ಅಮೆರಿಕದ ನಾಸಾ ಸಂಸ್ಥೆಯು ಚಂದ್ರನ ಮೇಲೆ ಶಾಶ್ವತ ನೆಲೆ ಸ್ಥಾಪಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಭಾರತದ ಇಸ್ರೋವನ್ನು ಆಹ್ವಾನಿಸಿದೆ. ಆರ್ಟಿಮಿಸ್ ಒಪ್ಪಂದದ ಅಡಿಯಲ್ಲಿ ಈ ಸಹಭಾಗಿತ್ವವು ರೂಪುಗೊಳ್ಳಲಿದ್ದು, ಇದು ಚಂದ್ರಯಾನ-3ರ ಯಶಸ್ಸಿನ ಅನುಭವವನ್ನು ಬಳಸಿಕೊಂಡು, ನಾಸಾದ ತಂತ್ರಜ್ಞಾನವನ್ನು ಭಾರತಕ್ಕೆ ತರಲಿದೆ.
ವಾಷಿಂಗ್ಟನ್: ಸಾಲುಸಾಲು ಚಂದ್ರಯಾನ ಯೋಜನೆಗಳನ್ನು ಕೈಗೊಳ್ಳುವ ಮೂಲಕ, ಭೂಮಿಯ ನೈಸರ್ಗಿಕ ಉಪಗ್ರಹದ ಅಧ್ಯಯನದಲ್ಲಿ ತೊಡಗಿರುವ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋವನ್ನು ಅಮೆರಿಕದ ನಾಸಾ, ಚಂದ್ರನ ಮೇಲೆ ಶಾಶ್ವತ ನೆಲೆ ಸ್ಥಾಪಿಸುವ ಯೋಜನೆಗೆ ಕೈಜೋಡಿಸುವಂತೆ ಆಹ್ವಾನಿಸಿದೆ.
ಬೆಂಗಳೂರಿನಲ್ಲಿರುವ ಇಸ್ರೋ ಪ್ರಧಾನ ಕಚೇರಿಯಲ್ಲಿ ನಡೆದ ಭಾರತ-ಅಮೆರಿಕ ನಾಗರಿಕ ಬಾಹ್ಯಾಕಾಶ ಜಂಟಿ ಕಾರ್ಯನಿರತ ಗುಂಪಿನ 9ನೇ ಸಭೆಯ ವೇಳೆ ಈ ಆಮಂತ್ರಣ ನೀಡಲಾಗಿದೆ. 2023ರಲ್ಲಿ ಭಾರತ ಸಹಿ ಮಾಡಿರುವ ಆರ್ಟಿಮಿಸ್ ಒಪ್ಪಂದದ ಅಡಿಯಲ್ಲಿ ಈ ಸಹಕಾರ ಸಾಕಾರವಾಗುವ ನಿರೀಕ್ಷೆಯಿದೆ.
ಏನಿದು ಯೋಜನೆ?
ಚಂದ್ರನ ಅಂಗಳಕ್ಕೆ ಗಗನಯಾನಿಗಳನ್ನು ಕಳಿಸುವ ಹಾಗೂ ಅವರು ದೀರ್ಘಾವಧಿಗೆ ಅಲ್ಲೇ ನೆಲೆಸಲು ಅನುಕೂಲವಾಗುವಂತೆ ನೆಲೆಯೊಂದನ್ನು ಸ್ಥಾಪಿಸುವುದು ಈ ಯೋಜನೆಯ ಉದ್ದೇಶ. ಇದು ಚಂದ್ರನಲ್ಲಿ ವೈಜ್ಞಾನಿಕ ಅಧ್ಯಯನ ಹಾಗೂ ಸಂಶೋಧನೆಗಳನ್ನು ನಡೆಸಲು ಅನುವು ಮಾಡಿಕೊಡುತ್ತದೆ. ಜತೆಗೆ, ಮಂಗಳ ಗ್ರಹದಲ್ಲಿ ಕೈಗೊಳ್ಳಲುದ್ದೇಶಿಸಲಾಗಿರುವ ಭವಿಷ್ಯದ ಕಾರ್ಯಾಚರಣೆಗಳಿಗೆ ಚಂದ್ರನನ್ನು ಲಾಂಚ್ ಪ್ಯಾಡ್ ರೀತಿ ಬಳಸಿಕೊಳ್ಳಬಹುದು.
ಭಾರತಕ್ಕೇನು ಲಾಭ?
ಭಾರತ ಈಗಾಗಲೇ ಚಂದ್ರಯಾನ-3ರ ಮೂಲಕ 2023ರಲ್ಲಿ ಚಂದ್ರನ ಮೇಲೆ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಅನುಭವ ಗಳಿಸಿಕೊಂಡಿದೆ. ಇದನ್ನು ನೆಲೆ ಸ್ಥಾಪನೆ ಕಾರ್ಯದಲ್ಲಿ ಬಳಸಬಹುದು. ಅತ್ತ ಇಸ್ರೋಗೆ ನಾಸಾದ ಹಲವು ಅತ್ಯಾಧುನಿಕ ತಂತ್ರಜ್ಞಾನ, ಪರಿಣತಿ, ವೈಜ್ಞಾನಿಕ ದತ್ತಾಂಶ ಮತ್ತು ಅಂತಾರಾಷ್ಟ್ರೀಯ ಯೋಜನೆಯೊಂದರಲ್ಲಿ ಭಾಗಿಯಾದ ಅನುಭವ ಲಭಿಸುತ್ತದೆ. ಇವುಗಳ ಮುಂದಿನ ಬಾಹ್ಯಾಕಾಶ ಯೋಜನೆಗಳಲ್ಲಿ ಬಳಸಿಕೊಳ್ಳಬಹುದು.
ಹಲವು ಜಂಟಿ ಯೋಜನೆ
ಭಾರತ ಮತ್ತು ಅಮೆರಿಕದ ಬಾಹ್ಯಾಕಾಶ ಸಂಸ್ಥೆಗಳು ಜಂಟಿಯಾಗಿ ಯೋಜನೆಯೊಂದಕ್ಕೆ ಕೈಹಾಕಿದ ಹಲವು ಉದಾಹರಣೆಗಳಿವೆ. 2025ರ ಜುಲೈನಲ್ಲಿ ಉಡಾವಣೆಯಾದ ನಿಸಾರ್ ಉಪಗ್ರಹವನ್ನು ನಾಸಾ ಮತ್ತು ಇಸ್ರೋ ಜಂಟಿಯಾಗಿ ಅಭಿವೃದ್ಧಿಪಡಿಸಿದ್ದವು. ಅದೇ ವರ್ಷ ಆಕ್ಸಿಯೋಂ-4 ಮಿಷನ್ ಭಾಗವಾಗಿ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಐಎಸ್‌ಎಸ್‌ಗೆ ತೆರಳಿದ್ದರು.
ಇದನ್ನೂ ಓದಿ: Skyroot Aerospace: ನಭಕ್ಕೆ ಹಾರಿದ ಭಾರತದ ಮೊದಲ ಖಾಸಗಿ ರಾಕೆಟ್ ವಿಕ್ರಂ-1


