ಮಾರ್ಚ್ 14 ರಂದು ಆಲ್ಬರ್ಟ್ ಐನ್‌ಸ್ಟೈನ್ ಅವರ 146ನೇ ಜನ್ಮದಿನ. ಅವರು ಜರ್ಮನಿಯ ಉಲ್ಮ್‌ನಲ್ಲಿ 1879 ರಲ್ಲಿ ಜನಿಸಿದರು. ಐನ್‌ಸ್ಟೈನ್ ಅವರ ಮರಣದ ನಂತರ, ಅವರ ಮೆದುಳನ್ನು ವೈದ್ಯರು ಅನುಮತಿಯಿಲ್ಲದೆ ತೆಗೆದು 240 ಭಾಗಗಳಾಗಿ ವಿಂಗಡಿಸಿದರು. ನಂತರ ಅದನ್ನು ಸಂಶೋಧನೆಗಾಗಿ ವಿತರಿಸಲಾಯಿತು. ಪ್ರಸ್ತುತ, ಐನ್‌ಸ್ಟೈನ್ ಅವರ ಮಿದುಳನ್ನು ಫಿಲಡೆಲ್ಫಿಯಾದ ಮಟರ್ ಮ್ಯೂಸಿಯಂನಲ್ಲಿ ಸಂರಕ್ಷಿಸಲಾಗಿದೆ. ಐನ್‌ಸ್ಟೈನ್ 300ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದಾರೆ.

ನಾಳೆ ಅಂದರೆ ಮಾರ್ಚ್ 14. ಜಗತ್ತು ಕಂಡ ಅಪರೂಪದ ವಿಜ್ಞಾನಿ, ಮಹಾನ್ ಭೌತಶಾಸ್ತ್ರಜ್ಞ ಆಲ್ಬರ್ಟ್ ಐನ್‌ಸ್ಟೈನ್ ಅವರು 146ನೇ ಜನ್ಮದಿನ. ಮಾರ್ಚ್ 14, 1879 ರಂದು ಜರ್ಮನಿಯ ವುರ್ಟೆಂಬರ್ಗ್‌ನಲ್ಲಿರುವ ಉಲ್ಮ್ ಎಂಬ ಸ್ಥಳದಲ್ಲಿ ಜನಿಸಿದ್ದ ಐನ್‌ಸ್ಟೈನ್‌ ಅವರು ವಿಜ್ಞಾನ ಲೋಕಕ್ಕೆ ಇನ್ನೂ ಸವಾಲು ಎನ್ನಿಸುವ ಅದ್ಭುತ ವಿಜ್ಞಾನಿಯಾಗಿದ್ದವರು. ಕೇವಲ ಐದು ವರ್ಷದವನಿರುವಾಗಲೇ ಮೊದಲ ಬಾರಿಗೆ ದಿಕ್ಸೂಚಿಯನ್ನು ನೋಡಿದಾಗ, ಅಚ್ಚರಿಯುಂಟಾಗಿ, ವಿಶ್ವದ ಅದೃಶ್ಯ ಶಕ್ತಿಗಳ ಬಗ್ಗೆ ಆಕರ್ಷಣೆಯನ್ನು ಹುಟ್ಟುಹಾಕಿದ್ದೇ ಮುಂದಿನ ದಿನಗಳಲ್ಲಿ ಮಹಾನ್‌ ವಿಜ್ಞಾನಿಯಾಗಲು ಕಾರಣವಾಗಿತ್ತು. ತಮ್ಮ ಗುಂಗುರು ಕೂದಲಿಗೆ ಹೆಸರುವಾಸಿಯಾಗಿದ್ದ ಐನ್‌ಸ್ಟೈನ್ ಅವರ ಬದುಕಿನ ಹಲವು ರೋಚಕ ಘಟನೆಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಇದೀಗ ಅವರ ನಿಧನದ ಬಳಿಕ ವೈದ್ಯರೊಬ್ಬರು ಮನೆಯವರಿಗೂ ತಿಳಿಸದೇ ಗುಟ್ಟಾಗಿ ಐನ್‌ಸ್ಟೀನ್‌ ಮಿದುಳನ್ನು ಕದ್ದು 240 ಭಾಗ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

 ಏಪ್ರಿಲ್ 18, 1955 ರಂದು, ಆಲ್ಬರ್ಟ್ ಐನ್‌ಸ್ಟೈನ್ ಗಂಭೀರ ಹೊಟ್ಟೆಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಮರಣದ ನಂತರ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು. ಅವರ ಸಾವಿಗೆ ಸ್ವಲ್ಪ ಮೊದಲು, ರಾತ್ರಿ 1:15 ಕ್ಕೆ, ಈ ಮಹಾನ್ ವಿಜ್ಞಾನಿ ಜರ್ಮನ್ ಭಾಷೆಯಲ್ಲಿ ಕೆಲವು ಮಾತುಗಳನ್ನಾಡಿದ್ದರು; ಆ ಸಮಯದಲ್ಲಿ ಪ್ರಿನ್ಸ್‌ಟನ್ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ನರ್ಸ್‌ಗೆ ಜರ್ಮನ್ ತಿಳಿದಿರಲಿಲ್ಲ. ಆದ್ದರಿಂದ ಈ ಮಹಾನ್ ವಿಜ್ಞಾನಿಯ ಕೊನೆಯ ಮಾತುಗಳು ಶಾಶ್ವತವಾಗಿ ಕಳೆದುಹೋದವು. ಅವರು ಏನು ಹೇಳಿದ್ದರು ಎನ್ನುವುದು ಇಂದಿಗೂ ನಿಗೂಢವಾಗಿಯೇ ಉಳಿದುಹೋಗಿವೆ. ಬಹುಶಃ ಅದು ಅರ್ಥವಾಗಿದ್ದರೆ, ಅವರೇನಾದರೂ ತಮ್ಮ ಸಂಶೋಧನೆಗಳ ಬಗ್ಗೆ ಮಾತನಾಡಿದ್ದರೆ, ವಿಜ್ಞಾನ ಲೋಕದಲ್ಲಿ ಆಗಲೇ ಮತ್ತಷ್ಟು ಕ್ರಾಂತಿಯಾಗುತ್ತಿತ್ತೋ ಎನ್ನುವ ಮಾತುಗಳೂ ಕೇಳಿಬರುತ್ತಿವೆ. 

ನಿಮ್ಮ ಕನಸಿನ ಮಗು ಹುಟ್ಟಿಸುವ ಹೊಸ ಆವಿಷ್ಕಾರವಿದು! ಮಕ್ಕಳಿಲ್ಲದವರಿಗೂ ಭರವಸೆ- ಏನಿದು ಸಂಶೋಧನೆ? ಮಾಹಿತಿ ಇಲ್ಲಿದೆ...

ಐನ್‌ಸ್ಟೈನ್‌ರ ಮರಣದ ನಂತರ, ಅವರನ್ನು ನ್ಯೂಜೆರ್ಸಿಯ ಟ್ರೆಂಟನ್‌ನಲ್ಲಿ ಸಮಾಧಿ ಮಾಡಲಾಯಿತು. ಆದರೆ ಅವರ ಮಗ ಹ್ಯಾನ್ಸ್ ಆಲ್ಬರ್ಟ್ ಎಲ್ಲೋ ಏನೋ ಸಮಸ್ಯೆಯಿದೆ ಎನ್ನಿಸತೊಡಗಿತು. ಮರುದಿನವೇ ಅವರು, ಶವಪೆಟ್ಟಿಗೆಯಲ್ಲಿ ಇರಿಸಲಾದ ಐನ್‌ಸ್ಟೈನ್ ಅವರ ದೇಹದಲ್ಲಿನ ಯಾವುದೋ ಭಾಗ ಇಲ್ಲ ಎಂಬುದನ್ನು ಅರಿತುಕೊಂಡರು. ಕೊನೆಗೆ ತಿಳಿದುಬಂದದ್ದು ಏನೆಂದರೆ,ಅವರ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯ ಡಾ. ಥಾಮಸ್ ಹಾರ್ವೆ, ಅವರ ಕುಟುಂಬದ ಅನುಮತಿಯಿಲ್ಲದೆ ಐನ್‌ಸ್ಟೈನ್ ಅವರ ಮೆದುಳನ್ನು ತೆಗೆದುಹಾಕಿದ್ದರು ಎನ್ನುವುದು! ಇದಾದ ಬಳಿಕ, ಈ ಬಗ್ಗೆ ಐನ್‌ಸ್ಟೈನ್ ಅವರ ಪುತ್ರನ ಜೊತೆ ಸಾಕಷ್ಟು ಚರ್ಚೆ ನಡೆಸಲಾಯಿತು. ಜಗತ್ತಿನ ಈ ಅತ್ಯಂತ ಪ್ರತಿಭಾನ್ವಿತ ವ್ಯಕ್ತಿಯ ಮಿದುಳನ್ನು ಅಧ್ಯಯನ ಮಾಡಿದರೆ ವಿಜ್ಞಾನ ಲೋಕದಲ್ಲಿ ಮತ್ತಷ್ಟು ಕ್ರಾಂತಿ ಉಂಟು ಮಾಡಬಹುದು ಎನ್ನಲಾಯಿತು. ಐನ್‌ಸ್ಟೈನ್ ಅವರು ತಮ್ಮ ಮರಣದ ನಂತರ ತನ್ನ ದೇಹದ ಯಾವುದೇ ರೀತಿಯ ಪರೀಕ್ಷೆಗೆ ಅವಕಾಶ ನೀಡಲು ನಿರಾಕರಿಸಿದ್ದರೂ, ಅವರ ಮಗ ಹ್ಯಾನ್ಸ್, ಕೊನೆಗೂ ಅನುಮತಿ ನೀಡಿದರು. ಕೊನೆಗೆ, ನಂತರ ಡಾ. ಹಾರ್ವೆ ಐನ್‌ಸ್ಟೈನ್‌ರ ಮೆದುಳಿನ ಡಜನ್‌ಗಟ್ಟಲೆ ಛಾಯಾಚಿತ್ರಗಳನ್ನು ತೆಗೆದರು. ಇದಾದ ನಂತರ, ಅವನ ಮೆದುಳನ್ನು 240 ತುಂಡುಗಳಾಗಿ ಕತ್ತರಿಸಿ ಸಂಶೋಧನೆಗಾಗಿ ಇತರ ಕೆಲವು ವಿಜ್ಞಾನಿಗಳಿಗೆ ಕಳುಹಿಸಲಾಯಿತು. ಡಾ. ಹಾರ್ವೆ ಅವರು ಐನ್‌ಸ್ಟೈನ್‌ರ ಮೆದುಳಿನ ಒಂದು ಭಾಗವನ್ನು ಸೈಡರ್ ಬಾಕ್ಸ್‌ನಲ್ಲಿ ಸಂಶೋಧನೆಗಾಗಿ ಇತರ ವಿಜ್ಞಾನಿಗಳಿಗೆ ಕಳುಹಿಸಿದ್ದರು ಎಂದು ಹೇಳಲಾಗುತ್ತದೆ. 

1985 ರಲ್ಲಿ, ಡಾ. ಹಾರ್ವೆ ಐನ್‌ಸ್ಟೈನ್‌ರ ಮೆದುಳಿನ ಕುರಿತು ಒಂದು ಪ್ರಬಂಧವನ್ನು ಪ್ರಕಟಿಸಿದರು. ಇದರಲ್ಲಿ ಅವರು ಈ ಮೆದುಳು ಸರಾಸರಿ ಮೆದುಳಿಗಿಂತ ಭಿನ್ನವಾಗಿ ಕಾಣುತ್ತದೆ ಎಂದು ಬರೆದಿದ್ದಾರೆ. ಅದಕ್ಕಾಗಿಯೇ ಅದು ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ ಎಂದಿದ್ದರು. 90 ರ ದಶಕದಲ್ಲಿ, ಡಾ. ಹಾರ್ವೆ ಐನ್‌ಸ್ಟೈನ್‌ರ ಮೆದುಳಿನ ಒಂದು ಭಾಗವನ್ನು ತಮ್ಮ ಮೊಮ್ಮಗಳಿಗೆ ಉಡುಗೊರೆಯಾಗಿ ನೀಡಲು ಪ್ರಯತ್ನಿಸಿದರು, ಆದರೆ ಅವಳು ಅದನ್ನು ಸ್ವೀಕರಿಸಲು ನಿರಾಕರಿಸಿದಳು ಎಂದೂ ಹೇಳಲಾಗುತ್ತಿದೆ. ಬಳಿಕ ಈ ಎಲ್ಲಾ ಅಧ್ಯಯನಗಳ ಒಟ್ಟುಗೂಡಿಸಿ ತನ್ನದೇ ಒಂದು ಸಿದ್ಧಾಂತ ರಚಿಸಿದ ಆದರೆ ಈ ಸಿದ್ಧಾಂತವನ್ನು ತಜ್ಞರು ಅಲ್ಲಗೆಳೆದರು. ಇದು ಅರ್ಥಹೀನ ಅಧ್ಯಯನ ಎಂದು ಕರೆದರು, ಅಲ್ಲದೆ ವೈದ್ಯ ಹಾರ್ವೆ ವಿರುದ್ಧ ಭಾರೀ ಟೀಕೆಗಳು ಕೇಳಿಬಂದವು. ಅಲ್ಲದೆ ಐನ್‌ಸ್ಟೈನ್ ಮಿದುಳು ವಾಪಾಸು ಮಾಡುವಂತೆ ಅವರ ಮೇಲೆ ಒತ್ತಡ ಹೇರಲಾಗಿತ್ತು. ಹೀಗಾಗಿ 2008ರಲ್ಲಿ ಅವರು ಐನ್‌ಸ್ಟೈನ್ ಕುಟುಂಬಕ್ಕೆ ಮೆದುಳನ್ನು ವಾಪಾಸು ನೀಡಿದರು. ಪ್ರಸ್ತುತ, ಐನ್‌ಸ್ಟೈನ್‌ ಅವರ ಮಿದುಳನ್ನು ಫಿಲಡೆಲ್ಫಿಯಾದ ಮಟರ್ ಮ್ಯೂಸಿಯಂನಲ್ಲಿ ಇರಿಸಲಾಗಿದೆ. ಇದನ್ನು ವಿಶೇಷ ಜಾರ್‌ನಲ್ಲಿ ರಾಸಾಯನಿಕಗಳೊಂದಿಗೆ ಸಂರಕ್ಷಿಸಲಾಗಿದೆ.

ನಿಜಕ್ಕೂ ಏಲಿಯನ್‌ಗಳು ಇವೆಯಾ? ಇಸ್ರೋ ಅಧ್ಯಕ್ಷ ಡಾ.ಸೋಮನಾಥ್‌ರಿಂದ ಅಚ್ಚರಿಯ ವಿಷಯ ರಿವೀಲ್!

ಐನ್‌ಸ್ಟೈನ್ ಒಟ್ಟಾರೆ ತಮ್ಮ ಜೀವಿತಾವಧಿಯಲ್ಲಿ ಐನ್‌ಸ್ಟೈನ್‌ 300ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಮತ್ತು ಇತರ 150 ಕ್ಕೂ ಹೆಚ್ಚು ಪ್ರಬಂಧಗಳನ್ನು ಬರೆದಿದ್ದಾರೆ. ಭಾರತದ ಸತ್ಯೇಂದ್ರನಾಥ್ ಬೋಸ್ ಜೊತೆಗೂಡಿ ನೀಡಿದ 'ಬೋಸ್-ಐನ್‌ಸ್ಟೈನ್‌ ಸ್ಟಾಟಿಸ್ಟಿಕ್ಸ್' ಸೇರಿದಂತೆ 'ಐನ್‌ಸ್ಟೈನ್‌ ರೆಫ್ರಿಜರೇಟರ್', 'ಐನ್‌ಸ್ಟೈನ್‌-ಕಾರ್ಟನ್ ಸಿದ್ಧಾಂತ', 'ಐನ್‌ಸ್ಟೈನ್‌-ಇನ್ಫೆಲ್ಡ್-ಹಾಫ್ಮನ್ ಇಕ್ವೇಷನ್ಸ್', 'ಐನ್‌ಸ್ಟೈನ್‌-ಪೊಡೊಲೊಸ್ಕಿ-ರೋಸೆನ್ ಪ್ಯಾರಾಡಾಕ್ಸ್' ಇವುಗಳಲ್ಲಿ ಪ್ರಮುಖವಾದವು.