ದರ್ಶನ್ ಅಭಿಮಾನಿಗಳಿಂದಲೇ ಮುಂಬರುವ 'ದಿ ಡೆವಿಲ್' ಪ್ರಮೋಶನ್ ಶುರು ಮಾಡಿದೆ ಚಿತ್ರತಂಡ. ಸಿನಿಮಾ ಬಿಡುಗಡೆಗೆ ಇನ್ನು ತಿಂಗಳು ಕೂಡ ಟೈಂ ಇಲ್ಲ. ಆದ್ದರಿಂದ ಈಗಾಗಲೇ ಸಿನಿಮಾ ಪ್ರಚಾರ ಶುರುವಾಗಿದೆ. ದರ್ಶನ್ ಇಲ್ಲದ ಪ್ರಚಾರಕಾರ್ಯ ಯಾವ ರೀತಿಯಲ್ಲಿ ಗುರಿ ಮುಟ್ಟಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಡಿ ಬಾಸ್ ಅಭಿಮಾನಿಗಳೊಂದಿಗೆ ಸಭೆ

ಸದ್ಯಕ್ಕೆ ಕೊಲೆ ಆರೋಪದಲ್ಲಿ ಜೈಲು ಸೇರಿರುವ ಕನ್ನಡದ ಸ್ಟಾರ್ ನಟ ದರ್ಶನ್ ತೂಗುದೀಪ (Darshan Thoogudeepa) ಅಭಿಮಾನಿಗಳ ಜೊತೆ ವಿಜಯಲಕ್ಷ್ಮೀ (Vijayalakshmi Darshan) ಅವರು ಸಭೆ ಮಾಡಿದ್ದಾರೆ. ವಿಜಯಲಕ್ಷ್ಮೀ ಅವರು ದರ್ಶನ್ ಪತ್ನಿ ಎಂದು ಬಹುತೇಕರಿಗೆ ಗೊತ್ತು. ದರ್ಶನ್ ಅವರ ಗೈರುಹಾಜರಿಯಲ್ಲಿ, ದರ್ಶನ್ ನಟನೆಯ 'ದಿ ಡೆವಿಲ್' ಸಿನಿಮಾವನ್ನು ತೆರೆಗೆ ತರಬೇಕಾದ ಅನಿವಾರ್ಯತೆಯಲ್ಲಿ 'ದಿ ಡೆವಿಲ್' ಸಿನಿಮಾ ತಂಡ ಸಿಲುಕಿಕೊಂಡಿದೆ. ಆದರೆ ದರ್ಶನ್ ಅನುಪಸ್ಥಿತಿಯಲ್ಲಿ ಸಿನಿಮಾದ ಪ್ರಚಾರಕಾರ್ಯದ ಜವಾಬ್ದಾರಿಯನ್ನು ಪತ್ನಿ ವಿಜಯಲಕ್ಷ್ಮೀ ಅವರು ವಹಿಸಿಕೊಂಡು ಎಲ್ಲಾ ಪ್ಲಾನ್ ಮಾಡುತ್ತಿದ್ದಾರೆ. ಇದೀಗ, ಕಳೆದ ವಾರ ನಡೆದ (16 ನವೆಂಬರ್ 2025) ಮೀಟಿಂಗ್ ಕೂಡ ದಿ ಡೆವಿಲ್ ಸಿನಿಮಾದ ಪ್ರಚಾರಕ್ಕೆ ಸಂಬಂಧಿಸಿದ್ದೇ ಆಗಿದೆ.

ಡಿಸೆಂಬರ್ 12ರಂದು ದರ್ಶನ್ ನಟನೆಯ 'ದಿ ಡೆವಿಲ್' ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದೆ. ದರ್ಶನ್ ಜೈಲಿನಲ್ಲಿದ್ದು, ಪ್ರಚಾರದ ಜವಾಬ್ದಾರಿ ಹೊತ್ತಿರೋ ದರ್ಶನ್ ಪತ್ನಿ ಅವರು ಅದಕ್ಕಾಗಿ ಸಭೆ ನಡೆಸುತ್ತಿದ್ದಾರೆ. ನವೆಂಬರ್ 16ಕ್ಕೆ ಖಾಸಗಿ ಹೊಟೇಲ್ ನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ದಿ ಡೆವಿಲ್ ಮೂರನೇ ಸಾಂಗ್ ಬಿಡುಗಡೆ ಆಗಿದೆ. ಆಗ ತಂಡದ ಜೊತೆಗೆ ಈವೆಂಟ್​ನಲ್ಲಿ ಭಾಗಿಯಾದ ದರ್ಶನ್ ಪತ್ನಿ ವಿಜಯಲಕ್ಷ್ಮೀ, ಸೋದರ ದಿನಕರ್ ತೂಗುದೀಪ ಮತ್ತೆ ದರ್ಶನ್ ಅಕ್ಕನ ಮಗ, ಹೀಗೆ ಎಲ್ಲರೂ ಸೇರಿ ದರ್ಶನ್ ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.

'ಸಿನಿಮಾವನ್ನ ನೀವೇ ಗೆಲ್ಲಿಸಬೇಕು' ಎಂದು ದರ್ಶನ್ ಅಭಿಮಾನಿಗಳ ಬಳಿ ವಿಜಯಲಕ್ಷ್ಮೀ ಅವರು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ವಿಜಯಲಕ್ಷ್ಮೀ ದಶ್ನ್ ಅವರ ಮಾತಿಗೆ ಸಹಜವಾಗಿಯೇ ಅಲ್ಲಿ ಬೆಲೆ ಸಿಕ್ಕಿರುತ್ತದೆ. ಆದರೆ, ನುಡಿದಂತೆ ನಡೆಯುತ್ತಾರಾ ದರ್ಶನ್ ಅಭಿಮಾನಿಗಳು ಎಂಬುದೊಂದು ಯಕ್ಷಪ್ರಶ್ನೆಯೇ ಸರಿ. ಏಕೆಂದರೆ, ಈ ಮೊದಲು ಸಾಕಷ್ಟು ಬಾರಿ 'ಶಾಂತಿ ಕಾಪಾಡಿ' ಎಂದು ಅದೆಷ್ಟೇ ಹೇಳಿದರೂ ಅವರು ಕಾಪಾಡಿದ್ದು 'ಅಶಾಂತಿ'ಯನ್ನೇ ಎಂಬುದು ಗೊತ್ತಿರೋ ವಿಚಾರ.

ದರ್ಶನ್ ಇಲ್ಲದ ಡೆವಿಲ್ ಈವೆಂಟ್ ಝಲಕ್..!

ಕಳೆದ ಭಾನುವಾರ 16-11-2025 ರಂದು ಉಲ್ಲಾಳ ಬಳಿ ಇರೋ ಜಿಎಮ್ ಪಾರ್ಟಿ ಹಾಲ್‌ನಲ್ಲಿ ಈ ಈವೆಂಟ್ ನಡೆದಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ದರ್ಶನ್ ಸಹೋದರ ದಿನಕರ್ ಅವರುಗಳು ಅಭಿಮಾನಿಗಳಿಗೆ ಅಲ್ಲಿ ಸಾಥ್ ಕೊಟ್ಟಿದ್ದಾರೆ. ಕೇವಲ ಅಭಿಮಾನಿಗಳ ಜೊತೆ ಈವೆಂಟ್ ಮಾಡಿದ ಮುಗಿಸಿದ್ದಾರೆ ದರ್ಶನ್ ಕುಟುಂಬಸ್ತರು. ಆದರೆ ಅಲ್ಲಿ ನಿರ್ದೇಶಕ ಪ್ರಕಾಶ್ ವೀರ್ (ಮಿಲನಾ ಪ್ರಕಾಶ್) ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸೇರಿದಂತೆ ಇಡೀ ಚಿತ್ರತಂಡವೂ ಭಾಗಿ ಆಗಿತ್ತು. ಡೆವಿಲ್ ಸಿನಿಮಾ ಡಿಸೆಂಬರ್ -12 ರಂದು ರಾಜ್ಯಾದ್ಯಂತ ರಿಲೀಸ್ ಆಗ್ತಿದೆ.

ದರ್ಶನ್ ಹೆಸರು ಉಳಿಸ್ತಾರಾ ಫ್ಯಾನ್ಸ್‌?

ದರ್ಶನ್ ಅಭಿಮಾನಿಗಳಿಂದಲೇ ಮುಂಬರುವ 'ದಿ ಡೆವಿಲ್' ಪ್ರಮೋಶನ್ ಶುರು ಮಾಡಿದೆ ಚಿತ್ರತಂಡ. ಸಿನಿಮಾ ಬಿಡುಗಡೆಗೆ ಇನ್ನು ತಿಂಗಳು ಕೂಡ ಟೈಂ ಇಲ್ಲ. ಆದ್ದರಿಂದ ಈಗಾಗಲೇ ಸಿನಿಮಾ ಪ್ರಚಾರ ಶುರುವಾಗಿದೆ. ದರ್ಶನ್ ಇಲ್ಲದ ಪ್ರಚಾರಕಾರ್ಯ ಯಾವ ರೀತಿಯಲ್ಲಿ ಗುರಿ ಮುಟ್ಟಲಿದೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ, ಒಂದು ಮಾತಂತೂ ಸತ್ಯ.. ನಟ ದರ್ಶನ್ ತೂಗುದೀಪ ಅವರಿಗೆ ಈಗಲೂ ಕೂಡ ಅಭಿಮಾನಿಗಳು ದಿನದಿನಕ್ಕೆ ಜಾಸ್ತಿಯಾಗುತ್ತಲೇ ಇದ್ದಾರೆ ಹೊರತೂ ಕಡಿಮೆ ಆಗುತ್ತಿಲ್ಲ. ಆದರೆ, ಅಭಿಮಾನಿಗಳು ಶಾಂತಿ-ಸುವ್ಯವಸ್ಥೆ ಕಾಪಾಡಿಕೊಂಡು, ದರ್ಶನ್ ಅವರಿಗೆ ಮಸಿ ಬಳಿಯುವ ಕೆಲಸ ಮಾಡದೇ ಸಿನಿಮಾ ಗೆಲುವಿಗೆ ಕಾರಣ ಆಗ್ತಾರಾ? ಇದು ಉತ್ತರವಿಲ್ಲದ ಮಿಲಿಯನ್ ಡಾಲರ್ ಪ್ರಶ್ನೆಯೇ ಸರಿ!