Bairagee: ಯಾವ ಭಾಷೆಯಲ್ಲಾದರೂ ನಟಿಸೋಕೆ ರೆಡಿ: ಶಿವಣ್ಣ
ಶಿವರಾಜ್ ಕುಮಾರ್ ನಟನೆ ವಿಜಯ್ ಮಿಲ್ಟನ್ ನಿರ್ದೇಶನದ ‘ಬೈರಾಗಿ’ ಸಿನಿಮಾ ಜುಲೈ 1ರಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಣ್ಣ ಅವರ ನಿವಾಸದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿ ಸಂದರ್ಭದಲ್ಲಿ ನಡೆದ ಮಾತುಕತೆ.
ಪ್ರಿಯಾ ಕೆರ್ವಾಶೆ
ಶಿವರಾಜ್ ಕುಮಾರ್ ನಟನೆ ವಿಜಯ್ ಮಿಲ್ಟನ್ ನಿರ್ದೇಶನದ ‘ಬೈರಾಗಿ’ ಸಿನಿಮಾ ಜುಲೈ 1ರಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಣ್ಣ ಅವರ ನಿವಾಸದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿ ಸಂದರ್ಭದಲ್ಲಿ ನಡೆದ ಮಾತುಕತೆ.
- ಈಗ ಪ್ಯಾನ್ ಇಂಡಿಯಾ ಸಿನಿಮಾಗಳ ಕಾಲ. ನಾನು ಯಾವ ಭಾಷೆಯಲ್ಲೂ ನಟಿಸೋಕೆ ರೆಡಿ. ರಜನಿಕಾಂತ್ ಅವರ 169ನೇ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಮುಂದೆಯೂ ಬೇರೆ ಭಾಷೆ ಚಿತ್ರಗಳಲ್ಲಿ ನಟಿಸುತ್ತೇನೆ. ಅಪ್ಪಾಜಿ ಬಿಟ್ಟರೆ ನನಗೆ ಇಬ್ಬರು ಸ್ಟಾರ್ಸ್ ಬಹಳ ಇಷ್ಟ. ಒಬ್ಬರು ಕಮಲ್‌ಹಾಸನ್. ಕಮಲ್‌ಹಾಸನ್ ಚಿತ್ರಗಳಲ್ಲಿ ನಟಿಸಬೇಕು ಅಂತ ಬಹಳ ಆಸೆ ಇದೆ. ನಾನಿಷ್ಟಪಡುವ ಇನ್ನೊಬ್ಬ ನಟ ಅಮಿತಾಬ್ ಬಚ್ಚನ್. ಬಾಲಿವುಡ್ ನಟಿ ರೇಖಾ ಜೊತೆ ನಟಿಸುವ ಆಸೆಯೂ ಜೀವಂತವಾಗಿದೆ. ಸದ್ಯ ಡೈರೆಕ್ಷನ್ ಮಾಡುವ ಹುಮ್ಮಸ್ಸಿಲ್ಲ. ಆದರೆ ವೆಬ್ ಸೀರೀಸ್ ಖಂಡಿತಾ ಮಾಡ್ತೀನಿ.
- ಅರ್ಜುನ್ ಜನ್ಯಾ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಅವರು ಬಹಳ ಸೊಗಸಾಗಿ ಕಥೆ ಮಾಡಿದ್ದಾರೆ. ಅವರ ನರೇಶನ್ ಕೇಳಿ ಥ್ರಿಲ್ ಆದೆ. ಸದ್ಯದ ಬೆಳವಣಿಗೆ ನೋಡಿದರೆ ಬಹುಶಃ ಇನ್ನಾರು ತಿಂಗಳಲ್ಲಿ ಈ ಸಿನಿಮಾ ಕೆಲಸ ಶುರುವಾಗಬಹುದು. ಇನ್ನೊಂದು ಕಡೆ ರಾಕ್‌ಲೈನ್ ನಿರ್ಮಾಣ, ಯೋಗರಾಜ್ ಭಟ್ ನಿರ್ದೇಶನದ ಹೊಸ ಚಿತ್ರದಲ್ಲಿ ಪ್ರಭುದೇವ ಅವರ ಜೊತೆಗೆ ನಟಿಸಲಿದ್ದೇನೆ. ಮೊದಲು ‘ವೇದ’ ಚಿತ್ರೀಕರಣ ಮುಕ್ತಾಯವಾಗಬೇಕಿದೆ.
ರಜನಿಕಾಂತ್ ಸಿನಿಮಾದಲ್ಲಿ ನಟಿಸುತ್ತಿದ್ದೇನೆ: ಶಿವಣ್ಣ
- ಶಕ್ತಿಧಾಮದ ಮಕ್ಕಳಿಗೆ ಸ್ಕೂಲ್ ನಿರ್ಮಾಣವಾಗುತ್ತಿದೆ. ನಟ ವಿಶಾಲ್ ಶಕ್ತಿಧಾಮದ ಬಗ್ಗೆ ಹೇಳಿರುವ ಹೇಳಿಕೆ ಬಗ್ಗೆ ಮಾತಾಡೋದಾದ್ರೆ, ಶಕ್ತಿಧಾಮಕ್ಕೆ ಅವರೊಮ್ಮೆ ಬಂದು ನೋಡಬೇಕು. ಆಗ ಅವರಿಗೊಂದು ಸ್ಪಷ್ಟತೆ ಸಿಗುತ್ತದೆ. ಯಾವ ರೀತಿ ಸಹಾಯ ನೀಡಬೇಕು ಅನ್ನೋ ಬಗ್ಗೆ ಅವರು ನಿರ್ಧಾರಕ್ಕೆ ಬರಬೇಕು. ಮೊನ್ನೆ ಒಬ್ಬ ಮಹಿಳೆಯನ್ನು ನಟ ರವಿಶಂಕರ್ ಗೌಡ ಕರೆತಂದಿದ್ದರು. ಅವರು ಶಕ್ತಿಧಾಮಕ್ಕೆ ಅವರ ಎಲ್ಲಾ ಆಸ್ತಿಯನ್ನು ಕೊಡಲು ಬಂದಿದ್ದರು. ನಾನು ಹಾಗೆಲ್ಲ ಮಾಡಬೇಡಿ, ನಿಧಾನಕ್ಕೆ ಈ ಬಗ್ಗೆ ಯೋಚಿಸಿ ಅಂದಿದ್ದೇನೆ.
- ಅಪ್ಪು ನಮ್ಮ ಜೊತೆಗೇ ಇದ್ದಾನೆ ಅಂದುಕೊಂಡಿದ್ದೇನೆ. ಅಪ್ಪಾಜಿ ಅವರ ಪುತ್ಥಳಿ ಮಾಡಿದ್ದನ್ನೇ ನನ್ನಿಂದ ನೋಡೋಕಾಗಿಲ್ಲ. ಇನ್ನು ಅಪ್ಪು ಪುತ್ಥಳಿ ಮಾಡೋದು ನೋಡಿದ್ರೆ ಮನಸ್ಸಿಗೆ ಬಹಳ ನೋವಾಗುತ್ತೆ. ಅವನ ಫೋಟೋಗೆ ಹಾರ ಹಾಕಿ ಗಂಧದ ಕಡ್ಡಿ ಹಚ್ಚಿಡೋದನ್ನು ನನ್ನಿಂದ ನೋಡೋಕೆ ಆಗಲ್ಲ. ಅವನಿಂದ 13 ವರ್ಷ ದೊಡ್ಡವನು ನಾನು. ನನ್ನ ಮದುವೆ ಆದಾಗ ಅವನಿಗೆ 11 ವರ್ಷ. ಪ್ರತಿಮೆ, ಪುತ್ಥಳಿ ಮಾಡೋದು ಆತ ಇಲ್ಲ ಅನ್ನೋದರ ದ್ಯೋತಕದಂತೆ ನನಗೆ ಕಾಣ್ತಿದೆ. ಅವನನ್ನು ನಮ್ಮ ಜೊತೆಗೆ ಉಳಿಸಿಕೊಳ್ಳಬೇಕಿದೆ. ಅದಕ್ಕೆ ಪುತ್ಥಳಿ ಬಿಡುಗಡೆಗೆ ನಾನು ಹೋಗಲಿಲ್ಲ. ಇದನ್ನೆಲ್ಲ ಹೇಳಿದರೆ ಜನ ಕೋಪಿಸಿಕೊಳ್ತಾರೆ. ಮನುಷ್ಯನ ದೇಹ ಮಣ್ಣಾದರೂ ಆತ್ಮ ಅನ್ನೋದು ಇರುತ್ತಲ್ವಾ.
- ಬೈರಾಗಿ ಚಿತ್ರ ಟಗರು ನಂತರ ಡಾಲಿ, ನನ್ನ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಚಿತ್ರ. ಜನ ಈ ಕಾಂಬಿನೇಶನ್‌ನ ಹಿಂದೆಯೂ ಇಷ್ಟಪಟ್ಟಿದ್ದಾರೆ. ಆಸೆ ತಪ್ಪಲ್ಲ. ಆದರೆ ಅದನ್ನು ಒಳ್ಳೆಯ ರೀತಿಯಿಂದ ಸಾಧಿಸಬೇಕು. ತನ್ನ ಆಸೆಯ ಈಡೇರಿಕೆಗಾಗಿ ಇನ್ನೊಬ್ಬನ ನಂಬಿಕೆಗೆ ಹರ್ಚ್ ಮಾಡಿದರೆ ಆತ ಅದಕ್ಕೆ ಹೇಗೆ ರಿಯಾಕ್ಟ್ ಮಾಡಬಹುದು ಅನ್ನೋದನ್ನು ಈ ಸಿನಿಮಾ ಹೇಳುತ್ತೆ. ವಿಜಯ ಮಿಲ್ಟನ್ ನಿರ್ದೇಶನದಲ್ಲಿನ ನಿಖರತೆ, ಪಾತ್ರಕ್ಕೆ ಬೇಕಾದ್ದನ್ನು ನಟನಿಂದ ಹೊರತೆಗೆಸುವ ಜಾಣ್ಮೆ, ಪಾತ್ರದ ಅಂತರಾಳ ಅರಿಯುವ ರೀತಿ ನನಗಿಷ್ಟವಾಯ್ತು.
- ಬೈರಾಗಿ ಚಿತ್ರದಲ್ಲಿ ನನ್ನದು ಒಬ್ಬ ಸಾಮಾನ್ಯ ಹುಲಿ ಕುಣಿತದವನ ಪಾತ್ರ. ಹುಲಿ ಕುಣಿತವನ್ನೂ ಈ ಸಿನಿಮಾದಲ್ಲಿ ಮಾಡಿದ್ದೀನಿ. ಹುಲಿ ವೇಷ ಮಾಡುವವರು ಬಹಳ ಬಡವರು. ಹುಲಿಯಾಗಿ ಅದರ ಎಲ್ಲ ರೊಚ್ಚನ್ನೂ ಮೈಮೇಲೆ ಎಳೆದುಕೊಂಡು ನಟಿಸುವ ಕಲಾವಿದ ಆ ವೇಷ ಕಳಚಿದ ಮೇಲೆ ಇಲಿಯ ಹಾಗೆ ಇನ್ನೊಬ್ಬರ ಎದುರು ಕೈ ಒಡ್ಡೋದಿದೆಯಲ್ಲಾ, ಅದು ಬದುಕಿನ ಸತ್ಯ ದರ್ಶನ ಮಾಡಿಸುತ್ತೆ.
'ಅವನೇ ಶ್ರೀಮನ್ನಾರಾಯಣ' ನಿರ್ದೇಶಕರ ಜೊತೆ ಶಿವಣ್ಣ ಸಿನಿಮಾ; ಸೂಪರ್ ಹೀರೋ ಆಗ್ತಿದ್ದಾರೆ ಸೆಂಚುರಿ ಸ್ಟಾರ್
ಬೈರಾಗಿ ರೋಡ್‌ಶೋ: ‘ಬೈರಾಗಿ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಜೂ.25ಕ್ಕೆ ಚಾಮರಾಜ ನಗರದಲ್ಲಿ ನಡೆಯಲಿದೆ. ಹಿಂದಿನ ದಿನ ಜೂ.24ಕ್ಕೆ ರಾಮನಗರದಿಂದ ಮೈಸೂರುವರೆಗೂ ಶಿವಣ್ಣ ನೇತೃತ್ವದಲ್ಲಿ ಸಿನಿಮಾ ತಂಡದಿಂದ ರೋಡ್ ಶೋ ನಡೆಯಲಿದೆ’ ಎಂದು ನಿರ್ಮಾಪಕ ಕೃಷ್ಣ ಸಾರ್ಥಕ್ ತಿಳಿಸಿದ್ದಾರೆ.
ಹುಟ್ಟುಹಬ್ಬ ಆಚರಣೆ ಇಲ್ಲ: ಜು.12ರಂದು ಶಿವರಾಜ್ ಕುಮಾರ್ ಜನ್ಮದಿನ. ಅಪ್ಪು ಅಗಲಿಕೆ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಆಚರಿಸುವುದಿಲ್ಲ ಎಂದು ಶಿವಣ್ಣ ಹೇಳಿದ್ದಾರೆ. ಈ ವರ್ಷ ಶಿವಣ್ಣ 60ನೇ ವರ್ಷಕ್ಕೆ ಕಾಲಿಡುತ್ತಿದ್ದು, ಅಭಿಮಾನಿಗಳು ಅದ್ದೂರಿಯ ಹುಟ್ಟುಹಬ್ಬ ಆಚರಣೆಗೆ ತಯಾರಿ ನಡೆಸಿದ್ದರು. ಆದರೆ ಶಿವಣ್ಣ ಯಾವುದೇ ಆಚರಣೆ ಇರುವುದಿಲ್ಲ ಎಂದಿದ್ದಾರೆ.