'ಪ್ರೇಮದ ಊರಲಿ' ಖ್ಯಾತಿಯ ತಪಸ್ವಿನಿ ಪೂಣಚ್ಚ 'ಮಿಸ್ಟರ್ ಜಾಕ್' ಚಿತ್ರದಲ್ಲಿ ನಂದಿನಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಂದಿನಿ ಎಂಬ ಹೆಸರು ಕನ್ನಡ ಚಿತ್ರರಂಗದಲ್ಲಿ ನಾಯಕನಿಗೆ ಸಿಗದ ಪಾತ್ರಗಳಿಗೆ ಹೆಸರುವಾಸಿಯಾಗಿದ್ದು, ಈ ಚಿತ್ರದಲ್ಲಿ ಏನಾಗಲಿದೆ ಎಂಬ ಕುತೂಹಲ ಮೂಡಿಸಿದೆ. ಕಾಮಿಡಿಯನ್ ಜಾನಕಿರಾಮನ್ ಸುತ್ತ ಈ ಕಥೆ ಸಾಗುತ್ತದೆ.

ಬೆಂಗಳೂರು: ಕೇವಲ ಎರಡು ಕೋಟಿ ರೂಪಾಯಿ ಬಜೆಟ್​ನಲ್ಲಿ ನಿರ್ಮಾಣವಾದ ಪ್ರೇಮದ ಊರಲಿ (Premada Oorali) ಸಿನಿಮಾ ಯಾವ ಪರಿಯಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ ಎನ್ನುವುದು ಗೊತ್ತೇ ಇದೆ. ಸೀದಾ, ಸಾದಾ ಕಥೆ ಇರುವ, ಸ್ಟಾರ್ ನಟರು ಇಲ್ಲದೆನೂ, ಚಿಕ್ಕ ಬಜೆಟ್​ನಲ್ಲಿಯೇ ಚೊಕ್ಕದಾದ ಸಿನಿಮಾ ತೆಗೆಯಬಹುದು ಎನ್ನೋದನ್ನು ತೋರಿಸಿಕೊಟ್ಟಿರೋ ಸಿನಿಮಾ ಇದು. ಈ ಸಿನಿಮಾ ಬ್ಲಾಕ್​ ಬಸ್ಟರ್​ ಆಗುತ್ತಿದ್ದಂತೆಯೇ ಇದರಲ್ಲಿ ನಟಿಸಿರುವ ಕಲಾವಿದರಿಗೂ ಸಕತ್​ ಡಿಮಾಂಡ್​ ಬರುತ್ತಿದೆ. ಅದರಂತೆಯೇ ಈ ಸಿನಿಮಾದಲ್ಲಿ ನಾಯಕಿ ರುಕ್ಮಿಣಿಯಾಗಿ ಕಾಣಿಸಿಕೊಂಡಿರುವ ನಟಿ ತಪಸ್ವಿನಿ ಪೂಣಚ್ಚ ಅವರು ಮಿಸ್ಟರ್​ ಜಾಕ್​ (Mr. Jack) ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗುರುನಂದನ್ ಜೊತೆ ನಟಿಸಿರುವ ಈ ಚಿತ್ರವು ಡಿಸೆಂಬರ್ 4, 2026 ರಂದು ತೆರೆಕಾಣಲು ಸಜ್ಜಾಗಿದೆ.

ಇದೀಗ ಈ ಚಿತ್ರದ ಪ್ರಮೋಷನ್​ ಭರ್ಜರಿಯಾಗಿ ನಡೆಯುತ್ತಿದೆ. ಈ ಚಿತ್ರದಲ್ಲಿ ನಾಯಕಿ ತಪಸ್ವಿನಿ ಹೆಸರು ನಂದಿನಿ ಎನ್ನುವುದಾಗಿದೆ. ಇದೇ ಕಾರಣಕ್ಕೆ ಚಿತ್ರದ ಪ್ರಮೋಷನ್​ ವೇಳೆಗೆ ಬಾಸ್​ ಟಿವಿಗೆ ನೀಡಿರುವ ಸಂದರ್ಶನದಲ್ಲಿ ನಟಿ ತಪಸ್ವಿನಿ ಈ ವಿಷಯವನ್ನು ರಿವೀಲ್​ ಮಾಡಿದ್ದಾರೆ. ನಂದಿನಿ ಎನ್ನುವ ಹೆಸರು ಸಿನಿಮಾಗಳಲ್ಲಿ ತುಂಬಾ ಡೇಂಜರ್​. ಮುಂಗಾರು ಮಳೆಯಾಗಿರಬಹುದು ಅಥವಾ ಇನ್ನಾವುದೇ ಸಿನಿಮಾ ಆಗಿರಬಹುದು, ವಿಷ್ಣುವರ್ಧನ್​-ಸುಹಾಸಿನಿ ಅಭಿನಯದ ಬಂಧನ ಸಿನಿಮಾಆಗಿರಬಹುದು... ಹೀಗೆ ಹಲವು ಸಿನಿಮಾಗಳಲ್ಲಿ ನಂದಿನಿ ಎಂದು ಹೆಸರು ಇದ್ದರೆ, ಅವರು ನಾಯಕನಿಗೆ ಸಿಗುವುದೇ ಇಲ್ಲ. ಆದ್ದರಿಂದ ಇದು ಡೇಂಜರ್​ ಹೆಸರು ಎಂದಿದ್ದಾರೆ ನಟಿ.

ಮಿಸ್ಟರ್​ ಜಾಕ್​ನಲ್ಲಿ ನಂದಿನಿ ಸಿಕ್ತಾಳಾ?

ಈ ಸಿನಿಮಾದಲ್ಲಿ ನಂದಿನಿ, ನಾಯಕನಿಗೆ ಸಿಗ್ತಾಳೋ ಅಥ್ವಾ ಇಲ್ಲವೋ ಎನ್ನುವುದು ಸಕತ್​ ಸಸ್ಪೆನ್ಸ್​ ಆಗಿದೆ. ಇದನ್ನು ಚಿತ್ರದಲ್ಲಿಯೇ ನೋಡಬೇಕು ಎಂದಿದ್ದಾರೆ ನಟಿ ತಪಸ್ವಿನಿ. ಅಂದಹಾಗೆ ಈ ಸಿನಿಮಾದಲ್ಲಿ ನಾಯಕನಾಗಿ ಗುರುನಂದನ್ ನಟಿಸುತ್ತಿದ್ದಾರೆ. ತಪಸ್ವಿನಿ ಅವರು ಸದಾ ಗ್ಲಾಮಸರ್​ ಲುಕ್​ನಲ್ಲಿ ಕಾಣಿಸಿಕೊಳ್ಳುವವರು. ಆದರೆ ಈ ಸಿನಿಮಾದಲ್ಲಿ ಅವರದ್ದು ಉಲ್ಟಾ ಕ್ಯಾರೆಕ್ಟರ್​. ಸೀದಾ ಸಾದಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಈ ಸಿನಿಮಾ ಸ್ಟೋರಿ ಹೇಳುವುದಾದರೆ, ಮಿಸ್ಟರ್ ಜಾಕ್' ಎಂದು ಕರೆಯಲ್ಪಡುವ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಜಾನಕಿರಾಮನ ಸುತ್ತ ಕಥೆ ಸಾಗುತ್ತದೆ. ಎಲ್ಲರನ್ನೂ ನಗಿಸುವ ಆತನ ಬದುಕಿನ ಹಿಂದೆ ಒಂದು ನೋವಿರುತ್ತದೆ; ಮದುವೆಯ ನಂತರ ಎದುರಾಗುವ ಅನಿರೀಕ್ಷಿತ ಗೊಂದಲಗಳನ್ನು ಕೇವಲ ಹಾಸ್ಯದಿಂದ ಮಾತ್ರ ಸರಿಪಡಿಸಲು ಸಾಧ್ಯವಾಗದ ಪರಿಸ್ಥಿತಿಯನ್ನು ಆತ ಹೇಗೆ ನಿಭಾಯಿಸುತ್ತಾನೆ ಎನ್ನುವುದು ಸಾರಾಂಶ.