ಉಡುಪಿ ಮೂಲದ ಕನ್ನಡಿಗ ಕೋಟ ರವಿ ಅವರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (ಎಚ್ಎಎಲ್) ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. 'ಎಲ್‌ಸಿಎ ಮ್ಯಾನ್' ಎಂದೇ ಖ್ಯಾತರಾದ ಅವರು, ತೇಜಸ್ ಯುದ್ಧ ವಿಮಾನ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಮೇ 1, 2026ರಂದು ಶ್ರೀ ಕೋಟ ರವಿ ಅವರು ಭಾರತದ ಅತ್ಯಂತ ಪ್ರಮುಖ ರಕ್ಷಣಾ ಮತ್ತು ಏರೋಸ್ಪೇಸ್ ಕಂಪನಿಯಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (ಎಚ್ಎಎಲ್) ನೂತನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅತ್ಯಂತ ಸುದೀರ್ಘ ಅವಧಿಯ ಸೇವೆ ಸಲ್ಲಿಸಿ ನಿವೃತ್ತರಾದ ಡಾ. ಡಿ ಕೆ ಸುನಿಲ್ ಅವರಿಂದ ರವಿ ಅಧಿಕಾರ ವಹಿಸಿಕೊಂಡಿದ್ದಾರೆ. ಕನ್ನಡಿಗರಿಗೆ ಈ ಕ್ಷಣ ದುಪ್ಪಟ್ಟು ಹೆಮ್ಮೆಯ ಕ್ಷಣವಾಗಿದೆ. ಏಕೆಂದರೆ, ಸ್ವತಃ ಕನ್ನಡಿಗರಾದ ಡಾ. ಡಿ ಕೆ ಸುನಿಲ್ ಅವರ ನಿವೃತ್ತಿಯ ಬಳಿಕ, ಉಡುಪಿ ಜಿಲ್ಲೆಯ ಕೋಟ ಮೂಲದವರಾದ ಇನ್ನೋರ್ವ ಕನ್ನಡಿಗ ರವಿ ಎಚ್ಎಎಲ್ ನಾಯಕತ್ವ ವಹಿಸಿಕೊಂಡಿದ್ದಾರೆ. ಎಚ್ಎಎಲ್ ಕಾರ್ಯಗಳ ಕುರಿತು ಅರಿಯದವರಿಗೆ, ಇದೊಂದು ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದ್ದು, ಭಾರತೀಯ ವಾಯು ಸೇನೆ, ಭೂ ಸೇನೆ ಮತ್ತು ನೌಕಾ ಸೇನೆಗಳಿಗಾಗಿ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು, ಮತ್ತು ಹಾರಾಡುವ ಯಂತ್ರಗಳನ್ನು ನಿರ್ಮಿಸಿಕೊಡುತ್ತದೆ. ಎಚ್ಎಎಲ್ ಮುಖ್ಯಸ್ಥನ ಸ್ಥಾನದಲ್ಲಿ ಯಾರೇ ಕುಳಿತಿದ್ದರೂ, ಅವರು ಭಾರತದ ವಾಯು ಸಾಮರ್ಥ್ಯದ ಭವಿಷ್ಯವನ್ನು ತನ್ನ ಕೈಯಲ್ಲಿ ಹಿಡಿದಿರುತ್ತಾರೆ.
ರವಿ ಅವರನ್ನೇಕೆ 'ಎಲ್‌ಸಿಎ ಮ್ಯಾನ್' ಎನ್ನಲಾಗುತ್ತದೆ?
ರಕ್ಷಣಾ ವಲಯದಲ್ಲಿ, ಕೋಟ ರವಿ ಅವರನ್ನು ಗೌರವ ಮತ್ತು ಪ್ರೀತಿಯಿಂದ 'ಎಲ್‌ಸಿಎ ಮ್ಯಾನ್' ಎಂದೇ ಕರೆಯಲಾಗುತ್ತದೆ. ಎಲ್‌ಸಿಎ ಎನ್ನವುದು ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್‌ನ ಹೃಸ್ವರೂಪವಾಗಿದ್ದು, ಅದು ನಮ್ಮ ದೇಶೀಯ ನಿರ್ಮಾಣದ ತೇಜಸ್ ಯುದ್ಧ ವಿಮಾನವಾಗಿದೆ. ಮೂರು ದಶಕಗಳಿಗೂ ಹೆಚ್ಚು ಕಾಲ ರವಿ ಈ ಭಾರತದ ಕನಸಿನ ಯೋಜನೆಗೆ ಕಾರ್ಯಾಚರಿಸಿದ್ದಾರೆ. ಸ್ವತಃ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ರವಿ ಐಐಎಂ ಅಹಮದಾಬಾದಿನಲ್ಲಿ ಮತ್ತು ಫ್ರಾನ್ಸಿನ ಟೂಲೂಜ಼್ ನಗರದ ಪ್ರಸಿದ್ಧ ಏರೋಸ್ಪೇಸ್ ಸಂಸ್ಥೆಯಲ್ಲಿ ವ್ಯಾಸಂಗ ನಡೆಸಿದ್ದಾರೆ. ಆದ್ದರಿಂದಲೇ ಅವರು ಇಂಜಿನಿಯರ್‌ನ ಮೆದುಳು ಮತ್ತು ಮ್ಯಾನೇಜರ್‌ನ ಬುದ್ಧಿಮತ್ತೆಯ ಸಮ್ಮಿಳನವಾಗಿದ್ದಾರೆ.
ಎಲ್‌ಸಿಎ ವಿಭಾಗದ ಮಾಜಿ ಮುಖ್ಯಸ್ಥರು ಮತ್ತು ಬಳಿಕ ಕಾರ್ಯಾಚರಣಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ರವಿ, ಕೇವಲ ಕಾಗದ ಪತ್ರಗಳ ಮೇಲಿದ್ದ ತೇಜಸ್ ಯೋಜನೆಯನ್ನು ಒಂದು ನೈಜ ಯುದ್ಧ ವಿಮಾನವಾಗಿಸಿ, ಭಾರತೀಯ ವಾಯು ಸೇನೆಯ ಸ್ಕ್ವಾಡ್ರನ್‌ಗಳಲ್ಲಿ ಹಾರಾಟ ನಡೆಸುವಂತೆ ಮಾಡಿದರು. ಅವರು 2021ರಲ್ಲಿ ಐತಿಹಾಸಿಕ 36,000 ಕೋಟಿ ರೂಪಾಯಿ ಒಪ್ಪಂದದ ನೇತೃತ್ವ ವಹಿಸಿದ್ದು, ಈ ಒಪ್ಪಂದ ಭಾರತೀಯ ವಾಯುಪಡೆಗೆ 83 ತೇಜಸ್ ಎಂಕೆ- 1ಎ ಯುದ್ಧ ವಿಮಾನಗಳನ್ನು ಒದಗಿಸುವುದಾಗಿತ್ತು. ಇದು ಭಾರತದಲ್ಲಿ ಸಹಿ ಹಾಕಲಾದ ಅತ್ಯಂತ ದೊಡ್ಡ ರಕ್ಷಣಾ ಒಪ್ಪಂದ ಎನಿಸಿತ್ತು. ಅವರು ಇನ್ನೂ ಹೆಚ್ಚುವರಿ 97 ಯುದ್ಧ ವಿಮಾನಗಳ ಖರೀದಿಗೂ ಒತ್ತು ನೀಡಿದ್ದರು. ಅವರ ನೇತೃತ್ವದಲ್ಲಿ, ಎಚ್ಎಎಲ್ ಪ್ರತಿವರ್ಷವೂ 16 ತೇಜಸ್ ಯುದ್ಧ ವಿಮಾನಗಳನ್ನು ನಿರ್ಮಿಸುವ ಸಾಮರ್ಥ್ಯ ಗಳಿಸಿದ್ದು, ಮೊದಲ ಅವಳಿ ಆಸನಗಳ ತರಬೇತಿ ವಿಮಾನದ ಆವೃತ್ತಿಯನ್ನೂ ಪೂರೈಸಿದರು. ಸರಳವಾಗಿ ಹೇಳುವುದಾದರೆ, ನಿಧಾನವಾಗಿ ಕಾರ್ಯಾಚರಿಸುತ್ತಿದ್ದ ಒಂದು ಸರ್ಕಾರಿ ಕಾರ್ಖಾನೆಯನ್ನು ರವಿ ವೇಗದ, ಸ್ಮಾರ್ಟ್ ಉತ್ಪಾದನಾ ಕೇಂದ್ರವಾಗಿ ಪರಿವರ್ತಿಸಿದರು.
ರವಿ ಮುಂದಿವೆ ದೊಡ್ಡ ಸವಾಲುಗಳು
ಇಂದು 2026ರ ವೇಳೆಗೆ ಎಚ್ಎಎಲ್ ಮುಂದೆ 2.5 ಟ್ರಿಲಿಯನ್ ಮೌಲ್ಯದ ಬಹುದೊಡ್ಡ ಖರೀದಿ ಆದೇಶಗಳಿವೆ. ಇದು ಮೇಲ್ನೋಟಕ್ಕೆ ಬಹಳ ಆಕರ್ಷಕವಾಗಿ ಕಂಡರೂ, ಅಷ್ಟೊಂದು ಪ್ರಮಾಣದ ಪೂರೈಕೆ ಎಚ್ಎಎಲ್‌ಗೆ ನೈಜ ಸವಾಲಾಗಿದೆ. ಭಾರತೀಯ ವಾಯು ಸೇನೆ ಬಹಿರಂಗವಾಗಿಯೇ ತೇಜಸ್ ಎಂಕೆ-1ಎ ಯುದ್ಧ ವಿಮಾನಗಳ ಪೂರೈಕೆಯಲ್ಲಿನ ವಿಳಂಬದ ಕುರಿತು ದೂರು ಹೇಳುತ್ತಿದ್ದು, ಇದಕ್ಕೆ ಅಮೆರಿಕದ ಜಿಇ ಎಫ್414 ಇಂಜಿನ್‌ಗಳು, ರೇಡಾರ್ ವ್ಯವಸ್ಥೆಗಳು, ಮತ್ತು ಆಯುಧಗಳು ಸರಿಯಾದ ಸಮಯಕ್ಕೆ ಪೂರೈಕೆ ಆಗದಿರುವುದು ಕಾರಣವಾಗಿದ್ದವು. ಭಾರತ ಇಂದಿಗೂ ಈ ಮಹತ್ವದ ಬಿಡಿಭಾಗಗಳಿಗಾಗಿ ವಿದೇಶೀ ಪೂರೈಕೆದಾರರ ಮೇಲೆ ಅವಲಂಬಿತವಾಗಿದ್ದು, ಇದು ದೊಡ್ಡ ದೌರ್ಬಲ್ಯವಾಗಿದೆ. ಇದೇ ವೇಳೆ, ಎಚ್ಎಎಲ್ ತನ್ನ ಕಾರ್ಖಾನೆಗಳನ್ನು ಆಧುನೀಕರಿಸಲು ಮತ್ತು ರಷ್ಯನ್ ನಿರ್ಮಾಣದ ಸು-30ಎಂಕೆಐ ಯುದ್ಧ ವಿಮಾನಗಳನ್ನು ಮೇಲ್ದರ್ಜೆಗೆ ಏರಿಸಲು 10,000 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ.
ರವಿಯವರ ಮುಂದಿನ ಮೊದಲ ಕಾರ್ಯ ಸ್ಪಷ್ಟವಾಗಿದೆ. ಅದೇನೆಂದರೆ, ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ಉತ್ಪಾದನೆಯನ್ನು ವೇಗಗೊಳಿಸುವುದು. ನಮ್ಮ ವಾಯುಪಡೆಯ ಸ್ಕ್ವಾಡ್ರನ್ ಸಂಖ್ಯೆ ಕನಿಷ್ಠ ಸಂಖ್ಯೆಗಿಂತಲೂ ಇಳಿಕೆ ಕಂಡಿದ್ದು, ಪ್ರತಿಯೊಂದು ಉತ್ಪಾದನಾ ವಿಳಂಬವೂ ರಾಷ್ಟ್ರೀಯ ಭದ್ರತೆಗೆ ತೊಡಕು ಉಂಟುಮಾಡುತ್ತಿವೆ. ರವಿಯವರು ಹಿಂದೆ ಬಿಡಿಭಾಗಗಳ ನಿರ್ಮಾಣಕ್ಕಾಗಿ ಖಾಸಗಿ ಕಂಪನಿಗಳನ್ನು ಒಳಗೊಂಡು ಕಾರ್ಯಾಚರಿಸಿದ್ದು ಬಹುಶಃ ಈಗಲೂ ವಿಳಂಬವನ್ನು ತಡೆಯಲು ನೆರವಾಗಬಹುದು.
ಮೇಡ್ ಇನ್ ಇಂಡಿಯಾಗೆ ಹೆಚ್ಚಿನ ಆದ್ಯತೆ
ಎರಡನೆಯ ದೊಡ್ಡ ಗುರಿ ಎಂದರೆ ದೇಶೀಯ ಬಿಡಿಭಾಗಗಳ ಪ್ರಮಾಣವನ್ನು ಹೆಚ್ಚಿಸುವುದು. ಈಗಂತೂ ಅತಿಹೆಚ್ಚು ಬಿಡಿಭಾಗಗಳು ವಿದೇಶಗಳಿಂದಲೇ ಆಮದಾಗುತ್ತಿವೆ. ರವಿ ನಮ್ಮದೇ ಬಿಡಿಭಾಗಗಳು, ಏವಿಯಾನಿಕ್ಸ್, ಮತ್ತು ಇಂಜಿನ್‌ಗಳನ್ನು ಭಾರತದಲ್ಲೇ ನಿರ್ಮಿಸುವುದಕ್ಕೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆಗಳಿವೆ. ಭಾರತ ಈಗಾಗಲೇ ಜೆಟ್ ಇಂಜಿನ್‌ಗಳ ಜಂಟಿ ನಿರ್ಮಾಣಕ್ಕಾಗಿ ವಿದೇಶೀ ಕಂಪನಿಗಳೊಡನೆ ಕಾರ್ಯಾಚರಿಸುತ್ತಿದ್ದು, ಎಚ್ಎಎಲ್ ಈ ಪ್ರಯತ್ನದಲ್ಲಿ ಕೇಂದ್ರ ಸ್ಥಾನದಲ್ಲಿರಲಿದೆ.
ಮೂರನೆಯದಾಗಿ, ರಫ್ತು ನಡೆಸುವುದು ಈಗ ಹೊಸ ಕ್ಷೇತ್ರವಾಗಿದೆ. ಬಹಳಷ್ಟು ದೀರ್ಘಾವಧಿಗೆ ಎಚ್ಎಎಲ್ ಭಾರತೀಯ ಪಡೆಗಳಿಗೆ ಮಾತ್ರವೇ ಪೂರೈಕೆ ನಡೆಸುತ್ತಿತ್ತು. ಆದರೆ ಈಗ, ಆಗ್ನೇಯ ಏಷ್ಯಾ, ಉತ್ತರ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ಮಿತ್ರ ರಾಷ್ಟ್ರಗಳಿಂದ ತೇಜಸ್ ಯುದ್ಧ ವಿಮಾನಕ್ಕೆ ಹೆಚ್ಚಿನ ಬೇಡಿಕೆ ಎದುರಾಗಿದೆ. ಸರ್ಕಾರದ ಬೆಂಬಲಿತ ಸಾಲ ಸೌಲಭ್ಯ ಮತ್ತು ತೇಜಸ್ ವಿಮಾನದ ಸಾಬೀತಾದ ಸಾಮರ್ಥ್ಯದ ಕಾರಣದಿಂದ ರವಿ ಭಾರತೀಯ ಯುದ್ಧ ವಿಮಾನಗಳನ್ನು ವಿದೇಶೀ ಆಗಸಗಳಿಗೂ ತಲುಪಿಸಬಲ್ಲರು. ಈ ಕ್ರಮ ನಮ್ಮ ಆರ್ಥಿಕತೆ ಮತ್ತು ಜಾಗತಿಕ ಸ್ಥಾನ ಎರಡಕ್ಕೂ ಉತ್ತೇಜನ ನೀಡಲಿದೆ.
ಭವಿಷ್ಯದತ್ತ ನೋಟ
ರವಿಯವರ ಮುಂದಿರುವ ನಾಲ್ಕನೇ ಸವಾಲು ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್‌ನಂತಹ (ಎಎಂಸಿಎ) ನಾಳಿನ ಯುದ್ಧ ವಿಮಾನಗಳಿಗೆ ಸಿದ್ಧತೆ ನಡೆಸುವುದು. ಎಎಂಸಿಎ 2035ರ ವೇಳೆಗೆ ಉತ್ಪಾದನೆಗೆ ಸಜ್ಜಾಗುವ ನಿರೀಕ್ಷೆಗಳಿವೆ. ಆರಂಭಿಕ ಮೂಲ ಮಾದರಿಗಳನ್ನು ಖಾಸಗಿ ಕಂಪನಿಗಳು ನಿರ್ಮಿಸಿದರೂ, ರವಿಯವರ ನೇತೃತ್ವದಲ್ಲಿ ಎಚ್ಎಎಲ್‌ನ ಬೃಹತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿನ ಸಂಖ್ಯೆಯ ಉತ್ಪಾದನೆ ಮತ್ತು ದೀರ್ಘಾವಧಿಯ ನಿರ್ವಹಣೆಗೆ ಅತ್ಯಂತ ಅವಶ್ಯಕವಾಗಿದೆ.
ಕೋಟ ರವಿಯವರ ಸಾಮರ್ಥ್ಯವೆಂದರೆ, ಅವರು ಸ್ವತಃ ಅನುಭವಿ ತಂತ್ರಜ್ಞರಾಗಿದ್ದು, ಕೇವಲ ಕಾಗದ ಪತ್ರಗಳಿಗೆ ಸಹಿ ಹಾಕುವ ಬದಲು ತಾನೇ ನಿರ್ಮಾಣ ನಡೆಸಿರುವ ಅನುಭವ ಹೊಂದಿದ್ದಾರೆ. ಅವರು ಒಂದು ತಂಡವನ್ನು ಹೇಗೆ ಜೊತೆಯಾಗಿ ಮುನ್ನಡೆಸಬೇಕು, ಪೂರೈಕೆದಾರರನ್ನು ಹೇಗೆ ನಿರ್ವಹಿಸಬೇಕು, ಮತ್ತು ತನ್ನ ಗ್ರಾಹಕರನ್ನು, ಅದರಲ್ಲೂ ಭಾರತೀಯ ವಾಯು ಸೇನೆಯನ್ನು ಹೇಗೆ ಸಮಾಧಾನಪಡಿಸಬೇಕು ಎನ್ನುವುದನ್ನು ಅರಿತಿದ್ದಾರೆ. ನಮ್ಮ ನೆರೆಹೊರೆ ದಿನದಿಂದ ದಿನಕ್ಕೆ ಹೆಚ್ಚು ಉದ್ವಿಗ್ನವಾಗುತ್ತಿರುವಾಗ, ಎಚ್ಎಎಲ್ ಇಂತಹ ಅನುಭವಿ, ಸಮರ್ಥ ನಾಯಕನನ್ನು ಹೊಂದಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಕರ್ನಾಟಕದ ಕರಾವಳಿಯ ಕೋಟದಿಂದ ಬಂದಿರುವ ಈ ಕನ್ನಡಿಗ ಇಂದು ಭಾರತೀಯ ಆಗಸಗಳನ್ನು ನಿಯಂತ್ರಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ.
ನಮ್ಮ ಮುಂದಿನ ಆಗಸಗಳು ಇಂದು ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತಿದ್ದು, ಎಲ್‌ಸಿಎ ಮ್ಯಾನ್ ಈಗ ಕಾಕ್‌ಪಿಟ್ ನೇತೃತ್ವ ವಹಿಸಿದ್ದಾರೆ. ಇದರೊಡನೆ ಎಚ್ಎಎಲ್ ಇನ್ನಷ್ಟು ಎತ್ತರಕ್ಕೆ ಚಿಮ್ಮಲು ಸಜ್ಜಾಗುತ್ತಿದೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)


