ನವದೆಹಲಿ[ಸೆ.08]: ಇದುವರೆಗೂ ಯಾವುದೇ ರಾಷ್ಟ್ರ ಕಾಲಿಡದ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್‌ ಇಳಿಸುವ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಕೈಗೊಂಡ ಇಸ್ರೋ ಮುಖ್ಯಸ್ಥ ಡಾ. ಕೆ. ಶಿವನ್‌ ಅವರು ತಮಿಳುನಾಡು ಮೂಲದ ಸಾಮಾನ್ಯ ರೈತ ಕುಟುಂಬದ ಹಿನ್ನೆಲೆಯುಳ್ಳವರು ಎಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ಹೌದು, ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ತರಕ್ಕನ್ವಿಲೈ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದರು.

ಇದೇ ಗ್ರಾಮದ ಶಾಲೆಯಲ್ಲಿ ಕಲಿಯುವಾಗ ಹಲವು ಸಮಸ್ಯೆಗಳನ್ನು ಖುದ್ದಾಗಿ ಅನುಭವಿಸಿದ ಶಿವನ್‌ ಅವರು ಈ ಸಮಸ್ಯೆಗಳನ್ನೇ ತಮ್ಮ ಗುರಿಯ ಉತ್ತುಂಗಕ್ಕೇರಲು ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಂಡರು. ಕುಟುಂಬದ ಮೊದಲ ಪದವಿ ಪೂರೈಸಿದ ಮೊದಲಿಗ ಎಂಬ ಖ್ಯಾತಿಗೆ ಪಾತ್ರರಾದ ಶಿವನ್‌, ವಿದ್ಯಾರ್ಥಿ ದಿಸೆಯಲ್ಲೇ ಹೆಚ್ಚು-ಹೆಚ್ಚು ಓದುವ ಹವ್ಯಾಸ ಬೆಳೆಸಿಕೊಂಡರು.

ಕುಟುಂಬದ ಬಡತನದಿಂದಾಗಿ ಶಿವನ್‌ ತಮಗಿಷ್ಟದ ಕೋರ್ಸ್‌ ಬದಲಾಗಿ 1974ರಲ್ಲಿ ನಾಗರಕೋಯಿಲ್‌ನಲ್ಲಿರುವ ಎಸ್‌ಟಿ ಹಿಂದೂ ಕಾಲೇಜಿನಲ್ಲಿ ಗಣಿತ ಶಾಸ್ತ್ರದಲ್ಲಿ ಪದವಿ ಪೂರೈಸಿದರು. ಅಲ್ಲದೆ, ಶಿವನ್‌ ಅವರು ಕಾಲಿಗೆ ಚಪ್ಪಲಿಯಿಲ್ಲದೆ ಬರಿಗಾಲಿನಲ್ಲಿ ಹಾಗೂ ಪ್ಯಾಂಟ್‌ ಇಲ್ಲದೆ ದೋತಿಯಲ್ಲೇ ಕಾಲೇಜಿಗೆ ಹೋಗುತ್ತಿದ್ದರಂತೆ. ಕೊನೆಗೆ 1980ರಲ್ಲಿ ಮದ್ರಾಸ್‌ ತಂತ್ರಜ್ಞಾನ ಸಂಸ್ಥೆಗೆ ಕಾಲಿಟ್ಟಾಗಲೇ ಮೊದಲ ಬಾರಿಗೆ ಪ್ಯಾಂಟ್‌ ಖರೀದಿಸಿದ್ದರು ಎಂದು ಹೇಳಲಾಗಿದೆ.

ಆದರೆ, ಈ ಯಾವ ಸಮಸ್ಯೆಗಳು ಕೂಡ ಶಿವನ್‌ ಅವರ ಗುರಿ ಸಾಧನೆಗೆ ಅಡ್ಡಿಯಾಗಲಿಲ್ಲ. 1980ರಲ್ಲಿ ಮದ್ರಾಸ್‌ ತಂತ್ರಜ್ಞಾನ ಸಂಸ್ಥೆ(ಎಂಐಟಿ)ಯಿಂದ ಏರೋನಾಟಿಕಲ್‌ ಇಂಜಿನಿಯರಿಂಗ್‌ ಪದವಿ ಗಳಿಸಿದರು. ಅಲ್ಲದೆ, 1982ರಲ್ಲಿ ಬೆಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಐಐಎಸ್‌ಸಿಯಿಂದ ಏರೋಸ್ಪೇಸ್‌ ಇಂಜಿನಿಯರಿಂಗ್‌ ಕ್ಷೇತ್ರದಲ್ಲಿ ಇಂಜಿನಿಯರಿಂಗ್‌ ಮಾಸ್ಟರ್‌ ಪದವಿಯನ್ನು ಪಡೆದರು. ಕೊನೆಗೆ 2007ರಲ್ಲಿ ಪ್ರತಿಷ್ಠಿತ ಬಾಂಬೆ ಐಐಟಿಯಿಂದ ಏರ್‌ಸ್ಪೇಸ್‌ ಇಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಪೂರೈಸಿದರು.

1982ರಿಂದಲೇ ಶಿವನ್‌ ಅವರು ಇಸ್ರೋ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ.