ಕಾಶಿನಾಥ್‌ ಪುತ್ರ ಅಭಿಮನ್ಯು ನಟನೆಯ ಎಲ್ಲಿಗೋ ಪಯಣ ಯಾವುದೋ ದಾರಿ ಚಿತ್ರದಿಂದ ಕನ್ನಡಕ್ಕೆ ಪರಿಚಯಗೊಳ್ಳುತ್ತಿರುವ ಹೊಸ ನಟಿ ವಿಜಯಶ್ರೀ ಕಲ್ಬುರ್ಗಿ. ಈಕೆ ತಮ್ಮ ಮೊದಲ ಚಿತ್ರದ ಬಗ್ಗೆ ಇಲ್ಲಿ ಹೇಳಿಕೊಂಡಿದ್ದಾರೆ.

ನಟನೆಗೆ ಬರುವ ಮೊದಲು ಏನಾಗಿದ್ರಿ?

ಬೆಂಗಳೂರಿನ ಎಂಎಸ್‌ ರಾಮಯ್ಯ ಕಾಲೇಜಿನಲ್ಲಿ ಗ್ರ್ಯಾಜುವೇಷನ್‌ ಮುಗಿಸಿದ್ದೇನೆ. ಜಾಹೀರಾತು, ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಂಡಿದ್ದೆ.

ನಿಮ್ಮ ಸಿನಿಮಾ ಪ್ರವೇಶ ಶುರುವಾಗಿದ್ದು ಹೇಗೆ?

ಎಲ್ಲಿಗೋ ಪಯಣ ಯಾವುದೋ ದಾರಿ ಚಿತ್ರಕ್ಕೆ ನಾಯಕಿ ಆಗುವ ಮುನ್ನ ಎರಡು ಚಿತ್ರಗಳಲ್ಲಿ ನಟಿಸಿದ್ದೆ. ಅವು ಇನ್ನೂ ಬಿಡುಗಡೆಯಾಗಿಲ್ಲ. ಈ ಪೈಕಿ ಸಾಲ್ಟ್‌ ಹೆಸರಿನ ಕಾಮಿಡಿ ಚಿತ್ರಕ್ಕೆ ಶೂಟಿಂಗ್‌ ಕೂಡ ಮುಗಿದಿದೆ. ಜತೆಗೆ ಒಂದು ಆಲ್ಬಂ ಮಾಡಿದ್ದೆ. ಇದರಿಂದಲೇ ನನಗೆ ಕಿರಣ್‌ ಸೂರ್ಯ ನಿರ್ದೇಶನದ ಎಲ್ಲಿಗೋ ಪಯಣ ಯಾವುದೋ ದಾರಿ ಚಿತ್ರಕ್ಕೆ ನಾಯಕಿ ಆಗುವ ಅವಕಾಶ ಸಿಕ್ಕಿತು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ

ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿರುತ್ತದೆ?

ಕಾಲೇಜಿಗೆ ಹೋಗುವ ಮುಗ್ಧ ಹುಡುಗಿ ಪಾತ್ರ. ಏನೂ ಗೊತ್ತಿಲ್ಲದ ಹುಡುಗಿ, ನಾಯಕನ ಪಾತ್ರಕ್ಕೆ ಹೇಗೆ ಕನೆಕ್ಟ್ ಆಗುತ್ತಾಳೆ, ಆ ಮೂಲಕ ಆಗುವ ಥ್ರಿಲ್ಲಿಂಗ್‌ ತಿರುವಿಗೆ ನಾನು ಸಾಕ್ಷಿ ಆಗುತ್ತೇನೆ. ಕಾಶಿನಾಥ್‌ ಪುತ್ರ ಅಭಿಮನ್ಯು ಅವರ ಜತೆ ನಟಿಸಿದ್ದು ಖುಷಿ ಕೊಟ್ಟಿತು.

ಸಿನಿಮಾಗಳಲ್ಲಿ ನಟಿಸಲು ಮಾಡೆಲಿಂಗ್‌ ಅನುಭವ ಇದ್ದರೆ ಸಾಕಾ?

ಖಂಡಿತ ಅಷ್ಟೇ ಸಾಕಾಗಲ್ಲ. ಮಾಡೆಲಿಂಗ್‌ ಅಥವಾ ಜಾಹೀರಾತುಗಳಲ್ಲಿ ಕಾಣಿಸಿಕೊಂಡರೆ ಕ್ಯಾಮೆರಾ ಎದುರಿಸುವ ಭಯ ದೂರ ಆಗಬಹುದು ಅಷ್ಟೆ. ಆದರೆ, ಮುಂದೆ ಸಿನಿಮಾಗಳಿಗೆ ಹೋದರೆ ಆಯಾ ಚಿತ್ರದ ಕತೆ ಮತ್ತು ಪಾತ್ರಕ್ಕೆ ತಕ್ಕಂತೆ ತಯಾರಿ ಮಾಡಿಕೊಳ್ಳುವುದು ಅಗತ್ಯ.

ತರಬೇತಿ ಶಿಬಿರ, ಸ್ಕಿ್ರಪ್ಟ್‌ ರೀಡಿಂಗ್‌, ಡೈಲಾಗ್‌ ಹೇಳುವ ರೀತಿ, ನಮ್ಮ ಹಾವ-ಭಾವಗಳು... ಹೀಗೆ ಪ್ರತಿಯೊಂದನ್ನು ನೋಡಿ ಅಥವಾ ಹೇಳಿಸಿಕೊಂಡು ಕಲಿಯಬೇಕು. ಬಹುಶಃ ರಂಗಭೂಮಿಯ ಹಿನ್ನೆಲೆ ಇದ್ದವರಿಗೆ ಈ ಕಲಿಕೆ ಸುಲಭ. ನಾನು ಕಾಲೇಜಿನಲ್ಲಿರುವಾಗಲೇ ರಂಗಭೂಮಿಯ ನಂಟು ಇತ್ತು.

ನಿಮ್ಮ ಮೊದಲ ಚಿತ್ರಕ್ಕೆ ಕೊರೋನಾ, ಲಾಕ್‌ಡೌನ್‌ ಸಂಕಷ್ಟಎದುರಾಯಿತಲ್ಲ?

ಕೊರೋನಾ ಭೀತಿ ಶುರುವಾಗುವ ಮುನ್ನವೇ ನಮ್ಮ ಚಿತ್ರತಂಡಕ್ಕೆ ಡೆಂಗ್ಯೂ ಕಾಟ ಶುರುವಾಯಿತು. ಚಿತ್ರೀಕರಣದಲ್ಲಿ ಇದ್ದಾಗ ಒಬ್ಬೊಬ್ಬರಿಗೆ ಡೆಂಗ್ಯೂ ಕಾಣಿಸಿಕೊಳ್ಳುತ್ತಿದ್ದ ಕಾರಣ ಚಿತ್ರೀಕರಣೕ ನಿಲ್ಲಿಸಬೇಕಾಯಿತು. ಮತ್ತೆ ಶೂಟಿಂಗ್‌ ಆರಂಭಿಸಬೇಕು ಎನ್ನುವಷ್ಟರಲ್ಲಿ ಕೊರೋನಾ ಭೀತಿ ಎದುರಾಯಿತು.

ಸದ್ಯದ ಸಂಕಷ್ಟವನ್ನು ನೀವು ಹೇಗೆ ನೋಡುತ್ತೀರಿ?

ಮೊದಲ ಚಿತ್ರದ ಶೂಟಿಂಗ್‌ ಸಂಭ್ರಮ ಪೂರ್ಣವಾಗಿ ಸವಿಯಲು ಆಗಲಿಲ್ಲ ಅನ್ನುವ ಬೇಸರ ಇದೆ. ಲಾಕ್‌ಡೌನ್‌ ಮುಗಿದ ಕೂಡಲೇ ಸಿನಿಮಾ ಸೆಟ್ಟೇರುತ್ತದೆ. ಲಾಕ್‌ಡೌನ್‌ ಸಂಕಷ್ಟಮುಗಿದ ಮೇಲೆ ಹೊಸ ಲೈಫ್‌ ಶುರುವಾಗುತ್ತದೆ ಎನ್ನುವ ಭರವಸೆ ಇದೆ. ನನಗೆ ಮಾತ್ರವಲ್ಲ, ಎಲ್ಲರೂ ಈಗ ಜೀರೋದಿಂದಲೇ ಜೀವನ ಆರಂಭಿಸಬೇಕು.

- ಆರ್. ಕೇಶವಮೂರ್ತಿ