ಯಶ್ ನಟನೆಯ 'ಟಾಕ್ಸಿಕ್‌' ಚಿತ್ರದ ಟೀಸರ್ ಭಾರಿ ಹಿಟ್ ಆಗಿದ್ದು, ಪರ-ವಿರೋಧ ಚರ್ಚೆ ಹುಟ್ಟುಹಾಕಿದೆ. ಜಾಗತಿಕ ಮಟ್ಟವನ್ನು ಗುರಿಯಾಗಿಸಿಕೊಂಡು ಇಂಗ್ಲಿಷ್‌ನಲ್ಲಿ ಮೂಡಿಬಂದಿರೋದು ಗಮನ ಸೆಳೆದಿದೆ.

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್‌ ನಟನೆಯ ‘ಟಾಕ್ಸಿಕ್‌’ ಚಿತ್ರದ ಯಶ್‌ ಪಾತ್ರದ ಅದ್ದೂರಿ ಟೀಸರ್‌ ಪರ, ವಿರೋಧಗಳ ನಡುವೆ ಭಾರಿ ಸೂಪರ್‌ಹಿಟ್‌ ಆಗಿದೆ. ಯಶ್‌ ಹುಟ್ಟುಹಬ್ಬದ ಅಂಗವಾಗಿ ಜ.8ಕ್ಕೆ ಬಿಡುಗಡೆ ಆಗಿರುವ ‘ಟಾಕ್ಸಿಕ್‌’ ಟೀಸರ್‌ ಹಲವು ಕಾರಣಕ್ಕೆ ಗಮನ ಸೆಳೆದಿದೆ. ಜೊತೆಗೆ ರಾಕಿಭಾಯ್‌ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ.

1. ಮೊದಲ ಬಾರಿಗೆ ಬೋಲ್ಡ್ ಹೆಜ್ಜೆ ಇಟ್ಟ ಯಶ್

ಬಹುತೇಕರಿಗೆ ಹುಬ್ಬೇರಿಸುವಂತೆ ಮಾಡಿರುವುದು ಕಂಟೆಂಟ್. ಇದುವರೆಗೆ ಕುಟುಂಬ, ಮಕ್ಕಳ ಕಡೆಗೆ ಗಮನ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದ ಯಶ್‌ ಯಾವುದೇ ಅಹಿತಕರ ದೃಶ್ಯಗಳು ಇಲ್ಲದಂತೆ ನೋಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಅವರು ಬೋಲ್ಡ್‌ ಹೆಜ್ಜೆ ಇಟ್ಟಿದ್ದಾರೆ. ಪ್ಲೇಬಾಯ್‌ ರೀತಿಯ ಪಾತ್ರ ನಿರ್ವಹಣೆ ಮಾಡಿದ್ದಾರೆ. ಹಾಗಾಗಿ ಪರ, ವಿರೋಧ ಎರಡೂ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ ಯಶ್ ಮೊದಲೇ ಇದು ದೊಡ್ಡವರ ಫೇರಿಟೇಲ್ ಎಂದು ಹೇಳಿಕೊಂಡಿದ್ದಾರೆ.

2. ಇಂಗ್ಲಿಷ್‌ ಟೀಸರ್‌- ಜಾಗತಿಕ ಮಟ್ಟಕ್ಕೆ ಗುರಿ

ಪೂರ್ತಿ ಇಂಗ್ಲಿಷ್‌ನಲ್ಲಿಯೇ ಟೀಸರ್‌ ಮೂಡಿಬಂದಿದೆ. ಡ್ಯಾಡಿ ಈಸ್‌ ಹೋಮ್‌ ಎಂಬ ಡೈಲಾಗ್‌ ವೈರಲ್ ಆಗಿದೆ. ಈ ಮೂಲಕ ಅವರು ಜಾಗತಿಕ ಮಟ್ಟಕ್ಕೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಕೆಜಿಎಫ್ 2 ಚಿತ್ರದ ಟೀಸರನ್ನೂ ಸಂಪೂರ್ಣವಾಗಿ ಇಂಗ್ಲಿಷಿನಲ್ಲಿಯೇ ಇಟ್ಟಿದ್ದರು. ಜೊತೆಗೆ ಇಲ್ಲಿ ಹಾಲಿವುಡ್‌ ಮಟ್ಟದ ದೃಶ್ಯ ಗುಣಮಟ್ಟ ಇರುವುದೂ ಪ್ಲಸ್ ಆಗಿದೆ. ರವಿ ಬಸ್ರೂರು ಹಿನ್ನೆಲೆ ಸಂಗೀತ ಮತ್ತೊಂದು ಹೈಲೈಟ್‌.

3. ಸಂದೀಪ್ ವಂಗಾ, ಕಿಚ್ಚ ಸುದೀಪ್ ಮೆಚ್ಚುಗೆ

ಯಶ್‌ ಅವರ ಹುಟ್ಟುಹಬ್ಬ, ಅದ್ದೂರಿಯಾಗಿ ಬಿಡುಗಡೆಯಾಗಿರುವ ‘ಟಾಕ್ಸಿಕ್‌’ ಟೀಸರ್‌ ಎಲ್ಲವೂ ಸೇರಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ‘ಅನಿಮಲ್‌’ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, ‘ಟಾಕ್ಸಿಕ್‌ ಟೀಸರ್‌ ನನ್ನನ್ನು ದಂಗುಬಡಿಸಿದೆ’ ಎಂದು ಹೇಳಿದ್ದಾರೆ. ಸಂದೀಪ್‌ ರೆಡ್ಡಿ ಟಾಕ್ಸಿಕ್‌ ಪಾತ್ರಗಳನ್ನು ಕಟ್ಟುವುದರಲ್ಲಿ ಸಿದ್ಧಹಸ್ತರು. ಅವರಿಂದಲೇ ಯಶ್‌ ಕೊಂಡಾಡಲ್ಪಟ್ಟಿದ್ದಾರೆ. ಇತ್ತ ಕಿಚ್ಚ ಸುದೀಪ್‌ ಕೂಡ ಮೆಚ್ಚಿಕೊಂಡು ಟ್ವೀಟ್‌ ಮಾಡಿದ್ದು, ‘ಅಲೆಗಳ ವಿರುದ್ಧ ಸಾಗಲು ಯಾವಾಗಲೂ ಹೆಚ್ಚು ಸಮಯ ಬೇಕಾಗುತ್ತದೆ. ಈ ಹೊಸ ಹೆಜ್ಜೆ ನಿಮ್ಮನ್ನು ಅದೃಷ್ಟದ ಹತ್ತಿರಕ್ಕೆ ಕೊಂಡೊಯ್ಯಲಿ. ನೀವು ನಿಮ್ಮ ಗುರಿಯನ್ನು ನಿರ್ಧರಿಸಿದ್ದೀರಿ. ಚಿಯರ್ಸ್‌’ ಎಂದು ಮೆಚ್ಚಿ ಬರೆದಿದ್ದಾರೆ.

ದಾಖಲೆ ವೀಕ್ಷಣೆ

ರಾಯ ಪಾತ್ರದಲ್ಲಿ ಯಶ್‌ ಕಾಣಿಸಿಕೊಂಡಿರುವ ‘ಟಾಕ್ಸಿಕ್‌’ ಟೀಸರ್‌ ಕೆವಿಎನ್‌ ಪ್ರೊಡಕ್ಷನ್‌ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದ್ದು, ಕೋಟಿ ವೀಕ್ಷಣೆ ಕಂಡಿದೆ. ಇಂಗ್ಲಿಷ್‌ನಲ್ಲಿ ಬಿಡುಗಡೆ ಆಗಿರುವುದರಿಂದ ಎಲ್ಲಾ ಭಾಷೆಯ ವೀಕ್ಷಕರನ್ನೂ ಈ ಟೀಸರ್‌ ತಲುಪಿದೆ. ನಿರೀಕ್ಷೆ ಜಾಸ್ತಿ ಇದ್ದಿದ್ದರಿಂದ ವೀಕ್ಷಣೆಯೂ ಜಾಸ್ತಿಯೇ ಇದೆ.

ಇಲ್ಲೂ ಗ್ಯಾಂಗ್‌ಸ್ಟರ್‌

ಟೀಸರ್‌ನಲ್ಲಿ ಯಶ್‌ ಗನ್‌ ಹಿಡಿದುಕೊಂಡು ಕಾಣಿಸಿಕೊಂಡಿದ್ದು, ಇಲ್ಲಿಯೂ ಗ್ಯಾಂಗ್‌ಸ್ಟರ್‌ ಪಾತ್ರ ನಿರ್ವಹಿಸುತ್ತಿರುವ ಸಾಧ್ಯತೆ ಇದೆ. ಆದರೆ ಈ ಸಲ ಹಾಲಿವುಡ್‌ ಶೈಲಿಯ ಕಾಸ್ಟ್ಯೂಮ್‌ ಬಂದಿದೆ. ಇಂಟರ್‌ನ್ಯಾಷನಲ್‌ ಗ್ಯಾಂಗ್‌ಸ್ಟರ್‌ ಆಗಿರಬಹುದಾಗಿದೆ.

ಟೀಸರ್‌ ಪ್ಲಸ್ ಏನು?

1. ಅದ್ದೂರಿತನ. ದೃಶ್ಯ ಗುಣಮಟ್ಟ. ಹಾಲಿವುಡ್‌ಗೆ ಗುರಿ ಇಟ್ಟಿರುವ ಸೂಚನೆ.

2. ಯಶ್ ಇದುವರೆಗಿಂತ ಭಿನ್ನ ಹೆಜ್ಜೆ ಇಟ್ಟಿರುವ ರೀತಿ. ವಿಶ್ವ ಮಟ್ಟಕ್ಕೆ ಹೋಗುವ ಲಕ್ಷಣ.

3. ಯಶ್‌ ಮೇಲಿರುವ ನಿರೀಕ್ಷೆ. ಈ ನಿರೀಕ್ಷೆಯಿಂದಲೇ ಭಾರಿ ವೀಕ್ಷಣೆ.

4. ಎಲ್ಲಾ ಭಾಷೆಯ ವೀಕ್ಷಕರಿಂದಲೂ ವೀಕ್ಷಣೆ. ಕಂಟೆಂಟ್‌ ಕುರಿತು ಚರ್ಚೆ. ವೈರಲ್‌ ಆದ ಟೀಸರ್‌.

ಇದನ್ನೂ ಓದಿ: ಅಲ್ಲಿ ಕಾಮಿಡಿ, ಇಲ್ಲಿ ಫುಲ್ ಧಗ ಧಗ: ಅಮಿರ್ ಖಾನ್ ಚಿತ್ರದ ದೃಶ್ಯ ನೆನಪಿಸಿದ ಟಾಕ್ಸಿಕ್

ಟೀಸರ್ ಮೈನಸ್‌ ಏನು?

1. ಮಹಿಳೆಯರ ಕಡೆಗಣನೆ ಮಾಡುತ್ತಾರೆ ಎಂದು ಈ ಹಿಂದೆ ಮಾತನಾಡಿದ್ದ ನಿರ್ದೇಶಕಿ ಗೀತು ಮೋಹನ್‌ದಾಸ್‌ ಈ ಬಾರಿ ಹಸಿಬಿಸಿ ದೃಶ್ಯ ನಿರ್ದೇಶಿಸಿರುವುದಕ್ಕೆ ಖಂಡನೆ.

2. ಕನ್ನಡ ಭಾಷೆ ಬಳಕೆಯಾಗದೇ ಇರುವುದರಿಂದ ಇದು ಕನ್ನಡ ಸಿನಿಮಾ ಅಲ್ಲ, ಕನ್ನಡ ನಟನ ಸಿನಿಮಾ ಎಂದು ಟೀಕೆ.

ಇದನ್ನೂ ಓದಿ: ಹುಡುಗರ ಹೃದಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಟಾಕ್ಸಿಕ್ ಗ್ಲಾಮರ್ ಗೊಂಬೆ ಯಾರು?