ಡಾ.ರಾಜ್‌ಕುಮಾರ್ ಅವರು ಕನ್ನಡ ಚಿತ್ರರಂಗದ ಪ್ರಮುಖ ವ್ಯಕ್ತಿಯಾಗಿದ್ದರು. ಅವರ ನಟನೆ, ಮಾತು, ಮತ್ತು ಕಂಠದಿಂದ ಮನೆಮಾತಾದರು. ಇಂದಿಗೂ ಅವರ ಚಿತ್ರಗಳು ಜನಮಾನಸದಲ್ಲಿ ಉಳಿದಿವೆ. ಸಾಹಿತಿ ಎನ್.ಎಸ್.ಶ್ರೀಧರ ಮೂರ್ತಿ, ಭಕ್ತ ಕುಂಬಾರ ಚಿತ್ರದ ಹಾಡಿನ ಕುರಿತು ರಾಜ್‌ಕುಮಾರ್ ಅವರ ಕಾಳಜಿಯನ್ನು ವಿವರಿಸಿದ್ದಾರೆ. ಹಾಡಿನ ಕುರಿತು ಭಿನ್ನಾಭಿಪ್ರಾಯದಿಂದ ಆರು ತಿಂಗಳು ಚಿತ್ರೀಕರಣ ಸ್ಥಗಿತಗೊಂಡಿತ್ತು. ನಂತರ ರಾಜಾ ಶಂಕರ್ ಸಲಹೆಯಂತೆ ಹಾಡನ್ನು ಕನಸಿನಲ್ಲಿ ಚಿತ್ರೀಕರಿಸಲಾಯಿತು.

ಡಾ.ರಾಜ್​ಕುಮಾರ್ ಮತ್ತು ಪಾರ್ವತಮ್ಮಾ ರಾಜ್​ಕುಮಾರ್​ ಕಣ್ಮರೆಯಾಗಿ ವರ್ಷಗಳೇ ಗತಿಸಿಹೋಗಿವೆ. ಈಗ ಈ ಜೋಡಿ ಏನಿದ್ದರೂ ನೆನಪು ಮಾತ್ರ. ಆದರೆ ಡಾ.ರಾಜ್​ಕುಮಾರ್​ ಅವರ ಬಗ್ಗೆ ಇಂದಿಗೂ ಹಿರಿ-ಕಿರಿಯ ನಟರು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಡಾ.ರಾಜ್​ಕುಮಾರ್​ ನಟನೆ ಮಾತ್ರವಲ್ಲದೇ ನೋಟದಲ್ಲಿಯೂ ಎಲ್ಲರನ್ನೂ ಮೋಡಿ ಮಾಡಿದಂಥವರು. ಅವರ ಸ್ಫುರದ್ರೂಪ ಎಂಥವರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು. ಕೇವಲ ನಾಲ್ಕನೆಯ ತರಗತಿ ಕಲಿತಿದ್ದರೂ, ಅವರ ಅಭಿನಯ, ನಿರರ್ಗಳ ಮಾತು, ಅವರ ಕಂಠ... ಇವೆಲ್ಲವುಗಳಿಂದ ಅವರು ಮನೆಮಾತಾದವರು. ತಮ್ಮೆಲ್ಲ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡಿದಂತೆ ನಟಿಸುತ್ತಲೇ ಚಿತ್ರಪ್ರಿಯರ ಕಣ್ಮಣಿಯಾಗಿದ್ದವರು. ಸಿನಿಮಾ, ನಟನೆ ಎಂದು ಯಾರ ಬಾಯಲ್ಲಿ ಬಂದರೂ ಅಲ್ಲಿ ಮೊದಲ ಹೆಸರು ಡಾ.ರಾಜ್​ ಅವರದ್ದೇ ಆಗಿರುತ್ತದೆ. 

ಕನ್ನಡ ಸಿನಿಮಾ ಲೋಕಕ್ಕೆ ಹೊಸ ದಿಕ್ಕನ್ನು ತೋರಿಸಿದವರಲ್ಲಿ ಇವರು ಪ್ರಮುಖರು. ಇಂದಿನ ಬಹುತೇಕ ಚಿತ್ರಗಳು ಜನರ ಮನಸ್ಸಿನಲ್ಲಿ ನಾಲ್ಕೈದು ವರ್ಷ ನೆಲೆಯೂರಿದ್ದರೆ ಅದುವೇ ದೊಡ್ಡದು ಎನ್ನಿಸುವಂತೆ ಆಗಿದೆ. ಆದರೆ ಡಾ.ರಾಜ್​ಕುಮಾರ್​ ಅವರ ಅಭಿನಯದ ಬ್ಲ್ಯಾಕ್​ ಆ್ಯಂಡ್ ವೈಟ್​ ಯುಗದಿಂದ ಹಿಡಿದು ಅವರ ಕೊನೆಯ ಚಿತ್ರಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ. ಅವರ ಡೈಲಾಗ್​, ಹಾಡುಗಳು ಅಬ್ಬಾ ಒಂದೇ... ಎರಡೇ... ಅಂಥ ಅಪರೂಪದ ಕಲಾವಿದ ಡಾ.ರಾಜ್​. ಅವರು ಕೇವಲ ನಟ ಮಾತ್ರ ಆಗಿರದೇ ತಮ್ಮ ಪ್ರತಿಯೊಂದು ಚಿತ್ರಕ್ಕೂ, ಅದರಲ್ಲಿನ ಹಾಡುಗಳಿಗೆ ಹೇಗೆ ನ್ಯಾಯ ಒದಗಿಸುತ್ತಿದ್ದರು ಎಂಬ ಬಗ್ಗೆ ಸಾಹಿತಿ ಎನ್​.ಎಸ್.​ಶ್ರೀಧರ ಮೂರ್ತಿ ಅವರು ನೆನಪಿಸಿಕೊಂಡಿದ್ದು ಅದರ ವಿಡಿಯೋ ವೈರಲ್​ ಆಗಿದೆ. 

ಮೊದ್ಲಿಗೆ ಇವಳ ನೋಡ್ದಾಗ ಒಳ್ಳೆ ಹೆಗ್ಗಣ ಇದ್ದಂಗೆ ಇದ್ದಾಳಪ್ಪಾ ಅನ್ನಿಸ್ತು: ಡಾ. ರಾಜ್​ ಮಾತಲ್ಲೇ ತಮಾಷೆ ಕೇಳಿ...

ಭಕ್ತ ಕುಂಬಾರ ಚಿತ್ರದಲ್ಲಿನ ಒಂದು ಹಾಡಿಗಾಗಿ ಡಾ.ರಾಜ್​ಕುಮಾರ್​ ಅವರು ಆರು ತಿಂಗಳು ಶೂಟಿಂಗ್​ ಅನ್ನು ಮುಂದೂಡಿದ್ದ ಬಗ್ಗೆ ಅವರು ವಿವರಿಸಿದ್ದಾರೆ. ಕನ್ನಡ ಮಾಣಿಕ್ಯ ಎನ್ನುವ ಯೂಟ್ಯೂಬ್​ ಚಾನೆಲ್​ಗೆ ಅವರು ನೀಡಿರುವ ಸಂದರ್ಶನದಲ್ಲಿ ಡಾ.ರಾಜ್​ಕುಮಾರ್​ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. ಈ ಚಿತ್ರದಲ್ಲಿನ ಕಂಡೇ ಹರಿಯ ಕಂಡೇ ಹಾಡಿಗೆ ನಡೆದ ಚರ್ಚೆಯಿಂದ ಹೇಗೆ ಆರು ತಿಂಗಳು ಶೂಟಿಂಗ್​ ನಿಂತುಹೋಗಿತ್ತು ಎನ್ನುವ ಕುರಿತು ಅವರು ಮಾತನಾಡಿದ್ದಾರೆ. ಈ ಹಾಡನ್ನು ಹಾಕಬೇಕು ಎಂದು ನಿರ್ದೇಶಕ ಹುಣುಸೂರು ಕೃಷ್ಣಮೂರ್ತಿ ಅವರಿಗೆ ಆಸೆ ಇತ್ತು. ಆದರೆ ಇದು ರಾಜ್​ಕುಮಾರ್​ ಅವರಿಗೆ ಇಷ್ಟ ಆಗಲಿಲ್ಲ. ಅದಕ್ಕೆ ಕಾರಣವೂ ಇತ್ತು ಎಂದು ಅಂದು ನಡೆದ ಘಟನೆಯನ್ನು ಹೇಳಿದ್ದಾರೆ ಶ್ರೀಧರ ಮೂರ್ತಿ ಅವರು.

'ಕುಂಬಾರ ಅವನು. ವಿಠಲ ವಿಠಲ ಎಂದು ಹೇಳಿಕೊಂಡು ಇರುವಾತ. ಅವನು ಈ ಜೀವ ಪರಮಾತ್ಮ ಅಂತೆಲ್ಲಾ ಹೇಗೆ ಮಾತನಾಡಲು ಸಾಧ್ಯ ಎನ್ನುವುದು ರಾಜ್​ಕುಮಾರ್​ ಮಾತಾಗಿತ್ತು. ಅಷ್ಟಕ್ಕೂ ಕುಂಬಾರ ವಿಠಲ ಪಂಥದವನು. ದೇಹ ಮತ್ತು ಆತ್ಮ ಬೇರೆ ಬೇರೆ ಇಲ್ಲ ಎನ್ನುವ ಪಂಥದವನು. (ಅದ್ವೈತ ಪಂಥ). ಆದರೆ ನೀವು ದೇಹ ಬೇರೆ, ಆತ್ಮ ಬೇರೆ (ದ್ವೈತ) ಎನ್ನುವ ಶ್ರೀಕೃಷ್ಣನ ಪಂಥ ಹೇಳುತ್ತಿದ್ದೀರಲ್ಲ. ಇದು ಸರಿಯಾಗಲ್ಲ ಎಂದು ಹೇಳಿದರು. ಆದರೆ ಈ ಹಾಡು ಬೇಕೇ ಬೇಕು ಎನ್ನುವುದು ಕೃಷ್ಣಮೂರ್ತಿ ಅವರ ವಾದವಾಗಿತ್ತು. ಇದೇ ಕಾರಣಕ್ಕೆ ಈ ಹಾಡಿಗಾಗಿ ಆರು ತಿಂಗಳು ಶೂಟಿಂಗ್​ ನಡೆಯಲೇ ಇಲ್ಲ ಎಂದು ಅವರು ನೆನಪಿಸಿಕೊಂಡಿದ್ದಾರೆ. ನಂತರ ನಟ- ನಿರ್ಮಾಪಕ ರಾಜಾ ಶಂಕರ್​ ಅವರು ಮಧ್ಯೆ ಪ್ರವೇಶಿಸಿ, ಒಂದು ಕೆಲಸ ಮಾಡಿ. ಈ ಹಾಡನ್ನು ಕುಂಬಾರನ ಕನಸಿನಲ್ಲಿ ಮಾಡಿಸಿಬಿಡಿ. ಕನಸು ಏನು ಬೇಕಾದ್ರೂ ಆಗಬಹುದು ಅಲ್ವಾ ಎಂದರು. ಆಗ ರಾಜ್​ಕುಮಾರ್​ ಅವರು, ಹೌದಲ್ವಾ? ನಮಗೆ ಹೊಳೆಯಲೇ ಇಲ್ಲ. ಸುಮ್ಮನೇ ಆರು ತಿಂಗಳು ವೇಸ್ಟ್​ ಆಯಿತು ಎಂದು ಹಾಡನ್ನು ಕುಂಬಾರನ ಕನಸಿನಲ್ಲಿ ತೋರಿಸಲಾಯಿತು ಎಂದಿದ್ದಾರೆ ಶ್ರೀಧರ ಮೂರ್ತಿ.

ಡಾ.ರಾಜ್​ಗೂ ಇತ್ತು ಸ್ಮೋಕಿಂಗ್​ ಚಟ: ಆ ರಾತ್ರಿ ನಡೆದ ಸ್ವಾರಸ್ಯಕರ ಘಟನೆ ನೆನಪಿಸಿಕೊಂಡ 'ಮುಖ್ಯಮಂತ್ರಿ' ಚಂದ್ರು

YouTube video player