Cinema Hungama: ಸ್ಯಾಂಡಲ್‌ವುಡ್ ಸುಲ್ತಾನನಾಗಿ ಮೆರೆದ ನಟ ದರ್ಶನ್ ಈಗ ಜೈಲಿನ ನಾಲ್ಕು ಗೋಡೆಗಳ ಮಧ್ಯೆ ಇದ್ದಾರೆ. ಆದರೆ, ಹೊರಗಡೆ ಅವರ ಬಿಡುಗಡೆಗಾಗಿ ಒಬ್ಬ ಒಂಟಿ ಮಹಿಳೆ ಅಹೋರಾತ್ರಿ ಹೋರಾಡ್ತಾ ಇದ್ದಾರೆ.
ಸ್ಯಾಂಡಲ್‌ವುಡ್ ಸುಲ್ತಾನನಾಗಿ ಮೆರೆದ ನಟ ದರ್ಶನ್ ಈಗ ಜೈಲಿನ ನಾಲ್ಕು ಗೋಡೆಗಳ ಮಧ್ಯೆ ಇದ್ದಾರೆ. ಆದರೆ, ಹೊರಗಡೆ ಅವರ ಬಿಡುಗಡೆಗಾಗಿ ಒಬ್ಬ ಒಂಟಿ ಮಹಿಳೆ ಅಹೋರಾತ್ರಿ ಹೋರಾಡ್ತಾ ಇದ್ದಾರೆ. ಅವರೇ ವಿಜಯಲಕ್ಷ್ಮಿ ದರ್ಶನ್. ಪತಿಯ ಬಿಡುಗಡೆಯ ಕಾನೂನು ಹೋರಾಟ ಒಂದು ಕಡೆಯಾದರೆ, ದರ್ಶನ್ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧದ ಹೋರಾಟ ಇನ್ನೊಂದು ಕಡೆ. ವಿಜಯಲಕ್ಷ್ಮಿ ಬದುಕು ಈಗ ಬರೀ ಹೋರಾಟದ ಕಣವಾಗಿಬಿಟ್ಟಿದೆ. ಸವಾಲುಗಳು ಒಬ್ಬ ಮನುಷ್ಯನನ್ನ ಎಷ್ಟು ಗಟ್ಟಿಗೊಳಿಸುತ್ತವೆ ಎಂಬುದಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿನೇ ಸಾಕ್ಷಿ.
ದರ್ಶನ್ ಹೊರಗಿದ್ದಾಗ ತಾವಾಯ್ತು ತಮ್ಮ ಪಾಡಾಯ್ತು ಅಂತ ಇದ್ದವರು ವಿಜಯಲಕ್ಷ್ಮೀ. ಆದ್ರೆ ಪತಿ ದರ್ಶನ್ ಜೈಲು ಪಾಲಾದ ದಿನದಿಂದ ಹಿಡಿದು ಇಂದಿನವರೆಗೂ ವಿಜಯಲಕ್ಷ್ಮಿ ಧೃತಿಗೆಟ್ಟಿಲ್ಲ. ಪ್ರತಿ ಹೆಜ್ಜೆಯಲ್ಲೂ ಕಾನೂನಿನ ಹೋರಾಟ ನಡೆಸುತ್ತಿದ್ದಾರೆ. ಸುದೀರ್ಘ ಕಾನೂನು ಪ್ರಕ್ರಿಯೆ, ಕೋರ್ಟ್ ಕಚೇರಿ ಅಲೆದಾಟ, ವಕೀಲರ ಭೇಟಿ... ಹೀಗೆ ಪತಿಯನ್ನ ಮನೆಗೆ ಕರೆತರಲು ಈ ಹೆಣ್ಣುಮಗಳು ಪಡುತ್ತಿರುವ ಶ್ರಮ ಸಾಮಾನ್ಯದ್ದಲ್ಲ. ಜೈಲಿಗೆ ಆಗಾಗ ಭೇಟಿ ಕೊಡ್ತಾ, ಕುಗ್ಗಿ ಹೋಗಿರುವ ಪತಿಯನ್ನ ಸಂತೈಸೋದು. ಕೇಸ್ ವಿಚಾರಕ್ಕೆ ಸಂಬಂಧ ಪಟ್ಟ ಕೆಲಸಗಳನ್ನ ನೋಡಿಕೊಳ್ಳೋದು. ಜೊತೆಗೆ ಮಗನನ್ನ ನೋಡಿಕೊಳ್ಳೋ ಹೊಣೆ ವಿಜಯಲಕ್ಷ್ಮೀ ಮೇಲಿದೆ.
ಇದೆಲ್ಲದರ ನಡುವೆ ದರ್ಶನ್ ಪರವಾಗಿ ಅಭಿಮಾನಿಗಳ ಜೊತೆಗೂ ವಿಜಯಲಕ್ಷ್ಮೀ ಟಚ್ನಲ್ಲಿ ಇದ್ದಾರೆ. ಕಳೆದ ಡಿಸೆಂಬರ್ನಲ್ಲಿ ತೆರೆಕಂಡ ದರ್ಶನ್ ನಟನೆಯ ದಿ ಡೆವಿಲ್ ಚಿತ್ರವನ್ನ ಖುದ್ದು ವಿಜಯಲಕ್ಷ್ಮೀ ಪ್ರಚಾರ ಮಾಡಿದ್ರು. ಹೌದು ಕಷ್ಟದಲ್ಲಿದ್ದಾಗ ಕೈ ಹಿಡಿಯಬೇಕಾದವರೇ, ಆ ಕಷ್ಟವನ್ನ ಬಂಡವಾಳ ಮಾಡಿಕೊಳ್ಳಲು ನಿಂತರೆ ಹೇಗಿರುತ್ತೆ? ಸದ್ಯ ದರ್ಶನ್ದೂ ಅದೇ ಪರಿಸ್ಥಿತಿ ಆಗಿದೆ. ರೇಣುಕಾಸ್ವಾಮಿ ಕೇಸ್ನ ಹೋಲುವ ದೃಶ್ಯಗಳನ್ನ ಇಟ್ಟುಕೊಂಡು ಬಾಸ್ ಅನ್ನೋ ಹೆಸರಲ್ಲಿ ಸಿನಿಮಾ ಮಾಡಿದೆ ಒಂದು ಚಿತ್ರತಂಡ. ದರ್ಶನ್ ರನ್ನ ಫ್ಯಾನ್ಸ್ ಡಿ ಬಾಸ್ ಅಂತಾರೆ. ಅಂತೆಯೇ ಈ ಸಿನಿತಂಡದವರು ತಮ್ಮ ಸಿನಿಮಾಗೆ ಬಾಸ್ ಅಂತಲೇ ಹೆಸರಿಟ್ಟಿದ್ದಾರೆ.
ಟೀಸರ್ನಲ್ಲಿರೋ ಸೀನ್ಸ್ ನೋಡ್ತಾ ಇದ್ರೆ ಇದು, ಯಾರ ಕಥೆ.. ಏನ್ ಕಥೆ ಅನ್ನೋದು ಚಿಕ್ಕಮಕ್ಕಳಿಗೂ ಅರ್ಥ ಆಗುತ್ತೆ. ಸದ್ಯ ‘ಬಾಸ್' ಹೆಸರಿನಲ್ಲಿ ಚಿತ್ರ ಮಾಡಲು ಹೊರಟವರ ವಿರುದ್ಧ ವಿಜಯಲಕ್ಷ್ಮಿ ಯುದ್ಧ ಸಾರಿದ್ದಾರೆ. ದರ್ಶನ್ ಇಮೇಜ್ ಮತ್ತು ಅವರ ಪರಿಸ್ಥಿತಿಯನ್ನ ಬಳಸಿಕೊಂಡು ಲಾಭ ಮಾಡಿಕೊಳ್ಳಲು ಹವಣಿಸುತ್ತಿರುವವರ ವಿರುದ್ಧ ವಿಜಯಲಕ್ಷ್ಮಿ ಕೆಂಡಾಮಂಡಲವಾಗಿದ್ದಾರೆ. ನಗರ ಸಿವಿಲ್ ನ್ಯಾಯಾಲಯ ಈ ಹಿಂದೆ ಬಾಸ್ ಚಿತ್ರದ ಬಿಡುಗಡೆಗೆ ವಿಧಿಸಿದ್ದ ಮಧ್ಯಂತರ ತಡೆಯಾಜ್ಞೆಯನ್ನ ತೆರವುಗೊಳಿಸಿ ರಿಲೀಸ್ಗೆ ಅವಕಾಶ ನೀಡಿತ್ತು. ಅದರ ಬೆನ್ನಲ್ಲೇ ಚಿತ್ರತಂಡ ಜೂನ್ 19ರಂದು ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಸದ್ಯ ಹೈಕೋರ್ಟ್ ಮೆಟ್ಟಿಲೇರಿ ಇದರ ರಿಲೀಸ್ ನಿಲ್ಲಿಸೋದಕ್ಕೆ ವಿಜಯಲಕ್ಷ್ಮೀ ಸಜ್ಜಾಗಿದ್ದಾರೆ.
ಪತಿ, ಮಗನಿಗಾಗಿ ಧೈರ್ಯಲಕ್ಷ್ಮಿ ಆದ ವಿಜಯಲಕ್ಷ್ಮಿ..!
ಹೌದು ಒಂದೆಡೆ ಕಾನೂನು ಸಮರ, ಇನ್ನೊಂದೆಡೆ ಚಿತ್ರರಂಗದ ಒಳಗಿನ ವಿರೋಧಿಗಳ ವಿರುದ್ಧದ ಹೋರಾಟ. ಆದರೆ ಇವೆಲ್ಲದರ ನಡುವೆ ವಿಜಯಲಕ್ಷ್ಮಿ ಒಬ್ಬ ತಾಯಿಯೂ ಹೌದು. ಮಗ ವಿನೀಶ್‌ನ ಭವಿಷ್ಯವನ್ನ ರೂಪಿಸುವ ದೊಡ್ಡ ಜವಾಬ್ದಾರಿಯೂ ಅವರ ಮೇಲಿದೆ. ಸಮಾಜದ ನೂರಾರು ಕಟು ಮಾತುಗಳು, ಹಿತಶತ್ರುಗಳ ಕುತಂತ್ರಗಳು... ಇಷ್ಟೆಲ್ಲಾ ಒತ್ತಡಗಳ ನಡುವೆಯೂ ವಿಜಯಲಕ್ಷ್ಮಿ ತನ್ನ ಮಗನಿಗಾಗಿ ಧೈರ್ಯಲಕ್ಷ್ಮಿ ಆಗಿದ್ದಾರೆ. ಮನೆಗೆ ಆಧಾರವಾಗಿದ್ದ ಪತಿ ದೂರವಿದ್ದರೂ, ತಾನೇ ಆಲದ ಮರದಂತೆ ಕುಟುಂಬವನ್ನ ಕಾಯ್ತಾ ಇದ್ದಾರೆ. ವಿಜಯಲಕ್ಷ್ಮಿ ಅವರ ಈ ತಾಳ್ಮೆ ಮತ್ತು ಧೈರ್ಯವನ್ನ ಕಂಡು ಈಕೆ ನಿಜಕ್ಕೂ ಧೈರ್ಯಲಕ್ಷ್ಮಿ ಅಂತಿದ್ದಾರೆ ಫ್ಯಾನ್ಸ್.


