ಹೆಗಲ ಮೇಲೆ ಹಸಿರು ಟವಲ್, ಹಳೆಯ ಶರ್ಟು, ಕಪ್ಪು ಬಣ್ಣದ ಪ್ಯಾಂಟ್ ತೊಟ್ಟ ಧ್ರುವ ಸರ್ಜಾ ಚಿತ್ರದ ನಾಯಕಿ ರಚಿತಾ ರಾಮ್ ಅವರ ಜುಟ್ಟು ಹಿಡಿದು ಮಾಸ್ ಡೈಲಾಗ್ ಹೇಳುವ ಮೂಲಕ ಕ್ರಿಮಿನಲ್ ಚಿತ್ರಕ್ಕೆ ಚಾಲನೆ ನೀಡಲಾಯಿತು.
ಧ್ರುವ ಸರ್ಜಾ ಮತ್ತು ರಚಿತಾರಾಮ್ ನಟನೆಯ ಹೊಸ ಚಿತ್ರಕ್ಕೆ ಮುಹೂರ್ತ ಆಗಿದೆ. ಚಿತ್ರದ ಹೆಸರು ‘ಕ್ರಿಮಿನಲ್’. ಹೆಗಲ ಮೇಲೆ ಹಸಿರು ಟವಲ್, ಹಳೆಯ ಶರ್ಟು, ಕಪ್ಪು ಬಣ್ಣದ ಪ್ಯಾಂಟ್ ತೊಟ್ಟ ಧ್ರುವ ಸರ್ಜಾ ಚಿತ್ರದ ನಾಯಕಿ ರಚಿತಾ ರಾಮ್ ಅವರ ಜುಟ್ಟು ಹಿಡಿದು ಮಾಸ್ ಡೈಲಾಗ್ ಹೇಳುವ ಮೂಲಕ ಚಿತ್ರಕ್ಕೆ ಚಾಲನೆ ನೀಡಲಾಯಿತು. ರಾಜ್ ಗುರು ಚಿತ್ರದ ನಿರ್ದೇಶಕರು. ಮನೀಶ್ ಶಾ ನಿರ್ಮಾಪಕರು.
ಧ್ರುವ ಸರ್ಜಾ, ‘ಉತ್ತರ ಕರ್ನಾಟಕದ ಹಾವೇರಿಯ ಹಾನಗಲ್‌ನಲ್ಲಿ ನಡೆದ ಪ್ರೇಮ ಕತೆಯನ್ನು ಆಧರಿಸಿದ ಸಿನಿಮಾ ಇದು. ಶೇ.99 ಭಾಗ ನೈಜ ಕತೆ ಇದೆ. ಚಿತ್ರದ ಕತೆ ಕೇಳಿದ ಮೇಲೆ ನಾನೇ ರಚಿತಾ ಅವರಿಗೂ ಹೇಳಿದೆ. ಅವರು ಒಪ್ಪಿಕೊಂಡರು. ತುಂಬಾ ಯೂನಿಕ್ ಕತೆ ಇದು. ಇಡೀ ಸಿನಿಮಾ ಉತ್ತರ ಕರ್ನಾಟಕ ಭಾಷೆಯಲ್ಲಿರುತ್ತದೆ. ಅದಕ್ಕೆ ನಾವೆಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದೇವೆ’ ಎಂದರು.
ರಾಜ್ ಗುರು, ‘ಈ ಚಿತ್ರದಲ್ಲಿ ಧ್ರುವ ಸರ್ಜಾ ಅವರು ಶಿವ ಹಾಗೂ ರಚಿತಾ ರಾಮ್ ಅವರು ಪಾರ್ವತಿ ಹೆಸರಿನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಧ್ರುವ ಕತೆ ಕೇಳಿ ಓಕೆ ಮಾಡಿದ ಮೇಲೆ ನಾನು ಅವರ ಜೊತೆಗೆ ಸೆಲ್ಫಿ ತೆಗೆದುಕೊಂಡೆ. ಆಗ ಭಯ ಮತ್ತು ಜವಾಬ್ದಾರಿ ಶುರುವಾಯಿತು. ಎರಡನೇ ನಿರ್ದೇಶನದ ಚಿತ್ರಕ್ಕೇ ದೊಡ್ಡ ಹೀರೋ, ನಿರ್ಮಾಣ ಸಂಸ್ಥೆ ಸಿಕ್ಕಿರುವುದು ನನ್ನ ಖುಷಿ’ ಎಂದರು. ರಚಿತಾ ರಾಮ್, ‘ಭರ್ಜರಿ ನಂತರ ಮತ್ತೆ ಜೊತೆಯಾಗುತ್ತಿದ್ದೇವೆ. ಈ ಚಿತ್ರದಲ್ಲಿ ಧ್ರುವ ಸರ್ಜಾ ತುಂಬಾ ಪ್ರಯೋಗಾತ್ಮಕ ಪಾತ್ರ ಮಾಡುತ್ತಿದ್ದಾರೆ’ ಎಂದರು. ತಾರಾ ನಾಯಕನ ತಾಯಿ ಪಾತ್ರ ಮಾಡುತ್ತಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನೀಡುತ್ತಿದ್ದಾರೆ.
ಮಾಸ್ಕ್ ಹಾಕ್ಕೊಂಡು ಕಡಲೆಕಾಯಿ ಪರಿಷೆ ಸುತ್ತಾಡಿದ ರಚಿತಾರಾಮ್
ರಚಿತಾ ರಾಮ್ ‘ಕ್ರಿಮಿನಲ್’ ಮುಹೂರ್ತದ ಬಳಿಕ ಮುಖಕ್ಕೆ ಸಿಂಹದ ಮಾಸ್ಕ್ ಧರಿಸಿ ಬೆಂಗಳೂರಿನ ಬಸವನಗುಡಿಯಲ್ಲಿ ನಡೆಯುತ್ತಿರುವ ಕಡಲೆಕಾಯಿ ಪರಿಷೆಯಲ್ಲಿ ಜನರ ಮಧ್ಯೆ ಜಾಲಿಯಾಗಿ ಸುತ್ತಾಡಿದ್ದಾರೆ. ಅವರು ಜನರ ಪಕ್ಕದಲ್ಲಿ ನಿಂತರೂ ಯಾರಿಗೂ ಅವರ ಗುರುತಾಗಲಿಲ್ಲ. ಈ ವೇಳೆ ಜನ ಗುರುತಿಸದ ಕಾರಣ ಬೇಕಾದ್ದನ್ನು ಖರೀದಿಸಿ, ಸೆಲ್ಫಿ ತೆಗೆಯುತ್ತಿದ್ದವರ ನಡುವೆ ಸಿಂಹದ ಮುಖವಾಡದಲ್ಲಿ ನಿಂತು ಸೆಲ್ಫಿಗೆ ಪೋಸ್ ನೀಡಿದ ಖುಷಿಯನ್ನು ಹಂಚಿಕೊಂಡಿದ್ದಾರೆ. ‘18 ವರ್ಷಗಳ ಬಳಿಕ ನಾನು ಪರಿಷೆಗೆ ಬಂದಿದ್ದೇನೆ. ಎಂತಹ ಅದ್ಭುತ ಅನುಭವ ಗೊತ್ತಾ, ಜನರ ನಡುವೆ ಸೆಲ್ಫಿ ತಗೊಂಡಾಗ ಅವರ್ಯಾರಿಗೂ ನಾನು ಅಂತ ಗೊತ್ತಾಗಲಿಲ್ಲ. ಎಲ್ರೂ ಸೆಲ್ಫಿ ತಗೊಳ್ಳುವಾಗ ನಾನು ಹೋಗಿ ನಿಲ್ತಿದ್ದೆ. ಬಹಳ ಮಜಾ ಇತ್ತು’ ಎಂದಿದ್ದಾರೆ.


