ಬೆಳ್ಳಂಬೆಳಗ್ಗೆ ನನ್ನನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಬರುವ ಕಷ್ಟತೆಗೆದುಕೊಳ್ಳಬೇಡಿ. ನಾನು ಬಂದು ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡಿ ಹೊರಟು ಹೋಗುತ್ತೇನೆ.

ಬೆಂಗಳೂರು (ಆ.27): ‘ಬೆಳ್ಳಂಬೆಳಗ್ಗೆ ನನ್ನನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಬರುವ ಕಷ್ಟತೆಗೆದುಕೊಳ್ಳಬೇಡಿ. ನಾನು ಬಂದು ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡಿ ಹೊರಟು ಹೋಗುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಮನವಿ ಮಾಡಿದ್ದೆ. ಅದರಂತೆ ಅವರು ಸಹಕಾರ ನೀಡಿದ್ದು, ಅವರೆಲ್ಲರಿಗೂ ಆಭಾರಿ ಆಗಿದ್ದೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ತನ್ಮೂಲಕ ಪ್ರಧಾನಿ ಅಧಿಕೃತ ರಾಜ್ಯ ಭೇಟಿ ವೇಳೆ ಶಿಷ್ಟಾಚಾರ ಪಾಲನೆ ಬಗ್ಗೆ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಸ್ಪಷ್ಟೀಕರಣ ನೀಡಿದ್ದಾರೆ. ಅಲ್ಲದೆ, ಮುಂದಿನ ಬಾರಿ ತಾವು ಅಧಿಕೃತ ಕಾರ್ಯಕ್ರಮಗಳಿಗೆ ಬಂದಾಗ ಶಿಷ್ಟಾಚಾರ ಪಾಲಿಸಬಹುದು ಎಂದೂ ಹೇಳಿದ್ದಾರೆ. ಪ್ರಧಾನಮಂತ್ರಿಗಳು ಅಧಿಕೃತ ಕಾರ್ಯಕ್ರಮಗಳಿಗೆ ರಾಜ್ಯಕ್ಕೆ ಬರುವಾಗ ಮುಖ್ಯಮಂತ್ರಿಗಳು, ರಾಜ್ಯಪಾಲರು ಹಾಗೂ ನಿರ್ದಿಷ್ಟಅಧಿಕಾರಿಗಳು ಸ್ವಾಗತ ಮಾಡುವುದು ಶಿಷ್ಟಾಚಾರ. ಆದರೆ ಶುಕ್ರವಾರ ಪ್ರಧಾನಮಂತ್ರಿ ಕಚೇರಿಯು ಬಿಡುಗಡೆ ಮಾಡಿದ್ದ ಸ್ವಾಗತ ಕೋರುವವರ ಪಟ್ಟಿಯಲ್ಲಿ ಮುಖ್ಯಮಂತ್ರಿ, ರಾಜ್ಯಪಾಲರು ಹಾಗೂ ಉಪಮುಖ್ಯಮಂತ್ರಿಗಳ ಹೆಸರು ಇರಲಿಲ್ಲ. ಈ ಬಗ್ಗೆ ಹಲವು ರೀತಿಯ ಚರ್ಚೆಗಳು ಶುರುವಾಗಿದ್ದವು.

ಇಸ್ರೋ ಸಾಧನೆಗೆ ಮೋದಿ ಭಾವುಕ: ನಿಮ್ಮ ದರ್ಶನದಿಂದ ನಾನು ಪಾವನವಾಗಿದ್ದೇನೆ ಎಂದ ಪ್ರಧಾನಿ

ಶನಿವಾರ ಬೆಳಗ್ಗೆ ಎಚ್‌ಎಎಲ್‌ ವಿಮಾನ ನಿಲ್ದಾಣದ ಬಳಿ ಮಾತನಾಡಿದ ನರೇಂದ್ರ ಮೋದಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ‘ವಿದೇಶದಿಂದ ಬಂದ ಕೂಡಲೇ ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡಬೇಕು ಎಂಬ ಉದ್ದೇಶದಿಂದ ಬೆಳ್ಳಂಬೆಳಗ್ಗೆ ಇಸ್ಟ್ರಾಕ್‌ಗೆ ತೆರಳುತ್ತೇನೆ. ಆ ವೇಳೆಗೆ ಬೇಗ ಬೇಗ ಎದ್ದು ಬಂದು ಆಹ್ವಾನ ಮಾಡುವ ಕಷ್ಟತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದೆ. ಅದರಂತೆ ಮುಖ್ಯಮಂತ್ರಿ, ರಾಜ್ಯಪಾಲ ಹಾಗೂ ಉಪಮುಖ್ಯಮಂತ್ರಿಗಳು ಸಹಕಾರ ನೀಡಿದ್ದಾರೆ. ಇದಕ್ಕಾಗಿ ಅವರಿಗೆ ನಾನು ಆಭಾರಿ ಹಾಗೂ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಹೇಳಿದರು.

ಬೆಂಗಳೂರಿಗರಿಗೆ ಅಭಿನಂದನೆ: ಸೂರ್ಯೋದಯದ ವೇಳೆ ಇಷ್ಟೊಂದು ಸಂಖ್ಯೆಯಲ್ಲಿ ಬಂದಿದ್ದೀರಿ. ನಿಮ್ಮನ್ನು ತಡೆಯುವ ಮನಸ್ಸಾಗಲಿಲ್ಲ. ದೇಶದ ವೈಜ್ಞಾನಿಕ ಸಿದ್ಧಿ ಈಗ ಬೆಂಗಳೂರಿನಲ್ಲಿ ಕಾಣಿಸುತ್ತಿದೆ. ಗ್ರೀಸ್‌, ಜೋಹಾನ್ಸ್‌ಬಗ್‌ರ್‍ ಸೇರಿದಂತೆ ವಿಶ್ವದ ಪ್ರತಿ ಮೂಲೆಯಲ್ಲಿ ಇದೇ ಸ್ಥಿತಿ ಇದೆ. ವಿಜ್ಞಾನಿಗಳ ಸಾಧನೆಗೆ ವಿಜ್ಞಾನದ ಮೇಲೆ ವಿಶ್ವಾಸ ಇಟ್ಟಿರುವವರು, ಭವಿಷ್ಯವನ್ನು ನೋಡುವವರು, ಮಾನವತೆಗೆ ಸಮರ್ಪಿತವಾಗಿರುವ ಎಲ್ಲರೂ ಇಷ್ಟೇ ಉತ್ಸಾಹ ತುಂಬಿದ್ದಾರೆ ಎಂದು ಹೇಳಿದರು.

ಅಧಿಕಾರಿಗಳಿಂದ ಮೋದಿಗೆ ಸ್ವಾಗತ: ಪ್ರಧಾನಮಂತ್ರಿ ಕಚೇರಿ ನಿರ್ದೇಶನದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಅಲೋಕ್‌ ಮೋಹನ್‌, ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ. ದಯಾನಂದ, ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ. ದಯಾನಂದ, ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲನ್‌ ಆದಿತ್ಯ ಬಿಸ್ವಾಸ್‌ ಅವರು ಶನಿವಾರ ಬೆಳಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಬರ ಮಾಡಿಕೊಂಡರು.

ಎಚ್‌ಎಎಲ್‌ ವಿಮಾನ ನಿಲ್ದಾಣದ ಬಳಿ ಹಾಗೂ ಜಾಲಹಳ್ಳಿ ರಸ್ತೆಯ ಎರಡೂ ಬದಿಯಲ್ಲಿ ಸಾರ್ವಜನಿಕರಿಗೆ ನಿಲ್ಲಲು ಅವಕಾಶ ಕಲ್ಪಿಸಲಾಗಿತ್ತು. ಬೇರೆ ಯಾರಿಗೂ ಮೋದಿ ಭೇಟಿಗೆ ಅವಕಾಶ ಇಲ್ಲದ ಕಾರಣ ಬಿಜೆಪಿ ನಾಯಕರೂ ಸಹ ರಸ್ತೆಯ ಇಕ್ಕೆಲಗಳಲ್ಲಿ ನಿಂತು ನರೇಂದ್ರ ಮೋದಿ ಅವರಿಗೆ ಕೈ ಬೀಸುವಂತಾಯಿತು.

ಇಸ್ರೋ ವಿಜ್ಞಾನಿಗಳು ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದು ವಿಪರ್ಯಾಸ: ನಟ ಚೇತನ್‌

ಜೈ ವಿಜ್ಞಾನ್‌, ಜೈ ಅನುಸಂಧಾನ್‌ ಘೋಷಣೆಗೆ ಮೋದಿ ಕರೆ: ಎಚ್‌ಎಎಲ್‌ ವಿಮಾನ ನಿಲ್ದಾಣದ ಮುಂದೆ ಜಮಾಯಿಸಿದ್ದ ಸಾರ್ವಜನಿಕರಿಗೆ ‘ಜೈ ವಿಜ್ಞಾನ್‌, ಜೈ ಅನುಸಂಧಾನ್‌’ ಎಂದು ಘೋಷಣೆ ಕೂಗಲು ನರೇಂದ್ರ ಮೋದಿ ಪ್ರೇರೇಪಿಸಿದರು. ‘ಜೈ ಜವಾನ್‌, ಜೈ ಕಿಸಾನ್‌’ ಎಂದು ಘೋಷಣೆ ಕೂಗಿದ ಅವರು ಬಳಿಕ ನಾನು ‘ಜೈ ವಿಜ್ಞಾನ್‌’ ಎಂದು ಕೂಗುತ್ತೇನೆ. ನೀವು ‘ಜೈ ಅನುಸಂಧಾನ್‌’ ಎಂದು ಹೇಳಬೇಕು ಎಂದು ಕರೆ ಕೊಟ್ಟು ನಾಲ್ಕೈದು ಬಾರಿ ಘೋಷಣೆ ಕೂಗಿಸುವ ಮೂಲಕ ಹುರಿದುಂಬಿಸಿದರು.