ಚಿತ್ರರಂಗದಲ್ಲಿ ನಟಿಯಾಗಬೇಕೆಂದು ಕನಸು ಕಂಡಿದ್ದ ಸುಂದರಿ, ರಿಯಾಲಿಟಿ ಶೋನಲ್ಲಿ ಗಂಡ ಮಕ್ಕಳಿಗೆ ಸವಾಲ್ ಹಾಕಿದ ಧೀರೆ, ಎಷ್ಟೋ ಕಷ್ಟ ಬಂದರೂ ಎದುರಿಸುವೆ ಎಂದು ಹೇಳುತ್ತಿದ್ದ ಚಿತ್ರರಂಗದ ಮಗಳು ಜಯಶ್ರೀ ರಾಮಯ್ಯ, ಮಾಗಡಿ ರಸ್ತೆಯಲ್ಲಿರು ಅನಾಥಾಶ್ರಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಚಾರ ಬಗ್ಗೆ ಹಿರಿಯ ನಿರ್ದೇಶಕ ಟಿಎನ್ ಸೀತಾರಾಮ್ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿದ್ದಾರೆ, ಬೇಸರ ವ್ಯಕ್ತ ಪಡಿಸಿದ್ದಾರೆ.

ಅನಾಥಾಶ್ರಮದಲ್ಲಿ ಜಯಶ್ರೀ ಆತ್ಮಹತ್ಯೆ; ಮನೆಯಿಂದ ಹೊರ ಬರಲು ಕಾರಣವೇನು?

ಸೀತಾರಾಮ್ ಮಾತು:
ಜೀವನವೇ ಇಷ್ಟು, ಸಾಕು ಜೀವನ ಎಂದು ಆತ್ಮಹತ್ಯೆ ಆಲೋಚನೆ ಮಾಡುವ ಜನರಿಗೆ ಕಿವಿ ಮಾತು ಹೇಳಿದ್ದಾರೆ. 'ಮನುಷ್ಯ ಸ್ವತಂತ್ರ. ಆದರೆ ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಸ್ವಾತಂತ್ರ್ಯವೇ ಇರುವುದಿಲ್ಲ ಅಂತ ಹೇಳುತ್ತಾರೆ. ಆ ಕ್ಷಣದಲ್ಲಿ ಅವರಿಗೆ ಯಾವ ದಾರಿಗಳು ಗೋಚರವಾಗುವುದಿಲ್ಲ. ತಾನು ಬದುಕಿನ ದುರಂತದಲ್ಲಿ ಬಂಧಿಯಾಗಿದ್ದೇನೆ ಎನಿಸುವುದಕ್ಕೆ ಶುರುವಾಗುತ್ತದಂತೆ. ಜಯಶ್ರೀ ಸ್ವಂತ ಬದುಕಿನ ಬಗ್ಗೆ ನನಗೆ ಗೊತ್ತಿಲ್ಲ. ಫೇಸ್‌ಬುಕ್‌ನಲ್ಲೋ ಎಲ್ಲೋ ನೋಡಿದೆ. ಆಕೆ ಬಿಗ್‌ ಬಾಸ್‌ನಲ್ಲಿ ಬಂದಿದ್ದರು, ತುಂಬಾ ಲಕ್ಷಣವಾಗಿದ್ದಂಥ ಹೆಣ್ಣು ಮಗಳು. ತಾಯಿ ಜೊತೆ ಇದ್ದರಂತೆ. ಅದೆಲ್ಲೋ ಹೋಗಿ ವೃದ್ಧಾಶ್ರಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಕೌನ್ಸೆಲಿಂಗ್ ಕೂಡ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ನಾನು ಕೇಳಿದೆ. ತುಂಬಾ ದುಃಖದ ವಿಚಾರ. ತುಂಬಾ ಚಿಕ್ಕವರು. ಈ ಬದುಕಿನ ದುರಂತ ನಮ್ಮನ್ನು ಹೇಗೆ ಮಾಡುತ್ತೆ ಎಂದರೆ ಮನಸ್ಸನ್ನು ಅಧೀರವಾಗಿಸುತ್ತೆ. ಕಟು ವಾಸ್ತವಗಳನ್ನು ಎದುರಿಸಲು ಸಾಧ್ಯವಾಗುವುದಿಲ್ಲ. ಯಾರದ್ದೋ ನಗು ಗೇಲಿಯ ರೀತಿ ಕಾಣುತ್ತದೆ, ಯಾರದೋ ಮಾತು ಅಪಹಾಸ್ಯದ ರೀತಿ ಕಾಣುತ್ತದೆ, ಯಾರೋ ನಿಮ್ಮನ್ನು ಸಣ್ಣದಾಗಿ ಹೆದರಿಸಿ ಮಾತನಾಡಿದರೂ ಅಟ್ಟಹಾಸ ಹಾಗೂ ತೇಜೋವಧೆಯಂತೆ ಗೋಚರವಾಗುತ್ತದೆ. ಮನಸ್ಸನ್ನು ಬಹಳ ವೀಕ್ ಮಾಡಿಕೊಳ್ಳುತ್ತಾರೆ. ಇದು ತಪ್ಪು,' ಎಂದು ಸೀತಾರಾಮ್‌ ಕಿವಿಮಾತು ಹೇಳಿದ್ದಾರೆ. 

ಪ್ರಪಂಚ ಇರೋವರೆಗೂ ಯಾರೂ ಬದುಕಿರಲ್ಲ:
'ಈ ಬದುಕನ್ನು ಭಗವಂತ ಕೊಟ್ಟಿರುವುದು ಒಂದೇ ಸಲ. ಮತ್ತೆ ಮತ್ತೆ ಕೊಡಲ್ಲ .ಧೈರ್ಯಗೆಟ್ಟು ಆತ್ಮಹತ್ಯೆಯಂಥ ನಿರ್ಧಾರಕ್ಕೆ ಹೋಗಬಾರದು. ಈ ಭೂಮಿ ಇರೋವರೆಗೂ ಅಥವಾ ಪ್ರಪಂಚ ಇರೋವವರೆಗೂ ಯಾರೂ ಬದುಕಿರೋಲ್ಲ. ಇದ್ದಾಗ ಜೀವನವನ್ನು ಸುಂದರವಾಗಿಸಿಕೊಳ್ಳಬೇಕು. ಹೀಗೆಲ್ಲಾ ಅನಾಹುತ ಮಾಡಿಕೊಂಡರೆ ಬದುಕಿರುವವರಿಗೂ ಕಷ್ಟವಾಗುತ್ತದೆ. ಬದುಕಿನಿಂದ ದಕ್ಕಿಸಿಕೊಳ್ಳಬೇಕಾದ ಪ್ರೀತಿ ವಾತ್ಸಲ್ಯ ಕಳೆದುಕೊಳ್ಳುತ್ತಾರೆ,' ಎಂದು ಹೇಳಿದ್ದಾರೆ.

'ಜೀವನ ಹೀಗೆ ಇರುವುದಿಲ್ಲ, ಮನುಷ್ಯನಿಗೆ ಕೆಟ್ಟ ದಿನಗಳು ಬರುತ್ತೆ. ಆ ದಿನಗಳು ಹಾಗೆ ಉಳಿಯುವುದು ಇಲ್ಲ.ಬೇರೆಯವರಿಗಿಂತ ನಾವು ಶ್ರೇಷ್ಠವಾಗಿದ್ದೇವೆ ಎಂಬ ಸುಳ್ಳು ಅಹಂಕಾರವನ್ನು ಬೆಳಸಿಕೊಳ್ಳಿ. ಆದರೆ ಅಹಂಕಾರಗಳಿಗೆ ಬಲಿಯಾಗುವುದು ಬೇಡ. ಒತ್ತಡದಲ್ಲಿದ್ದರೆ ಸ್ನೇಹಿತರ ಬಳಿ ಮಾತನಾಡಿ. ಡೈರಿ ಬರೆಯುವ ಅಭ್ಯಾಸ ಮಾಡಿಕೊಳ್ಳಿ. ದಿನಕ್ಕೊಂದು ಜೋಕ್ ಬರೆಯಿರಿ. ಉಲ್ಲಾಸ ಹುಟ್ಟುತ್ತೆ. ಎಷ್ಟೇ ದುಃಖವಿದ್ದರೂ ಅದನ್ನು ದುರಂತಕ್ಕೆ ತೆಗೆದುಕೊಂಡು ಹೋಗುವುದು ಬೇಡ. ಜಯಶ್ರೀ ಆತ್ಮಕ್ಕೆ ಶಾಂತಿ ಸಿಗಲಿ,' ಎಂದು ಸೀತಾರಾಮ್ ಸಂತಾಪ ಸೂಚಿಸಿದ್ದಾರೆ

ಜಯಶ್ರೀ ನಂಬರ್ ಚೆಂಜ್ ಮಾಡಿಕೊಂಡಿದ್ದು ಯಾಕೆ? ಕಾರಣ ಹೇಳಿದ ಭಾವನಾ