Asianet Suvarna News Asianet Suvarna News

ಇಸ್ರೋ ನಾರಿಶಕ್ತಿಗೆ ‘ನಮೋ’ ನಮನ: ಮಹಿಳಾ ವಿಜ್ಞಾನಿಗಳೊಂದಿಗೆ ಫೋಟೋ ತೆಗೆಸಿಕೊಂಡ ಮೋದಿ

‘ಸೃಷ್ಟಿ ನಿರ್ಮಾಣದಿಂದ ಹಿಡಿದು ಅವಸಾನದವರೆಗೆ ಸೃಷ್ಟಿಯ ಮೂಲ ಹಾಗೂ ಪೂರ್ಣ ಆಧಾರವೆಂದರೆ ಅದು ನಾರಿ ಶಕ್ತಿ. ಚಂದ್ರಯಾನ-3 ರಲ್ಲಿ ಮಹಿಳಾ ವಿಜ್ಞಾನಿಗಳು ನಾರಿಶಕ್ತಿಯ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನಾರಿ ಶಕ್ತಿಯನ್ನು ಕೊಂಡಾಡಿದ್ದಾರೆ. 

PM Narendra Modi took a photo with ISRO women scientists gvd
Author
First Published Aug 27, 2023, 6:56 AM IST

ಬೆಂಗಳೂರು (ಆ.27): ‘ಸೃಷ್ಟಿ ನಿರ್ಮಾಣದಿಂದ ಹಿಡಿದು ಅವಸಾನದವರೆಗೆ ಸೃಷ್ಟಿಯ ಮೂಲ ಹಾಗೂ ಪೂರ್ಣ ಆಧಾರವೆಂದರೆ ಅದು ನಾರಿ ಶಕ್ತಿ. ಚಂದ್ರಯಾನ-3 ರಲ್ಲಿ ಮಹಿಳಾ ವಿಜ್ಞಾನಿಗಳು ನಾರಿಶಕ್ತಿಯ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನಾರಿ ಶಕ್ತಿಯನ್ನು ಕೊಂಡಾಡಿದ್ದಾರೆ. ಬೆಂಗಳೂರಿನ ಪೀಣ್ಯ ಇಸ್ಟ್ರಾಕ್‌ ಕೇಂದ್ರದಲ್ಲಿ ಮಹಿಳಾ ವಿಜ್ಞಾನಿಗಳಿಗೆ ಪ್ರತ್ಯೇಕವಾಗಿ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ‘ಯಾವುದೇ ಶುಭ ಸಂಕಲ್ಪ ನಿಭಾಯಿಸಬೇಕಾದರೆ ಶಕ್ತಿಯ ಅಗತ್ಯವಿದೆ. ಅದೇ ನಾರಿ ಶಕ್ತಿ. ಚಂದ್ರಯಾನ-3ರ ಯಶಸ್ಸಿನಲ್ಲೂ ನಮ್ಮ ತಾಯಂದಿರು, ಸಹೋದರಿಯರು ಎಲ್ಲರೂ ಇದ್ದೀರಿ. 

ಸೃಷ್ಟಿನಿರ್ಮಾಣದಿಂದ ಪ್ರಳಯದವರೆಗೆ (ಅವಸಾನ) ಪೂರ್ತಿ ಸೃಷ್ಟಿಯ ಆಧಾರ ನಾರಿ ಶಕ್ತಿಯೇ ಆಗಿದೆ. ಅದೇ ರೀತಿ ಚಂದ್ರಯಾನ-3 ರಲ್ಲೂ ಮಹಿಳಾ ವಿಜ್ಞಾನಿಗಳು ನಾರಿ ಶಕ್ತಿಯನ್ನು ಪ್ರದರ್ಶಿಸಿದ್ದಾರೆ’ ಎಂದು ಹೇಳಿದರು. ಯಾವುದೇ ಕಾರ್ಯ ಯಶಸ್ವಿಯಾಗಲು ಯಾವ ಮನಸ್ಸಿನಲ್ಲಿ ಕರ್ತವ್ಯ ಮಾಡುತ್ತೀರಿ, ಯಾವ ರೀತಿ ವಿಜ್ಞಾನ, ವಿಚಾರದ ಗತಿ ನೀಡುತ್ತೀರಿ, ಶುಭ ಹಾಗೂ ಕಲ್ಯಾಣಕಾರಿ ಸಂಕಲ್ಪವನ್ನು ಜೋಡಿಸುತ್ತೀರಿ ಎಂಬುದು ಮುಖ್ಯ. ಎಲ್ಲವೂ ಸರಿಯಾಗಿದ್ದರೆ ಮಾತ್ರ ಇಂತಹ ಸಾಧನೆ ಮಾಡಲು ಸಾಧ್ಯ ಎಂದರು. ಬಳಿಕ ಮಹಿಳಾ ವಿಜ್ಞಾನಿಗಳೊಂದಿಗೆ ಸಾಮೂಹಿಕ ಛಾಯಾಚಿತ್ರಕ್ಕೆ ಪೋಸು ನೀಡಿದ ಪ್ರಧಾನಮಂತ್ರಿಗಳು, ಮಹಿಳಾ ವಿಜ್ಞಾನಿಗಳು ಮತ್ತಷ್ಟು ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.

ಇಸ್ರೋ ಸಾಧನೆಗೆ ಮೋದಿ ಭಾವುಕ: ನಿಮ್ಮ ದರ್ಶನದಿಂದ ನಾನು ಪಾವನವಾಗಿದ್ದೇನೆ ಎಂದ ಪ್ರಧಾನಿ

ನಾನು ದ. ಆಫ್ರಿಕಾದಲ್ಲಿದ್ದರೂ ನನ್ನ ಮನಸ್ಸು ಇಲ್ಲಿತ್ತು: ಚಂದ್ರಯಾನ-3 ಯಶಸ್ಸು 21ನೇ ಶತಮಾನದ ವಿಶ್ವದ ದೊಡ್ಡ ಸಮಸ್ಯೆಗಳನ್ನು ಪರಿಹರಿಸುತ್ತದೆ. ಆ.23ರ ಆ ದಿನದ ಪ್ರತಿ ಕ್ಷಣ ಕ್ಷಣವೂ ನನ್ನ ಕಣ್ಣ ಮುಂದೆ ಹರಿದಾಡುತ್ತಿದೆ. ನಾನು ದಕ್ಷಿಣ ಆಫ್ರಿಕಾದಲ್ಲಿದ್ದರೂ ನನ್ನ ಮನಸ್ಸು ನಿಮ್ಮ ಬಳಿಯೇ ಇತ್ತು. ಇಸ್ರೋ ಕೇಂದ್ರದಿಂದ ಇಡೀ ದೇಶದ ಕೀರ್ತಿ ಪತಾಕೆ ಹಾರಿದ ರೀತಿ, ಆ ದೃಶ್ಯವನ್ನು ಯಾರು ಮರೆಯುತ್ತಾರೆ ಹೇಳಿ? ಕೆಲವು ನೆನಪುಗಳು ಅಮರವಾಗುತ್ತವೆ. ಆ ಕ್ಷಣ ಅಮರವಾಯಿತು. ಆ ಕ್ಷಣ ಈ ಶತಮಾನಕ್ಕೆ ಸ್ಫೂರ್ತಿದಾಯಕ ಕ್ಷಣಗಳಲ್ಲಿ ಒಂದು. ಆ ವಿಜಯ ನಿಮ್ಮೆಲ್ಲರದ್ದೂ. ಇದೆಲ್ಲವೂ ನಿಮ್ಮಿಂದ ಸಾಧ್ಯವಾಗಿದೆ. ನಿಮ್ಮನ್ನು ಎಷ್ಟುಕೊಂಡಾಡಿದರೂ ಕಡಿಮೆಯೇ ಎಂದು ಮೋದಿ ವಿಜ್ಞಾನಿಗಳನ್ನು ಶ್ಲಾಘಿಸಿದರು.

ಇಸ್ರೋ ಕೇಂದ್ರದಲ್ಲಿ ಮಾತನಾಡಿದ ಅವರು, ಒಂದೆಡೆ ವಿಕ್ರಮನ ಮೇಲಿನ ನಂಬಿಕೆ. ಇನ್ನೊಂದು ಕಡೆ ರೋವರ್‌ ಪ್ರಜ್ಞಾನ್‌ನ ಪರಾಕ್ರಮ. ಮಾನವ ಮೊದಲ ಬಾರಿಗೆ, ಭೂಮಿಯ ಲಕ್ಷಾಂತರ ವರ್ಷಗಳಲ್ಲಿ ಕಾಣದ ಸ್ಥಳವನ್ನು ಚಂದ್ರಯಾನ-3 ನೌಕೆ ನಮಗೆ ತೋರಿಸಿದೆ. ಮನುಷ್ಯನು ಆ ಸ್ಥಳದ ಚಿತ್ರವನ್ನು ತನ್ನ ಕಣ್ಣುಗಳಿಂದ ನೋಡುತ್ತಿದ್ದಾನೆ. ಈ ಚಿತ್ರವನ್ನು ಜಗತ್ತಿಗೆ ತೋರಿಸುವ ಕೆಲಸವನ್ನು ಭಾರತ ಮಾಡಿದೆ. ನೀವೆಲ್ಲಾ ವಿಜ್ಞಾನಿಗಳು ಸೇರಿ ಇದನ್ನು ಮಾಡಿದ್ದೀರಿ. ಇಂದು ಇಡೀ ಜಗತ್ತು ನಮ್ಮ ವಿಜ್ಞಾನಿಗಳು ಮತ್ತು ತಂತ್ರಜ್ಞಾನದಲ್ಲಿನ ದೃಢತೆಯನ್ನು ಒಪ್ಪಿಕೊಂಡಿದ್ದಾರೆ. ಚಂದ್ರಯಾನ ಮಹಾ ಅಭಿಯಾನ ಭಾರತ ಮಾತ್ರವಲ್ಲ ಪೂರ್ತಿ ಮಾನವತಾ ಸಫಲತೆ. ಎಲ್ಲಾ ದೇಶಗಳಿಗೂ ಮೂನ್‌ ಮಿಷನ್‌ನ ಹೊಸ ರಸ್ತೆ ತೆರೆದುಕೊಂಡಿದೆ ಎಂದು ಹೇಳಿದರು.

‘ಇದು ಸಾಧಾರಣ ಯಶಸ್ಸಲ್ಲ. ಅಂತರಿಕ್ಷ ವಿಜ್ಞಾನದಲ್ಲಿ ಭಾರತೀಯ ವಿಜ್ಞಾನಿಗಳ ಶಂಖನಾದವಿದು. ಭಾರತವು ಇಂದು ಅಧಿಕೃತವಾಗಿ ಚಂದ್ರನ ಮೇಲಿದೆ. ದೇಶದ ಹೆಮ್ಮೆಯನ್ನು ಚಂದಿರನ ಮೇಲಕ್ಕೆ ತಲುಪಿಸಿದ್ದೇವೆ. ನೀವು ದೇಶವನ್ನು ಕೊಂಡೊಯ್ದಿರುವ ಎತ್ತರ ಸಾಮಾನ್ಯದ್ದಲ್ಲ. ನಾವು ಯಾರೂ ತಲುಪದ ಸ್ಥಳವನ್ನು ತಲುಪಿದ್ದೇವೆ. ನಾವು ಹೋಗಿರುವ ಸ್ಥಳಕ್ಕೆ ಯಾರೂ ಹೋಗಲಾಗಿಲ್ಲ. ನಾವು ಮಾಡಿರುವ ಕೆಲಸವನ್ನು ಈವರೆಗೆ ಯಾರೂ ಮಾಡಿಲ್ಲ. ಇದು ಇಂದಿನ ಭಾರತ, ನಿರ್ಭೀತ ಮತ್ತು ಹೋರಾಟದ ಭಾರತ. ಹೊಸತಾಗಿ ಯೋಚಿಸುವ ಭಾರತ’ ಎಂದು ಹೇಳಿ ಪ್ರತಿ ಮಾತಿನಲ್ಲೂ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದರು.

ಇಂದು ಭಾರತದ ಚಿಕ್ಕ ಪುಟ್ಟ ಮಕ್ಕಳ ಬಾಯಲ್ಲೂ ಚಂದ್ರಯಾನದ ಹೆಸರು ಬರುತ್ತಿದೆ. ನಿಮ್ಮ ಯಶಸ್ಸಿನ ಆಳವಾದ ಪ್ರಭಾವವನ್ನು ನೀವು ಬಿಟ್ಟಿದ್ದೀರಿ. ಇಂದಿನಿಂದ, ರಾತ್ರಿಯಲ್ಲಿ ಚಂದ್ರನನ್ನು ನೋಡುವ ಯಾವುದೇ ಮಗು ನನ್ನ ದೇಶವು ಚಂದ್ರನನ್ನು ತಲುಪಿದೆ ಎಂಬ ಧೈರ್ಯ ಮತ್ತು ಉತ್ಸಾಹ ಹೊಂದಿರುತ್ತದೆ. ಇಡೀ ಪೀಳಿಗೆಯನ್ನು ಜಾಗೃತಗೊಳಿಸಲು ಯಶಸ್ವಿಯಾಗಿದ್ದೀರಿ. ನೀವು ಮಕ್ಕಳಲ್ಲಿ ಆಕಾಂಕ್ಷೆಗಳ ಬೀಜಗಳನ್ನು ಬಿತ್ತಿದ್ದೀರಿ. ಅವರು ಆಲದ ಮರವಾಗುತ್ತಾರೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಅಡಿಪಾಯವಾಗುತ್ತಾರೆ ಎಂದು ವಿಜ್ಞಾನಿಗಳ ಸಾಧನೆಯನ್ನು ಮುಕ್ತ ಮನಸ್ಸಿನಿಂದ ಕೊಂಡಾಡಿದರು.

ಇಸ್ರೋ ಆಧ್ಯಕ್ಷ ಸೋಮನಾಥ್‌ ಬೆನ್ನುತಟ್ಟಿ ಶ್ಲಾಘಿಸಿದ ಪ್ರಧಾನಿ ಮೋದಿ

ಚಂದ್ರನ ಮೇಲಿನವರೆಗೆ ‘ಮೇಕ್‌ ಇನ್‌ ಇಂಡಿಯಾ’: ಭಾರತವು ಚಂದ್ರನ ಮೇಲ್ಮೈಯನ್ನು ಮುಟ್ಟಿದ ವಿಶ್ವದ ನಾಲ್ಕನೇ ದೇಶ. ಭಾರತ ತನ್ನ ಪಯಣವನ್ನು ಎಲ್ಲಿಂದ ಆರಂಭಿಸಿತು ಎಂಬುದನ್ನು ನೋಡಿದಾಗ ಈ ಯಶಸ್ಸು ಇನ್ನಷ್ಟುದೊಡ್ಡದಾಗಿ ಕಾಣುತ್ತಿದೆ. ಒಂದು ಕಾಲದಲ್ಲಿ ಭಾರತಕ್ಕೆ ಅಗತ್ಯ ತಂತ್ರಜ್ಞಾನ ಇರಲಿಲ್ಲ. ಇಂದು ಭಾರತ ಜಗತ್ತಿನ ಐದನೇ ಅತಿ ದೊಡ್ಡ ಆರ್ಥಿಕತೆ ಎನಿಸಿಕೊಂಡಿದೆ. ಎಲ್ಲಾ ಕ್ಷೇತ್ರಗಳಲ್ಲೂ ಮೊದಲ ಪಂಕ್ತಿಯಲ್ಲಿ ನಿಲ್ಲುವ ಸ್ಥಾನಕ್ಕೆ ಬಂದಿದೆ ಎಂದರು. ಇಸ್ರೋದಂತಹ ಸಂಸ್ಥೆಗಳ ದೊಡ್ಡ ಪಾತ್ರದಿಂದ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮೂರನೇ ಪಂಕ್ತಿಯಿಂದ ಮೊದಲ ಪಂಕ್ತಿಗೆ ಬಂದಿದೆ. ನೀವು ಚಂದ್ರನ ಮೇಲಿನವರೆಗೆ ಮೇಕ್‌ ಇನ್‌ ಇಂಡಿಯಾವನ್ನು ತೆಗೆದುಕೊಂಡು ಹೋಗಿದ್ದೀರಿ ಎಂದು ಮೋದಿ ಹೇಳಿದರು.

Follow Us:
Download App:
  • android
  • ios