ಭರ್ಜರಿ ಬ್ಲಾಕ್‌ಬಸ್ಟರ್‌ ಸಿನಿಮಾವಾಗಿ ‘ಸು ಫ್ರಂ ಸೋ’ ಹೊರಹೊಮ್ಮಿದೆ. ಸಿನಿಮಾ ಬಿಡುಗಡೆಯಾದ ಮೂರನೇ ದಿನ ಅಡ್ವಾನ್ಸ್‌ ಬುಕಿಂಗ್‌ನಿಂದಲೇ ಬರೋಬ್ಬರಿ 2.4 ಕೋಟಿ ರು.ಗೂ ಅಧಿಕ ಗಳಿಕೆ ಮಾಡಿದೆ ಎನ್ನಲಾಗಿದೆ.

ಭರ್ಜರಿ ಬ್ಲಾಕ್‌ಬಸ್ಟರ್‌ ಸಿನಿಮಾವಾಗಿ ‘ಸು ಫ್ರಂ ಸೋ’ ಹೊರಹೊಮ್ಮಿದೆ. ಸಿನಿಮಾ ಬಿಡುಗಡೆಯಾದ ಮೂರನೇ ದಿನ ಅಡ್ವಾನ್ಸ್‌ ಬುಕಿಂಗ್‌ನಿಂದಲೇ ಬರೋಬ್ಬರಿ 2.4 ಕೋಟಿ ರು.ಗೂ ಅಧಿಕ ಗಳಿಕೆ ಮಾಡಿದೆ ಎನ್ನಲಾಗಿದೆ. ಒಟ್ಟಾರೆ ರಿಲೀಸ್‌ ಆದಂದಿನಿಂದ ಈವರೆಗೆ ಸಿನಿಮಾ ಕಲೆಕ್ಷನ್ 8 ಕೋಟಿ ರು. ದಾಟುವ ನಿರೀಕ್ಷೆ ಇದೆ. ಭಾನುವಾರ ರಾಜ್ಯದೆಲ್ಲೆಡೆ ಈ ಸಿನಿಮಾ ನೋಡಲು ಜನ ಮುಗಿಬಿದ್ದಿದ್ದು, ಥೇಟರ್‌ ಮುಂದೆ ಜನಜಾತ್ರೆಯೇ ನೆರೆದಿತ್ತು. ಟಿಕೆಟ್‌ಗಳು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿ ಜನ ಟಿಕೆಟ್ ಬರ ಎದುರಿಸುವಂತಾಗಿತ್ತು.

ಟಿಕೆಟ್‌ ಸಿಕ್ಕವನೇ ಅದೃಷ್ಟವಂತ ಅನ್ನೋ ಸನ್ನಿವೇಶ ಸೃಷ್ಟಿಯಾಗಿತ್ತು. ಇನ್ನೊಂದೆಡೆ ಈ ಸಿನಿಮಾ ವಿತರಣೆಗೆ ಪ್ರತಿಷ್ಠಿತ ವಿತರಕ ಸಂಸ್ಥೆಗಳು ಮುಂದೆ ಬಂದಿವೆ. ‘ಪುಷ್ಪ’, ‘ಕೆಜಿಎಫ್‌’ನಂಥಾ ಸಿನಿಮಾಗಳನ್ನು ವಿತರಣೆ ಮಾಡಿದ್ದ ಪ್ರತಿಷ್ಠಿತ ಅನಿಲ್‌ ಟಂಡಾನಿ ಒಡೆತನದ ಎಎ ಫಿಲಂಸ್‌ ‘ಸು ಫ್ರಂ ಸೋ’ ಸಿನಿಮಾದ ಹಿಂದಿ ಆವೃತ್ತಿಯನ್ನು ಉತ್ತರ ಭಾರತದಾದ್ಯಂತ ಬಿಡುಗಡೆ ಮಾಡಲಿದ್ದಾರೆ. ಕೇರಳದಲ್ಲಿ ಆಗಸ್ಟ್‌ 1 ರಂದು ಮಲಯಾಳಂ ವರ್ಶನ್‌ ಬಿಡುಗಡೆಯಾಗುತ್ತಿದ್ದು, ಸ್ಟಾರ್ ನಟ ದುಲ್ಖರ್ ಸಲ್ಮಾನ್‌ ಒಡೆತನದ ವೇಫರರ್‌ ಫಿಲಂಸ್‌ ಈ ಸಿನಿಮಾ ವಿತರಿಸಲಿದ್ದಾರೆ.

ರಿಷಬ್‌ ಶೆಟ್ಟಿ ಈ ಸಿನಿಮಾದ ಗೆಲುವಿಗೆ ಚಿತ್ರತಂಡವನ್ನು ಅಭಿನಂದಿಸಿ ಪತ್ರ ಬರೆದಿದ್ದಾರೆ. ಚಿತ್ರ ಗೆಲ್ಲಿಸಿದ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ. ‘ಈ ಸಿನಿಮಾ ನನ್ನನ್ನು ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದ ದಿನಗಳಿಗೆ ಕರೆದುಕೊಂಡು ಹೋಯಿತು. ಆ ಚಿತ್ರದಲ್ಲಿ ನಟಿಸಿದ್ದ ಅನೇಕ ಕಲಾವಿದರು ಸು ಫ್ರಂ ಸೋ ಚಿತ್ರದಲ್ಲೂ ಇರುವುದು ಹಳೆಯ ನೆನಪು ಮರುಕಳಿಸುವಂತೆ ಮಾಡಿತು’ ಎಂದಿದ್ದಾರೆ.

ಅನೇಕರು ಈ ಸಿನಿಮಾದ ಯಶಸ್ಸು ನೋಡಿ ‘ಕಾಂತಾರ’ ಸಿನಿಮಾ ಬಿಡುಗಡೆಯಾದ ಸಂದರ್ಭವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಧನಂಜಯ, ನಿರ್ಮಾಪಕಿ ಸುಪ್ರಿಯಾ ಸುದೀಪ್‌, ಸಪ್ತಮಿ ಗೌಡ, ಸಿಂಪಲ್‌ ಸುನಿ ಸೇರಿದಂತೆ ಅನೇಕ ನಟ, ನಟಿಯರು ಸಿನಿಮಾ ತಂಡದ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ್ದಾರೆ. ರಾಜ್‌ ಬಿ ಶೆಟ್ಟಿ ನಿರ್ಮಾಣದ ಈ ಸಿನಿಮಾವನ್ನು ಜೆ ಪಿ ತುಮಿನಾಡು ನಿರ್ದೇಶಿಸಿ ನಾಯಕನಾಗಿ ನಟಿಸಿದ್ದಾರೆ. ಶನೀಲ್‌ ಗೌತಮ್‌, ಸಂಧ್ಯಾ ಅರೆಕೆರೆ ಮುಖ್ಯಪಾತ್ರದಲ್ಲಿದ್ದಾರೆ.