ಮಾನವ ನಿರ್ಮಿತ ಕೃತಕ ಬೆಳಕಿನ ಮಾಲಿನ್ಯ ಮತ್ತು 'ಸ್ಕೈಗ್ಲೋ' ಪ್ರತಿ ವರ್ಷ ಶೇ. 9.6 ರಷ್ಟು ಹೆಚ್ಚಾಗುತ್ತಿದ್ದು, ರಾತ್ರಿ ಆಕಾಶದಲ್ಲಿ ನಕ್ಷತ್ರಗಳು ವೇಗವಾಗಿ ಕಣ್ಮರೆಯಾಗುತ್ತಿವೆ ಎಂದು 'ಸೈನ್ಸ್' ಜರ್ನಲ್‌ನ ಅಧ್ಯಯನವೊಂದು ಎಚ್ಚರಿಸಿದೆ.
ಬೆಂಗಳೂರು (ಆ.11): ಮಾನವ ನಿರ್ಮಿತ ಕೃತಕ ಬೆಳಕಿನ ಮಾಲಿನ್ಯ (Light Pollution) ಹಾಗೂ ರಾತ್ರಿ ಆಕಾಶದ ಅನಗತ್ಯ ಪ್ರಕಾಶಮಾನತೆ (Skyglow) ದಿನದಿಂದ ದಿನಕ್ಕೆ ಭೀಕರ ರೂಪ ತಾಳುತ್ತಿದ್ದು, ಭವಿಷ್ಯದಲ್ಲಿ ರಾತ್ರಿ ವೇಳೆ ಬಾನಂಗಳದಲ್ಲಿ ಬೆಳಗುವ ಸುಂದರ ನಕ್ಷತ್ರಗಳು ಮರೆಯಾಗುವ ಭೀತಿ ಎದುರಾಗಿದೆ. ಇಂದು ಹುಟ್ಟುವ ಮಗುವಿಗೆ 18 ವರ್ಷ ತುಂಬುವಷ್ಟರಲ್ಲಿ ರಾತ್ರಿ ವೇಳೆಯ ಆಕಾಶದಲ್ಲಿ ಕೇವಲ ಕತ್ತಲೆ ಮತ್ತು ಹೊಗೆಮುಸುಕಿದ ವಾತಾವರಣ ಮಾತ್ರ ಕಾಣಸಿಗಲಿದೆಯೇ ಹೊರತು ನಕ್ಷತ್ರಗಳ ಸೌಂದರ್ಯ ಲಭಿಸುವುದಿಲ್ಲ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಖ್ಯಾತ ವಿಜ್ಞಾನ ಪತ್ರಿಕೆ 'ಸೈನ್ಸ್' (Science) ಜರ್ನಲ್‌ನಲ್ಲಿ ಪ್ರಕಟವಾಗಿರುವ ಸುದೀರ್ಘ ಅಧ್ಯಯನ ವರದಿಯೊಂದು ಈ ಕಳವಳಕಾರಿ ವಿಷಯವನ್ನು ಹೊರಹಾಕಿದೆ. ಉಪಗ್ರಹಗಳಿಂದ ದೊರೆತಿದ್ದ ಡೇಟಾಗಿಂತ ಅತ್ಯಂತ ವೇಗವಾಗಿ ನಮ್ಮ ರಾತ್ರಿ ಆಕಾಶದ ನೈಸರ್ಗಿಕ ಕತ್ತಲೆ ಮರೆಯಾಗುತ್ತಿದೆ ಎಂದು ಈ ವರದಿ ಸ್ಪಷ್ಟಪಡಿಸಿದೆ.
ಪ್ರತಿ ವರ್ಷ ಶೇ. 9.6 ರಷ್ಟು ಹೆಚ್ಚುತ್ತಿದೆ 'ಸ್ಕೈಗ್ಲೋ' (Skyglow)
2011 ರಿಂದ 2022 ರ ನಡುವೆ ಜಗತ್ತಿನಾದ್ಯಂತ ಸಾವಿರಾರು ಸ್ವಯಂಸೇವಕರು ಭಾಗವಹಿಸಿದ ಬೃಹತ್ ಡೇಟಾ ಸಂಗ್ರಹಣೆ ಪ್ರಕ್ರಿಯೆಯಲ್ಲಿ ನಕ್ಷತ್ರಗಳು ಅತ್ಯಂತ ವೇಗವಾಗಿ ದೃಷ್ಟಿಹೀನವಾಗುತ್ತಿರುವುದು ಕಂಡುಬಂದಿದೆ. ಈ ಅಧ್ಯಯನದ ಪ್ರಕಾರ, ಜಾಗತಿಕವಾಗಿ ರಾತ್ರಿ ಆಕಾಶದ ಪ್ರಕಾಶಮಾನತೆಯು (ಸುತ್ತಲಿನ ಕೃತಕ ಬೆಳಕು) ಪ್ರತಿ ವರ್ಷ ಸರಾಸರಿ ಶೇ. 9.6 ರಷ್ಟು ಹೆಚ್ಚಾಗುತ್ತಿದೆ. ಈ ವೇಗದಲ್ಲಿ ಬೆಳಕಿನ ಮಾಲಿನ್ಯ ಮುಂದುವರಿದರೆ, ಕೇವಲ 8 ವರ್ಷಗಳಲ್ಲಿ ರಾತ್ರಿ ಆಕಾಶದ ಹಿನ್ನೆಲೆ ಬೆಳಕು ದುಪ್ಪಟ್ಟಾಗಲಿದೆ. ಒಂದು ಜಾಗದಲ್ಲಿ ಇಂದು 250 ನಕ್ಷತ್ರಗಳು ಬರಿಗಣ್ಣಿಗೆ ಸ್ಪಷ್ಟವಾಗಿ ಕಾಣಿಸುತ್ತಿದ್ದರೆ, ಅದೇ ಜಾಗದಲ್ಲಿ ಇಂದು ಜನಿಸುವ ಮಗು ತನ್ನ 18ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ವೇಳೆಗೆ ಕೇವಲ 100 ಕ್ಕಿಂತ ಕಡಿಮೆ ನಕ್ಷತ್ರಗಳು ಮಾತ್ರ ಕಾಣಸಿಗುತ್ತವೆ.
ಉತ್ತರ ಅಮೆರಿಕದಲ್ಲಿ ಈ ಮಾಲಿನ್ಯದ ಪ್ರಮಾಣ ಪ್ರತಿ ವರ್ಷ ಶೇ. 10.4 ರಷ್ಟು ಆತಂಕಕಾರಿಯಾಗಿ ಹೆಚ್ಚುತ್ತಿದ್ದರೆ, ಯುರೋಪ್‌ನಲ್ಲಿ ಶೇ. 6.5 ರಷ್ಟು ಏರಿಕೆಯಾಗುತ್ತಿದೆ. ನಗರ ಮೂಲಸೌಕರ್ಯ ಮತ್ತು ಆಧುನಿಕ ದೀಪಗಳ ಬಳಕೆಯು ನೈಸರ್ಗಿಕ ಸೌಂದರ್ಯವನ್ನು ಆಪೋಶನ ತೆಗೆದುಕೊಳ್ಳುತ್ತಿದೆ.
ನಕ್ಷತ್ರಗಳ ಕಣ್ಮರೆಯನ್ನು ಅಳೆದ 'ಸಿಟಿಜನ್ ಸೈನ್ಸ್' (Citizen Science)
ಆಕಾಶದಲ್ಲಿ ನಕ್ಷತ್ರಗಳು ಮರೆಯಾಗುತ್ತಿರುವುದನ್ನು ಅಳೆಯಲು ಸಂಶೋಧಕರು 'ಗ್ಲೋಬ್ ಅಟ್ ನೈಟ್' (Globe at Night) ಎಂಬ ಸಾರ್ವಜನಿಕ ಸಹಭಾಗಿತ್ವದ 'ಸಿಟಿಜನ್ ಸೈನ್ಸ್' ಯೋಜನೆಯನ್ನು ಬಳಸಿಕೊಂಡಿದ್ದಾರೆ. 2011 ರಿಂದ 2022 ರ ನಡುವೆ ವಿಶ್ವದಾದ್ಯಂತ ಭಾಗವಹಿಸಿದ 51,351 ಕ್ಕೂ ಹೆಚ್ಚು ಸ್ವಯಂಸೇವಕರು ಬರಿಗಣ್ಣಿನಿಂದ ವೀಕ್ಷಿಸಿದ ಅನುಭವವನ್ನು ದಾಖಲಿಸಿದ್ದಾರೆ.
ವಿವಿಧ ಹಂತದ ಬೆಳಕಿನ ಮಾಲಿನ್ಯವನ್ನು ತೋರಿಸುವ ನಕ್ಷತ್ರ ನಕ್ಷೆಗಳನ್ನು (Star maps) ನೀಡಿ, ತಮ್ಮ ಪ್ರದೇಶದ ಆಕಾಶಕ್ಕೆ ಹೋಲುವ ನಕ್ಷೆಯನ್ನು ಗುರುತಿಸಲು ಕೋರಲಾಗಿತ್ತು. ಸ್ವಯಂಚಾಲಿತ ಉಪಗ್ರಹಗಳಿಗಿಂತಲೂ ಮಾನವನ ಕಣ್ಣುಗಳು ಗ್ರಹಿಸುವ ಈ 'ನ್ಯೇಕಡ್ ಐ ಲಿಮಿಟಿಂಗ್ ಮ್ಯಾಗ್ನಿಟ್ಯೂಡ್' (ಬರಿಗಣ್ಣಿಗೆ ಕಾಣುವ ಕನಿಷ್ಠ ಬೆಳಕಿನ ಪ್ರಭಾವ) ಡೇಟಾ ವಾಸ್ತವ ಚಿತ್ರಣವನ್ನು ಹೊರಹಾಕಿದೆ.
ಉಪಗ್ರಹಗಳಿಗೂ ಸಿಗದ ಬೆಳಕಿನ ಮಾಲಿನ್ಯದ ಅಸಲಿ ಸತ್ಯ
ಕಳೆದ ಹಲವು ವರ್ಷಗಳಿಂದ ಉಪಗ್ರಹಗಳ ಮೂಲಕ ಬೆಳಕಿನ ಮಾಲಿನ್ಯವನ್ನು ಅಳೆಯಲಾಗುತ್ತಿತ್ತಾದರೂ, ಅವು ನಿಜವಾದ ಬೆದರಿಕೆಯನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿದ್ದವು. ಆಧುನಿಕ ಎಲ್‌ಇಡಿ ದೀಪಗಳಿಂದ ಹೊರಹೊಮ್ಮುವ ನೀಲಿ ಬೆಳಕಿನ ತೀವ್ರತೆಯನ್ನು ಗ್ರಹಿಸುವ ಸಾಮರ್ಥ್ಯ ಪ್ರಸ್ತುತ ಉಪಗ್ರಹಗಳಿಗಿಲ್ಲ. ಉಪಗ್ರಹಗಳು ನೇರವಾಗಿ ಮೇಲ್ಮುಖವಾಗಿ ಹೋಗುವ ಬೆಳಕನ್ನು ಮಾತ್ರ ಅಳೆಯುತ್ತವೆ. ಆದರೆ ರಸ್ತೆ ದೀಪಗಳು, ಅಂಗಡಿಗಳ ಪ್ರದರ್ಶನ ಮಳಿಗೆಗಳು, ಜಾಹೀರಾತು ಫ್ಲೆಕ್ಸ್ ಹಾಗೂ ಡಿಸೈನರ್ ಲೈಟ್‌ಗಳಿಂದ ಪಕ್ಕಕ್ಕೆ (ಸಮತಲವಾಗಿ) ಹರಡುವ ಬೆಳಕು ವಾತಾವರಣದಲ್ಲಿ ಹೆಚ್ಚು ಚದುರಿ ಕೃತಕ 'ಸ್ಕೈಗ್ಲೋ' ಸೃಷ್ಟಿಸುತ್ತದೆ. ಬರಿಗಣ್ಣಿಗೆ ಈ ಹಾನಿಕಾರಕ ಬೆಳಕು ಸ್ಪಷ್ಟವಾಗಿ ಗೋಚರಿಸುತ್ತದೆ.
ಸೂರ್ಯಾಸ್ತದ ನಂತರ ಚಂದ್ರ ಮತ್ತು ನಕ್ಷತ್ರಗಳ ಬೆಳಕಿನಲ್ಲಿ ಬಾಳುವುದು ಪ್ರಕೃತಿಯ ನಿಯಮವಾಗಿತ್ತು. ಆದರೆ ಪ್ರಸ್ತುತ ಕೃತಕ ಬೆಳಕಿನಿಂದಾಗಿ ಹಲವು ಪ್ರದೇಶಗಳಲ್ಲಿ 'ಸಂಪೂರ್ಣ ಕತ್ತಲೆ' ಎಂಬುವುದೇ ಇಲ್ಲವಾಗಿದೆ. ರಾತ್ರಿ ವೇಳೆಯಲ್ಲೇ ಬೇಟೆಯಾಡುವ ಶಿಕಾರಿ ಪ್ರಾಣಿಗಳಿಗೆ ಮತ್ತು ಪತಂಗಗಳಿಗೆ ಕೃತಕ ಬೆಳಕು ತೀವ್ರ ಗೊಂದಲ ಸೃಷ್ಟಿಸುತ್ತಿದೆ. ನಿರಂತರ ಕೃತಕ ಆಕಾಶದ ಪ್ರಭಾವದಿಂದ ನದಿ ಮತ್ತು ಸಮುದ್ರದಲ್ಲಿರುವ ಮೀನು ಹಾಗೂ ಇತರ ಜಲಚರ ಜೀವಗಳ ಶಾರೀರಿಕ ಪ್ರಕ್ರಿಯೆಗಳಲ್ಲಿ ಏರುಪೇರಾಗುತ್ತಿರುವುದು ಅಧ್ಯಯನದಿಂದ ಸಾಬೀತಾಗಿದೆ. ಸಾವಿರಾರು ವರ್ಷಗಳಿಂದ ಕಾವ್ಯ, ಕಲೆ, ಧರ್ಮ ಮತ್ತು ಖಗೋಳ ವಿಜ್ಞಾನಕ್ಕೆ ಸ್ಪೂರ್ತಿಯಾಗಿದ್ದ ಕ್ಷೀರಪಥ (Milky Way) ಹಾಗೂ ನಕ್ಷತ್ರಪುಂಜಗಳು ಭವಿಷ್ಯದ ಪೀಳಿಗೆಗೆ ಕೇವಲ ಪುಸ್ತಕದ ಚಿತ್ರಗಳಾಗಲಿವೆ.
ಕತ್ತಲೆಯ ಸೌಂದರ್ಯವನ್ನು ಉಳಿಸಿಕೊಳ್ಳುವುದು ಹೇಗೆ?
ಬೆಳಕಿನ ಮಾಲಿನ್ಯ ನಿವಾರಣೆಗೆ ಪರಿಹಾರಗಳು ಈಗಾಗಲೇ ಲಭ್ಯವಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಬೆಳಕು ಮೇಲಕ್ಕೆ ಅಥವಾ ಪಕ್ಕಕ್ಕೆ ಚದುರದಂತೆ ತಡೆಯುವ ಕವರ್ (Shield) ಇರುವ ದೀಪಗಳನ್ನು ಬಳಸುವುದು.ವಾತಾವರಣದಲ್ಲಿ ಕಡಿಮೆ ಚದುರುವ ಬೆಚ್ಚಗಿನ (ಹಳದಿ/ಕಿತ್ತಳೆ ಬಣ್ಣದ) ಬೆಳಕಿನ ದೀಪಗಳನ್ನು ಅಳವಡಿಸುವುದು. ಜಗತ್ತಿನ ಕೆಲವು ಕಡೆಗಳಲ್ಲಿ 'ಡಾರ್ಕ್ ಸ್ಕೈ' (ಕತ್ತಲೆಯ ಆಕಾಶ ರಕ್ಷಿತ ಪ್ರದೇಶ) ವಲಯಗಳನ್ನು ಘೋಷಿಸಿ, ಕೃತಕ ಬೆಳಕನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತಿದೆ.
ಉದ್ಯಮ ಹಾಗೂ ತಂತ್ರಜ್ಞಾನ ಬೆಳೆದಂತೆ ಎಲ್‌ಇಡಿ ಲೈಟ್‌ಗಳು ಅಗ್ಗವಾಗುತ್ತಿರುವುದರಿಂದ ಜನರು ಮತ್ತಷ್ಟು ಹೆಚ್ಚು ದೀಪಗಳನ್ನು ಹಾಕುತ್ತಿರುವುದು ಈ ಸಮಸ್ಯೆಯನ್ನು ದ್ವಿಗುಣಗೊಳಿಸಿದೆ. ಹೀಗಾಗಿ ನೈಸರ್ಗಿಕ ಕತ್ತಲೆ ಮತ್ತು ಆಕಾಶದ ನಕ್ಷತ್ರಗಳನ್ನು ಉಳಿಸಲು ಜಾಗತಿಕ ಮಟ್ಟದಲ್ಲಿ ಕಟ್ಟುನಿಟ್ಟಿನ ನೀತಿಗಳನ್ನು ಜಾರಿಗೆ ತರಬೇಕಿದೆ ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.


