ಸದ್ಯಕ್ಕೆ ಪೊಲೀಸರು ಮೇಘಾ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಈ 'ತ್ರಿಕೋನ ಪ್ರೇಮ ಕಥೆ' ಅಥವಾ 'ಕೌಟುಂಬಿಕ ಕಲಹ' ವೈಶಾಕ್ ಅವರನ್ನು ಸಾವಿನ ದವಡೆಗೆ ತಳ್ಳಿತೇ ಎಂಬ ಆಯಾಮದಲ್ಲಿ ತನಿಖೆ ಮುಂದುವರಿಸಿದ್ದಾರೆ. ಮದುವೆಯಾದ 14 ವರ್ಷದ ನಂತರ ವೈಶಾಖ್ ತೆಗೆದುಕೊಂಡ ಈ ನಿರ್ಧಾರ ಇಡೀ ಕುಟುಂಬವನ್ನು ಅನಾಥವಾಗಿಸಿದೆ.
ವೈಶಾಖ್ ಸಾವಿನ ಸುತ್ತ ಅನುಮಾನಗಳ ಹುತ್ತ: ಯೂಟ್ಯೂಬ್‌ನಲ್ಲಿ ಕಂಡಿದ್ದ ಆ 'ಸಂಬಂಧ'ವೇ ಮುಳುವಾಯಿತೇ?
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದ ಉದ್ಯಮಿ ವೈಶಾಖ್ (Vaishak) ಅವರ ಆ*ತ್ಮಹತ್ಯೆ ಪ್ರಕರಣ ಈಗ ಮತ್ತೊಂದು ಮಗ್ಗುಲಿಗೆ ತಿರುಗಿದೆ. ಈ ಘಟನೆ ಸಂಬಂಧ ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ (UDR) ಪ್ರಕರಣ ದಾಖಲಾಗಿದ್ದು, ಮೃತ ವೈಶಾಖ್ ಅವರ ಪತ್ನಿ ಮೇಘಾ ಅವರು ನೀಡಿರುವ ದೂರು ಈಗ ಹಲವು ಸಂಚಲನಗಳನ್ನು ಸೃಷ್ಟಿಸಿದೆ. "ಗಂಡನ ಸಾವಿನ ಬಗ್ಗೆ ಯಾವುದೇ ಅನುಮಾನವಿಲ್ಲ" ಎಂದು ದೂರು ನೀಡಿದ್ದರೂ, ಆ ದೂರಿನ ಒಳಪುಟಗಳಲ್ಲಿರುವ ಅಂಶಗಳು ಮಾತ್ರ ಕಣ್ಣು ಕೆಂಪಾಗುವಂತೆ ಮಾಡಿದೆ.
ನಟಿ ಕೃಷಿ ಜೊತೆಗಿನ 'ಲಿಂಕ್' ಬಗ್ಗೆ ಪತ್ನಿ ಹೇಳಿದ್ದೇನು?
ದೂರಿನಲ್ಲಿ ಮೇಘಾ ಅವರು ನಟಿ ಕೃಷಿ ತಾಪಾಂಡ (Krishi Thapanda) ಅವರ ಬಗ್ಗೆ ನೇರವಾಗಿಯೇ ಉಲ್ಲೇಖಿಸಿದ್ದಾರೆ. "ನನ್ನ ಪತಿ ವೈಶಾಖ್‌ಗೆ ನಟಿ ಕೃಷಿ ಜೊತೆ ಅನೈತಿಕ ಸಂಬಂಧ ಇದೆ ಎಂದು ನಾನು ಯೂಟ್ಯೂಬ್ ಚಾನೆಲ್ ಒಂದರಲ್ಲಿ ಬಂದ ಸುದ್ದಿಯನ್ನು ನೋಡಿ ತಿಳಿದುಕೊಂಡಿದ್ದೆ. ಈ ವಿಚಾರವಾಗಿ ನಾನು ಹಲವು ಬಾರಿ ಅವರ ಜೊತೆ ಜಗಳವಾಡಿದ್ದೆ. ಈ ಸಹವಾಸ ಬಿಡುವಂತೆ ಗೋಗರೆದಿದ್ದೆ. ಬಿಡುತ್ತೇನೆ ಎಂದು ಮಾತು ಕೊಟ್ಟಿದ್ದ ಅವರು, ಆ ಮಾತನ್ನು ಉಳಿಸಿಕೊಳ್ಳಲೇ ಇಲ್ಲ" ಎಂದು ಮೇಘಾ ಅಳಲು ತೋಡಿಕೊಂಡಿದ್ದಾರೆ.
ಮಾತು ಬಿಟ್ಟಿದ್ದರು, ಕೇವಲ ವಾಟ್ಸಾಪ್ ಮೆಸೇಜ್!
ನಟಿಯ ಜೊತೆಗಿನ ಸ್ನೇಹದ ವಿಚಾರ ಮನೆಯಲ್ಲಿ ದೊಡ್ಡ ಮಟ್ಟದ ರಂಪಾಟಕ್ಕೆ ಕಾರಣವಾಗಿತ್ತು. ಪತ್ನಿ ಕೇಳಿದ ಪ್ರಶ್ನೆಗಳಿಂದ ಬೇಸತ್ತಿದ್ದ ವೈಶಾಖ್, ಇತ್ತೀಚೆಗೆ ಪತ್ನಿಯ ಜೊತೆ ಮಾತನಾಡುವುದನ್ನೇ ಬಿಟ್ಟಿದ್ದರು. ಏನೇ ಹೇಳಬೇಕಿದ್ದರೂ ಕೇವಲ ವಾಟ್ಸಾಪ್ (WhatsApp) ಮೂಲಕ ಮೆಸೇಜ್ ಮಾಡುತ್ತಿದ್ದರು. ಕಳೆದ ಒಂದು ತಿಂಗಳಿನಿಂದ ಅವರು ಮನೆಗೆ ಕೂಡ ಬಂದಿರಲಿಲ್ಲ ಎಂಬ ಆಘಾತಕಾರಿ ವಿಷಯವನ್ನು ಮೇಘಾ ಪೊಲೀಸರಿಗೆ ತಿಳಿಸಿದ್ದಾರೆ.
ಮಗನ ಬಗ್ಗೆ ವಿಚಾರಿಸಿದ್ದೇ ಕೊನೆಯ ಸಂದೇಶ!
ನಿನ್ನೆ ರಾತ್ರಿ ಕೂಡ ವೈಶಾಖ್ ಅವರು ಪತ್ನಿ ಮೇಘಾಗೆ ವಾಟ್ಸಾಪ್ ಮಾಡಿದ್ದರು. "ಮಗ ಮನೆಗೆ ಬಂದನಾ?" ಎಂದು ಕೇಳಿದ್ದರು. ಅದಕ್ಕೆ ಮೇಘಾ "ಬಂದಿದ್ದಾನೆ" ಎಂದು ರಿಪ್ಲೈ ಕೂಡ ಮಾಡಿದ್ದರು. ಆದರೆ, ಅದೇ ಅವರ ಕೊನೆಯ ಸಂಭಾಷಣೆ ಆಗುತ್ತದೆ ಎಂದು ಮೇಘಾ ಅಂದುಕೊಂಡಿರಲಿಲ್ಲ. ರಾತ್ರಿ 11:30ರ ಸುಮಾರಿಗೆ ಪೊಲೀಸರಿಂದ ಬಂದ ಕರೆ ವೈಶಾಖ್ ಅವರ ಇಡೀ ಕುಟುಂಬವನ್ನು ಸ್ತಬ್ದಗೊಳಿಸಿತ್ತು.
ಘಟನಾ ಸ್ಥಳದಲ್ಲಿ ನಟಿ ಕೃಷಿ ಇರುವುದು ಕಂಡ ಪತ್ನಿ!
ವಿಷಯ ತಿಳಿದು ಮೇಘಾ ಮತ್ತು ಮಾವನವರು ಕೃಷಿ ತಾಪಾಂಡ ಅವರ ನಿವಾಸಕ್ಕೆ ಹೋದಾಗ, ವೈಶಾಖ್ ಅಲ್ಲಿ ಮೃತಪಟ್ಟಿದ್ದರು. ಬೆಡ್ ಮೇಲೆ ಅಂಗಾತ ಮಲಗಿದ್ದ ಸ್ಥಿತಿಯಲ್ಲಿ ಪತಿ ಇರುವುದನ್ನು ಕಂಡ ಪತ್ನಿ ಕಂಗಾಲಾಗಿದ್ದರು. ಆ ಸಮಯದಲ್ಲಿ ಘಟನಾ ಸ್ಥಳದಲ್ಲಿ ಪೊಲೀಸರ ಜೊತೆಗೆ ನಟಿ ಕೃಷಿ ಕೂಡ ಇರುವುದನ್ನು ಪತ್ನಿ ಗಮನಿಸಿದ್ದಾರೆ. 2010ರಲ್ಲಿ ಮದುವೆಯಾಗಿ 14 ವರ್ಷದ ಮಗನಿದ್ದರೂ, ಸುಖಿ ಸಂಸಾರದಲ್ಲಿ ನಟಿಯ ಎಂಟ್ರಿ ಬಿರುಗಾಳಿ ಎಬ್ಬಿಸಿತ್ತು ಎಂಬುದು ಪತ್ನಿಯ ಮಾತಿನಿಂದ ಸ್ಪಷ್ಟವಾಗಿದೆ.
ಸದ್ಯಕ್ಕೆ ಪೊಲೀಸರು ಮೇಘಾ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಈ 'ತ್ರಿಕೋನ ಪ್ರೇಮ ಕಥೆ' ಅಥವಾ 'ಕೌಟುಂಬಿಕ ಕಲಹ' ವೈಶಾಖ್ ಅವರನ್ನು ಸಾವಿನ ದವಡೆಗೆ ತಳ್ಳಿತೇ ಎಂಬ ಆಯಾಮದಲ್ಲಿ ತನಿಖೆ ಮುಂದುವರಿಸಿದ್ದಾರೆ. ಮದುವೆಯಾದ 14 ವರ್ಷದ ನಂತರ ವೈಶಾಕ್ ತೆಗೆದುಕೊಂಡ ಈ ನಿರ್ಧಾರ ಇಡೀ ಕುಟುಂಬವನ್ನು ಅನಾಥವಾಗಿಸಿದೆ.


