"ದೊಡ್ಡದಾಗಿ ಕನಸು ಕಾಣುವುದನ್ನು ನಮಗೆ ಕಲಿಸಿಕೊಟ್ಟ ಗುರು' ಇವರು. ಆ ಕನಸು ಅದೆಷ್ಟು ದೊಡ್ಡದಾಗಿರಬೇಕೆಂದರೆ, ಅದನ್ನು ನನಸು ಮಾಡಲು ಇಡೀ ಬ್ರಹ್ಮಾಂಡವೇ ಒಂದಾಗಬೇಕು. ಅಂತಹ ದೊಡ್ಡ ಗುರಿ ಇಟ್ಟುಕೊಳ್ಳುವುದನ್ನು ರಾಕಿ ಭಾಯ್ ನಮಗೆ ತೋರಿಸಿಕೊಟ್ಟಿದ್ದಾರೆ" ಎಂದು ಬರೆದಿದ್ದಾರೆ ಕಾರ್ತಿಕ್ ಮಹೇಶ್.
ಯಶ್ ಬಗ್ಗೆ ‘ಬಿಗ್ ಬಾಸ್ ವಿನ್ನರ್’ ಕಾರ್ತಿಕ್ ಮಹೇಶ್ ಪೋಸ್ಟ್!
ಬೆಂಗಳೂರು: ಕನ್ನಡ ಚಿತ್ರರಂಗದ 'ಕಿಂಗ್', ಜಾಗತಿಕ ಮಟ್ಟದಲ್ಲಿ ಸ್ಯಾಂಡಲ್‌ವುಡ್ ಕೀರ್ತಿ ಪತಾಕೆ ಹಾರಿಸಿದ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರಿಗೆ ಇಂದು (08 January) ಹುಟ್ಟುಹಬ್ಬದ ಸಂಭ್ರಮ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಮತ್ತು ಗಣ್ಯರು ರಾಕಿ ಭಾಯ್‌ಗೆ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ. ಇಂದು ನಟ ಯಶ್ ಅವರು ತಮ್ಮ ಫ್ಯಾನ್ಸ್ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಬದಲು ತಮ್ಮ ನಟನೆಯ ಮುಂಬರುವ 'ಟಾಕ್ಸಿಕ್' ಸಿನಿಮಾದ ಟ್ರೈಲರ್ ಟೀಸರ್‌ಅನ್ನು ಲಾಂಚ್ ಮಾಡುವಮೂಲಕ ಗಿಫ್ಟ್ ನೀಡಿದ್ದಾರೆ.
ಈ ನಡುವೆ ಬಿಗ್ ಬಾಸ್ ಕನ್ನಡ 10 ವಿನ್ನರ್ ಹಾಗೂ ನಟ ಕಾರ್ತಿಕ್ ಮಹೇಶ್ ಅವರು ನಟ ಯಶ್ ಬಗ್ಗೆ, ರಾಕಿಂಗ್ ಸ್ಟಾರ್ ಹುಟ್ಟುಹಬ್ಬದ ದಿನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಒಂದು ಕಾರ್ತಿಕ್ ಮಹೇಶ್ ಅವರು 'ರಾಕಿ ಭಾಯ್ ಅಂದ್ರೆ ಸ್ಫೂರ್ತಿಯ ಸೆಲೆ' ಎಂದಿದ್ದಾರೆ.
ಇದು ಕೇವಲ ಶುಭಾಶಯವಲ್ಲ, ಅಭಿಮಾನದ ಪೋಸ್ಟ್!
ಬಿಗ್ ಬಾಸ್ ಕನ್ನಡ ಸೀಸನ್ 10ರ ವಿಜೇತ, ನಟ ಕಾರ್ತಿಕ್ ಮಹೇಶ್ ಅವರು ಯಶ್ ಅವರಿಗೆ ಸಲ್ಲಿಸಿರುವ ಗೌರವದ ನುಡಿಗಳು ಈಗ ಎಲ್ಲೆಡೆ ವೈರಲ್ ಆಗುತ್ತಿವೆ. ಯಶ್ ಅವರ ವ್ಯಕ್ತಿತ್ವ ಮತ್ತು ಅವರ ಸಾಧನೆಯ ಹಾದಿಯನ್ನು ಕೊಂಡಾಡಿರುವ ಕಾರ್ತಿಕ್ ಮಹೇಶ್, ಪ್ರತಿಯೊಬ್ಬ ಕನಸುಗಾರನಿಗೂ ಯಶ್ ಹೇಗೆ ಸ್ಫೂರ್ತಿ ಎಂಬುದನ್ನು ತಮ್ಮ ಪೋಸ್ಟ್‌ನಲ್ಲಿ ಅದ್ಭುತವಾಗಿ ವಿವರಿಸಿದ್ದಾರೆ.
ಕಾರ್ತಿಕ್ ಮಹೇಶ್ ಅವರ ಪೋಸ್ಟ್‌ನಲ್ಲಿ ಏನಿದೆ?
ಯಶ್ ಅವರ ಕೆಚ್ಚೆದೆಯ ಪಯಣದ ಬಗ್ಗೆ ಭಾವುಕರಾಗಿ ಬರೆದುಕೊಂಡಿರುವ ಕಾರ್ತಿಕ್, "ದೊಡ್ಡದಾಗಿ ಕನಸು ಕಾಣುವುದನ್ನು ನಮಗೆ ಕಲಿಸಿಕೊಟ್ಟ ಗುರು' ಇವರು. ಆ ಕನಸು ಅದೆಷ್ಟು ದೊಡ್ಡದಾಗಿರಬೇಕೆಂದರೆ, ಅದನ್ನು ನನಸು ಮಾಡಲು ಇಡೀ ಬ್ರಹ್ಮಾಂಡವೇ ಒಂದಾಗಬೇಕು. ಅಂತಹ ದೊಡ್ಡ ಗುರಿ ಇಟ್ಟುಕೊಳ್ಳುವುದನ್ನು ರಾಕಿ ಭಾಯ್ ನಮಗೆ ತೋರಿಸಿಕೊಟ್ಟಿದ್ದಾರೆ" ಎಂದು ಬರೆದಿದ್ದಾರೆ.
ಮುಂದುವರಿದು, "ಇಡೀ ರಾಜ್ಯವೇ ಹೆಮ್ಮೆಪಡುವಂತೆ ಮಾಡಿದ ವ್ಯಕ್ತಿ. ಅವರು ಎಂದಿಗೂ ವಿಶ್ರಮಿಸದ ಛಲಗಾರ. ಇಡೀ ವಿಶ್ವವನ್ನೇ ಗೆಲ್ಲುವ ಹಂಬಲದೊಂದಿಗೆ, ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ಸಾಗುತ್ತಿರುವ ವೀರ. ಆತ್ಮವಿಶ್ವಾಸ ಎನ್ನುವುದು ಎಲ್ಲದಕ್ಕಿಂತ ಮಿಗಿಲು ಎಂಬುದನ್ನು ಇಡೀ ಜಗತ್ತಿಗೆ ಸಾಬೀತುಪಡಿಸಿದವರು ಯಶ್. ಇಡೀ ಜಗತ್ತು ಅವರಿಗೆ ಚಪ್ಪಾಳೆ ತಟ್ಟಿ ಗೌರವ ನೀಡುವ ಮೊದಲೇ, ಅವರಿಗೆ ತಮ್ಮ ಬೆಲೆ ಏನೆಂದು ಚೆನ್ನಾಗಿ ತಿಳಿದಿತ್ತು" ಎಂದು ಯಶ್ ಅವರ ಆತ್ಮವಿಶ್ವಾಸವನ್ನು ಕೊಂಡಾಡಿದ್ದಾರೆ.
ಕನಸು ಕಂಡರು.. ಸಾಧಿಸಿ ತೋರಿಸಿದರು!
ಯಶ್ ಅವರ ಯಶಸ್ಸಿನ ಮಂತ್ರವನ್ನು ಕಾರ್ತಿಕ್ ಮಹೇಶ್ ಮಾರ್ಮಿಕವಾಗಿ ಹೀಗೆ ಹೇಳಿದ್ದಾರೆ: "ಯಾವುದನ್ನು ಅವರು ಕನಸು ಕಂಡರೋ, ಅದಕ್ಕಾಗಿ ಅಹೋರಾತ್ರಿ ಶ್ರಮಿಸಿದರು. ಇಂದು ಆ ಯಶಸ್ಸನ್ನು ಸಾಧಿಸಿ, ಆ ಸಾಮ್ರಾಜ್ಯಕ್ಕೆ ಒಡೆಯರಾಗಿದ್ದಾರೆ. ಇವರು ನಿಜವಾದ ಸ್ಫೂರ್ತಿ. ಹುಟ್ಟುಹಬ್ಬದ ಶುಭಾಶಯಗಳು ರಾಕಿ ಭಾಯ್" ಎಂದು ಗೌರವ ಪೂರ್ವಕವಾಗಿ ಹಾರೈಸಿದ್ದಾರೆ. ಜೊತೆಗೆ, 2015ರಲ್ಲಿ ತಾವು ಯಶ್ ಅವರ ಜೊತೆಯಲ್ಲಿ ನಿಂತು ತೆಗೆಸಿಕೊಂಡಿರುವ ಫೊಟೋವೊಂದನ್ನು ಪೋಸ್ಟ್ ಮಾಡಿದ್ದಾರೆ.
ಕಾರ್ತಿಕ್ ಮಹೇಶ್ ಅವರ ಈ ಪೋಸ್ಟ್ ಈಗ ಯಶ್ ಅಭಿಮಾನಿಗಳ ಮನ ಗೆದ್ದಿದೆ. ಬಸ್ ಕಂಡಕ್ಟರ್ ಮಗನಾಗಿ ಬಂದು, ಇಂದು ದೇಶವೇ ಮೆಚ್ಚುವ ಸೂಪರ್ ಸ್ಟಾರ್ ಆಗಿ ಬೆಳೆದಿರುವ ಯಶ್ ಅವರ ಜೀವನವೇ ಒಂದು ರೋಚಕ ಸಿನಿಮಾ. ಕಾರ್ತಿಕ್ ಮಹೇಶ್ ಅವರ ಈ ಮಾತುಗಳು ಯಶ್ ಅವರ ಕೋಟ್ಯಂತರ ಅಭಿಮಾನಿಗಳ ಮನದಾಳದ ಧ್ವನಿಯಂತಿದೆ. ಒಟ್ಟಾರೆಯಾಗಿ, ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದ ಈ ಸುದಿನ, ಅವರ ಸಾಧನೆಯ ಗರಿಮೆ ಮತ್ತಷ್ಟು ಎತ್ತರಕ್ಕೆ ಏರಲಿ ಕಾರ್ತಿಕ್ ಮಹೇಶ್ ಸೇರಿದಂತೆ ಕನ್ನಡಿಗರೆಲ್ಲರ ಆಶಯವೂ ಆಗಿದೆ.



