ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆಯಲ್ಲಿ ಕಲಾವಿದರು ಭಾಗವಹಿಸದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಲಾವಿದರು ಕಾರ್ಯಕ್ರಮಗಳಿಗೆ ಬರದಿದ್ದರೆ, ಅವರ ನಟ್ ಟೈಟ್ ಮಾಡುವುದು ಹೇಗೆಂದು ತಿಳಿದಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ಬೆಂಗಳೂರು: ಶನಿವಾರ ಪ್ರತಿಷ್ಠಿತ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧ ಆವರಣದಲ್ಲಿ ಉದ್ಘಾಟಿಸಿ, ಚಾಲನೆ ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಟ ಶಿವರಾಜ್‌ಕುಮಾರ್, ಚಲನಚಿತ್ರೋತ್ಸವದ ರಾಯಭಾರಿ ಕಿಶೋರ್ ಕುಮಾರ್, ಪೋಲೆಂಡ್ ರಾಯಭಾರಿ ಮೌಗುಜಾತ, ನಟಿ ಪ್ರಿಯಾಂಕಾ ಮೋಹನ್, ಎಂ.ನರಸಿಂಹುಲು ಭಾಗವಹಿಸಿದ್ದರು. ಚಲನಚಿತ್ರಗಳಿಗೆ ಸಂಬಂಧಿಸಿದ 5 ಪುಸ್ತಕಗಳು, ಕೈಪಿಡಿಯನ್ನು ಇದೇ ವೇಳೆ ಬಿಡುಗಡೆ ಮಾಡಲಾಯ್ತು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್, ನೇರವಾಗಿ ಸಿನಿರಂಗದ ಕಲಾವಿದರ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಇದೀಗ ಡಿಕೆ ಶಿವಕುಮಾರ್ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ಶುರುವಾಗಿದೆ. ಈ ಕುರಿತು ಲೇಖಕ ಜೋಗಿ ಗಿರೀಶ್ ರಾವ್ ಹತ್ವಾರ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಜೋಗಿ ಗಿರೀಶ್ ರಾವ್ ಹತ್ವಾರ್ ತಮ್ಮ ಫೇಸ್‌ಬುಕ್ ಪೋಸ್ಟ್
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮೂರು ಬಹಳ ಮುಖ್ಯವಾದ ಮಾತುಗಳನ್ನು ಹೇಳಿದರು.

  1. ಚಿತ್ರೋತ್ಸವ ಮಾಡುತ್ತಿರುವುದು ಸಿನಿಮಾದವರಿಗೋಸ್ಕರವೇ ಹೊರತು ನನಗಲ್ಲ. ನನಗೆ ಸಿನಿಮಾ ನೋಡಲು ಪುರುಸೊತ್ತಿಲ್ಲ. ನಿಮಗಾಗಿ ಮಾಡುತ್ತಿರುವ ಸಿನಿಮಾ ಉತ್ಸವಕ್ಕೆ ಒಬ್ಬನೇ ಒಬ್ಬ ಕಲಾವಿದನೂ ಬಂದಿಲ್ಲ. ಒಟ್ಟು ಇಪ್ಪತ್ತೈದು ಮಂದಿ ಸಿನಿಮಾದವರೂ ಇಲ್ಲಿ ಹಾಜರಿಲ್ಲ. ಇದು ಒಳ್ಳೆಯ ನಡೆ ಅಲ್ಲ.
  2. ನಿಮಗೆ ಬೇಕಾದಾಗ ಬರುತ್ತೀರಿ. ನಾವು ಕರೆದಾಗ ಬರುವುದಿಲ್ಲ. ನಿಮಗೆ ಶೂಟಿಂಗಿಗೆ ಅನುಮತಿ ಕೇಳಿದಾಗ ನಿರಾಕರಿಸಿದರೆ ನೀವೇನು ಮಾಡುತ್ತೀರಿ? ನಿಮ್ಮ ನಟ್ಟು ಬೋಲ್ಡು ಟೈಟ್ ಮಾಡುವುದಕ್ಕೆ ನನಗೆ ಗೊತ್ತಿದೆ. ಸಿನಿಮಾದವರು ಸಿನಿಮಾ ಕಾರ್ಯಕ್ರಮಕ್ಕೆ ಬರಬೇಕು. 
  3. ಕೊರೋನಾ ಸಮಯದಲ್ಲಿ ನಾವು ಕುಡಿಯುವ ನೀರಿಗಾಗಿ ಪಾದಯಾತ್ರೆ ಮಾಡಿದೆವು. ಚಿತ್ರರಂಗದವರನ್ನೆಲ್ಲ ಕರೆದೆವು. ಬಂದದ್ದು ಸಾಧು ಕೋಕಿಲಾ ಮತ್ತು ವಿಜಿ ಇಬ್ಬರೇ. ಮತ್ತೆ ಯಾರೊಬ್ಬರೂ ನಮ್ಮ ಕರೆಗೆ ಕಿವಿಗೊಡಲಿಲ್ಲ. ನಮಗೆ ಸಹಾಯ ಮಾಡಿದ ಸಾಧುಕೋಕಿಲಾಗೆ ಸಹಾಯ ಮಾಡಲು ತೀರ್ಮಾನಿಸಿ ಅವರನ್ನು ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರನ್ನಾಗಿ ಮಾಡಲು ನಾನೂ ಸಿದ್ಧರಾಮಯ್ಯ ತೀರ್ಮಾನಿಸಿದೆವು. ನೀ ನನಗಿದ್ದರೆ ನಾ ನಿನಗೆ. ಇಲ್ಲದಿದ್ದರೆ ನಿಮ್ಮ ದಾರಿ ನಿಮಗೆ.

ಜೋಗಿಯವರ ಈ ಪೋಸ್ಟ್‌ಗೆ ಜನರು ಸಹ ಕಮೆಂಡ್ ಮಾಡಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಒಂದು ಸಿನಿಮಾ ಹಬ್ಬ, ಜಾತ್ರೆ ನಡೆಯುತ್ತೆ ಅಂದಾಗ ಅದರಲ್ಲಿ ತೊಡಗಿಸಿಕೊಂಡಿರೋರು ಉತ್ಸಾಹದಿಂದ ತೊಡಗಿಸಿಕೊಳ್ಳಬೇಕು. ನಾವು ಬರ್ತೀವಿ ನೀವು ಬನ್ನಿ ಅಂತ ಅಭಿಮಾನಿಗಳನ್ನ ಕರೀಬೇಕು. ಸಿನಿಮಾಗಳನ್ನ ನೋಡಬೇಕು. ಸಿನಿಮಾಗಳ ಬಗ್ಗೆ ಚರ್ಚೆಯಾಗಬೇಕು. ಬೇಡದ ಸಮಯದಲ್ಲಿ‌ ಸಮಯ ವ್ಯರ್ಥ ಮಾಡಿ, ಸಿನಿಮಾಗೆ ಸಂಬಂಧಿತ ವಿಷಯಗಳಲ್ಲಿ ನಿರಾಸಕ್ತಿ ತೋರೋದು ಸರಿಯಲ್ಲ. ಡಿಕೆ ಹೇಳಿದ ಮಾತು 100 ಕ್ಕೆ ನೂರು ಸರಿಯಿದೆ ಎಂದು ಆನಂದ್ ಸಾಲುಂಡಿ ಎಂಬವರು ಕಮೆಂಟ್ ಮಾಡಿದ್ದಾರೆ. 

ಬನಶಂಕರ್ ಆರಾಧ್ಯ ಎಂಬವರು, 3 ನೇ ಪಾಯಿಂಟ್. ಅದು ಕಾಂಗ್ರೆಸ್ ಪಕ್ಷದ ಪಾದಯಾತ್ರೆ. ಜೊತೆಗೆ ಡಿಕೆಶಿ ಅವರ ಇಮೇಜ್ ಗಟ್ಟಿ ಮಾಡಲು ನಡೆಸಿದ ರಾಜಕೀಯ ಪಾದಯಾತ್ರೆ. ಅದಕ್ಕೆ ಸಿನಿಮಾ ನಟರೆಲ್ಲ ಭಾಗವಹಿಸಬೇಕು ಎಂಬ ಒತ್ತಾಯ ಸರಿಯಲ್ಲ. ಇನ್ನೆರಡು ಪಾಯಿಂಟ್ ಸರಿ ಎಂದು ತಮ್ಮಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಲೆಯ ಹೆಸರಲ್ಲಿ ಎಲ್ಲ ಸವಲತ್ತು ಬಯಸುವ ವ್ಯಾಪಾರ ಸಿನಿಮಾ ಆಗಿದೆ ಎಂದು ಕೆಲ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: 35ರೂ ಗೆ ಇಡ್ಲಿ ವಡಾ ಮಾರುವ ಮಹಿಳೆ ಅಂಗಡಿಗೆ ಸೋನು ಸೂದ್ ಭೇಟಿ, ಮುಂದೇನಾಯ್ತು?

ಡಿಕೆ ಶಿವಕುಮಾರ್ ಹೇಳಿದ್ದೇನು?
ನಮ್ಮ ಸಿನಿಮಾ ರಂಗದವರ ಬಗ್ಗೆ ನನಗೆ ಬಹಳ ಸಿಟ್ಟಿದೆ. ಕೆಲಸ ಇದ್ದಾಗ ನಮ್ಮ ಬಳಿ ಬರುತ್ತಾರೆ. ನಂತರ ಬಳಸಿ ಬಿಸಾಡುತ್ತಾರೆ. ನಮ್ಮ ಪಕ್ಷದಿಂದ ಕುಡಿಯುವ ನೀರಿಗಾಗಿ ಮೇಕೆದಾಟು ಪಾದಯಾತ್ರೆ ಮಾಡಿದ್ದೇವು. ಈ ವೇಳೆ ಚಿತ್ರರಂಗದ ಕೆಲವರು ಮಾತ್ರ ನಮ್ಮ ಜೊತೆಯಾದರು. ಬಹುತೇಕರು ಬರಲೇ ಇಲ್ಲ. ಈ ರೀತಿ ಮಾಡುವವರ ನಟ್ ಟೈಟ್ ಮಾಡುವುದು ಹೇಗೆಂಬುದು ನನಗೆ ಗೊತ್ತು. ನಾನು ಚಿತ್ರರಂಗದಿಂದಲೇ ಬಂದವನು. ಸಿನಿಮಾ ನಿರ್ಮಾಣಕ್ಕೆ ಶೂಟಿಂಗ್ ಅನುಮತಿ ಸೇರಿ ಅನೇಕ ಕೆಲಸಗಳಿಗೆ ನಮ್ಮ ಬಳಿ ಬರಬೇಕಾಗುತ್ತದೆ. ನಾನು ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ಇದನ್ನು ಎಚ್ಚರಿಕೆ ಅಂತಲೋ ಅಥವಾ ಕೋರಿಕೆ ಅಂತಲೋ ಭಾವಿಸಬಹುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲಿ ಹೈಟೆಕ್ ಫಿಲ್ಮ್ ಸಿಟಿ ಸಿದ್ದರಾಮಯ್ಯ ಘೋಷಣೆ, ಚಿತ್ರರಂಗಕ್ಕೆ ಡಿಕೆಶಿ ಖಡಕ್ ಎಚ್ಚರಿಕೆ!