Pranaya Raja Srinath: 1968ರ ಕಾಲಘಟ್ಟದ ಈ ಅಪರೂಪದ ಚಿತ್ರದಲ್ಲಿ ಶ್ರೀನಾಥ್ ಅವರೊಂದಿಗೆ ಕನ್ನಡ ಚಿತ್ರರಂಗದ ಹಿರಿಯ ನಟಿ ಪಂಡರಿಬಾಯಿ ಹಾಗೂ ನಿರ್ದೇಶಕ ಎಸ್.ಕೆ.ಎ. ಚಾರಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ಪ್ರಣಯರಾಜ ಶ್ರೀನಾಥ್ ಅವರು ತಮ್ಮ ಸಿನಿ ಪಯಣದ ಅಪರೂಪದ ನೆನಪುಗಳನ್ನು ಆಗಾಗ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು ಹಂಚಿಕೊಂಡಿರುವ ಒಂದು ಹಳೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಗಮನ ಸೆಳೆಯುತ್ತಿದೆ. 1968ರ ಕಾಲಘಟ್ಟದ ಈ ಅಪರೂಪದ ಚಿತ್ರದಲ್ಲಿ ಶ್ರೀನಾಥ್ ಅವರೊಂದಿಗೆ ಕನ್ನಡ ಚಿತ್ರರಂಗದ ಹಿರಿಯ ನಟಿ ಪಂಡರಿಬಾಯಿ ಹಾಗೂ ನಿರ್ದೇಶಕ ಎಸ್.ಕೆ.ಎ. ಚಾರಿ ಕಾಣಿಸಿಕೊಂಡಿದ್ದಾರೆ. ಈ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಶ್ರೀನಾಥ್, ಹಳೆಯ ದಿನಗಳನ್ನು ನೆನೆದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

'ಮಧುರ ಮಿಲನ' ಚಿತ್ರದ ಸೆಟ್‌ನ ಅಪರೂಪದ ಕ್ಷಣ

"ನನ್ನ ನಟನೆಯ 'ಮಧುರ ಮಿಲನ' ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಪಂಡರಿಬಾಯಿ ಹಾಗೂ ನಿರ್ದೇಶಕ ಎಸ್.ಕೆ.ಎ. ಚಾರಿ ಅವರೊಂದಿಗೆ ಕಳೆದ ಅಪರೂಪದ ಕ್ಷಣ" ಎಂದು ಶ್ರೀನಾಥ್ ಈ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ. ಈ ಪೋಸ್ಟ್ ನೋಡಿದ ಅಭಿಮಾನಿಗಳು ಹಳೆಯ ಕನ್ನಡ ಚಿತ್ರರಂಗದ ಆ ಸುವರ್ಣ ಯುಗವನ್ನು ನೆನಪಿಸಿಕೊಂಡಿದ್ದು, "ಎಲ್ಲಾ ರತ್ನಗಳು ಒಂದೇ ಫ್ರೇಮ್‌ನಲ್ಲಿ" ಎಂದು ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಮಧುರ ಮಿಲನ' ಚಿತ್ರದ ನೆನಪು

ಶ್ರೀನಾಥ್ ನಾಯಕನಾಗಿ ನಟಿಸಿದ್ದ 'ಮಧುರ ಮಿಲನ' ಸಿನಿಮಾ 1969ರ ಫೆಬ್ರವರಿ 25ರಂದು ಬಿಡುಗಡೆಯಾಗಿತ್ತು. ಎಸ್.ಕೆ.ಎ. ಚಾರಿ ನಿರ್ದೇಶನದ ಈ ಚಿತ್ರದಲ್ಲಿ ಶ್ರೀನಾಥ್ ಅವರೊಂದಿಗೆ ಉದಯಕುಮಾರ್, ಬಾಲಕೃಷ್ಣ, ಪದ್ಮಾಂಜಲಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದರು. ಈ ಸಿನಿಮಾ ಶ್ರೀನಾಥ್ ಅವರ ವೃತ್ತಿಜೀವನದ ಆರಂಭಿಕ ಹಂತದ ಪ್ರಮುಖ ಚಿತ್ರಗಳಲ್ಲಿ ಒಂದಾಗಿದೆ.

ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ಮಿಂಚಿದ ಪಂಡರಿಬಾಯಿ

ಕನ್ನಡ ಚಿತ್ರರಂಗದ ಮೊದಲ ಯಶಸ್ವಿ ನಾಯಕಿಯರಲ್ಲಿ ಒಬ್ಬರೆಂದು ಗುರುತಿಸಲ್ಪಡುವ ಪಂಡರಿಬಾಯಿ ಅವರ ಸಿನಿ ಪಯಣವೇ ಒಂದು ಇತಿಹಾಸ. ಪೌರಾಣಿಕ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಅವರು 1943ರಲ್ಲಿ ಬಿಡುಗಡೆಯಾದ 'ವಾಣಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ನಂತರ ಕನ್ನಡ ಮಾತ್ರವಲ್ಲದೆ, ಹಿಂದಿ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ ಅವರು, ಡಾ. ರಾಜ್‌ಕುಮಾರ್, ಎಂಜಿ ರಾಮಚಂದ್ರನ್, ಶಿವಾಜಿ ಗಣೇಶನ್ ಸೇರಿದಂತೆ ಹಲವು ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

ಸುಮಾರು 1000ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಪಂಡರಿಬಾಯಿ ಅವರು ಕನ್ನಡ ಚಿತ್ರರಂಗದ ಅತ್ಯಂತ ಗೌರವಾನ್ವಿತ ಕಲಾವಿದರಲ್ಲಿ ಒಬ್ಬರು. ಕರ್ನಾಟಕದ ಕರಾವಳಿ ಭಾಗದ ಭಟ್ಕಳದಲ್ಲಿ ಜನಿಸಿದ ಅವರು, ತಂದೆಯ ಪ್ರಭಾವದಿಂದ ಕೇವಲ 10ನೇ ವಯಸ್ಸಿನಲ್ಲೇ ಹರಿಕಥೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆರಂಭಿಸಿದ್ದರು. ಇನ್ನು ಶ್ರೀನಾಥ್ ಹಂಚಿಕೊಂಡಿರುವ ಈ ಅಪರೂಪದ ಫೋಟೋ ಇದೀಗ ಕೇವಲ ಒಂದು ಚಿತ್ರವಾಗಿರದೆ, ಕನ್ನಡ ಚಿತ್ರರಂಗದ ಸುವರ್ಣ ಯುಗದ ನೆನಪಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದಿದೆ.

View post on Instagram