ಕೇವಲ 2.1 ಕಿ.ಮೀ. ಅಂತರದಲ್ಲಿರುವಾಗ ನಿಗೂಢ ರೀತಿಯಲ್ಲಿ ಕಣ್ಮರೆಯಾದ ‘ವಿಕ್ರಮ್‌’| 'ವಿಕ್ರಮ್' ಲ್ಯಾಂಡರ್‌ಗೆ ಏನಾಗಿರಬಹುದು?| ಕೆಲ ವಿಜ್ಞಾನಿಗಳಿಂದ ಕೆಲವೊಂದು ಸಾಧ್ಯಾಸಾಧ್ಯತೆಗಳ ವಿವರ| 

ಚಂದ್ರನಿಂದ ಕೇವಲ 2.1 ಕಿ.ಮೀ. ಅಂತರದಲ್ಲಿರುವಾಗ ನಿಗೂಢ ರೀತಿಯಲ್ಲಿ ಕಣ್ಮರೆಯಾದ ‘ವಿಕ್ರಮ್‌’ ಲ್ಯಾಂಡರ್‌ ಕಣ್ಮರೆಯಾಗಲು ಏನು ಕಾರಣ? ನೌಕೆಗೆ ಏನಾಗಿರಬಹುದು ಎಂಬ ಪ್ರಶ್ನೆಗಳಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಅಧಿಕೃತವಾಗಿ ಯಾವುದೇ ಉತ್ತರ ನೀಡಿಲ್ಲ. ಆದರೆ ಕೆಲ ವಿಜ್ಞಾನಿಗಳು ಕೆಲವೊಂದು ಸಾಧ್ಯಾಸಾಧ್ಯತೆಗಳನ್ನು ವಿವರಿಸಿದ್ದಾರೆ.

ಚಂದ್ರನ ಮೇಲೆ ಅಪ್ಪಳಿಸಿರಬಹುದು

ಕಡೆ ಕ್ಷಣದಲ್ಲಿ ಏಕಾಏಕಿ ನಿಯಂತ್ರಣ ಕಳೆದುಕೊಂಡು ಚಂದ್ರನ ನೆಲಕ್ಕೆ ಅಪ್ಪಳಿಸಿರಬಹುದು. ಬಳಿಕ ಸಂಪರ್ಕ ಕಡಿತಗೊಂಡಿರಬಹುದು.

ಎಂಜಿನ್‌ಗಳು ಕೈಕೊಟ್ಟಿರಬಹುದು

ವಿಕ್ರಮ್‌ ಲ್ಯಾಂಡರ್‌ ಅನ್ನು ನಿಧಾನವಾಗಿ ಚಂದ್ರನ ಅಂಗಳದ ಮೇಲೆ ಇಳಿಸಲು 4 ಎಂಜಿನ್‌ಗಳು ಇದ್ದವು. ಅವು ಸಕಾಲಕ್ಕೆ ಚಾಲೂ ಆಗದೇ ಸಮಸ್ಯೆ ಆಗಿರಬಹುದು.

ಎಂಜಿನ್‌ ಪವರ್‌ ವ್ಯತ್ಯಾಸ ಆಗಿರಬೇಕು

ನಾಲ್ಕೂ ಎಂಜಿನ್‌ಗಳ ಪೈಕಿ ಒಂದೆರಡು ಕೈಕೊಟ್ಟಿರಬಹುದು. ಇದರಿಂದಾಗಿ ವೇಗದ ನಿಯಂತ್ರಣ ತಪ್ಪಿರಬಹುದು. ನೌಕೆ ಒಂದು ಕಡೆ ವಾಲಿ ನೆಲಕಚ್ಚಿರಬಹುದು.

ಸ್ಥಿರತೆ ಕಳೆದುಕೊಂಡಿರಬಹುದು

ಇದೊಂದು ರೀತಿ ಮಗುವನ್ನು ತೊಟ್ಟಿಲಿಗೆ ಹಾಕುವ ಪ್ರಕ್ರಿಯೆ ಎಂದು ಇಸ್ರೋ ವಿಜ್ಞಾನಿಗಳೇ ಹೇಳಿದ್ದರು. ಇಳಿಯುವ ಪ್ರಕ್ರಿಯೆ ವೇಳೆ ನೌಕೆ ಸ್ಥಿರತೆ ಕಳೆದುಕೊಂಡು, ಒಂದು ಕಡೆ ಜಾರಿ ಬಿದ್ದಿರಬಹುದು.

ಲೆಕ್ಕಾಚಾರದಲ್ಲಿ ಎಡವಟ್ಟು

ಭೂಮಿಗಿಂತ ಆರು ಪಟ್ಟು ಕಡಿಮೆ ಗುರುತ್ವ ಬಲವನ್ನು ಚಂದ್ರ ಹೊಂದಿದೆ. ಲ್ಯಾಂಡರ್‌ ಇಳಿಸುವಾಗ ವೇಗವನ್ನು ತಗ್ಗಿಸಲಾಗುತ್ತದೆ. ಆ ಸಂದರ್ಭದಲ್ಲಿ ನೌಕೆ ಗುರುತ್ವ ಬಲದ ಸೆಳೆತಕ್ಕೆ ಒಳಗಾಗಿರಬಹುದು ಎಂಬ ವಾದವೂ ಇದೆ.

ಸಂಪರ್ಕ ಕಡಿದುಕೊಂಡರೂ ಸಕ್ರಿಯ?

ಭೂಮಿಯ ಜತೆ ಸಂಪರ್ಕ ಕಳೆದುಕೊಂಡಿದ್ದರೂ ಲ್ಯಾಂಡರ್‌ ನಿಗದಿಯಂತೆ ಇಳಿದಿರಬಹುದು. ಬಳಿಕ ರೋವರ್‌ ಹೊರಬಂದು ಸಂಶೋಧನೆ ಆರಂಭಿಸಿರಬಹುದು ಎಂಬ ನಿರೀಕ್ಷೆಯೂ ಇದೆ. ಆದರೆ ಈ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.