ಹೈದರಾಬಾದ್‌: ಕಳೆದ ಒಂದು ದಶಕದ ಹಿಂದೆಯೇ ಉಪಗ್ರಹವನ್ನು ಹೊಡೆದೊರುಳಿಸುವ ಕ್ಷಿಪಣಿ ಸಾಮರ್ಥ್ಯವನ್ನು ಭಾರತ ಹೊಂದಬಹುದಿತ್ತು. ಆದರೆ, ಆ ಸಂದರ್ಭದಲ್ಲಿ ಈ ಮಹತ್ವದ ಕಾರ್ಯಕ್ಕೆ ಅಂದಿನ ಯುಪಿಎ ಸರ್ಕಾರ ತಮಗೆ ಅವಕಾಶ ನೀಡಲಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ)ಯ ಮಾಜಿ ಅಧ್ಯಕ್ಷ ಜಿ. ಮಾಧವನ್‌ ಹಾಗೂ ಡಿಆರ್‌ಡಿಒ ಮಾಜಿ ಮುಖ್ಯಸ್ಥ ಡಾ.ವಿ.ಕೆ. ಸಾರಸ್ವತ್‌ ಹೇಳಿದ್ದಾರೆ.

ಈ ಬಗ್ಗೆ ಬುಧವಾರ ಮಾತನಾಡಿದ ಜಿ. ಮಾಧವನ್‌ ಅವರು, ‘2007ರಲ್ಲಿ ಚೀನಾ ಅವಧಿ ಮುಕ್ತಾಯಗೊಂಡಿದ್ದ ಉಪಗ್ರಹವನ್ನು ಹೊಡೆದುರುಳಿಸಿದಾಗಲೇ, ಉಪಗ್ರಹ ಹೊಡೆದುರುಳಿಸುವ ಕ್ಷಿಪಣಿ ಯೋಜನೆ ಕೈಗೊಳ್ಳುವ ತಂತ್ರಜ್ಞಾನ ಭಾರತದ ಬಳಿಯಿತ್ತು. ಆದರೆ, ರಾಜಕೀಯ ಇಚ್ಛಾಶಕ್ತಿ ಇರಲಿಲ್ಲ. ಇದೀಗ ಇಂಥ ಸವಾಲಿನ ಯೋಜನೆಗೆ ಕೈ ಹಾಕುವ ರಾಜಕೀಯ ಇಚ್ಛಾಶಕ್ತಿ ಮತ್ತು ಧೈರ್ಯ ಎರಡೂ ಪ್ರಧಾನಿ ನರೇಂದ್ರ ಮೋದಿ ಅವರಿಗಿದೆ. ಇದೇ ಕಾರಣದಿಂದ ನಮ್ಮ ಸಾಮರ್ಥ್ಯವನ್ನು ಈಗ ವಿಶ್ವದ ಮುಂದೆ ತೋರಿಸಿಕೊಳ್ಳುವಂತಾಯಿತು,’ ಎಂದು ಹೇಳಿದರು.

ಇದೇ ವೇಳೆ ಈ ವಿಚಾರವನ್ನು ರಾಜಕೀಯ ಅನುಕೂಲಕ್ಕಾಗಿ ಬಳಸಲು ಉದ್ದೇಶಪೂರ್ವಕವಾಗಿಯೇ ಈ ಸಂದರ್ಭದಲ್ಲಿ ಉಪಗ್ರಹ ನಿರೋಧಕ ಕ್ಷಿಪಣಿ ಉಡಾವಣೆ ಬಗ್ಗೆ ಮೋದಿ ಘೋಷಣೆ ಮಾಡಿದ್ದಾರೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಡಿಆರ್‌ಡಿಒ ಮಾಜಿ ಮುಖ್ಯಸ್ಥ ವಿ.ಕೆ ಸಾರಸ್ವತ್‌ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆ ಪೂರ್ಣಗೊಳಿಸಲು ಗಡುವು ನೀಡಿಯೇ ಇರಲಿಲ್ಲ. ನಾವು ಸಿದ್ಧರಾದ ಬಳಿಕ ಉಪಗ್ರಹ ನಿರೋಧಕ ಕ್ಷಿಪಣಿ ಉಡಾಯಿಸಿದ್ದೇವೆ,’ ಎಂದು ಕಾಂಗ್ರೆಸ್‌ ಆರೋಪಕ್ಕೆ ತಿರುಗೇಟು ನೀಡಿದರು. ಅಲ್ಲದೆ, 2012ರಲ್ಲೇ ಎಸ್ಯಾಟ್‌ ಕ್ಷಿಪಣಿ ಪರೀಕ್ಷೆಗೆ ಡಿಆರ್‌ಡಿಒ ಸಮರ್ಥವಾಗಿದೆ ಎಂದು ಯುಪಿಎ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಆದರೆ, ಈ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಗೆ ಅನುವು ಮಾಡಿಕೊಟ್ಟರು. ಇಂಥ ಧೈರ್ಯವನ್ನು ಹಿಂದಿನ ಯುಪಿಎ ಸರ್ಕಾರ ತೋರಿಸಲಿಲ್ಲ ಎಂದು ಹೇಳಿದರು.