ಅಲ್ಲಿಯವರೆಗೆ ಕೇವಲ ಖಳನಾಯಕನಾಗಿ ಮಾತ್ರ ಗುರುತಿಸಿಕೊಂಡಿದ್ದ ಅಂಬರೀಶ್ ಅವರನ್ನು ಹೀರೋ ಆಗಿ ಮಾಡುತ್ತಿರುವುದನ್ನು ಯಾರೊಬ್ಬರೂ ಒಪ್ಪಿರಲಿಲ್ಲ. "ಅವನು ಯಾವ ಸೀಮೆ ಹೀರೋರೀ? ಒಬ್ಬ ವಿಲನ್ ಅನ್ನು ಕರೆದುಕೊಂಡು ಬಂದು ನೀವು ಹೀರೋ ಮಾಡ್ತಾ ಇದ್ದೀರಾ, ಇದು ಹೇಗೆ ಸಾಧ್ಯ?" ಎಂದು ಎಲ್ಲರೂ ಗೇಲಿ ಮಾಡಿದ್ದರು.

ಅಂಬರೀಶ್ (Ambareesh) ಅವರನ್ನು 'ಅಂತ' ಸಿನಿಮಾಗೆ ಹೀರೋ ಎಂದು ಅನೌನ್ಸ್ ಮಾಡಿದಾಗ ಇಡೀ ಕನ್ನಡ ಇಂಡಸ್ಟ್ರಿ 'ಅವನು ಯಾವ ಸೀಮೆ ಹೀರೋರೀ' ಎಂದು ಗೇಲಿ ಮಾಡಿದ್ದರಂತೆ. ಅರ್ಧದಲ್ಲಿ ನಿಂತು ಹೋಗಿದ್ದ ಅಂತ ಸಿನಿಮಾ ಕೊನೆಗೆ ರೆಕಾರ್ಡ್ ಬ್ರೇಕ್ ಮಾಡಿದ್ದು ಹೇಗೆ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೈಲಿಗಲ್ಲಾಗಿ ಉಳಿದ, ಅಂಬರೀಶ್ ಅವರಿಗೆ 'ರೆಬೆಲ್ ಸ್ಟಾರ್' ಪಟ್ಟ ತಂದುಕೊಟ್ಟ ಸಿನಿಮಾ 'ಅಂತ'. ಆದರೆ, ಈ ಸಿನಿಮಾ ಸೆಟ್ಟೇರುವಾಗ ಮತ್ತು ಚಿತ್ರೀಕರಣದ ಹಂತದಲ್ಲಿ ಎದುರಿಸಿದ ಸವಾಲುಗಳು ಒಂದೆರಡಲ್ಲ. ಖುದ್ದು ನಿರ್ದೇಶಕ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಅವರು ಈ ರೋಚಕ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ರಾಜೇಂದ್ರ ಸಿಂಗ್ ಬಾಬು ಅವರು 'ಅಂತ' ಸಿನಿಮಾ ಮಾಡಲು ಹೊರಟಾಗ, ಇಡೀ ಕನ್ನಡ ಚಿತ್ರರಂಗವೇ ಅವರ ವಿರುದ್ಧವಾಗಿತ್ತಂತೆ.

ಅದಕ್ಕೆ ಮುಖ್ಯ ಕಾರಣ, ಆ ಚಿತ್ರದ ನಾಯಕನ ಆಯ್ಕೆ. ಅಲ್ಲಿಯವರೆಗೆ ಕೇವಲ ಖಳನಾಯಕನಾಗಿ ಮಾತ್ರ ಗುರುತಿಸಿಕೊಂಡಿದ್ದ ಅಂಬರೀಶ್ ಅವರನ್ನು ಹೀರೋ ಆಗಿ ಮಾಡುತ್ತಿರುವುದನ್ನು ಯಾರೊಬ್ಬರೂ ಒಪ್ಪಿರಲಿಲ್ಲ. "ಅವನು ಯಾವ ಸೀಮೆ ಹೀರೋರೀ? ಒಬ್ಬ ವಿಲನ್ ಅನ್ನು ಕರೆದುಕೊಂಡು ಬಂದು ನೀವು ಹೀರೋ ಮಾಡ್ತಾ ಇದ್ದೀರಾ, ಇದು ಹೇಗೆ ಸಾಧ್ಯ?" ಎಂದು ಎಲ್ಲರೂ ಗೇಲಿ ಮಾಡಿದ್ದರು. ಆದರೆ, ಬಾಬು ಅವರಿಗೆ ಅಂಬರೀಶ್ ಅವರ ಮೇಲೆ ಅಪಾರ ನಂಬಿಕೆ ಇತ್ತು. "ನನಗೆ ಅಂಬರೀಶ್ ಬಗ್ಗೆ ಗೊತ್ತಿಲ್ಲ, ಆದರೆ 'ಅಂತ' ಸಿನಿಮಾದ 'ಕನ್ವರ್ ಲಾಲ್' ಪಾತ್ರಕ್ಕೆ ಅವನು ಪಕ್ಕಾ ಸೂಟ್ ಆಗುತ್ತಾನೆ" ಎಂಬುದು ನಿರ್ದೇಶಕರ ಖಚಿತ ನಿಲುವಾಗಿತ್ತು.

ನಿರ್ದೇಶಕರು ಎಷ್ಟೇ ಧೈರ್ಯ ಮಾಡಿದರೂ, ಚಿತ್ರರಂಗದ ಯಾರೊಬ್ಬರೂ ಈ ಪ್ರಾಜೆಕ್ಟ್ ಅನ್ನು ಒಪ್ಪಲಿಲ್ಲ. ಯಾವ ನಿರ್ಮಾಪಕರೂ ಈ ಸಿನಿಮಾಗೆ ಹಣ ಹಾಕಲು ಮುಂದೆ ಬರಲಿಲ್ಲ. ಪರಿಣಾಮವಾಗಿ, ಸಿನಿಮಾ ಅರ್ಧದಲ್ಲೇ ನಿಂತುಹೋಯಿತು. ಚಿತ್ರತಂಡ ದಿಕ್ಕುತೋಚದೆ ಕುಳಿತಾಗ, ಕೆ.ಸಿ.ಎನ್. ಚಂದ್ರು ಅವರು ಆಪದ್ಬಾಂಧವರಾಗಿ ಬಂದರು. ಮಾರುತಿ ಅವರ ಸಂಬಂಧಿಯಾಗಿದ್ದ ಚಂದ್ರು ಅವರು ಫೈನಾನ್ಸ್ ಮಾಡಿ, ನಿಂತುಹೋಗಿದ್ದ ಸಿನಿಮಾವನ್ನು ಪೂರ್ಣಗೊಳಿಸಲು ಸಹಾಯ ಮಾಡಿದರು.

ಎಲ್ಲರ ಟೀಕೆ, ಗೇಲಿಗಳ ನಡುವೆ ಕಷ್ಟಪಟ್ಟು ಬಿಡುಗಡೆಯಾದ 'ಅಂತ' ಸಿನಿಮಾ ಸೃಷ್ಟಿಸಿದ ಇತಿಹಾಸ ಸಾಮಾನ್ಯವಾದದ್ದಲ್ಲ. ಸಿನಿಮಾ ರಿಲೀಸ್ ಆದ ಮೇಲೆ ಇಡೀ ಭಾರತವೇ ಈ ಚಿತ್ರದತ್ತ ತಿರುಗಿ ನೋಡುವಂತಾಯಿತು. ಇಂದಿನ 'ಕೆ.ಜಿ.ಎಫ್.' ಸಿನಿಮಾ ಯಾವ ಮಟ್ಟದ ಕ್ರೇಜ್ ಸೃಷ್ಟಿಸಿದೆಯೋ, ಅದೇ ಮಟ್ಟದ ಅಭೂತಪೂರ್ವ ಯಶಸ್ಸನ್ನು ಅಂದು 'ಅಂತ' ಕಂಡಿತ್ತು ಎಂದು ಬಾಬು ಅವರು ಹೆಮ್ಮೆಯಿಂದ ಹೇಳುತ್ತಾರೆ. ಚಿತ್ರದ ಕ್ರೇಜ್ ಎಷ್ಟಿತ್ತೆಂದರೆ, ಆ ಕಾಲದಲ್ಲೇ ಚಿತ್ರದ ಟಿಕೆಟ್‌ಗಳು ಬ್ಲಾಕ್‌ನಲ್ಲಿ ಬರೋಬ್ಬರಿ 500 ರೂಪಾಯಿಗೆ ಸೇಲ್ ಆಗುತ್ತಿದ್ದವು.

ಅಷ್ಟೇ ಅಲ್ಲದೆ, ಒಂದೇ ಚಿತ್ರಮಂದಿರದಲ್ಲಿ ಸತತ ಎಂಟು ಶೋಗಳನ್ನು ಪ್ರದರ್ಶನ ಮಾಡಲಾಗಿತ್ತು. ಈ ರೀತಿ ಸತತ ಎಂಟು ಶೋಗಳು ನಡೆದಿದ್ದು ಇತಿಹಾಸದಲ್ಲಿ ಯಾವ ಸಿನಿಮಾಗೂ ಆಗಿಲ್ಲ ಮತ್ತು ಇಡೀ ಇಂಡಿಯಾದಲ್ಲೇ ಆ ತರಹದ ದಾಖಲೆ ಬೇರೆಲ್ಲೂ ಇಲ್ಲ ಎನ್ನುತ್ತಾರೆ ನಿರ್ದೇಶಕರು. ಹೀಗೆ, "ಅವನು ಯಾವ ಸೀಮೆ ಹೀರೋರೀ?" ಎಂದು ಮೂದಲಿಸಿದವರೇ, ಬ್ಲಾಕ್‌ನಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಲು ಪರದಾಡುವಂತಹ ವಾತಾವರಣವನ್ನು 'ಅಂತ' ಸಿನಿಮಾ ನಿರ್ಮಾಣ ಮಾಡಿತ್ತು. ಅರ್ಧಕ್ಕೆ ನಿಂತುಹೋಗಿದ್ದ ಸಿನಿಮಾ, ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿ ಹೊಸ ಶಕೆಯೊಂದನ್ನು ಆರಂಭಿಸಿತು.

ಕೃಪೆ: ವಿವಿಧ ವಿಸ್ಮಯ