ಲಾಕ್‌ಡೌನ್‌ನಿಂದ ಖುಷಿಯೂ ಇಲ್ಲ, ಬೇಸರವೇ ಎಲ್ಲ ಅನ್ನೋ ಪರಿಸ್ಥಿತಿ ಇದೆ. ಇಂಥಾ ಸ್ಥಿತಿಯನ್ನು ಭರಿಸುವಂತೆ ಮಾಡೋದು ಸಂಗೀತವೇ. ನಾವು ಏನೂ ಮಾಡ್ತಾ ಇಲ್ಲ. ಇದರಿಂದ ಮುಂದೆ ಏನೋ ಆಗಬಹುದು ಅನ್ನುವ ಮನೋಭಾವ ಹೋಗಿ, ನಾನು ಏನನ್ನೋ ಕ್ರಿಯೇಟಿವ್ ಆಗಿ ಸೃಷ್ಟಿಮಾಡುತ್ತಿದ್ದೇನೆ ಅನ್ನುವ ಭಾವ ನಿಮ್ಮೊಳಗೆ ಬರುವಂತೆ ಮಾಡುತ್ತದೆ.
‘ನಾತಿ ಚರಾಮಿ’ ಚಿತ್ರದ ‘ಮಾಯಾವಿ ಮನವೇ’ ಹಾಡಿಗೆ ರಾಷ್ಟ್ರಪ್ರಶಸ್ತಿ ಪಡೆದ ಗಾಯಕಿ ಬಿಂದು ಮಾಲಿನಿ. ಇವರ ಹಾಡುಗಳಿಗೆ ಅಪಾರ ಅಭಿಮಾನಿಗಳಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಸಂಗೀತದ ಮೂಲಕ ಸಂಕಷ್ಟಪರಿಹಾರ ಹೇಗೆ ಅನ್ನುವುದನ್ನು ಅವರ ಮಾತುಗಳಲ್ಲಿ ಕೇಳುವುದೇ ಖುಷಿ.
ಕೊರೋನಾ ಸಂಕಟಕ್ಕೆ ಮ್ಯೂಸಿಕ್ ಮದ್ದಾಗಬಲ್ಲದಾ?
ಖಂಡಿತಾ. ಖುಷಿ ಇಲ್ಲ, ಬೇಸರವೇ ಎಲ್ಲ ಅನ್ನೋ ಪರಿಸ್ಥಿತಿ ಇದೆ. ಇಂಥಾ ಸ್ಥಿತಿಯನ್ನು ಭರಿಸುವಂತೆ ಮಾಡೋದು ಸಂಗೀತವೇ. ನಾವು ಏನೂ ಮಾಡ್ತಾ ಇಲ್ಲ. ಇದರಿಂದ ಮುಂದೆ ಏನೋ ಆಗಬಹುದು ಅನ್ನುವ ಮನೋಭಾವ ಹೋಗಿ, ನಾನು ಏನನ್ನೋ ಕ್ರಿಯೇಟಿವ್ ಆಗಿ ಸೃಷ್ಟಿ ಮಾಡುತ್ತಿದ್ದೇನೆ ಅನ್ನುವ ಭಾವ ನಿಮ್ಮೊಳಗೆ ಬರುತ್ತೆ. ಮನಸ್ಸು ಮತ್ತು ಭಾವನೆಗಳನ್ನು ಸಮಾಧಾನ ಪಡಿಸೋದು ಗೊತ್ತಿದೆ ಸಂಗೀತಕ್ಕೆ, ಇದರಲ್ಲಿ ಎರಡು ಬಗೆಯ ಪ್ರೊಸೆಸ್ ಇದೆ.
ಲಾಕ್‌ಡೌನ್ ಮುಗಿದ ಮೇಲೆ ಹೊಸ ಲೈಫ್ ಶುರು: ವಿಜಯಶ್ರೀ
ಹಾಡುವ ನನಗೂ ಖುಷಿ, ಕೇಳುವ ನಿಮಗೂ ಖುಷಿ. ಒಂಥರಾ ಆನಂದದ ಕಂಬೈನ್‌್ಡ ಎಕ್ಸ್‌ಪೀರಿಯನ್ಸ್. ನನಗೆ ವೈಯುಕ್ತಿಕವಾಗಿ ಹೊರಗೆ ಕಾರ್ಯಕ್ರಮ ಇಲ್ಲ. ಹಾಗಾಗಿ ಇದು ಆಳವಾದ ಅಭ್ಯಾಸಕ್ಕೆ ಸಿಕ್ಕ ಸಮಯ. ಕಂಪೋಸಿಂಗ್ ಮಾಡ್ತೀನಿ. ಮುಂದೆ ಏನ್ಮಾಡಬಹುದು ಅಂತ ಪ್ಲಾನ್ ಮಾಡ್ತೀನಿ.
- ಆಳವಾಗಿ ಸಂಗೀತದೊಳಗೆ ತೊಡಗಿಸುವಷ್ಟುಸಮಯ ಸಿಕ್ಕಿದೆಯಲ್ಲಾ?
ಮೊದಲಾದರೆ ನಾಳೆ ಒಂದು ಕಾನ್ಸರ್ಟ್ ಇದೆ. ಅದಕ್ಕೆ ಪ್ರಾಕ್ಟೀಸ್ ಮಾಡಬೇಕು ಅನ್ನುವ ಫಲಿತಾಂಶ ಬೇಡುವ ಬೌಂಡರಿಗಳಿದ್ದವು. ಈಗ ಹಾಗಿಲ್ಲ. ರಾಗದತ್ತ ಮತ್ತಷ್ಟುಆಳವಾಗಿ, ತೀವ್ರವಾಗಿ ಚಲಿಸಬಹುದು ಏಕಾಗ್ರವಾಗುತ್ತಾ ಹೋಗಬಹುದು. ಹಾಡುವ ರೀತಿ ಬದಲಾಗುತ್ತಾ ಇದೆ.
ಸೂಫಿಯಲ್ಲಿ ಖಿಲ್ಲಾ ಅಂತ ಒಂದಿದೆ. ಸೂಫಿ ಸಾಧಕರು ಒಂದು ಹಂತದಲ್ಲಿ ಆಳವಾದ ಧ್ಯಾನಕ್ಕಿಳಿಯುತ್ತಾರೆ. ಆಗ ಮನುಷ್ಯರೊಂದಿಗಿನ ಸಂಪರ್ಕವನ್ನು ಸಂಪೂರ್ಣ ತ್ಯಜಿಸಿಬಿಡುತ್ತಾರೆ. ಏಕಾಂತವನ್ನು ಅರಸಿ ಹೋಗುತ್ತಾರೆ. ಅಲ್ಲಿ ಧ್ಯಾನಸ್ಥರಾಗುತ್ತಾರೆ. ನಮ್ಮ ಸಂಗೀತದಲ್ಲೂ ಮಾಸ್ಟರ್ಸ್, ಉಸ್ತಾದ್ ಈ ಬಗೆಯ ಸಾಧನೆ ಮಾಡುತ್ತಾರೆ. ನನಗೆ ಈ ಬಗ್ಗೆ ಹೇಳಿದ್ದು ನನ್ನ ಗುರು ಉಸ್ತಾದ್ ಅಬ್ದುಲ್ ರಶೀದ್ ಖಾನ್.
ವಿಜಯಪ್ರಕಾಶ್ ಈಗ ಫುಲ್‌ಟೈಮ್ ಫ್ಯಾಮಿಲಿ ಮ್ಯಾನ್; ಮನೆಯಲ್ಲಿ ಏನೆಲ್ಲಾ ಮಾಡ್ತಾರೆ ನೋಡಿ!
ಇವರು ಉತ್ತರ ಪ್ರದೇಶದ ಒಂದು ಚಿಕ್ಕ ಹಳ್ಳಿಯಿಂದ ಬಂದವರು. ಸಂಗೀತದ ಮಹಾನ್ ಸಾಧಕರು. ನಾನು ಅವರನ್ನು ಭೇಟಿಯಾದಾಗ ಅವರಿಗೆ ತೊಂಬತ್ತೊಂಭತ್ತು ವರ್ಷ ವಯಸ್ಸು. ಅವರು ಮೂರು ಸಲ ಖಿಲ್ಲಾ ಸಾಧನೆ ಮಾಡಿದ್ದಾರೆ. ಒಮ್ಮೆ ನೂರ ನಲವತ್ತು ದಿನ ಈ ಏಕಾಂತ ಧ್ಯಾನ ಮಾಡಿದ್ದಾರೆ. ಇನ್ನೂ ಎರಡು ಸಲ ಎರಡು ತಿಂಗಳಿಗಿಂತ ಹೆಚ್ಚು ಅವಧಿ ಮಾಡಿದ್ದಾರೆ. ಅವರು ಸ್ಮಶಾನದಲ್ಲಿ ಈ ಸಾಧನೆ ಮಾಡುತ್ತಿದ್ದದ್ದು. ಸ್ಮಶಾನದಲ್ಲಿ ಒಂದು ಮರ ಇತ್ತು. ಅದರ ಕೆಳಗೆ ಕೂತು ಅವರ ಸುದೀರ್ಘ ಸಂಗೀತ ಸಾಧನೆ. ದಿನಾ ಯಾರಾದರೂ ಹಳ್ಳಿಯವರು ನೀಡುವ ಒಂದು ಹೊತ್ತಿನ ಊಟ ಮಾತ್ರ. ಮಳೆ, ಬಿಸಿಲು ಯಾವುದನ್ನೂ ಲೆಕ್ಕಿಸದೇ ಅವರ ಸಾಧನೆ ಇತ್ತು. ತಪಸ್ಸೇ ಅದು. ನನಗೆ ಈ ದಿನಗಳಲ್ಲಿ ಆ ಸಾಧನೆಯ ನೆನಪು ಬಹಳ ಬರುತ್ತಿದೆ. ಆ ಮಟ್ಟದ ಸಾಧನೆ ಸಾಧ್ಯವಿಲ್ಲದಿದ್ದರೂ ಮಾಮೂಲಿಗಿಂತ ಭಿನ್ನ ಬಗೆಯ ಸಾಧನೆಯಂತೂ ಆಗುತ್ತಿದೆ.
ಈ ಹೊತ್ತಲ್ಲಿ ನೀವು ಸಜೆಸ್ಟ್ ಮಾಡುವ ಮ್ಯೂಸಿಕ್?
ಸೂಫಿ ಸಂಗೀತ ಕೇಳಿ. ನಮ್ಮ ಪಾರಂಪರಿಕ ಹಾಡುಗಳನ್ನು ಕೇಳಿ. ನೀವೀಗ ಆನ್‌ಲೈನ್‌ನಲ್ಲಿ ಅನೇಕ ಲೈವ್ ಸಂಗೀತ ಕಾರ್ಯಕ್ರಮ ಕೇಳಬಹುದು. ನನ್ನ ಗುರುಗಳ ಫೇಸ್‌ಬುಕ್ ಪೇಜ್ ರಸನ್ ಪಿಯಾ ಮ್ಯೂಸಿಕ್ ಫೌಂಡೇಶನ್ ಅಂತ. ಎಪ್ರಿಲ್ 6 ರಿಂದ ದಿನಾ ಎಂಟು ಗಂಟೆಗೆ ಒಬ್ಬೊಬ್ಬ ಸ್ಟೂಡೆಂಟ್ ಫೇಸ್‌ಬುಕ್ ಲೈವ್‌ಗೆ ಹೋಗಿ ಹಾಡಲಿಕ್ಕೆ ಹೇಳಿದ್ದಾರೆ. ಕೇಳಿ.
ಖುಷಿಯಲ್ಲಿ, ಬೇಜಾರಲ್ಲಿ ಗುನುಗೋ ಹಾಡುಗಳು?
ನಾನು ತುಂಬ ಖುಷಿಯಾದರೆ ಡ್ಯಾನ್ಸ್ ಮಾಡ್ತೀನಿ. ತುಂಬ ಬೇಜಾರಾದ್ರೆ ಜೋರಾಗಿ ಅಳುತ್ತೀನಿ, ಸೈಲೆಂಟ್ ಆಗಿ ಬಿಡುತ್ತೀನಿ. ಹಾಗಿದ್ದೂ ನಮ್ಮ ಭಾವನೆಗಳ ಮೇಲೆ ಮ್ಯೂಸಿಕ್ ಬೀರುವ ಪರಿಣಾಮಗಳನ್ನು ಕಂಡುಕೊಳ್ಳೋದು ಸ್ವಲ್ಪ ಮಟ್ಟಿಗೆ ಸಾಧ್ಯ ಆಗಿದೆ. ಭಯವೂ ಇದೆ. ಸಂಗೀತ ಎಲ್ಲಿ ಸಂಪೂರ್ಣವಾಗಿ ನನ್ನನ್ನೇ ತನ್ನ ತೆಕ್ಕೆಗೆ ಎಳೆದುಕೊಂಡು ಬಿಡುತ್ತೋ ಅಂತ.
ಮಾನಸಿಕ ಧೈರ್ಯ ಬೇಕಾದಾಗ ಅಮ್ಮನಿಂದ ಕಲಿತ ದೇವಿಯ ಹಾಡುಗಳನ್ನೋ, ಯಾವುದೋ ರಾಗವನ್ನೋ ಹಾಡುತ್ತೇನೆ. ಅಮೀರ್ ಖುಸ್ರೋ ಅವರ ‘ಬಹುತ್ ರಹೀ ಬಾಬುಲ್’ ಹಾಡಿ ಮುಗಿಸಿ ಕಣ್ಣು ಬಿಟ್ಟರೆ ಸುತ್ತ ಕೂತವರ ಕಣ್ಣುಗಳೆಲ್ಲೆಲ್ಲ ನೀರು! ಪ್ರತಿಯೊಬ್ಬರೂ ಅತ್ತು ಬಿಡುತ್ತಾರೆ. ನಂಗೆ ವಾಸು ದೀಕ್ಷಿತ್ ಹಾಡುಗಳು ತುಂಬ ಇಷ್ಟ. ಖುಷಿ ಆಗಿದ್ರೆ ಅವರ ಹಾಡು ಹಾಡ್ತೀನಿ, ಅವರು ಕುಣಿಯೋದನ್ನು ಕಲ್ಪಿಸಿಕೊಳ್ಳುತ್ತಾ.. ಸ್ಮರಾತ್ಮದ ಒಂದು ಹಾಡು ‘ನನಗೆ ನಾನೇ ದಾರಿ..’ ಅನ್ನೋ ಹಾಡು ಅವರ ದನಿಯಲ್ಲಿ ಕೇಳೋದಿಷ್ಟ.
ನಿಮ್ಮ ದಿನಚರಿ?
ಯಾವತ್ತಿಗಿಂತ ಹೆಚ್ಚು ಬ್ಯುಸಿಯಾಗಿದ್ದೀನಿ. ಐದೂವರೆಗೆಲ್ಲ ಏಳ್ತೀನಿ. ಶ್ರುತಿ ಬಾಕ್ಸ್ ಪಕ್ಕದಲ್ಲಿ ಇಟ್ಟುಕೊಂಡೇ ನಾನು ಮಲಕ್ಕೊಳ್ಳೋದು. ಎದ್ದ ತಕ್ಷಣ, ಹಲ್ಲುಜ್ಜೋಕೂ ಮೊದಲು, ಬೆಡ್ ನಿಂದ ಕೆಳಗಿಳಿಯೋಕೂ ಮೊದಲು ಶ್ರುತಿ ಬಾಕ್ಸ್ ಆನ್ ಮಾಡಿ ಖರಜ್ ರಿಯಾಸ್ ಮಾಡ್ತೀನಿ. ಈ ಅಭ್ಯಾಸ ಸ್ವರದ ಆಳಕ್ಕಿಳಿಯಲು ಹೆಚ್ಚು ಸಹಕಾರಿ. ಎದ್ದು ಕಾಫಿ ಕುಡಿಯೋದು. ಅಡುಗೆ ಮಾಡಬೇಕು ಅನಿಸಿದ್ರೆ ಅಡುಗೆ ಮಾಡೋದು. ವಾಸುಗೆ ಬೇಕಿದ್ರೆ ಅವರು ಕುಕ್ ಮಾಡ್ತಾರೆ. ಅಡುಗೆಗೆ ಬೇಕಾದ ಸೊಪ್ಪುಗಳನ್ನೆಲ್ಲ ಪಾಟ್‌ನಲ್ಲಿ ಬೆಳೆಯುತ್ತೀವಿ. ಎಂಟೂವರೆ ಯೋಗ ಪ್ರಾಕ್ಟೀಸ್. ಆಮೇಲೆ ಮನೆ ಕೆಲಸಗಳು. ಎರಡೂವರೆಯಿಂದ ನನ್ನ ಸಂಗೀತ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್‌ಗಳು, ನನ್ನ ಸಂಗೀತ ಅಭ್ಯಾಸಗಳು.. ಅಮ್ಮ ಕಂಪೋಸ್ ಮಾಡಿರುವ ಕೆಲವು ಹಾಡುಗಳನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡೋದು ಹೀಗೆ..
ಇದರ ಮಧ್ಯದಲ್ಲಿ ನಾನು ವಾಸು ಮ್ಯಾಗಜಿನ್ ಶುರು ಮಾಡಿದ್ದೀವಿ. ಫೇಸ್‌ಬುಕ್‌ನಲ್ಲಿ ಗ್ಯಾನ್ ಮಂಡಲಿ ಅಂತಿದೆ. ಸುಮ್ನೆ ತಮಾಷೆಗೆ ಶುರು ಮಾಡಿರೋದು. ತುಂಬ ವರ್ಷದಿಂದ ನಡೆದುಕೊಂಡು ಬಂದಿದೆ. ಸ್ಪಾಂಟೇನಿಯಸ್ ಆಗಿ ವಾಸು ಏನೇನೋ ಪ್ರಶ್ನೆ ಕೇಳ್ತಾರೆ. ನಾನು ಅದಕ್ಕೆ ಉತ್ತರ ಹೇಳ್ತೀನಿ. ಅದನ್ನು ವೀಡಿಯೋ ಮಾಡಿ ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡ್ತೀವಿ.
- ಲಾಕ್‌ಡೌನ್ ನಂತರ ನಾವು ಹೊಸ ವ್ಯಕ್ತಿಗಳಾಗಿ ಹೊರಬರುತ್ತೀವಿ ಅನಿಸುತ್ತಿದೆ. ಬದುಕಿನಲ್ಲಿ ಪ್ರತಿಯೊಂದೂ ಸರ್ಪ್ರೈಸಿಂಗ್ ಇದೂ ಕೂಡ ಹಾಗೆ.
- ಲಾಕ್‌ಡೌನ್‌ನಲ್ಲಿ ನಮ್ಮ ಕಲಿಕೆ ಹೆಚ್ಚು, ಮನಸ್ಸು ಬೆಳೆಯಲಿ, ದಯೆ ತುಂಬಿದ ಹೊಸ ಮನುಷ್ಯರಾಗಿ ಹೊರ ಬರೋಣ.
- ನಿತ್ತಿಲೆ
