ಭಾರತೀಯ ಬಾಹ್ಯಾಕಾಶ ಸ್ಟಾರ್ಟಪ್ 'ಸ್ಕೈರೂಟ್‌ ಏರೋಸ್ಪೇಸ್‌' ದೇಶದ ಮೊದಲ ಖಾಸಗಿ ರಾಕೆಟ್‌ 'ವಿಕ್ರಂ-1' ಅನ್ನು ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿದೆ. 'ಆಗಮನ' ಹೆಸರಿನ ಈ ಐತಿಹಾಸಿಕ ಯೋಜನೆಯು ಹಲವು ಉಪಗ್ರಹಗಳನ್ನು ಹೊತ್ತೊಯ್ಯಲಿದಿದೆ. ಇದು ದೇಶದ ಖಾಸಗಿ ಬಾಹ್ಯಾಕಾಶ ಕ್ಷೇತ್ರದ ಪಾಲಿಗೆ ಮಹತ್ವದ ಮೈಲಿಗಲ್ಲಾಗಿದೆ.

ನವದೆಹಲಿ: ಭಾರತೀಯ ಖಾಸಗಿ ಬಾಹ್ಯಾಕಾಶ ಟೆಕ್‌ ಸ್ಟಾರ್ಟಪ್‌ ‘ಸ್ಕೈರೂಟ್‌ ಏರೋಸ್ಪೇಸ್‌’ ಕಂಪನಿಯು ದೇಶೀಯವಾಗಿ ಅಭಿವೃದ್ಧಿಪಡಿಸಿದ ಮೊದಲ ರಾಕೆಟ್‌ ವಿಕ್ರಂ-1ರ ಪರೀಕ್ಷಾರ್ಥ ಪ್ರಯೋಗಕ್ಕೆ ನಭಕ್ಕೆ ಹಾರಿದೆ. ಇಂದು ಬೆಳಗ್ಗೆ 11.30ಕ್ಕೆ ಉಡಾವಣೆ ಸಮಯ ನಿಗಧಿಯಾಗಿತ್ತು, ತಾಂತ್ರಿಕ ಕಾರಣಗಳಿಂದ ಉಡಾವಣೆ ಮುಂದೂಡಿಕೆಯಾಗಿತ್ತು. ಶ್ರೀಹರಿಕೋಟಾದ ಸತೀಶ್‌ ಧವನ್‌ ಸ್ಪೇಸ್‌ ಸೆಂಟರ್‌ನಿಂದ ವಿಕ್ರಂ-1 ರಾಕೆಟ್‌ನ ಉಡ್ಡಯನ ನಡೆದಿದೆ. ಈ ಉಡ್ಡಯನ ಯೋಜನೆಗೆ ‘ಆಗಮನ’ ಎಂಬ ಹೆಸರಿಡಲಾಗಿದೆ. ದೇಶದ ಖಾಸಗಿ ಸಂಸ್ಥೆಯೊಂದು ಅಭಿವೃದ್ಧಿಪಡಿಸಿದ ರಾಕೆಟ್‌ ಮೂಲಕ ಪೇಲೋಡ್‌ ಅನ್ನು ಕಕ್ಷೆಗೆ ಕಳುಹಿಸುವ ಪ್ರಯೋಗ ಇದಾಗಿರಲಿದ್ದು, ದೇಶದ ಖಾಸಗಿ ಬಾಹ್ಯಾಕಾಶ ಕ್ಷೇತ್ರದ ಪಾಲಿಗೆ ಇದೊಂದು ಮಹತ್ವದ ಮೈಲಿಗಲ್ಲಾಗಿರಲಿದೆ.

ಹಲವು ತಂತ್ರಜ್ಞಾನಗಳ ಪ್ರದರ್ಶನ

ತನ್ನ ಮೊದಲ ಉಡ್ಡಯನ ವೇಳೆ ವಿಕ್ರಂ-1 ರಾಕೆಟ್‌ ಹಲವು ತಂತ್ರಜ್ಞಾನಗಳ ಪ್ರದರ್ಶನಕ್ಕೂ ವೇದಿಕೆ ಒದಗಿಸಲಿದೆ. ಭಾರತೀಯ ಭೂ ಪರಿವೀಕ್ಷಣಾ ನ್ಯಾನೋಸೆಟಲೈಟ್‌ ನಿರ್ಮಾತೃ ಗ್ರಹಾ ಸ್ಪೇಸ್‌, ಭಾರತೀಯ ಬಾಹ್ಯಾಕಾಶ ಕಸಗಳನ್ನು ತೆಗೆದುಹಾಕುವ ಕಂಪನಿ ಕಾಸ್ಮೋಸರ್ವ್‌, ಸ್ಪೇಸ್‌ ಬಿಡಿಭಾಗ ಅಭಿವೃದ್ಧಿಪಡಿಸುವ ಸಂಸ್ಥೆ ಡಿಕ್ಯುಬೆಡ್‌ ಮತ್ತು ಸ್ಕೈರೂಟ್‌ನ ಸ್ಕೋಪ್‌ ಉಪಗ್ರಹಗಳನ್ನು ನಭಕ್ಕೆ ಹೊತ್ತೊಯ್ಯಲಿದೆ. ಸ್ಕೋಪ್‌ ಉಪಗ್ರಹ ಮಹತ್ವದ ಉಡ್ಡಯನ ಡೇಟಾಗಳನ್ನು ಸಂಗ್ರಹಿಸಲಿದೆ ಎಂದು ಹೇಳಲಾಗಿದೆ.

ವಿಶೇಷ ಏನು?

ಭಾರತದ ಬಾಹ್ಯಾಕಾಶ ಯೋಜನೆಯ ಪಿತಾಹಮ ಡಾ.ವಿಕ್ರಂ ಸಾರಾಬಾಯ್‌ ಅವರ ಸ್ಮರಣೆಗಾಗಿ ವಿಕ್ರಂ-1 ಹೆಸರಿಡಲಾಗಿದೆ. ಹಲವು ಮಹಡಿಗಳ ಕಟ್ಟಡದಷ್ಟು ಎತ್ತರದ ಈ ರಾಕೆಟ್‌, 350 ಕಿ.ಗ್ರಾಂ. ತೂಕದ ಸಣ್ಣ ಉಪಗ್ರಹಗಳನ್ನು ಕೆಳ ಭೂಕಕ್ಷೆಗೆ ಕೂರಿಸುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಮೋದಿ ಕೈಬರಹದ ಪತ್ರವೂ ಬಾಹ್ಯಾಕಾಶಕ್ಕೆ

ಪ್ರಧಾನಿ ಮೋದಿ ಅವರ ಕೈಬರಹದಲ್ಲಿ ‘ವಂದೇ ಮಾತರಂ’ ಎಂದು ಬರೆದಿರುವ ಪೋಸ್ಟ್‌ಕಾರ್ಡ್‌ ಅನ್ನೂ ಸ್ಕೈರೂಟ್‌ ಏರೋಸ್ಪೇಸ್‌ನ ವಿಕ್ರಂ-1 ರಾಕೆಟ್‌ ನಭಕ್ಕೆ ಹೊತ್ತೊಯ್ಯಲಿದೆ. ಕಂಪನಿಯ ತಂಡ, ಹೂಡಿಕೆದಾರರು, ನೀತಿ ನಿರೂಪಕರು ಮತ್ತು ವಿಶ್ವಾದ್ಯಂತದಿಂದ ಬೆಂಬಲಿಗರ ಶುಭಾಶಯಗಳನ್ನೂ ಈ ರಾಕೆಟ್‌ ಹೊತ್ತೊಯ್ಯಲಿದೆ.

ಇದರ ಜತೆಗೆ ವಿಕ್ರಂ-1 ರಾಕೆಟ್‌ ಕಾಸ್ಮೋಸ್‌ ಡೈಮಂಡ್ಸ್‌ನ ವಜ್ರದ ಕಲಾಕೃತಿ ಕಾಸ್ಮಿಕ್‌ ಬ್ಲೂಮ್‌ ಮತ್ತು ಮೈಕ್ರೋ ಕಲಾಕೃತಿಯನ್ನು ಹೊತ್ತೊಯ್ಯಲಿದೆ.

ಇದು ನಮ್ಮ ಮೊದಲ ಪರೀಕ್ಷಾರ್ಥ ಉಡ್ಡಯನ. ಈ ಪ್ರಯೋಗದ ಮೂಲಕ ನಾವು ಮಹತ್ವದ ಡೇಟಾಗಳನ್ನು ಸಂಗ್ರಹಿಸಲಿದ್ದೇವೆ. ಇದು ಸ್ಕೈರೂಟ್‌ನ ಭವಿಷ್ಯದ ಉಡ್ಡಯನ ಆಕಾಂಕ್ಷೆಗಳಿಗೆ ಮೂಲ ಆಧಾರವಾಗಿರಲಿದೆ. ನಾವು ಇದಕ್ಕಾಗಿ ತೀವ್ರ ಉತ್ಸುಕರಾಗಿದ್ದೇವೆ ಎಂದು ಸ್ಕೈರೂಟ್‌ ಸಿಇಒ ಪವನ್‌ ಕುಮಾರ್ ಚಂದ್ನಾ ಎಂದು ಹೇಳಿದ್ದಾರೆ.

Scroll to load tweet…