ಕನ್ನಡದ ಮೇರು ನಟ ಶಂಕರ್ ನಾಗ್ ಮತ್ತು ಅರುಂಧತಿ ಅವರದ್ದು ಮನೆಯವರ ವಿರೋಧದ ನಡುವೆಯೂ ಒಂದಾದ ಅಪರೂಪದ ಸುಂದರ ಪ್ರೇಮಕಥೆಯಾಗಿದೆ. ಆರು ವರ್ಷಗಳ ಒಡನಾಟದ ನಂತರ ಮದುವೆಯಾದ ಈ ಅದ್ಭುತ ಜೋಡಿಯ ಬದುಕಿನಲ್ಲಿ ನಡೆದ ಭೀಕರ ಅಪಘಾತ ಮತ್ತು ದುರಂತ ಘಟನೆ ಕನ್ನಡಿಗರಿಗೆ ಇಂದಿಗೂ ಮರೆಯಲಾಗದ ನೋವಾಗಿದೆ.
ಕನ್ನಡ ಚಿತ್ರರಂಗಕ್ಕೆ ಹೊಸ ದಿಕ್ಕು ತೋರಿಸಿದ ಅದ್ಭುತ ನಟ, ನಿರ್ದೇಶಕ ಶಂಕರ್ ನಾಗ್. ನಟನೆಯಷ್ಟೇ ಅಲ್ಲ, ತಮ್ಮ ಕ್ರಾಂತಿಕಾರಿ ಆಲೋಚನೆಗಳಿಂದ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದ ಪ್ರತಿಭೆ. ರಂಗಭೂಮಿ, ಸಿನಿಮಾ, ಕಿರುತೆರೆ, ಮೆಟ್ರೋ ಕನಸು.. ಹೀಗೆ ಅವರು ಮುಟ್ಟದ ಕ್ಷೇತ್ರವೇ ಇಲ್ಲ. ಅಲ್ಪಾಯುಷ್ಯದಲ್ಲೇ ಅಪಾರ ಸಾಧನೆ ಮಾಡಿದ ಕನ್ನಡದ ಹೆಮ್ಮೆಯ ವ್ಯಕ್ತಿ, ಇಂದಿಗೂ ಜನರ ಮನದಲ್ಲಿ ಬದುಕಿರುವ ಮಾಂತ್ರಿಕ ಶಂಕರ್ ನಾಗ್ ಆಗಿದ್ದರು.
ಕಲೆ, ಸಿನಿಮಾ, ಕನಸುಗಳ ನಡುವೆ ಶಂಕರ್ನಾಗ್ಗೆ ಸುಂದರ ಪ್ರೀತಿ ಶುರುವಾಗಿತ್ತು.. ಇಬ್ಬರ ಬದುಕಿನಲ್ಲಿ ಪ್ರೀತಿ ಅರಳಿದ ರೀತಿ, ಮನೆಯವರ ವಿರೋಧದ ನಡುವೆಯೂ ಒಂದಾದ ಜೋಡಿ.. ಶಂಕರ್ ನಾಗ್ ಮತ್ತು ಅರುಂಧತಿ ನಾಗ್ ಅವರ ಪ್ರೇಮಕಥೆ ಕನ್ನಡಿಗರಿಗೆ ಇಂದಿಗೂ ಸ್ಫೂರ್ತಿ ನೀಡುವ ಪ್ರೇಮಕಥೆ ಅವರದ್ದಾಗಿದೆ. ಶಂಕರ್ ನಾಗ್ ಮತ್ತು ರಂಗಭೂಮಿ ಮತ್ತು ಸಿನಿಮಾ ಕಲಾವಿದೆ ಅರುಂಧತಿ ರಾವ್ (ಅರುಂಧತಿ ನಾಗ್) 1980ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಸುಮಾರು ಆರು ವರ್ಷಗಳ ಪ್ರೀತಿ ಮತ್ತು ಒಡನಾಟದ ನಂತರ 1980ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಮನೆಯವರ ವಿರೋಧ ಹಿನ್ನೆಲೆಯಲ್ಲಿ ಒಮ್ಮೆ ಬೇಡ ಎಂದು ನಿರ್ಧರಿಸಿದ್ದರಂತೆ. ಕೊನೆಗೂ ಆ ಜೋಡಿ ಮದುವೆ ಆಯಿತು. ತಮ್ಮ ಪ್ರೇಮ ಕಥೆಯ ಬಗ್ಗೆ ಅರುಂಧತಿ ನಾಗ್, ಸಂದರ್ಶನ ಒಂದರಲ್ಲಿ ಮನಬಿಚ್ಚಿ ಮಾತನ್ನಾಡಿದ್ದಾರೆ. ಅದರ ವಿವರ ಹೀಗಿದೆ.
ಶಂಕರ್ ನಾಗ್ ಪ್ರೀತಿ
ಅರುಂಧತಿ ನಾಗ್ ಹೇಳಿರುವಂತೆ.. ಅವನ ಕಾಲೇಜು ಬೇರೆ, ನನ್ನ ಕಾಲೇಜು ಬೇರೆ! ಎರಡೂ ಕಾಲೇಜುಗಳ ಮಧ್ಯೆ ತುಂಬಾ ಪೈಪೋಟಿ ಇತ್ತು. ಹಾಗಾಗಿ ಸ್ಪರ್ಧೆಗಳು ನಡೆದಾಗಂತೂ ನಾವು ಅವನ ಕಡೆ ತಿರುಗಿಯೂ ನೋಡುತ್ತಿರಲಿಲ್ಲ. ಅವನದು ಲಾಲಾ ಲಾಜಪತ್ ರಾಯ್ ಕಾಲೇಜು, ನನ್ನದು ನರಸಿಂಹರಾಜ ಕಾಲೇಜು!
ಆದರೆ ಆಮೇಲೆ 'ಇಂಡಿಯನ್ ನ್ಯಾಷನಲ್ ಥಿಯೇಟರ್' ಅಂತ ಒಂದಿದೆ. ಅವರು ಯೂನಿವರ್ಸಿಟಿ ಸ್ಪರ್ಧೆಗಳಲ್ಲಿ ಯಾರ್ಯಾರಿಗೆ ಉತ್ತಮ ನಟ, ಉತ್ತಮ ನಟಿ ಪ್ರಶಸ್ತಿ ಸಿಕ್ಕಿತ್ತೋ, ಅವರೆಲ್ಲರನ್ನೂ ಸೇರಿಸಿಕೊಂಡು ಗುಜರಾತಿನಲ್ಲಿ ಒಂದು ನಾಟಕ ಮಾಡಿದರು. ಆವಾಗ ನಾನು ಶಂಕರ್ನ ಭೇಟಿಯಾದೆ, ಅವನ ಹತ್ತಿರ ಮಾತಾಡಿದೆ. ಬಹುಶಃ ಆವಾಗಲೇ ನನಗೆ ಅವನ ಮೇಲೆ ಪ್ರೀತಿ ಹುಟ್ಟಿರಬೇಕು.
ನಮ್ಮ ಮದುವೆ ಆದಾಗ ನನಗೆ ಇಪ್ಪತ್ತಮೂರು ವರ್ಷ. ನನಗೆ ಆರು ವರ್ಷಗಳಿಂದ ಶಂಕರ್ ಪರಿಚಯ ಇತ್ತು. ನಾವು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೆವು. ಮದುವೆ ಬಗ್ಗೆ ನಾನು ಅವನಿಗೆ ಒಂದೆರಡು ಸಲ, "ಇದು ಆಗ್ತಾ ಇಲ್ಲ, ಬೇಡ" ಅಂತ ಹೇಳಿದ್ದೆ. ಆದರೆ ನಮ್ಮ ಸಂಬಂಧದಲ್ಲಿ ಹೆಚ್ಚು ತಿಳುವಳಿಕೆ ಇದ್ದಿದ್ದು ಶಂಕರ್ಗೆ ಅಂತ ನನಗೆ ಅನಿಸುತ್ತೆ. ಅವನು ತುಂಬಾ ತಿಳುವಳಿಕೆ ಇದ್ದ ಹುಡುಗ, ತುಂಬಾ ಸರಳ ವ್ಯಕ್ತಿ.
ಕರ್ನಾಟಕದಲ್ಲಿ ಸಿನಿಮಾಗಳಲ್ಲಿ ಅವನನ್ನು ಒಬ್ಬ ರೌಡಿ, ಹೊಡೆದಾಡುವವನು, ಸಿಟ್ಟು ಬರುವ ವ್ಯಕ್ತಿ ಅಂತ ಜನ ನೋಡುತ್ತಿದ್ದರು. ಆದರೆ ಅವನ ನಿಜವಾದ ಸ್ವಭಾವ ಅದಕ್ಕೆ ಪೂರ್ತಿ ವಿರುದ್ಧವಾಗಿತ್ತು. ನನಗೆ ಅವನು ಹದಿನೇಳು ವರ್ಷಗಳಿಂದ ಗೊತ್ತಿತ್ತು. ಒಂದು ದಿನವೂ ನಮ್ಮಿಬ್ಬರ ಮಧ್ಯೆ ಜಗಳ ಆಗಿಲ್ಲ. ಇದನ್ನು ಯಾರೂ ನಂಬುವುದಿಲ್ಲ ಎಂದಿದ್ದಾರೆ.
ಮದುವೆಯ ನಂತರ ಬೆಂಗಳೂರಿಗೆ ಬಂದ ಈ ಜೋಡಿ ಸಿನಿಮಾದಲ್ಲಿ ಬ್ಯುಸಿ ಆಗಿತ್ತು. ನೋಡಿ ಸ್ವಾಮಿ ನಾವಿರೋದು ಹೀಗೆ, ಪರಮೇಶಿ ಪ್ರೇಮ ಪ್ರಸಂಗ, ಆಕ್ಸಿಡೆಂಟ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದರು. 1990ರಲ್ಲಿ ಶಂಕರ್ ನಾಗ್ ಅವರನ್ನು ಅರುಂಧತಿ ನಾಗ್ ಕಳೆದುಕೊಳ್ತಾರೆ.
ಶಂಕರ್ನಾಗ್ ನಿಧನ ಹೇಗಾಯ್ತು?
ಶಂಕರ್ ನಾಗ್ ಅವರು ಜೋಕುರಸ್ವಾಮಿ ಸಿನಿಮಾದ ಪೂಜೆಗಾಗಿ ಬೆಂಗಳೂರಿನಿಂದ ಬಾಗಲಕೋಟೆಯ ಲೋಕಾಪುರಕ್ಕೆ ಹೊರಟಿದ್ದರು. ಪತ್ನಿ ಅರುಂಧತಿ ನಾಗ್, ಮಗಳು ಕಾವ್ಯ ಅವರ ಜೊತೆ ಇದ್ದರು. ಶಂಕರ್ ನಾಗ್ ಅವರ ಕಾರು ದಾವಣಗೆರೆ ಮಾರ್ಗವಾಗಿ ಪ್ರಯಾಣ ಮಾಡುತ್ತಿತ್ತು. ಆನಗೋಡು ಗ್ರಾಮ ಬಳಿಯ ರಾಷ್ಟ್ರೀಯ ಹೆದ್ದಾರಿ - 04ರಲ್ಲಿ ಕಾರು ಚಲಿಸುತ್ತಿತ್ತು. ಇದೇ ಹೆದ್ದಾರಿಯಲ್ಲಿ ಸತತವಾಗಿ 4 ದಿನಗಳಿಂದ ಬೆಂಗಳೂರು ಕಡೆ ಹೋಗಬೇಕಾಗಿದ್ದ ಲಾರಿ ಕೆಟ್ಟು ನಿಂತಿತ್ತು. ಕಾರು ಚಾಲಕ ಲಿಂಗಣ್ಣ ಕೆಟ್ಟು ನಿಂತ ಲಾರಿಯನ್ನು ತಪ್ಪಿಸಿ ಎದುರುಗಡೆ ಟ್ರಾನ್ಫಾರಂ ಬಾಕ್ಸ್ ಹೊತ್ತು ಬಂದ ಲಾರಿಗೆ ಡಿಕ್ಕಿ ಹೊಡೆದರು. ಭಾನುವಾರ ಬೆಳಗಿನ ಜಾವ 4:30ಕ್ಕೆ ನಡೆದ ಭೀಕರ ಅಪಘಾತದಲ್ಲಿ ಕಾರು ಚಾಲಕ ಲಿಂಗಣ್ಣ, ನಟ ಶಂಕರ್ ನಾಗ್ ಸ್ಥಳದಲ್ಲೇ ಮೃತಪಡುತ್ತಾರೆ.
















