ಸಂಜನಾ, ರಾಗಿಣಿಗೆ ಬಚಾವಾಗಲು ಹಾಲಿ, ಮಾಜಿ ಪೊಲೀಸರ ನೆರವು!
ಡ್ರಗ್ ಮಾಫಿಯಾ ಕೇಸ್‌ನಲ್ಲಿ ಪೇಜ್ ತ್ರಿ ಪಾರ್ಟಿಗಳ ಆಯೋಜಕರ ರಕ್ಷಣೆಗೆ ಕೆಲವು ಹಾಲಿ ಹಾಗೂ ಮಾಜಿ ಪೊಲೀಸ್ ಅಧಿಕಾರಿಗಳು ಯತ್ನಿಸಿದ್ದರು ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ.
ಬೆಂಗಳೂರು (ಸೆ.10): ಮಾದಕ ವಸ್ತು ಮಾರಾಟ ಜಾಲ ಪ್ರಕರಣ ಸಂಬಂಧ ಬಂಧಿತರಾಗಿರುವ ನಟಿಯರು ಹಾಗೂ ಪೇಜ್ ತ್ರಿ ಪಾರ್ಟಿಗಳ ಆಯೋಜಕರ ರಕ್ಷಣೆಗೆ ಕೆಲವು ಹಾಲಿ ಹಾಗೂ ಮಾಜಿ ಪೊಲೀಸ್ ಅಧಿಕಾರಿಗಳು ಯತ್ನಿಸಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.
ಈ ಪ್ರಕರಣದಲ್ಲಿ ಸಂಜನಾ ಗಲ್ರಾನಿ ಬಂಧನಕ್ಕೂ ಮುನ್ನ ಆಕೆಗೆ ಕಾನೂನಿನ ಸಲಹೆಯನ್ನು ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರು ನೀಡಿದ್ದರೆ, ವೀರೇನ್‌ಗೆ ತನಿಖೆ ಬೆಳವಣಿಗೆ ಬಗ್ಗೆ ಎಸಿಪಿಯೊಬ್ಬರು ಮಾಹಿತಿ ಮುಟ್ಟಿಸುತ್ತಿದ್ದರು. ಅದೇ ರೀತಿ ರಾಗಿಣಿ ದ್ವಿವೇದಿಗೂ ಸಹ ಪೊಲೀಸ್ ಸ್ನೇಹಿತರು ನೆರವು ಕಲ್ಪಿಸಿದ್ದರು ಎಂದು ತಿಳಿದು ಬಂದಿದೆ.
ಬಾಯ್ಬಿಟ್ಟ ರಿಯಾ, 25 ಬಾಲಿವುಡ್ ಖ್ಯಾತ ತಾರೆಯರಿಗೆ ನಡುಕ!
ಸೇವೆಯಲ್ಲಿದ್ದಾಗಲೂ ಪೇಜ್ ತ್ರಿ ಪಾರ್ಟಿಗಳಲ್ಲಿ ಬಿಂದಾಸ್ ಆಗಿ ಕಾಣಿಸಿಕೊಳ್ಳುತ್ತಿದ್ದ ನಿವೃತ್ತ ಅಧಿಕಾರಿಗೆ ಹಲವು ವರ್ಷಗಳಿಂದ ನಟಿ ಸಂಜನಾ ಹಾಗೂ ಪೇಜ್ ತ್ರಿ ಪಾರ್ಟಿಗಳ ಆಯೋಜನೆಯ ಕಿಂಗ್‌ಪಿನ್ ಎನ್ನಲಾದ ವೀರೇನ್ ಜತೆ ಆತ್ಮೀಯ ಒಡನಾಟವಿದೆ. ಇದೇ ಸ್ನೇಹದಲ್ಲೇ ತಮ್ಮ ಗೆಳೆಯರ ರಕ್ಷಣೆಗೆ ನಿವೃತ್ತ ಐಪಿಎಸ್ ಅಧಿಕಾರಿ ಯತ್ನಿಸಿದ್ದರು. ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಪೊಲೀಸರ ವಿಚಾರಣೆಗೆ ಹೇಗೆಲ್ಲ ಉತ್ತರ ನೀಡಬೇಕು ಎಂಬುದೂ ಸೇರಿದಂತೆ ಕಾನೂನಿನ ಸಲಹೆಗಳನ್ನು ಅವರು ನೀಡಿದ್ದರು ಎನ್ನಲಾಗಿದೆ.
ಅದೇ ರೀತಿ ವೀರೇನ್ ಜತೆ ಬೆಂಗಳೂರು ಪೂರ್ವ ಭಾಗದ ಎಸಿಪಿಯೊಬ್ಬರ ಆತ್ಮೀಯ ಸ್ನೇಹ ಬೆಳಕಿಗೆ ಬಂದಿದೆ. ಶಾಂತಿನಗರದ ಕಾಂಗ್ರೆಸ್ ಶಾಸಕರ ಪುತ್ರ ಮೊಹಮ್ಮದ್ ನಲಪಾಡ್ ಹಲ್ಲೆ ಪ್ರಕರಣದಲ್ಲೂ ಸಹ ಶಾಸಕರ ಪುತ್ರನಿಗೆ ಬೆಂಬಲಿಸಿದ ಆರೋಪಕ್ಕೆ ಅವರು ತುತ್ತಾಗಿದ್ದರು. ಅವರನ್ನು ವೀರೇನ್ ಸ್ನೇಹದ ಬಗ್ಗೆ ಸಿಸಿಬಿ ವಿಚಾರಣೆ ಒಳಪಡಿಸುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.