ಸಂಜನಾ ಬೋಲ್ಡ್‌ ಆಗಿ ಕಾಣಿಸಿಕೊಂಡರೆ, ರಾಗಿಣಿ ಪೊಲೀಸ್‌ ಪಾತ್ರಗಳಲ್ಲಿ ಅಷ್ಟೇ ಬೋಲ್ಡ್‌ ಆಗಿ ಕಾಣಿಸಿಕೊಂಡರು. ತೆರೆಯ ಮೇಲೆ ನಟಿಸಿದ್ದಕ್ಕಿಂತ ಸೊಗಸಾಗಿ ತೆರೆಯ ಹಿಂದೆಯೂ ನಟಿಸುತ್ತಾರೆ ಎಂದು ಅವರನ್ನು ಗಾಂಧಿನಗರ ಮೆಚ್ಚಿಕೊಂಡಿತು ಅನ್ನುವುದು ಸುಳ್ಸುದ್ದಿ ಏನಲ್ಲ. ಆದರೆ ಸಿನಿಮಾಗಳಿಗಿಂತ ಹೆಚ್ಚು ಅವಕಾಶ ಗಿಟ್ಟಿಸಿಕೊಂಡದ್ದು ಪೇಜ್‌ ಥ್ರೀ ಪಾರ್ಟಿಗಳಲ್ಲಿ. ಹೀಗಾಗಿ ಇವರಿಬ್ಬರ ಸಿನಿಮಾ ನೋಡದೇ ಇದ್ದವರಿಗೂ ಸಂಜನಾ ಮತ್ತು ರಾಗಿಣಿ ಚಿರಪರಿಚಿತ ಸ್ಟಾರಿಣಿಯರಾಗಿದ್ದರು. ಯಾವುದೇ ಪಾರ್ಟಿ ನಡೆದರೂ ಅಲ್ಲಿ ಸಂಜನಾ ಅಥವಾ ರಾಗಿಣಿ, ಸಂಜನಾ ಮತ್ತು ರಾಗಿಣಿ ಇರಲೇಬೇಕಿತ್ತು.

ಸಂಜನಾ ಮತ್ತು ರಾಗಿಣಿ ನಡುವಿನ ಕೋಳಿಜಗಳಕ್ಕೆ ದಶಕದ ಇತಿಹಾಸವಿದೆ. ರಾಗಿಣಿ ಬಂದು ತನ್ನ ಪಟ್ಟಕಸಿದುಕೊಂಡರು ಎನ್ನುವ ಸಿಟ್ಟು ಸಂಜನಾಗಿತ್ತು. ಸಂಜನಾ ತನ್ನ ಅವಕಾಶಗಳನ್ನು ಕಸಿಯಲು ನೋಡುತ್ತಿದ್ದಾರೆ ಅಂತ ರಾಗಿಣಿ ಸಿಟ್ಟಿನಿಂದ ಹೇಳಿಕೊಳ್ಳುತ್ತಿದ್ದರು. ಅವಕಾಶ ಸಿಕ್ಕಾಗೆಲ್ಲ ಒಬ್ಬರ ಮೇಲೊಬ್ಬರು ಕೆಸರು ಎರಚುತ್ತಾ ರಾಣಿ-ಮಹಾರಾಣಿಯರಂತೆ ಇದ್ದ ಸಂಜನಾ-ರಾಗಿಣಿಯರ ನಡುವಿದ್ದ ಪೈಪೋಟಿ ಮಹಾರಾಣಿ ಸ್ಥಾನಕ್ಕೇ ಆಗಿತ್ತು. ಇಬ್ಬರಲ್ಲಿ ಯಾರು ಮೇಲು ಎಂಬ ಬಗ್ಗೆ ಪೈಪೋಟಿ ನಡೆಯುತ್ತಿತ್ತು.

ಸಂಜನಾ, ರಾಗಿಣಿಗೆ ಬಚಾವಾಗಲು ಹಾಲಿ, ಮಾಜಿ ಪೊಲೀಸರ ನೆರವು! 

ರಾಗಿಣಿ ಮೊದಲ ಚಿತ್ರದಲ್ಲೇ ಸುದೀಪ್‌ ಜೊತೆ ನಟಿಸಿ, ನಂತರ ಉಪೇಂದ್ರ, ಶಿವರಾಜ್‌ಕುಮಾರ್‌, ರವಿಚಂದ್ರನ್‌ ಚಿತ್ರಗಳಲ್ಲೂ ಕಾಣಿಸಿಕೊಂಡರು. ತಾನು ಸ್ಟಾರ್‌ ಸಿನಿಮಾಗಳಲ್ಲಿ ಕಾಣಿಸಿಕೊಂಡ ಸೂಪರ್‌ ನಾಯಕಿ ಎಂದು ರಾಗಿಣಿ ಹೆಮ್ಮೆಪಟ್ಟುಕೊಳ್ಳುತ್ತಿದ್ದರು. ಸಂಜನಾ ಕೂಡ ಶಿವರಾಜ್‌ಕುಮಾರ್‌, ರಮೇಶ್‌, ರವಿಚಂದ್ರನ್‌ ಚಿತ್ರಗಳಲ್ಲಿ ನಟಿಸಿದ್ದರು. ತಾನೂ ಸುದೀಪ್‌ ಜೊತೆ ನಟಿಸಿದ್ದೇನೆ ಅಂತ ಅವರು ಇತ್ತೀಚೆಗೆ ಹೇಳಿಕೊಂಡಿದ್ದರು. ಅವರು ಸುದೀಪ್‌ ಜೊತೆ ಕಾಣಿಸಿಕೊಂಡಿದ್ದು ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ. ಅದನ್ನೂ ಸಂಜನಾ ನಟನೆ ಎಂದೇ ತಿಳಿದಿದ್ದರು.

ಗಾಂಧಿನಗರದ ಪ್ರಕಾರ ಸಂಜನಾ, ರಾಗಿಣಿ ಇಬ್ಬರೂ ಚಿತ್ರರಂಗದಿಂದ ಪಡಕೊಂಡದ್ದು ಕಡಿಮೆ. ಚಿತ್ರಗಳಲ್ಲಿ ನಟಿಸಿದ್ದರಿಂದ ಹೊರಗೆ ಪಡಕೊಂಡ ಗೌರವ ಆದರ ಆತಿಥ್ಯಗಳೇ ಅಧಿಕ. ಸಿನಿಮಾಗಳು ಅವರಿಗೆ ತಮ್ಮ ಗುರಿ ತಲುಪುವುದಕ್ಕೆ ರಾಜಮಾರ್ಗವಾಗಿದ್ದವು. ತನ್ನ ಏಕಚಕ್ರಾಧಿಪತ್ಯಕ್ಕೆ ರಾಗಿಣಿ ಅಡ್ಡಿಯಾಗಿದ್ದಾರೆಂದು ಸಂಜನಾಗೆ ಸಿಟ್ಟಿತ್ತು. ಈ ಸಿಟ್ಟು ಅಲ್ಲಲ್ಲಿ ಸ್ಫೋಟಗೊಳ್ಳುತ್ತಿತ್ತು. ಗೆಳೆಯರ ಗುಂಪಿನಲ್ಲಿ ಚರ್ಚೆ ಆಗುತ್ತಿತ್ತು. ಈ ಮರ್ಮ ಗೊತ್ತಿದ್ದವರು ರಾಗಿಣಿಯನ್ನು ಕರೆದ ಪಾರ್ಟಿಗಳಿಗೆ ಸಂಜನಾರನ್ನು ಕರೆಯುತ್ತಿರಲಿಲ್ಲ, ಸಂಜನಾ ಬರುವ ಕಡೆ ರಾಗಿಣಿ ಬರದಂತೆ ನೋಡಿಕೊಳ್ಳುತ್ತಿದ್ದರು. ಆದರೆ ಪೇಜ್‌ ಥ್ರೀ ಪಾರ್ಟಿಗಳಿಗೆ ಸಂಬಂಧಿಸಿದಂತೆ ಅವರಿಬ್ಬರ ಮಧ್ಯೆ ಅಂತಹ ಕಟ್ಟುಪಾಡುಗಳೇನೂ ಇರಲಿಲ್ಲ.

ಹಾಗೆ ನೋಡಿದರೆ ಅವರಿಬ್ಬರೂ ಭೇಟಿ ಆಗುತ್ತಿದ್ದದ್ದೇ ಪೇಜ್‌ ಥ್ರೀ ಪಾರ್ಟಿಗಳಲ್ಲಿ. ಅಲ್ಲಿ ಜಗಳ ಆಡಿದರೆ ಮುಂದಿನ ದಿನಗಳಲ್ಲಿ ತಮ್ಮ ವ್ಯವಹಾರಕ್ಕೆ ತೊಂದರೆ ಆಗಲಿದೆ ಎಂಬ ಕಲ್ಪನೆ ಇದ್ದುದರಿಂದಲೋ ಏನೋ ಅವರು ಗೆಳತಿಯರಂತೆಯೇ ವರ್ತಿಸುತ್ತಿದ್ದರು. ಆದರೆ ಹೊರಗೆ ಬಂದ ನಂತರ ಅವರ ಜಗಳ ಮತ್ತೆ ಶುರುವಾಗುತ್ತಿತ್ತು. ತಮ್ಮನ್ನು ಪಾರ್ಟಿಗಳಿಗೆ ಆಹ್ವಾನಿಸುವ ಅರೇಂಜರುಗಳ ಹತ್ತಿರವೂ ಅವರು ಪರಸ್ಪರರ ಬಗ್ಗೆ ದೂರು ಹೇಳಿದ್ದಿದೆ.

ಸಿಬ್ಬಂದಿಗೆ ಅವಾಜ್ ಹಾಕಿದ್ದ ಮಸಾಜ್ ರಾಣಿ ಸಂಜನಾ ಕ್ಲೋಸ್ ಫ್ರೆಂಡ್! ಡ್ರಗ್ಸ್‌ಗೂ ನಂಟು?

ಚಿತ್ರ ಜೀವನದ ಉದ್ದಕ್ಕೂ ಸವತಿಯರ ಹಾಗೆ ಕಿತ್ತಾಡುತ್ತಲೇ ಬಂದ ರಾಗಿಣಿ ಮತ್ತು ಸಂಜನಾ ಇಬ್ಬರಿಗೂ ಸದ್ಯಕ್ಕೆ ಒಂದೇ ವಸತಿ. ಇಬ್ಬರೂ ಅಲ್ಲಿಗೆ ಸೇರಿಕೊಂಡಿದ್ದು ಒಂದೇ ಕಾರಣಕ್ಕೆ. ಎಲ್ಲಾ ಇವಳೇ ಹಾಳು ಮಾಡಿದ್ದು ಅಂತ ಸಂಜನಾ ಥಟ್ಟನೆ ರಾಗಿಣಿ ಮೇಲೆ ರೇಗಿದ್ದೂ ಆಗಿದೆ. ಇವಳನ್ನು ಇಲ್ಲೇ ಇರಲು ಬಿಟ್ಟರೆ ನನ್ನ ಕತ್ತು ಹಿಸುಕಿ ಸಾಯಿಸುತ್ತಾಳೆ ಅಂತ ರಾಗಿಣಿ ರಾಗವೆಳೆದದ್ದೂ ಮುಗಿದಿದೆ.

ಅವರಿಬ್ಬರೂ ನಡೆದ ದಾರಿ ಅವರನ್ನು ಪೊಲೀಸ್‌ ಕಸ್ಟಡಿಗೆ ತಂದು ನಿಲ್ಲಿಸಿದೆ. ಡ್ರಗ್‌ ಪ್ರಕರಣದಲ್ಲಿ ಅವರ ಪೂರ್ವಾಶ್ರಮದ ಕರ್ಮಗಳನ್ನೂ ಸಾಗಿಬಂದ ಹಾದಿಯನ್ನೂ ಸಂಪಾದನೆಯ ಮೂಲವನ್ನೂ ಜಾಲಾಡುವ ಕೆಲಸ ಶುರುವಾಗಿದೆ. ಮೌನವಾಗಿದ್ದೇ ತನ್ನ ಸಿಟ್ಟು ತೋರುತ್ತಿದ್ದ ರಾಗಿಣಿ, ಎತ್ತರದ ದನಿಯಲ್ಲಿ ಕೂಗಾಡುತ್ತಿದ್ದ ಸಂಜನಾ ಹೀಗೆ ಇಬ್ಬರೂ ಜತೆಯಾಗಿ ಒಂದೇ ಕೋಣೆಯಲ್ಲಿ ಇರಬೇಕಾಗಿ ಬಂದದ್ದು ನಿಜವಾದ ಬಿಗ್‌ಬಾಸ್‌ ಆಟ.