Ramayana: 'ರಾಮಾಯಣ' ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ನಟಿಸಿರುವ ಯಶ್ ಅಭಿನಯವನ್ನು ಪ್ರಪಂಚವೇ ಮೆಚ್ಚಿಕೊಂಡಿದೆ. ಆದರೆ ಅಪ್ಪನ ಈ ವಿಲನ್ ಲುಕ್ ನೋಡಿ ಯಶ್ ಮಗ ಶಾಕ್ ಆಗಿದ್ದು, 'ನೀವು ಕೆಟ್ಟ ವ್ಯಕ್ತಿ' ಎಂದು ಹೇಳಿದ್ದಾರೆ. ಇದಕ್ಕೆ ಯಶ್ ರಿಯಾಕ್ಷನ್ ಏನಾಗಿತ್ತು? ಇಲ್ಲಿದೆ ಸಂಪೂರ್ಣ ಮಾಹಿತಿ.

ಅಪ್ಪನಿಗೆ ನೀವು ಕೆಟ್ಟವರು… ಅಂದಿದ್ದೇಕೆ ಯಶ್ ಪುತ್ರ

ನಟ ಯಶ್, ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅಭಿನಯದ 'ರಾಮಾಯಣ' ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಯಿದೆ. 2026ರ ದೀಪಾವಳಿ ಸಂದರ್ಭದಲ್ಲಿ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಮುಂಗಡ ಟಿಕೆಟ್ ಬುಕ್ಕಿಂಗ್ ಕೂಡ ನಡೆಯುತ್ತಿದೆ. ಈ ಚಿತ್ರದಲ್ಲಿ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ರಾವಣನ ಅಬ್ಬರ ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಆದರೆ ರಾವಣನ ಪಾತ್ರದಲ್ಲಿ ತಂದೆಯನ್ನು ನೋಡಿ ಯಶ್ ಪುತ್ರ ಯಥರ್ವ್ ರಿಯಾಕ್ಷನ್ ಮಾತ್ರ ಬೇರೆಯೇ ಆಗಿತ್ತು. ಈ ಕುರಿತು ಸಂದರ್ಶವೊಂದರಲ್ಲಿ, ಯಶ್ ತಿಳಿಸಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ರಾವಣನಾಗಿ ಅಪ್ಪನನ್ನು ಕಂಡು ಶಾಕ್ ಆದ ಮಗ!

‘'ರಾಮಾಯಣ' ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ತಮ್ಮನ್ನು ಕಂಡ ಮಗನ ಪ್ರತಿಕ್ರಿಯೆ ಬಗ್ಗೆ ಯಶ್ ಮಾತನಾಡಿದ್ದಾರೆ. ತೆಲುಗಿನಲ್ಲಿ ಸುಮಾ ನಡೆಸಿಕೊಡುವ ಸಂದರ್ಶನದಲ್ಲಿ ನಿರೂಪಕಿ ನೀವು ಮಕ್ಕಳಿಗೆ ರಾಮಾಯಣದ ಬಗ್ಗೆ ಹೇಳಿದ್ದೀರಾ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಯಶ್… “ನನ್ನ ಮಕ್ಕಳಿಗೆ ರಾಮಾಯಣದ ಕಥೆ ಗೊತ್ತಿದೆ. ನನ್ನ ಮಗನಿಗೆ ನಾನು ಹೀರೋ, ಆದರೆ ರಾಮಾಯಣದ ಕಥೆ ತಿಳಿದ ನಂತರ ಅವನು ಶಾಕ್ ಆಗಿದ್ದಾರೆ, ನೀವು ರಾವಣನಾ? ನೀವು ರಾವಣ ಆಗಲು ಹೇಗೆ ಸಾಧ್ಯ? ನೀವು ರಾಮ ಅಲ್ವಾ? ಎಂದಿದ್ದಾರೆ. ಅದಕ್ಕೆ ಯಶ್, ಹೌದು, ನಾನು ಮನೆಯಲ್ಲಿ ರಾಮ, ಸಿನಿಮಾದಲ್ಲಿ ರಾವಣ ಎಂದಿದ್ದಾರೆ. ಅದಕ್ಕೆ ಯಥರ್ವ್, . 'ಇಲ್ಲ, ನೀವು ಕೆಟ್ಟ ವ್ಯಕ್ತಿ. ನೀವು ಹೀಗೆ ಮಾಡಲು ಹೇಗೆ ಸಾಧ್ಯ?' ಎಂದು ಪ್ರಶ್ನಿಸಿದ" ಎಂದು ಯಶ್ ಹೇಳಿದ್ದಾರೆ.

ರಾಮ ಮತ್ತು ರಾವಣನ ಪಾತ್ರದ ಬಗ್ಗೆ ಮಗನಿಗೆ ವಿವರಿಸಿದ ಯಶ್

ರಾಮಾಯಣದ ಕಥೆಯಲ್ಲಿ ರಾವಣನ ಪಾತ್ರವೂ ಎಷ್ಟು ಮುಖ್ಯ ಎಂಬುದನ್ನು ಯಶ್ ಮಗನಿಗೆ ವಿವರಿಸಿದ್ದಾರೆ. ಜೊತೆಗೆ ಶ್ರೀರಾಮನ ಆದರ್ಶಗಳು ಮತ್ತು ಜೀವನ ಮೌಲ್ಯಗಳ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ. "ನನ್ನ ಮಗನನ್ನು ಕೂರಿಸಿಕೊಂಡು ಈ ಕಥೆಯಲ್ಲಿ ನೀನು ಆದರ್ಶವಾಗಿ ಸ್ವೀಕರಿಸಬೇಕಾದ ಮುಖ್ಯ ವ್ಯಕ್ತಿ ಶ್ರೀರಾಮ ಎಂದು ವಿವರಿಸಬೇಕಾಯಿತು. ಪ್ರತಿಯೊಬ್ಬರೂ ಶ್ರೀರಾಮ ತೋರಿಸಿದ ಮಾರ್ಗದಲ್ಲಿ ನಡೆಯಬೇಕು. ರಾವಣನು ಎಷ್ಟೇ ವೈಭವಯುತವಾಗಿ, ಶಕ್ತಿಶಾಲಿಯಾಗಿ ಮತ್ತು ಪ್ರಭಾವಶಾಲಿಯಾಗಿ ಕಂಡರೂ, ಜೀವನದಲ್ಲಿ ನಿಜವಾದ ಮತ್ತು ಶಾಶ್ವತ ಗೆಲುವು ಸಿಗುವುದು ಶ್ರೀರಾಮನ ಆದರ್ಶ ಮತ್ತು ಧರ್ಮವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲ ಚಿತ್ರಮಂದಿರದಲ್ಲಿ ನೀನು ಒಬ್ಬ ನಟನಾಗಿ ನನ್ನನ್ನು ಪ್ರೋತ್ಸಾಹಿಸಬಹುದು. ಆದರೆ ನಾನು ನಿರ್ವಹಿಸುವ ರಾವಣನ ಪಾತ್ರವನ್ನೇ ನಿನ್ನ ಆದರ್ಶ ಎಂದು ಭಾವಿಸಬಾರದು ಎಂದು ಮಗನಿಗೆ ಹೇಳಿದ್ದೆ" ಎಂದು ಯಶ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಯಾವಾಗ ಸಿನಿಮಾ ಬಿಡುಗಡೆ

ನಿರ್ದೇಶಕ ನಿತೇಶ್ ತಿವಾರಿ ಅವರ 'ರಾಮಾಯಣ' ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ಹಾಗೂ ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಶ್ ರಾವಣನಾಗಿ ಅಬ್ಬರಿಸಲಿದ್ದಾರೆ. ಇನ್ನು ಸನ್ನಿ ಡಿಯೋಲ್ ಹನುಮಂತನಾಗಿ ಮತ್ತು ರವಿ ದುಬೆ ಲಕ್ಷ್ಮಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಕುಲ್ ಪ್ರೀತ್ ಸಿಂಗ್, ಲಾರಾ ದತ್ತಾ ಮತ್ತು ಅರುಣ್ ಗೋವಿಲ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಮೊದಲ ಭಾಗವು 2026ರ ನವೆಂಬರ್ 5ರಂದು ಬಿಡುಗಡೆಯಾಗಲಿದೆ.