ಸೆಪ್ಟೆಂಬರ್ 6 ಮತ್ತು 7 ರ ರಾತ್ರಿಯ ಒಂದು ಗಂಟೆಯ ಸಮಯ, ಇಡೀ ಜಗತ್ತು ಭಾರತದತ್ತ ಉಸಿರು ಬಿಗಿ ಹಿಡಿದು ಕಾಯುತ್ತಿದ್ದ ಕ್ಷಣಗಳು. ಬೆಂಗಳೂರಿನ ಇಸ್ಟ್ರಾಕ್‌ನ ಮಿಶನ್ ಕಂಟ್ರೋಲ್ ಕಾಂಪ್ಲೆಕ್ಸ್ ನಲ್ಲಿ ಆತಂಕ ಕುತೂಹಲಗಳು ಮನೆ ಮಾಡಿದ್ದವು.

ಅಂದುಕೊಂಡಂತೆ ಕರಾರುವಾಕ್ಕಾಗಿ, ಎಲ್ಲವೂ ನಡೆಯುತ್ತಿತ್ತು. ಚಂದ್ರಯಾನ 2 ರ ಲ್ಯಾಂಡರ್ ವಿಕ್ರಮ್ ಸರಿಯಾದ ಪಥದಲ್ಲಿ ಸಾಗಿ ಬಂದು ಚಂದ್ರನ ಮೇಲಿಳಿಯಲು ಸಜ್ಜಾಗಿತ್ತು. ಕೊನೆಯ ಹದಿನೈದು ನಿಮಿಷದ ಆ ನಿರ್ಣಾಯಕ ಪಯಣ ಸುಲಭ ಸಾಧ್ಯವಾಗಿರಲಿಲ್ಲ. ಇದುವರೆಗಿನ ಎಲ್ಲ ಪ್ರಯತ್ನಗಳ ಫಲ ಇದರಲ್ಲಿ ಅಡಗಿತ್ತು. ಇಸ್ರೋಗೆ ಇದು ಮೊದಲ ಅನುಭವ. ಇಡಿಯ ಜಗತ್ತಿನಲ್ಲಿ ರಷ್ಯಾ, ಅಮೆರಿಕ ಮತ್ತು ಚೀನಾ ದೇಶಗಳು ಮಾತ್ರ ಈ ಕಾರ್ಯದಲ್ಲಿ ಯಶಸ್ವಿಯಾಗಿದ್ದವು. ಭಾರತ ನಾಲ್ಕನೆಯ ದೇಶವಾಗಿ ದಾಖಲೆ ಬರೆಯಲು ಸಿದ್ಧವಾಗಿತ್ತು.

ಭರವಸೆಯ ಬೆಳಕು: ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚಿದ ಇಸ್ರೋ!

ಜುಲೈ 22 ರಂದು ನಭಕ್ಕೆ ಚಿಮ್ಮಿದ್ದ ಚಂದ್ರಯಾನ 2 ನ್ನು ಜಿ.ಎಸ್.ಎಲ್.ವಿ ಮಾರ್ಕ್ 3 ,2, 379 ಕೆ.ಜಿ ತೂಕದ ಅದನ್ನು 45,000 ಕಿ.ಮೀ ದೂರದ ಕಕ್ಷೆಗೆ, ಅಂದರೆ ಅಂದುಕೊಂಡದ್ದಕ್ಕಿಂತ ಪ್ರತಿಶತ ಹದಿನೈದು ಕಿ.ಮೀಗಳಷ್ಟು ಹೆಚ್ಚು ದೂರಕ್ಕೆ ಸಾಗಿಸುವ ಮೂಲಕ ಮತ್ತೊಂದು ಐತಿಹಾಸಿಕ ಪಯಣಕ್ಕೆ ನಾಂದಿ ಹಾಡಿತ್ತು. ಅದಾದ ನಂತರ ಚಂದ್ರಯಾನ ಭೂಮಿಯನ್ನು ವೃತಾಕಾರದ ಕಕ್ಷೆಯಲ್ಲಿ ಸುತ್ತಲು ಪ್ರಾರಂಭಿಸಿತು.

ಇದರಲ್ಲಿ ಲ್ಯಾಂಡರ್ ಮತ್ತು ರೋವರ್‌ಗಳು ಇದ್ದವು. ಅಗಸ್ಟ್ 20 ರಂದು ಅದನ್ನು ಚಂದ್ರನ ಕಕ್ಷೆಗೆ ಸೇರಿಸಲಾಯಿತು. ಅದು ಚಂದ್ರನನ್ನು 100* 100 ಕಕ್ಷೆಯಲ್ಲಿ ಸುತ್ತಲು ಪ್ರಾರಂಭಿಸಿತು. ಉಡಾವಣೆಗೊಂಡ 42 ದಿನಗಳ ನಂತರ, ಸೆಪ್ಟಂಬರ್ 2 ರಂದು ಆರ್ಬಿಟರ್ ಅಥವಾ ಕಕ್ಷಾವಾಹನದಿಂದ ಬೇರ್ಪಟ್ಟ, ವಿಕ್ರಮ್ ಚಂದ್ರನ ಪ್ರದಕ್ಷಿಣೆಯನ್ನು ಪ್ರಾರಂಭಿಸಿತು. ಅದನ್ನು ಎರಡು ಕಾರ್ಯಾಚರಣೆಗಳ ಮೂಲಕ ಚಂದ್ರನಿಗೆ ಮತ್ತೂ ಹತ್ತಿರಕ್ಕೆ ಅಂದರೆ ಬಹಳ ಹತ್ತಿರದಲ್ಲಿದ್ದಾಗ 35 ಕಿ.ಮೀ ಮತ್ತು ಬಹಳ ದೂರದಲ್ಲಿದ್ದಾಗ 101 ಕಿ.ಮೀ ಗೆ ತರಲಾಯಿತು. ಆರ್ಬಿಟರ್ ಚಂದ್ರನ ಪ್ರದಕ್ಷಿಣೆಯನ್ನು ಮುಂದುವರಿಸಿತು.

'ಚಂದ್ರಯಾನ-2 ವೈಫಲ್ಯದ ಹಿಂದೆ ರಷ್ಯಾ ಕೈವಾಡ'

ಆ ಅಂತಿಮ ಪಯಣ ಸೆಪ್ಟಂಬರ್ 7 ರಂದು ಸರಿಯಾಗಿ 1.38 ಕ್ಕೆ ವಿಕ್ರಮ ಚಂದ್ರನ ಮೇಲೆ ಇಳಿಯಲು ತನ್ನ ಕೊನೆಯ ಪಯಣವನ್ನು ಪ್ರಾರಂಭಿಸಿತು. ಅದರ ರೆಟ್ರೋ ರಾಕೆಟ್‌ಗಳು ಸರಿಯಾದ ಸಮಯಕ್ಕೆ ಹೊತ್ತಿಕೊಂಡವು, ಅದರ ವೇಗ ಮತ್ತು ಎತ್ತರ ಎರಡೂ ಅಂದುಕೊಂಡಂತೆ ನಿಗದಿತ ಪ್ರಮಾಣದಲ್ಲಿ ತಗ್ಗುತ್ತ ಸಾಗಿದವು. ಮಾಕ್ಸ್ ನಲ್ಲಿ ವಿಜ್ಞಾನಿಗಳು ಈ ಕ್ಷಣವನ್ನು ಚಪ್ಪಾಳೆಯೊಂದಿಗೆ ಸ್ವಾಗತಿಸಿದರು. ಮೊದಲ ಹಂತ ಪವರ್ಡ್ ಡಿಸೆಂಟ್ ಇನಿಶಿಯೇಶನ್ ಯಶಸ್ವಿಯಾಗಿತ್ತು.

ಮೊದಲ ಹಂತದ ಹತ್ತು ನಿಮಿಷದಲ್ಲಿ ಅದು 7.4 ಕಿ.ಮೀನಷ್ಟು ಹತ್ತಿರಕ್ಕೆ ಬಂದಿತ್ತು. ಎಲ್ಲವೂ ಕರಾರುವಕ್ಕಾಗಿದೆ ಎನ್ನುವುದು ಪರದೆಯ ಮೇಲಿನ ಸಂಕೇತದಿಂದ ಕಂಡು ಬರುತ್ತಿತ್ತು. ಎರಡನೆಯ ಹಂತವಾದ ಬ್ರೇಕಿಂಗ್ ಫೇಸ್ ಆರಂಭವಾಯಿತು. ೩೮ ಸೆಕೆಂಡುಗಳಲ್ಲಿ ಅದು 5 ಕಿಮೀ ಎತ್ತರ ಮತ್ತು ನಿಗದಿತ ಸ್ಥಳಕ್ಕಿಂತ 350 ಕಿ.ಮೀ ದೂರದಲ್ಲಿರಬೇಕಿತ್ತು. ಫೈನ್ ಬ್ರೇಕಿಂಗ್ ಹಂತ ಆರಂಭವಾಗಿತ್ತು. ಹನ್ನೆರೆಡು ನಿಮಿಷಗಳು ಕಳೆದಿದ್ದವು. ವಿಕ್ರಮ ಚಂದ್ರನ ಮೇಲ್ಮೈನಿಂದ ಕೇವಲ 2 ಕಿ.ಮೀ ದೂರದಲ್ಲಿತ್ತು.

ಹದಿಮೂರನೆಯ ನಿಮಿಷದಲ್ಲಿ ಅಂದರೆ 1.50ಕ್ಕೆ ವಿಕ್ರಮ ನಿಗದಿತ ಪಥದಿಂದ ಪಕ್ಕಕ್ಕೆ ಸರಿದಿತ್ತು ಮತ್ತು ಅಲ್ಲಿಂದ ಯಾವುದೇ ಸಂಕೇತಗಳು ಬರುತ್ತಿಲ್ಲ ಎನ್ನುವುದನ್ನು ವಿಜ್ಞಾನಿಗಳು ತಿಳಿಸಿದರು. ಮತ್ತೂ ಕೆಲವು ನಿಮಿಷಗಳು ಕಳೆದವು. ವಿಕ್ರಮ ಮೌನವಾಗಿತ್ತು. ಎಲ್ಲರ ಮುಖದ ಮೇಲೆ ಇದ್ದ ಆತಂಕ ಏನೋ ತೊಂದರೆ ಆಗಿದೆ ಎನ್ನುವುದನ್ನು ಸೂಚಿಸುತ್ತಿತ್ತು. ಇಸ್ರೋ ಅಧ್ಯಕ್ಷ ಡಾ. ಕೆ.ಶಿವನ್ ‘ವಿಕ್ರಮ್ ಗ್ರೌಂಡ್ ಸ್ಟೇಷನ್‌ನೊಂದಿಗೆ ಸಂಪರ್ಕ ಕಡಿದುಕೊಂಡಿದೆ.

ತಮಿಳುನಾಡಿನ ಬಡ ರೈತನ ಮಗ ಶಿವನ್‌ ಇಸ್ರೋ ಅಧ್ಯಕ್ಷರಾದ ಕಥೆ!

ಅದು ಕೊನೆಯ ಬಾರಿಗೆ ಸಂದೇಶ ರವಾನಿಸಿದಾಗ ಚಂದ್ರನಿಂದ 2.1 ಕಿ.ಮೀ ದೂರದಲ್ಲಿತ್ತು. ಅದು ಕಳಿಸಿರುವ ಡಾಟಾವನ್ನು ವಿಶ್ಲೇಷಣೆಗೆ ಒಳಪಡಿಸಲಾಗುತ್ತಿದೆ’ ಎಂದು ಪ್ರಕಟಿಸಿದರು. ಅದಾದ ನಂತರ ಎಲ್ಲವೂ ನಿರಾಶಾದಾಯಕವೆನಿಸಿದರೂ ಕಾಯುವಿಕೆ ಮುಂದುವರೆಯಿತು. ವಿಕ್ರಮನಿಂದ ಯಾವುದೇ ಸಂದೇಶ ಮತ್ತೆ ಬರಲಿಲ್ಲ. ಸಂಪರ್ಕ ಮತ್ತೆ ಏರ್ಪಡಲಿಲ್ಲ.

ಏನಾಗಿರಬಹುದು?

ಇನ್ನು ಕೇವಲ ಎರಡು ನಿಮಿಷಗಳಲ್ಲಿ, ಎಲ್ಲವೂ ಸರಿಯಾಗಿದ್ದರೆ, ವಿಕ್ರಮ್ ಚಂದ್ರನ ಮೇಲಿಳಿದು ಸಂಭ್ರಮವನ್ನು ಹರಡಿ ದಾಖಲೆಯನ್ನು ಬರೆಯುತ್ತಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸಂಪರ್ಕ ಕಡಿತಗೊಳ್ಳಲು ಕಾರಣ, ವಿಕ್ರಮ್ 2.1 ಕಿ.ಮೀ ಇದ್ದಾಗ ಕ್ರ್ಯಾಶ್ ಲ್ಯಾಂಡಿಂಗ್ ಆಗಿರಬಹುದು. ಇದಕ್ಕೆ ಕಾರಣ ಅದು ತನ್ನ ನಿಗದಿತ ವೇಗವನ್ನು ಪಡೆಯಲು ವಿಫಲವಾಗಿರಬಹುದು. ಕೊನೆಯ ಹಂತದ ರೆಟ್ರೋ ರಾಕೆಟ್ ಸಾಕಷ್ಟು ಪ್ರತಿರೋಧವನ್ನು ಅದರ ವೇಗಕ್ಕೆ ಒದಗಿಸಲು ವಿಫಲವಾಗಿರಬಹುದು. ಆಗ ವಿಕ್ರಮ್ನ ಸಂಪರ್ಕ ಸಾಧನಗಳಿಗೆ ಧಕ್ಕೆಯುಂಟಾಗಿ ಅದು ಸಂಪರ್ಕವನ್ನು ಕಳೆದುಕೊಂಡಿರಬಹುದು. ಅಥವಾ ಟ್ರ್ಯಾಜಕ್ಟರಿಯಿಂದ ದೂರ ಸರಿದ ವಿಕ್ರಮ ಮತ್ತೆಲ್ಲೋ ಲ್ಯಾಂಡ್ ಆದಾಗ ಸಂಪರ್ಕ ಕಡಿತಗೊಂಡಿರಬಹುದು. ಇವೆಲ್ಲ ಕೇವಲ ಊಹೆಗಳು ಮಾತ್ರ.

ನಿಜವಾದ ಕಾರಣ ತಿಳಿಯುವುದು ವಿಕ್ರಮ್ ಮೌನ ತಳೆಯುವ ಮುನ್ನ ಕಳಿಸಿದ ಎಲ್ಲ ಮಾಹಿತಿಯನ್ನು ವಿಶ್ಲೇಷಿಸಿದಾಗ ತಿಳಿದು ಬರಲಿದೆ. ಆ ಜ್ಞಾನ ಮುಂದಿನ ಯೋಜನೆಗಳಿಗೆ ಆಧಾರವಾಗಲಿದೆ. ಎಲ್ಲವೂ ಮುಗಿದು ಹೋಗಿಲ್ಲ.  ಕೇವಲ ಈ ಹಿನ್ನಡೆಯಿಂದ ಎಲ್ಲವೂ ಮುಗಿದು ಹೋದಂತಲ್ಲ. ಮುಂದಿನ ಹದಿನಾಲ್ಕು ದಿನಗಳವರೆಗೂ ಸಂಪರ್ಕ ಸ್ಥಾಪಿಸಲು ಪ್ರಯತ್ನಿಸಲಾಗುವುದು ಎಂದು ಇಸ್ರೋ ಹೇಳಿದೆ. ಒಟ್ಟು ಯೋಜನೆಯ 5 ಮಾತ್ರ ಕಳೆದುಕೊಂಡಿದ್ದೇವೆ.

ನಿಗೂಢವಾಗಿ ಕಣ್ಮರೆಯಾದ 'ವಿಕ್ರಮ್' ಲ್ಯಾಂಡರ್‌ಗೆ ಏನಾಗಿರಬಹುದು?

ಇನ್ನೂ ೯೫% ಇದೆ. ಆರ್ಬಿಟರ್ ಚಂದ್ರನನ್ನು ಸುತ್ತುತ್ತಿದೆ. ಅದೀಗ ತನ್ನ ನಿಗದಿತ ಅವಧಿಗಿಂತ ಹೆಚ್ಚು ಕಾಲ ಕಾರ್ಯ ನಿರ್ವಹಿಸಲಿದೆ. ಅದು ಏಳೂವರೆ ವರ್ಷಗಳವರೆಗೆ ಅಲ್ಲಿರಲಿದೆ. ಮುಂಬರುವ ದಿನಗಳಲ್ಲಿ ಕಳಿಸಲಿರುವ ಚಂದ್ರನ ಚಿತ್ರಗಳಲ್ಲಿ ಸುಳಿವು ಸಿಗಬಹುದು. ವಿಕ್ರಮ್ ಕಳಿಸಿರುವ ಮಾಹಿತಿಯಿಂದ ಎಲ್ಲಿ ತಪ್ಪಾಯಿತು ಎನ್ನುವುದು ತಿಳಿಯಲಿದೆ. ಇವೆಲ್ಲ ಮುಂದಿನ ಮತ್ತೂ ಹೊಸ ಹುಮ್ಮಸ್ಸಿನೊಂದಿಗೆ ಪ್ರಾರಂಭವಾಗಲಿರುವ ಯೋಜನೆಗಳಿಗೆ ಸಹಕಾರಿ.

ಚಂದ್ರಯಾನ 2 ಈಗಲೂ ನಮಗೆ ಬೇಕಾದ ಚಂದ್ರನ ದಕ್ಷಿಣ ಧೃವದ ನೀರು, ಖನಿಜಗಳು ಮತ್ತು 3,84,400 ಕಿ.ಮೀ ದೂರವಿರುವ ಚಂದ್ರನ ಮೇಲ್ಮೈ ರಚನೆ, ಹಾಗೂ ಚಂದ್ರ ಕಂಪನಗಳ ಬಗ್ಗೆ ಮಾಹಿತಿ ದೊರೆಯುತ್ತಲೇ ಇರುತ್ತದೆ. ಹಾಗಾಗಿ ಕಳೆದುಕೊಂಡದ್ದು ಅತ್ಯಲ್ಪ ದೊರೆತದ್ದು, ದೊರೆಯಲಿರುವುದು ಅತ್ಯಧಿಕ. 

- ಸುಮಂಗಲಾ ಎಸ್ ಮುಮ್ಮಿಗಟ್ಟಿ