ಭಾರತದ ಮಿಶನ್ ಶಕ್ತಿಗೆ ನಾಸಾ ಅಸಮಾಧಾನ ಹಿನ್ನೆಲೆ| ಬಾಹ್ಯಾಕಾಶದಲ್ಲಿ ಹರಡಿದ ಅವಶೇಷಗಳ ಬಗ್ಗೆ ಚಿಂತೆ ಬೇಡ ಎಂದ ಡಿಆರ್‌ಡಿಒ| 45 ದಿನಗಳಲ್ಲಿ ಬಾಹ್ಯಾಕಾಶದಲ್ಲಿರುವ ಅವಶೇಷ ನಾಶವಾಗಲಿದೆ ಎಂದ ಡಿಆರ್‌ಡಿಒ| ನಾಸಾಗೆ ಅಭಯ ನೀಡಿದ ಡಿಆರ್‌ಡಿಒ ಮುಖ್ಯಸ್ಥ ಸತೀಶ್ ರೆಡ್ಡಿ|
ನವದೆಹಲಿ(ಏ.07): ಭಾರತದ ಮಿಷನ್ ಶಕ್ತಿ ಯೋಜನೆಗೆ ಅಸಮಾಧಾನ ವ್ಯಕ್ತಪಡಿಸಿದ್ದ ನಾಸಾಗೆ ಡಿಆರ್‌ಡಿಒ ತಿರುಗೇಟು ನೀಡಿದೆ. ASAT ಉಪಗ್ರಹ ನಿಗ್ರಹ ಕ್ಷಿಪಣಿ ಪರೀಕ್ಷೆಯ ಅವಶೇಷಗಳು ಕೇವಲ 45 ದಿನಗಳಲ್ಲಿ ನಾಶವಾಗಲಿವೆ ಎಂದು ಸಂಸ್ಥೆ ಭರವಸೆ ನೀಡಿದೆ.
ಈ ಕುರಿತು ಮಾತನಾಡಿರುವ ಡಿಆರ್‌ಡಿಒ ಮುಖ್ಯಸ್ಥ ಸತೀಶ್ ರೆಡ್ಡಿ, ಬಾಹ್ಯಾಕಾಶದಲ್ಲಿ ಭಾರತದ ಮಿಷನ್ ಶಕ್ತಿ ಯೋಜನೆಯಿಂದ ಸೃಷ್ಟಿಯಾಗಿರುವ ಅವಶೇಷಗಳು ಇನ್ನು 45 ದಿನಗಳಲ್ಲಿ ನಾಶವಾಗಲಿದೆ. ಅವಶೇಷಗಳ ಕುರಿತು ನಾಸಾ ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಕ್ಷಿಪಣಿ ಪ್ರಯೋಗದಿಂದ ಉಂಟಾಗಿರುವ ಅವಶೇಷಗಳು ಕೆಲವೇ ವಾರದಲ್ಲಿ ಭೂಮಿಯ ವಾತಾವರಣ ತಲುಪಲಿದ್ದು, ಬಳಿಕ ಭೂಮಿಯ ಗುರುತ್ವಾಕರ್ಷಣೆಯ ಒತ್ತಡಕ್ಕೆ ಸಿಲುಕಿ ವಾತಾವರಣದಲ್ಲೇ ಸುಟ್ಟು ಬೂದಿಯಾಗಲಿದೆ ಎಂದು ಸತೀಶ್ ರೆಡ್ಡಿ ಸ್ಪಷ್ಟನೆ ನೀಡಿದರು.
ಭಾರತ ನಡೆಸಿದ್ದ ಮಿಷನ್ ಶಕ್ತಿ ಯೋಜನೆಯ ಎಸ್ಯಾಟ್ ಉಪಗ್ರಹ ನಿಗ್ರಹ ಕ್ಷಿಪಣಿ ಪರೀಕ್ಷೆಯಿಂದ ಬಾಹ್ಯಾಕಾಶದಲ್ಲಿ ಸುಮಾರು 400ಕ್ಕೂ ಅಧಿಕ ಅವಶೇಷಗಳು ಉಂಟಾಗಿವೆ. ಇದು ಇತರೆ ಉಪಗ್ರಹಗಳ ಕಾರ್ಯ ನಿರ್ವಹಣೆ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಆತಂಕ ವ್ಯಕ್ತಪಡಿಸಿತ್ತು.
