆ. ಈ ಕ್ಷಿಪಣಿಯ ಪರಮಾಣು ಸಾಮರ್ಥ್ಯ ಪಾಶ್ಚಾತ್ಯ ದೇಶಗಳು ನಿರ್ಮಿಸಿರುವ ಇದೇ ಮಾದರಿಯ ಕ್ಷಿಪಣಿಗಳಿಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಪುಟಿನ್ ಹೇಳಿದ್ದಾರೆ. ಈ ಕ್ಷಿಪಣಿ 35,000 ಕಿಲೋಮೀಟರ್‌ಗೂ ಹೆಚ್ಚು, ಅಂದರೆ ಅಂದಾಜು 21,750 ಮೈಲಿ ದೂರ ಸಾಗಬಲ್ಲದು ಎಂದು ಪುಟಿನ್ ಘೋಷಿಸಿದ್ದಾರೆ. ಇದು ಕ್ಷಿಪಣಿಯನ್ನು ಅತ್ಯಂತ ದೀರ್ಘ ವ್ಯಾಪ್ತಿಯ ಕ್ಷಿಪಣಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿಸಿದೆ.
ಸರ್ಮಾಟ್ ಕ್ಷಿಪಣಿ ಈಗಿರುವ ಮತ್ತು ಭವಿಷ್ಯದ ಎಲ್ಲ ಕ್ಷಿಪಣಿ ನಿರೋಧಕ ರಕ್ಷಣಾ ವ್ಯವಸ್ಥೆಗಳನ್ನು ಭೇದಿಸುವ ರೀತಿಯಲ್ಲಿ ವಿನ್ಯಾಸಗೊಂಡಿದೆ ಎಂದು ಪುಟಿನ್ ಹೇಳಿದ್ದಾರೆ. ಅಂದರೆ, ಒಳಬರುವ ಕ್ಷಿಪಣಿಗಳನ್ನು ತಡೆಗಟ್ಟುವ ಸಲುವಾಗಿ ವಿನ್ಯಾಸಗೊಂಡಿರುವ ಆಧುನಿಕ ಕ್ಷಿಪಣಿಗಳೂ ಇದನ್ನು ತಡೆಯಲು ವಿಫಲವಾಗಬಹುದು. ಆದರೆ, ಈ ಕ್ಷಿಪಣಿ ಯಾವಾಗಲೂ ಯಶಸ್ಸನ್ನೇ ಕಂಡಿಲ್ಲ. ಪಾಶ್ಚಾತ್ಯ ತಜ್ಞರ ಪ್ರಕಾರ, ಸೆಪ್ಟೆಂಬರ್ 2024ರಲ್ಲಿ ನಡೆಸಿದ ಪರೀಕ್ಷೆಯೊಂದರಲ್ಲಿ ಈ ಕ್ಷಿಪಣಿ ಭಾರೀ ವೈಫಲ್ಯ ಕಂಡಿದ್ದು, ಉಡಾವಣಾ ಸ್ಥಳದಲ್ಲಿ ಬೃಹತ್ ಹೊಂಡ ಉಂಟಾಗಿತ್ತು.
ಹಿಂದಿನ ವೈಫಲ್ಯಗಳ ಹೊರತಾಗಿಯೂ, ಮಿಲಿಟರಿ ಕಮಾಂಡರ್ ಸರ್ಗೇ ಕರಾಕಯೆವ್ ಅವರು ಮಂಗಳವಾರ ನಡೆಸಿದ ಸರ್ಮಾಟ್ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿ ನೆರವೇರಿದೆ ಎಂದು ಪುಟಿನ್ ಬಳಿ ಹೇಳಿರುವುದನ್ನು ರಷ್ಯನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಈ ಕ್ಷಿಪಣಿಯನ್ನು ಸೇನಾ ಬಳಕೆಗೆ ನಿಯೋಜಿಸುವುದರಿಂದ ರಷ್ಯಾದ ಭೂ ಪರಮಾಣು ಪಡೆಗಳಿಗೆ ಭಾರೀ ಬಲವರ್ಧನೆ ಲಭಿಸಲಿದೆ ಎಂದು ಕರಾಕಯೆವ್ ಹೇಳಿದ್ದಾರೆ. ಇದು ದೇಶದ ಕಾರ್ಯತಂತ್ರದ ರಕ್ಷಣಾ ಸಾಮರ್ಥ್ಯವನ್ನೂ ವೃದ್ಧಿಸಲಿದ್ದು, ಶತ್ರುಗಳು ಗಂಭೀರ ಪ್ರತಿದಾಳಿಯ ಆತಂಕ ಹೊಂದಿ, ರಷ್ಯಾ ವಿರುದ್ಧ ದಾಳಿ ನಡೆಸಲು ಹಿಂದೇಟು ಹಾಕುಬ ಸಾಧ್ಯತೆಗಳಿವೆ.
ರಷ್ಯಾ 2022ರಲ್ಲಿ ಉಕ್ರೇನ್ ಮೇಲೆ ಆಕ್ರಮಣ ನಡೆಸಿದ ಬಳಿಕ, ಪುಟಿನ್ ನಿರಂತರವಾಗಿ ಜಗತ್ತಿಗೆ ರಷ್ಯಾದ ಪರಮಾಣು ಸಾಮರ್ಥ್ಯದ ಕುರಿತು ಎಚ್ಚರಿಕೆ ನೀಡುತ್ತಿದ್ದರು. ಆದರೆ, ಇತರ ದೇಶಗಳು ಉಕ್ರೇನ್‌ಗೆ ಬಲವಾದ ಬೆಂಬಲ ನೀಡದಂತೆ ತಡೆಯುವ ಸಲುವಾಗಿ ಪುಟಿನ್ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಪಾಶ್ಚಾತ್ಯ ದೇಶಗಳು ಭಾವಿಸಿವೆ. ಇದು ಒಂದು ರೀತಿಯಲ್ಲಿ ನೇರವಾಗಿ ಯುದ್ಧಕ್ಕೆ ಇಳಿಯದೆಯೇ ಜಗತ್ತಿಗೆ ಎಚ್ಚರಿಕೆ ನೀಡುವಂತಿದೆ.
ಪಾಶ್ಚಾತ್ಯ ಜಗತ್ತಿನಲ್ಲಿ ಸಟಾನ್ 2 ಎನ್ನುವ ಭೀತಿದಾಯಕ ಹೆಸರಿನಿಂದ ಪರಿಚಿತವಾಗಿರುವ ಆರ್‌ಎಸ್-28 ಸರ್ಮಾಟ್, ಹಳೆಯದಾದ, ಸೋವಿಯತ್ ಕಾಲದ ಅಂದಾಜು 40 ವೋಯ್‌ವೊದಾ ಕ್ಷಿಪಣಿಗಳ ಬದಲಿಗೆ ನಿಯೋಜನೆಗೊಳ್ಳುವ ನಿರೀಕ್ಷೆಯಿದೆ. ನೂತನ ಕ್ಷಿಪಣಿ ಹಳೆಯ ವೋಯ್‌ವೊದಾ ಕ್ಷಿಪಣಿಯಷ್ಟೇ ಶಕ್ತಿಶಾಲಿಯಾಗಿದ್ದು, ಗುರಿಯ ಮೇಲೆ ದಾಳಿ ನಡೆಸುವಲ್ಲಿ ಅದಕ್ಕಿಂತಲೂ ಹೆಚ್ಚು ನಿಖರವಾಗಿದೆ ಎಂದು ಪುಟಿನ್ ಹೇಳಿದ್ದಾರೆ. ಭವಿಷ್ಯದ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಭೇದಿಸುವಂತಹ ಆಯುಧಗಳನ್ನು ನಿರ್ಮಿಸುವುದು ರಷ್ಯಾದ ದೊಡ್ಡ ಯೋಜನೆಯಾಗಿದ್ದು, ಸರ್ಮಾಟ್ ಸಹ ಇಂತಹ ಆಯುಧಗಳಲ್ಲಿ ಒಂದಾಗಿದೆ. ಅವಾಂಗಾರ್ಡ್ ಹೈಪರ್‌ಸಾನಿಕ್ ಗ್ಲೈಡ್ ವೆಹಿಕಲ್ ಸಹ ಇಂತಹದ್ದೇ ಒಂದು ಆಯುಧವಾಗಿದ್ದು, ಇದು ಶಬ್ದದ ವೇಗಕ್ಕಿಂತ 27 ಪಟ್ಟು ಹೆಚ್ಚು ವೇಗವಾಗಿ ಸಾಗಬಲ್ಲದು. ಇದು ಯಾವುದೇ ಸಾಮಾನ್ಯ ಜೆಟ್ ಅಥವಾ ವಿಮಾನಕ್ಕಿಂತಲೂ ಸಾಕಷ್ಟು ಹೆಚ್ಚು ವೇಗವಾಗಿ ಸಾಗಬಲ್ಲದು.
ಆರ್‌ಎಸ್-28 ಸರ್ಮಾಟ್ 100 ಟನ್‌ಗೂ ಹೆಚ್ಚು ತೂಕ ಹೊಂದಿದ್ದು, ಸುರಕ್ಷತೆ ಮತ್ತು ಅಚ್ಚರಿಯ ದಾಳಿಗಾಗಿ ನೆಲದಾಳದ ಕುಳಿಗಳಿಂದ ಉಡಾವಣೆಗೊಳ್ಳುತ್ತದೆ. ಇದನ್ನು ಪ್ರಸಿದ್ಧ ಮಕೆಯೆವ್ ರಾಕೆಟ್ ಡಿಸೈನ್ ಬ್ಯೂರೋ ಸಂಸ್ಥೆ ವಿನ್ಯಾಸಗೊಳಿಸಿದೆ. ಇದರ ಅತ್ಯಂತ ಪ್ರಮುಖ ವೈಶಿಷ್ಟ್ಯವೆಂದರೆ, ಇದು ಎಂಆರ್‌ವಿಗಳು ಅಥವಾ ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೇಬಲ್ ರಿ ಎಂಟ್ರಿ ವೆಹಿಕಲ್‌ಗಳನ್ನು ಒಯ್ಯುತ್ತದೆ. ಸರಳವಾಗಿ ವಿವರಿಸುವುದಾದರೆ, ಒಂದು ಕ್ಷಿಪಣಿ ಏಕಕಾಲದಲ್ಲಿ ಹಲವಾರು ವಿಭಿನ್ನ ಸ್ಥಳಗಳ ಮೇಲೆ ದಾಳಿ ನಡೆಸಬಲ್ಲದು. ವರದಿಗಳ ಪ್ರಕಾರ, ಸರ್ಮಾಟ್ ಗರಿಷ್ಠ 10 ತೂಕದ ಎಂಐಆರ್‌ವಿಗಳನ್ನು ಮತ್ತು 16 ಹಗುರವಾದ ಎಂಐಆರ್‌ವಿಗಳು, ಅಥವಾ 24 ಹೈಪರ್‌ಸಾನಿಕ್ ಗ್ಲೈಡ್ ವೆಹಿಕಲ್‌ಗಳನ್ನು ಒಯ್ಯಬಲ್ಲದು.
ತನ್ನ ಅಗಾಧ ಗಾತ್ರ, ದೀರ್ಘ ವ್ಯಾಪ್ತಿ, ಮತ್ತು ರಕ್ಷಣಾ ವ್ಯವಸ್ಥೆಗಳ ಕಣ್ಣು ತಪ್ಪಿಸಿ ದಾಳಿ ನಡೆಸುವ ಸಾಮರ್ಥ್ಯಗಳಿಂದಾಗಿ ಸರ್ಮಾಟ್ ಜಗತ್ತಿಗೆ ರಷ್ಯಾ ನೀಡಿರುವ ಬಲವಾದ ಸಂದೇಶ ಎಂದು ಪರಿಗಣಿತವಾಗಿದೆ. ಇದು ನಿಜಕ್ಕೂ ಜಾಗತಿಕ ಶಕ್ತಿಯ ಸಮತೋಲನವನ್ನು ಬದಲಾಯಿಸಬಲ್ಲದೇ ಎನ್ನುವುದನ್ನು ಕಾಲವೇ ಉತ್ತರಿಸಬೇಕಿದೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)


