ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್‌ ಅವರು ಚಂದ್ರಯಾನ-೪, ಗಗನಯಾನ ಮತ್ತು ಭಾರತೀಯ ಬಾಹ್ಯಾಕಾಶ ನಿಲ್ದಾಣದಂತಹ ಭವಿಷ್ಯದ ಬೃಹತ್ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 2040ರ ವೇಳೆಗೆ ಚಂದ್ರನ ಮೇಲೆ ಮಾನವನನ್ನು ಕಳುಹಿಸುವ ಹಾಗೂ ಚಂದ್ರನ ಮಣ್ಣು ತರುವ ಮಹತ್ವಾಕಾಂಕ್ಷಿ ಗುರಿಗಳನ್ನು ಇಸ್ರೋ ಹೊಂದಿದೆ.

ಮುಖಾಮುಖಿ

ಡಾ। ವಿ. ನಾರಾಯಣನ್‌, ಇಸ್ರೋ ಅಧ್ಯಕ್ಷ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮುಂಬರುವ ಮಹತ್ವಾಕಾಂಕ್ಷಿ ಯೋಜನೆಗಳು ಹಾಗೂ ಮುಂದಿನ 20 ವರ್ಷಗಳ ಬಾಹ್ಯಾಕಾಶ ದೂರದೃಷ್ಟಿಯ ಕುರಿತು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಅವರು ಸುವರ್ಣನ್ಯೂಸ್-ಕನ್ನಡಪ್ರಭ ಜೊತೆಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಸ್ತುತ ಇಸ್ರೋ ವಿಜ್ಞಾನಿಗಳು ಯಾವ ಪ್ರಮುಖ ಯೋಜನೆಗಳಲ್ಲಿ ನಿರತರಾಗಿದ್ದಾರೆ?

ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯಾನವಾದ ‘ಗಗನಯಾನ’ ಯೋಜನೆಯ ಕೆಲಸಗಳು ವೇಗವಾಗಿ ನಡೆಯುತ್ತಿವೆ. ಇದರೊಂದಿಗೆ, ಚಂದ್ರಯಾನ-4 ಮತ್ತು ಚಂದ್ರಯಾನ-5 ಯೋಜನೆಗಳಿಗೂ ಸಿದ್ಧತೆಗಳು ಭರದಿಂದ ಸಾಗಿವೆ.

ಮುಂದಿನ ೨೦ ವರ್ಷಗಳ ಬಾಹ್ಯಾಕಾಶ ದೂರದೃಷ್ಟಿಯ (ವಿಷನ್) ಪ್ರಮುಖ ಗುರಿಗಳೇನು?

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ರೂಪಿಸಲಾದ ಮುಂದಿನ 20 ವರ್ಷಗಳ ದೂರದೃಷ್ಟಿಯ ಪ್ರಮುಖ ಗುರಿಗಳೆಂದರೆ, ಬಾಹ್ಯಾಕಾಶದಲ್ಲಿ ಭಾರತದ ಸ್ವಂತ ಭಾರತೀಯ ಬಾಹ್ಯಾಕಾಶ ನಿಲ್ದಾಣ ನಿರ್ಮಾಣದ ಪೂರ್ವಸಿದ್ಧತೆ. ೨೦೪೦ರ ವೇಳೆಗೆ ಭಾರತೀಯ ಗಗನಯಾತ್ರಿಗಳನ್ನು ಚಂದ್ರನ ಅಂಗಳಕ್ಕೆ ಕಳುಹಿಸಿ ಸುರಕ್ಷಿತವಾಗಿ ಲ್ಯಾಂಡ್ ಮಾಡುವುದು.

ಭಾರತ ಸ್ವಂತ ಸ್ಪೇಸ್ ಸ್ಟೇಷನ್ ಯಾವಾಗ ಸಾಕಾರಗೊಳ್ಳಬಹುದು?

ಭಾರತೀಯ ಅಂತರಿಕ್ಷ ನಿಲ್ದಾಣವನ್ನು 2028ರಿಂದ 2035ರ ಅವಧಿಯಲ್ಲಿ ಬಾಹ್ಯಾಕಾಶದಲ್ಲಿ ಭಾರತದ ಸ್ವಂತ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವ ಗುರಿಯನ್ನು ಇಸ್ರೋ ಹೊಂದಿದೆ.

ಗ್ರಹಾಂತರ ಯಾನಗಳ ಜೊತೆಗೆ ಇಸ್ರೋ ಯಾವ ಇತರ ಕ್ಷೇತ್ರಗಳ ಮೇಲೆ ಗಮನ ಹರಿಸಿದೆ?

ದೇಶದ ಜನಸಾಮಾನ್ಯರಿಗೆ ನೇರವಾಗಿ ನೆರವಾಗುವ ಸಂವಹನ ಉಪಗ್ರಹಗಳ ಅಭಿವೃದ್ಧಿ ಹಾಗೂ ವಿವಿಧ ಅತ್ಯಾಧುನಿಕ ಬಾಹ್ಯಾಕಾಶ ತಂತ್ರಜ್ಞಾನಗಳ ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸಗಳನ್ನು ನಿರಂತರವಾಗಿ ನಡೆಸುತ್ತಿದೆ.

ಮುಂದಿನ 2 ದಶಕಗಳಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಗುರಿ ಏನಾಗಿದೆ?

ಮುಂದಿನ ಎರಡು ದಶಕಗಳಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿ ಮತ್ತು ಅಗ್ರಗಣ್ಯ ರಾಷ್ಟ್ರವನ್ನಾಗಿ ರೂಪಿಸುವ ಗುರಿಯನ್ನು ಇಸ್ರೋ ಹೊಂದಿದೆ.

ಇಸ್ರೋದ ಬಹುಮುಖ್ಯವಾದ ಪ್ರಾಜೆಕ್ಟ್ ಗಳು ಯಾವುವು?

ಗಗನಯಾನ-1: ಮಾನವಸಹಿತ ಯಾನಕ್ಕೂ ಮುನ್ನ ನಡೆಯಲಿರುವ ಮಾನವರಹಿತ ಪರೀಕ್ಷಾರ್ಥ ಉಡಾವಣೆ ಇದಾಗಿದ್ದು, ಇದರಲ್ಲಿ ‘ವ್ಯೋಮಮಿತ್ರ’ ಎಂಬ ರೋಬೋಟ್ ಅನ್ನು ಕಳುಹಿಸಲಾಗುತ್ತದೆ...

ಗಗನಯಾನ- 2: ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿ, ಸುರಕ್ಷಿತವಾಗಿ ಭೂಮಿಗೆ ವಾಪಸ್ ಕರೆತರುವ ಭಾರತದ ಮೊದಲ ಮಾನವಸಹಿತ ಯೋಜನೆ ಸಿದ್ಧವಾಗುತ್ತಿದೆ.

ಚಂದ್ರಯಾನದ ಬಗ್ಗೆ ಏನಾದರೂ ಪ್ಲಾನ್ಸ್ ಇದೀಯಾ?

ಸದ್ಯ ಚಂದ್ರಯಾನ 3 ಯಶಸ್ವಿಯಾಗಿದ್ದು ‘ಚಂದ್ರಯಾನ-4’ 2027ರಲ್ಲಿ ಉಡಾವಣೆಯಾಗಲಿದೆ. ಈ ಯೋಜನೆಯು ಚಂದ್ರನ ಮೇಲೆ ಇಳಿದು, ಅಲ್ಲಿನ ಮಣ್ಣು ಮತ್ತು ಕಲ್ಲಿನ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ಮರಳಿ ತರುವ ಗುರಿ ಹೊಂದಿದೆ.