Asianet Suvarna News Asianet Suvarna News

ಚಂದ್ರಯಾನ-3 ಚರಿತ್ರೆ ಬರೆದವರಿಗೆ ಮೋದಿ ಬಿಗ್ ಸಪ್ರೈಜ್: ಇಸ್ರೋಗೆ ಮೋದಿ ಕೊಟ್ಟ "ಧೀಶಕ್ತಿ" ಎಂಥದ್ದು ಗೊತ್ತಾ..?

ಚಂದ್ರಲೋಕದಲ್ಲಿ ಭಾರತದ ವಿಜಯ ವಿಕ್ರಮಕ್ಕೆ ಇಡೀ ದೇಶವೇ ಉಘೇ ಉಘೇ ಅಂದಿದೆ. ಪ್ರಧಾನಿ ಮೋದಿಯವರು ಖುದ್ದು ಇಸ್ರೋ ಕಚೇರಿಗೆ ಭೇಟಿ ನೀಡಿ, ಚರಿತ್ರೆ ಬರೆದ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಆಗಸ್ಟ್ 23ರ ದಿನವನ್ನು "ರಾಷ್ಟ್ರೀಯ ಬಾಹ್ಯಾಕಾಶ ದಿನ"ವನ್ನಾಗಿ ಘೋಷಿಸಿದ್ದಾರೆ. ಇಸ್ರೋಗೆ ಪ್ರಧಾನಿ ಮೋದಿ ಕೊಟ್ಟ ಧೀಶಕ್ತಿಯ  ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ 

Modi big surprise for those who wrote the history of Chandrayaan3 Do you know what is the power given by Modi to ISRO akb
Author
First Published Aug 27, 2023, 12:57 PM IST

ಬೆಂಗಳೂರು: ಚಂದ್ರಸಾಹಸದ ಅಸೀಮ ಶಕ್ತಿಗೆ ನಮೋ ಅಂದರು ಪ್ರಧಾನಿ ನರೇಂದ್ರ ಮೋದಿ.. ಚಂದ್ರನಂಗಳದಲ್ಲಿ ಚರಿತ್ರೆ ಬರೆದವರಿಗೆ ನರೇಂದ್ರನ ಧೀಶಕ್ತಿ. ವಿದೇಶದಿಂದ ನೇರವಾಗಿ ಇಸ್ರೋ ಕಚೇರಿಗೆ ಬಂದ್ರು ಪ್ರಧಾನಿ ಮೋದಿ. ಇಸ್ರೋ ಅಂಗಳಕ್ಕೆ ಬಂದ ಮೋದಿ ವಿಜ್ಞಾನಿಗಳ ಮುಂದೆ ಭಾವುಕರಾಗಿ ಕಣ್ಣೀರಿಟ್ಟದ್ದೇಕೆ..? 2019ರ ಆಘಾತ, 2023ರ ವಿಕ್ರಮ ಮತ್ತು ಮೋದಿ ಸಂಕಲ್ಪ.. ಶಿವಶಕ್ತಿ ಗುಟ್ಟು, ತಿರಂಗಾ ಪಾಯಿಂಟ್ ರಹಸ್ಯ ಬಿಚ್ಚಿಟ್ಟರು ಮೋದಿ. ಪ್ರಧಾನಿ ನರೇಂದ್ರ ಮೋದಿಯವರ ಇಸ್ರೋ ಭೇಟಿಯ ಇಂಚಿಂಚೂ ಮಾಹಿತಿ ಇಲ್ಲಿದೆ ನೋಡಿ.

ಚಂದ್ರಲೋಕದಲ್ಲಿ ಭಾರತದ ವಿಜಯ ವಿಕ್ರಮಕ್ಕೆ ಇಡೀ ದೇಶವೇ ಉಘೇ ಉಘೇ ಅಂದಿದೆ. ಪ್ರಧಾನಿ ಮೋದಿಯವರು ಖುದ್ದು ಇಸ್ರೋ ಕಚೇರಿಗೆ ಭೇಟಿ ನೀಡಿ, ಚರಿತ್ರೆ ಬರೆದ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಆಗಸ್ಟ್ 23ರ ದಿನವನ್ನು "ರಾಷ್ಟ್ರೀಯ ಬಾಹ್ಯಾಕಾಶ ದಿನ"ವನ್ನಾಗಿ ಘೋಷಿಸಿದ್ದಾರೆ. ಇಸ್ರೋಗೆ ಪ್ರಧಾನಿ ಮೋದಿ ಕೊಟ್ಟ ಧೀಶಕ್ತಿಯ  ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ 

ನಿಮ್ಮೆಲ್ಲರ ಮಧ್ಯೆ ಇವತ್ತು ನಿಂತಿರುವುದು ಬೇರೆಯದ್ದೇ ಖುಷಿ ನೀಡುತ್ತಿದೆ. ಇಂತಹ ಖುಷಿಯ ಅನುಭವವಾಗುವುದು ತುಂಬಾ ವಿರಳ. ತನು ಮನವೆಲ್ಲಾ ಖುಷಿಯಿಂದ ಕುಣಿದಾಡುತ್ತಿದೆ... ಇದು ಇಸ್ರೋ ವಿಜ್ಞಾನಿಗಳ ಮುಂದೆ ಪ್ರಧಾನಿ ಮೋದಿಯವರು ತಮ್ಮ ಸಂತಸವನ್ನು ಹಂಚಿಕೊಂಡ ಪರಿ. 2019ರ ಚಂದ್ರಯಾನ-2 ವೇಳೆ ಮೋದಿ ಬೆಂಗಳೂರಿನ ಇಸ್ರೋ ಕಚೇರಿಯಲ್ಲೇ ಇದ್ರು. ಆದ್ರೆ ದುರದೃಷ್ಟವಶಾತ್, ಚಂದ್ರಯಾನ-2 ಯಶಸ್ವಿ ಲ್ಯಾಂಡಿಂಗ್ ಕೊನೇ ಕ್ಷಣದಲ್ಲಿ ಫೇಲ್ ಆಗಿತ್ತು. ಆದ್ರೆ ಈ ಬಾರಿ ಮೋದಿ ಸಂಕಲ್ಪದ ಜೊತೆಗೆ ಇಡೀ ದೇಶದ ಹರಕೆ-ಹಾರೈಕೆ ಇಸ್ರೋ ವಿಜ್ಞಾನಿಗಳ ಜೊತೆಗಿತ್ತು. ಸ್ವತಃ ಮೋದಿ ದಕ್ಷಿಣ ಆಫ್ರಿಕಾದಲ್ಲಿ ಕೂತು ಚಂದ್ರಯಾನ-3ರ ಯಶಸ್ಸಿಗಾಗಿ ಕಾತರಿಸ್ತಾ ಇದ್ರು. ಕೊನೆಗೂ ಆ ಕ್ಷಣ ಬಂದೇ ಬಿಟ್ಟಿತ್ತು. ಆಗಸ್ಟ್ 23ರ ಸಂಜೆ 6 ಗಂಟೆ 4 ನಿಮಿಷಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನ ನೆಲದಲ್ಲಿ ಸೇಫ್ ಆಗಿ ಲ್ಯಾಂಡ್ ಆಗ್ತಾ ಇದ್ದಂತೆ ಇಸ್ರೋ ಮುಖ್ಯಸ್ಥರಿಗೆ ದಕ್ಷಿಣ ಆಫ್ರಿಕಾದಿಂದಲೇ ಫೋನ್ ಕರೆ ಮಾಡಿದ ಮೋದಿ ಅಭಿನಂದನೆಗಳನ್ನು ತಿಳಿಸಿದ್ರು.

ಸ್ವಾಗತಕ್ಕೆ ಬರಬೇಡಿ ಎಂದು ಸಿಎಂ ಸಿದ್ದುಗೆ ನಾನೇ ಹೇಳಿದ್ದೆ: ಮೋದಿ

ಕೊಟ್ಟ ಮಾತಿಗೆ ತಕ್ಕಂತೆ ಪ್ರಧಾನಿ ಮೋದಿ ಶನಿವಾರ ಬೆಳ್ಳಂ ಬೆಳಗ್ಗೆಯೇ ಬೆಂಗಳೂರಿಗೆ ಬಂದಿಳಿದ್ರು. ಎಚ್.ಎ.ಎಲ್ ಏರ್'ಪೋರ್ಟ್'ನಿಂದ ನೇರವಾಗಿ ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಹೆಡ್ ಆಫೀಸ್'ಗೆ ಆಗಮಿಸಿದ ಮೋದಿಯವರನ್ನು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಸ್ವಾಗತಿಸಿದ್ರು. ಚಂದ್ರಲೋಕದಲ್ಲಿ ಲ್ಯಾಂಡ್ ಆಗಿರೋ ವಿಕ್ರಮ್ ಲ್ಯಾಂಡರ್ ಬಗ್ಗೆ ಪ್ರಧಾನಿಗಳಿಗೆ ಸಂಪೂರ್ಣ ಮಾಹಿತಿ ನೀಡಿದ ಸೋಮನಾಥ್, ಚಂದ್ರನ ದಕ್ಷಿಣ ಧ್ರುವಕ್ಕೆ ಇಸ್ರೋದ 40 ದಿನಗಳ ಪ್ರಯಾಣದ ಬಗ್ಗೆ ವಿವರಿಸಿದ್ರು. ನಂತ್ರ ಇಸ್ರೋ ಕಚೇರಿಯಲ್ಲಿ ಮೋದಿ ವಿಜ್ಞಾನಿಗಳ ಮಧ್ಯೆ ಸಾಗಿ ಚಪ್ಪಾಳೆ ತಟ್ಟುತ್ತಾ ವಿಜ್ಞಾನಿಗಳನ್ನು ಅಭಿನಂದಿಸಿದರು.

ನಾನು ದಕ್ಷಿಣ ಆಫ್ರಿಕಾದಲ್ಲಿದ್ದೆ. ನಂತರ ಗ್ರೀಸ್’ನಲ್ಲಿ ಕಾರ್ಯಕ್ರಮವಿತ್ತು. ಆದರೆ ನನ್ನ ಮನಸ್ಸೆಲ್ಲಾ ನಿಮ್ಮ ಜೊತೆಗೇ ಇತ್ತು. ಭಾರತಕ್ಕೆ ಆಗಮಿಸುತ್ತಿದ್ದಂತೆ ಆದಷ್ಟು ಬೇಗ ನಿಮ್ಮ ದರ್ಶನ ಮಾಡಬೇಕೆಂದು ಮನಸ್ಸು ಹಾತೊರೆಯುತ್ತಿತ್ತು. ನಿಮಗೆಲ್ಲರಿಗೂ ಸಲ್ಯೂಟ್ ಹೊಡೆಯಲು ನನ್ನ ಮನಸ್ಸು ಕಾತರಿಸುತ್ತಿತ್ತು

ವಿಜ್ಞಾನಿಗಳ ಮುಂದೆ ಭಾವುಕರಾಗಿ ಕಣ್ಣೀರಿಟ್ಟರು ಮೋದಿ..!

ಸಾಮಾನ್ಯವಾಗಿ ಕಣ್ಣೀರು ನಾನಾ ಕಾರಣಗಳಿಗೆ ಬರತ್ತೆ, ದುಃಖವಾದಾಗ, ತುಂಬಾ ಖುಷಿಯಾದಾಗ, ಯಾವುದೋ ಸಾಧನೆಯನ್ನು ನೋಡಿ ಕಣ್ತುಂಬಿಕೊಂಡಾಗ, ಆ ಸಾಧನೆ ಮಾಡಿದವರ ಮುಂದೆ ನಿಂತಾಗ ಮಾತು ಮೌನವಾಗಿ, ಮನಸ್ಸಿನ ಭಾವನೆಗಳು ಕಣ್ಣೀರ ರೂಪದಲ್ಲಿ ಹೊರ ಬರೋದು ಸಹಜ. ಇಸ್ರೋ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಣ್ಣಿಂದ ಹರಿದದ್ದು ಅಂಥದ್ದೇ ಕಣ್ಣೀರು. ವಿಕ್ರಮ್ ಲ್ಯಾಂಡರನ್ನು ಚಂದ್ರಲೋಕದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗುವಂತೆ ಮಾಡಿದ ವಿಜ್ಞಾನಿಗಳನ್ನು ಅಭಿನಂದಿಸುತ್ತಾ ಮೋದಿ ಭಾವುಕರಾದ್ರು. ಮಾತಿನ ಮಧ್ಯೆ ಗದ್ಗದಿತರಾದ್ರು. ಗದ್ಗದಿತ ಮಾತುಗಳಲ್ಲೇ ವಿಜ್ಞಾನಿಗಳಿಗೆ ಸಲ್ಯೂಟ್ ಹೊಡೆದ್ರು ಮೋದಿ.

ನಿಮ್ಮ ಪರಿಶ್ರಮಕ್ಕೆ ನನ್ನ ಸಲ್ಯೂಟ್. ನಿಮ್ಮ ಧೈರ್ಯಕ್ಕೆ ನನ್ನ ಸಲ್ಯೂಟ್. ನಿಮ್ಮ ಶ್ರದ್ಧೆಗೆ ನನ್ನ ಸಲ್ಯೂಟ್. ದೇಶವನ್ನು ಇಷ್ಟು ಎತ್ತರಕ್ಕೆ ಕೊಂಡೊಯ್ದಿದ್ದೀರಿ. ಇದು ಸಾಧಾರಣ ಯಶಸ್ಸು ಅಲ್ಲವೇ ಇಲ್ಲ. ಇದು ಅನಂತ ಅಂತರಿಕ್ಷದಲ್ಲಿ ಭಾರತದ ವೈಜ್ಞಾನಿಕ ಸಾಮರ್ಥ್ಯದ ಶಂಖನಾದ ಎಂದರು ಮೋದಿ

ಇಸ್ರೋ ನಾರಿಶಕ್ತಿಗೆ ‘ನಮೋ’ ನಮನ: ಮಹಿಳಾ ವಿಜ್ಞಾನಿಗಳೊಂದಿಗೆ ಫೋಟೋ ತೆಗೆಸಿಕೊಂಡ ಮೋದಿ

ಹಾಗ್ ನೋಡಿದ್ರೆ ಚಂದ್ರಯಾನದ ಯಶಸ್ಸಿನ ಬಗ್ಗೆ ಮೋದಿ ದೊಡ್ಡ ಕನಸನ್ನೇ ಕಟ್ಕೊಂಡಿದ್ರು. 2019ರಲ್ಲಿ ಚಂದ್ರಯಾನ-2 ಚಂದ್ರನ ನೆಲಕ್ಕೆ ಕಾಲಿಡೋ ಹೊತ್ತಿಗೆ ಮೋದಿ ನೇರವಾಗಿ ಬೆಂಗಳೂರಿನ ಇಸ್ರೋ ಕಚೇರಿಗೆ ಬಂದು ಕೂತಿದ್ರು. ಆದ್ರೆ ಅವತ್ತು ಅದೃಷ್ಟ ಭಾರತದ ಜೊತೆಗಿರ್ಲಿಲ್ಲ. ಇನ್ನೇನು ಮಿಷನ್ ಆಪರೇಷನ್ ಸಕ್ಸಸ್ ಆಯ್ತು ಅನ್ನುವಷ್ಟರಲ್ಲಿ ವಿಕ್ರಮ್ ಲ್ಯಾಂಡರ್ ಇಸ್ರೋ ಜೊತೆ ತನ್ನ ಸಂಪರ್ಕ ಕಳೆದುಕೊಂಡಿತ್ತು.

ಚಂದ್ರಯಾನ-2 ಮಿಷನ್ ಫೆಲ್ಯೂರ್ ಆದ ಆ ಕ್ಷಣ ಪ್ರಧಾನಿ ಮೋದಿಯವರು ಆಗಿನ ಇಸ್ರೋ ಮುಖ್ಯಸ್ಥ ಕೆ.ಶಿವನ್ ಅವರನ್ನು ಅಪ್ಪಿಕೊಂಡು ಸಂತೈಸಿದ್ರು. ಅಷ್ಟೇ ಅಲ್ಲ, ಮುಂದಿನ ಯಶಸ್ಸಿಗೆ ಇಸ್ರೋ ಅಂಗಳದಲ್ಲೇ ನಿಂತು ಸಂಕಲ್ಪವನ್ನೂ ಮಾಡಿ ಬಿಟ್ಟಿದ್ರು. ಮೋದಿಯವರ ಕನಸು ಈಗ ನಿಜವಾಗಿದೆ. ಇದನ್ನು ಸಾಧ್ಯವಾಗಿಸಿದ್ದು ಅದೇ ಇಸ್ರೋ ಸಂಸ್ಥೆಯ ಹೆಮ್ಮೆಯ ವಿಜ್ಞಾನಿಗಳು. ಆ ವಿಜ್ಞಾನಿಗಳ ಸಾಹಸವನ್ನು ಬಣ್ಣಿಸಿದ ಮೋದಿ, ನಮ್ಮ ದೇಶದ ಹೆಮ್ಮೆ ಈಗ ಚಂದ್ರನ ಮೇಲಿದೆ ಅಂತ ಸಂತಸ ವ್ಯಕ್ತಪಡಿಸಿದ್ರು.

ಭಾರತವೀಗ ಚಂದ್ರನ ಮೇಲಿದೆ. ನಮ್ಮ ದೇಶದ ಹೆಮ್ಮೆ ಈಗ ಚಂದ್ರನ ಮೇಲಿದೆ. ನಾವು ಎಲ್ಲಿಗೆ ಹೋಗಿದ್ದೇವೆ ಎಂದರೆ, ಯಾರೂ ಹೋಗಲಾಗದ ಜಾಗಕ್ಕೆ ಹೋಗಿದ್ದೇವೆ. ಈ ಹಿಂದೆ ಯಾರೂ ಮಾಡಲಾಗದ್ದನ್ನು ಮಾಡಿದ್ದೇವೆ. ಇದು ಇವತ್ತಿನ ಭಾರತ, ನಿರ್ಭೀತ ಭಾರತ ಎಂದರು ಮೋದಿ

ಇಸ್ರೋ ಅಂಗಳದಲ್ಲಿ ಪ್ರಧಾನಿಗೆ  "ಚಂದ್ರಲೋಕದ ಉಡುಗೊರೆ"

ಇಸ್ರೋ ಕಚೇರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಇಸ್ರೋ ಮುಖ್ಯಸ್ಥ ಶ್ರೀಧರ ಸೋಮನಾಥ್ ಫಣಿಕ್ಕರ್, ಕಂಟ್ರೋಲ್ ಸೆಂಟರ್'ಗೆ ಕರ್ಕೊಂಡ್ ಹೋದ್ರು. ಅಲ್ಲಿ ವಿಕ್ರಮ್ ಲ್ಯಾಂಡರ್ ಚಂದ್ರನ ನೆಲದಲ್ಲಿ ಲ್ಯಾಂಡ್ ಆದ ದೃಶ್ಯಗಳನ್ನು ಮೋದಿ ವೀಕ್ಷಿಸಿದ್ರು. ಇದೇ ಸಂದರ್ಭದಲ್ಲಿ ಮೋದಿಯವರಿಗೆ ಇಸ್ರೋ ಕಡೆಯಿಂದ ವಿಶೇಷ ಉಡುಗೊರೆಯೊಂದನ್ನ ನೀಡಲಾಯ್ತು. 

ಇಸ್ರೋ ಮುಖ್ಯಸ್ಥರು ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಿ ನೀಡಿದ ಈ ಫೋಟೋ ಸಾಮಾನ್ಯ ಫೋಟೋ ಅಲ್ಲ ವೀಕ್ಷಕರೇ.. ಇದು ಚಂದ್ರಲೋಕದಿಂದ ಬಂದ ಉಡುಗೊರೆ. ಕಳೆದ ಬುಧವಾರ ಭಾರತದ ಚಂದ್ರಯಾನ ನೌಕೆ ಚಂದ್ರನಂಗಳದಲ್ಲಿ ಸೇಫ್ ಆಗಿ ಲ್ಯಾಂಡ್ ಆಗಿತ್ತಲ್ವಾ.. ಲ್ಯಾಂಡ್ ಆದ ನಂತರ ಲ್ಯಾಂಡರ್'ನಿಂದ ಹೊರ ಬಂದಿದ್ದ ಪ್ರಗ್ಯಾನ್ ರೋವರ್, ಚಂದ್ರ ನೆಲದ ಫೋಟೋ ಒಂದನ್ನು ಕ್ಲಿಕ್ ಮಾಡಿ ಇಸ್ರೋಗೆ ಕಳುಹಿಸಿತ್ತು. ಅದು ಈ ಮಿಷನ್ ಆಪರೇಷನ್'ನಲ್ಲಿ ಚಂದ್ರಲೋಕದಿಂದ ಬಂದ ಮೊದಲ ಫೋಟೋ. ಅದೇ ಫೋಟೋವನ್ನು ಪ್ರಧಾನಿ ಮೋದಿಯವರಿಗೆ ಇಸ್ರೋ ವಿಜ್ಞಾನಿಗಳು ಉಡುಗೆಯಾಗಿ ನೀಡಿದ್ರು.

ನಮ್ಮ ಪ್ರಗ್ಯಾನ್ ಚಂದ್ರನ ಮೇಲೆ ಹೆಜ್ಜೆ ಗುರುತು ಮೂಡಿಸಿದ್ದಾನೆ. ಬೇರೆ ಬೇರೆ ಕ್ಯಾಮೆರಾಗಳಲ್ಲಿ ತೆಗೆಯಲಾಗಿರುವ ಚಿತ್ರಗಳು ಅದ್ಭುತ. ಮಾನವನ ನಾಗರಿಕತೆಯಲ್ಲಿ ಮೊದಲ ಬಾರಿ,ಭೂಮಂಡಲ ಲಕ್ಷಾಂತರ ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿ, ಚಂದ್ರನ ನೆಲದ ಚಿತ್ರಗಳನ್ನು ಮನುಷ್ಯ ತನ್ನ ಕಣ್ಣುಗಳಿಂದ ನೋಡುತ್ತಿದ್ದಾನೆ. ಆ ಚಿತ್ರಗಳನ್ನು ಇಡೀ ಜಗತ್ತೇ ನೋಡುವಂತಹ ಕೆಲಸವನ್ನು ಭಾರತ ಮಾಡಿದೆ.

ಇದು ಭಾರತದ ಶಕ್ತಿ, ಭಾರತದ ತಾಕತ್ತು. ಚಂದ್ರಲೋಕದ ದಕ್ಷಿಣ ಧ್ರುವದ ಫೋಟೋವನ್ನು ಇವತ್ತು ಇಡೀ ಜಗತ್ತೇ ನೋಡಿದೆ ಅಂದ್ರೆ ಅದಕ್ಕೆ ಕಾರಣ ಭಾರತ.. ಇಲ್ಲಿವರೆಗೆ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಚಂದ್ರನ ಉತ್ತರ ಧ್ರುವಕ್ಕೆ ಧಾಂಗುಡಿ ಇಟ್ಟು ಬಿಟ್ಟಿದ್ವು. ಆದ್ರೆ ದಕ್ಷಿಣ ಧ್ರುವ ಪ್ರವೇಶಿಸುವ ಸಾಹಸವನ್ನು ಯಾರೂ ಮಾಡಿರ್ಲಿಲ್ಲ. ಆ ಸಾಹಸವನ್ನು ಇಸ್ರೋ ವಿಜ್ಞಾನಿಗಳು ಮಾಡಿ ತೋರಿಸಿದ್ದಾರೆ. 

ಇಸ್ರೋ ವಿಜ್ಞಾನಿಗಳಿಗೆ ಬಿಗ್ ಸಪ್ರೈಜ್ ಕೊಟ್ಟರು ಪ್ರಧಾನಿ ಮೋದಿ..!

ಚಂದ್ರಯಾನ-3 ಸಕ್ಸಸ್ ಆಗೋ ಹೊತ್ತಿಗೆ ದಕ್ಷಿಣ ಆಫ್ರಿಕಾದಲ್ಲಿದ್ದ ಮೋದಿ, ಅಲ್ಲಿಂದ್ಲೇ ಸಂಭ್ರಮದಲ್ಲಿ ಭಾಗಿಯಾಗಿದ್ರು. ಅಷ್ಟೇ ಅಲ್ಲ, ಶೀಘ್ರದಲ್ಲೇ ಬಂದು ನಿಮ್ಮನ್ನು ಭೇಟಿ ಮಾಡ್ತೇನೆ ಅಂತ ಇಸ್ರೋ ವಿಜ್ಞಾನಿಗಳಿಗೆ ಮಾತು ಕೊಟ್ಟಿದ್ರು. ಅದರಂತೆ ಶನಿವಾರ ಬೆಳಗ್ಗೆಯೇ ಸೂರ್ಯೋದಯಕ್ಕೂ ಮೊದ್ಲೇ ಬೆಂಗಳೂರಿಗೆ ಬಂದಿಳಿದ ಮೋದಿ, ಸೂರ್ಯ ಉದಯಿಸೋ ವೇಳೆಗೆ ಇಸ್ರೋ ಕಚೇರಿಯಲ್ಲಿದ್ರು. ಚಂದ್ರಲೋಕದಲ್ಲಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ ವಿಜ್ಞಾನಿಗಳನ್ನು ಭೇಟಿ ಮಾಡಿ, ಶಹಬ್ಬಾಷ್ ಹೇಳಿದ್ರು. ಅಷ್ಟೇ ಅಲ್ಲ, ಭಾಷಣದ ವೇಳೆ ಇಡೀ ವಿಜ್ಞಾನಿ ಸಮೂಹಕ್ಕೇ ಮೋದಿ ಅಚ್ಚರಿಯೊಂದನ್ನು ನೀಡಿದ್ರು

ಚಂದ್ರಲೋಕದಲ್ಲಿ ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆದ ಆಗಸ್ಟ್ 23ರ ದಿನವನ್ನು "ರಾಷ್ಟ್ರೀಯ ಬಾಹ್ಯಾಕಾಶ ದಿನ" ಅಂತ ಮೋದಿ ಘೋಷಿಸಿದ್ದಾರೆ. ಪ್ರಧಾನಿಯವರು ಈ ಘೋಷಣೆ ಮಾಡ್ತಾ ಇದ್ದಂತೆ ಇಸ್ರೋ ವಿಜ್ಞಾನಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ರು.  ಇಸ್ರೋ ವಿಜ್ಞಾನಿಗಳ ಶ್ರಮಕ್ಕೆ ಮೋದಿಯವರಿಗೆ ಸಿಕ್ಕಿದ್ದು "ರಾಷ್ಟ್ರೀಯ ಬಾಹ್ಯಾಕಾಶ ದಿನ"ದ ವಿಶೇಷ ಉಡುಗೊರೆ. ಇಸ್ರೋಗೆ ಪ್ರಧಾನಿ ಮೋದಿ ಕೊಟ್ಟ ಧೀಶಕ್ತಿ ಇಷ್ಟಕ್ಕೇ ಮುಗಿದಿಲ್ಲ. 

Follow Us:
Download App:
  • android
  • ios