ಸಿನಿಮಾ ಇಂಡಸ್ಟ್ರಿ ಇಷ್ಟೆಲ್ಲಾ ಮುಂದುವರಿದಿದೆ, ಆದರೆ ಸ್ಯಾಂಡಲ್‌ವುಡ್‌ನಲ್ಲಿ ಕಾಂಟ್ರಾಕ್ಟ್, ಅಗ್ರಿಮೆಂಟ್‌ ಅನ್ನೋದು ವ್ಯವಸ್ಥಿತವಾಗಿಲ್ಲ. ನಿರ್ಮಾಪಕರು ಅಡ್ವಾನ್ಸ್‌ ಕೊಡುತ್ತಾರೆ ಎಂದರು ನಟಿ ಸಪ್ತಮಿ ಗೌಡ.

1. ಸಿನಿಮಾ ಇಂಡಸ್ಟ್ರಿ ಇಷ್ಟೆಲ್ಲಾ ಮುಂದುವರಿದಿದೆ, ಆದರೆ ಸ್ಯಾಂಡಲ್‌ವುಡ್‌ನಲ್ಲಿ ಕಾಂಟ್ರಾಕ್ಟ್, ಅಗ್ರಿಮೆಂಟ್‌ ಅನ್ನೋದು ವ್ಯವಸ್ಥಿತವಾಗಿಲ್ಲ. ನಿರ್ಮಾಪಕರು ಅಡ್ವಾನ್ಸ್‌ ಕೊಡುತ್ತಾರೆ. ತಕ್ಷಣ ಇವರು ತಮ್ಮ ಸಿನಿಮಾದ ನಾಯಕ ಅಥವಾ ನಾಯಕಿ ಅಂದುಕೊಂಡುಬಿಡುತ್ತಾರೆ. ಆ ಒಂದು ವರ್ಷದಲ್ಲಿ ಯಾವಾಗ ಬೇಕಿದ್ದರೂ ಡೇಟ್ಸ್‌ ತಗೊಳ್ಳಬಹುದು ಎಂಬ ನಿರೀಕ್ಷೆಯಲ್ಲಿರುತ್ತಾರೆ. ನಾಯಕಿಗೆ ಇಷ್ಟು ಸಂಭಾವನೆ ಕೊಡುತ್ತೇವೆ ಅಂತ ಹೇಳಿ ಕೊನೆಗೆ ಕೈಚೆಲ್ಲುತ್ತಾರೆ. ನಾವು ಕಾಂಟ್ರಾಕ್ಟ್‌ ಅಗ್ರಿಮೆಂಟ್‌ ಬಗ್ಗೆ ಕೇಳಿದರೆ, ‘ನಮಗೆ ನಂಬಿಕೆ ಇದೆ ಮೇಡಂ, ನಮ್ಮ ಮೇಲೂ ನಂಬಿಕೆ ಇಡಿ’ ಅಂತಾರೆ. ಇದೇ ನಿಮಗೆ ರೆಡ್‌ಫ್ಲ್ಯಾಗ್‌. ಅದೇ ನಂಬಿಕೆಯಲ್ಲಿ ಅಗ್ರಿಮೆಂಟ್‌ ಮಾಡಬಹುದಲ್ವಾ.

2. ಸಂಭಾವನೆ ಅನ್ನುವುದು ವೈಯುಕ್ತಿಕ ವಿಚಾರ. ಒಂದು ಹಂತದವರೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಆಗಲಿಲ್ಲ ಅಂದರೆ ಹೊರನಡೆಯುತ್ತೇವೆ. ಒಂದು ಮೊತ್ತಕ್ಕೆ ಫೈನಲ್‌ ಆದತಕ್ಷಣ ಕಾಂಟ್ರಾಕ್ಟ್‌ ಪೇಪರ್‌ ರೆಡಿಯಾಗಬೇಕು. ಹೀಗಾದರೆ ಆಮೇಲೆ ಗೊಂದಲ, ಗಲಾಟೆ ನಡೆಯಲ್ಲ. ಪ್ರಮೋಶನ್‌ಗೆ ಅಂತ ಕಲಾವಿದರಿಗೆ ದುಡ್ಡು ಕೊಡುವ ವ್ಯವಸ್ಥೆ ನಮ್ಮಲ್ಲಿನ್ನೂ ಬಂದಿಲ್ಲ. ಹೀಗಾಗಿ ನಾಯಕಿ ತನ್ನ ಸಂಭಾವನೆಯಲ್ಲೇ ಅದಕ್ಕೂ ದುಡ್ಡು ಎತ್ತಿಟ್ಟುಕೊಂಡಿರಬೇಕಾಗುತ್ತದೆ. ಜಿಎಸ್‌ಟಿ ಅಂತಲೂ ಕಡಿತವಾಗುತ್ತದೆ. ಸಾಕಷ್ಟು ಖರ್ಚುಗಳೂ ಇರುತ್ತವೆ. ಅರ್ಥಮಾಡಿಕೊಳ್ಳಿ.

3. ಕ್ಯಾರವಾನ್‌ ಇದ್ದರೆ ಸಮಯ, ಹಣ ನಿರ್ಮಾಪಕರಿಗೇ ಉಳಿಯುತ್ತದೆ. ಎಲ್ಲೆಲ್ಲೂ ಕ್ಯಾಮರಗಳಿರುವ ಈ ಕಾಲದಲ್ಲಿ ನಟಿಯರಿಗೆ ಕ್ಯಾರವಾನ್‌ ಅನಿವಾರ್ಯ. ಎಲ್ಲಿ ಯಾವ ಕ್ಯಾಮರದಲ್ಲಿ ಏನು ಸೆರೆ ಹಿಡಿಯುತ್ತಾರೆ ಅಂತಲೇ ಗೊತ್ತಾಗೋದಿಲ್ಲ. ಡ್ರೆಸ್‌ ಚೇಂಜ್‌, ವಾಶ್‌ ರೂಂ ಇತ್ಯಾದಿಗಳಿಗೆ ಬೇಕೇ ಬೇಕಾಗುತ್ತದೆ. ಉಳಿದುಕೊಂಡ ಜಾಗದ ಸಮೀಪವೇ ಸೆಟ್‌ ಇದ್ದಾಗ ಅಲ್ಲೇ ಹೋಗಿ ಡ್ರೆಸ್‌ ಚೇಂಜ್‌ ಮಾಡಿ ಬರಬಹುದು, ಆದರೆ ಆ ರೀತಿ ಇರೋದು ಕಡಿಮೆ.

4. ಹೇರ್‌ ಸ್ಟೈಲಿಸ್ಟ್‌, ಮೇಕಪ್‌ ಆರ್ಟಿಸ್ಟ್‌, ಆ್ಯಕ್ಷನ್‌ ಸೀಕ್ವೆನ್ಸ್‌ ಇದ್ದಾಗ ಅಸಿಸ್ಟೆಂಟ್‌ಗಳನ್ನು ನಾವು ಕರೆತರಲೇಬೇಕಾಗುತ್ತದೆ. ಆರಂಭದಲ್ಲಿ ಇದಕ್ಕೆ ಒಪ್ಪುವ ನಿರ್ಮಾಪಕರು ಆಮೇಲೆ ನಮ್ಮ ಜೊತೆ ಬಂದವರಿಗೆ ದುಡ್ಡು ಕೊಡದೇ ಸತಾಯಿಸುವುದೂ ನಡೆಯುತ್ತದೆ. ನಿರ್ಮಾಪಕರಿಗೆ ಹೊರೆಯಾಗದಿರಲಿ ಅಂತ ನಾನು ಮಿನಿಮಮ್‌ ಸ್ಟಾಫ್‌ಗಳನ್ನಷ್ಟೇ ಕರೆತರುತ್ತೇನೆ. ಆದರೂ ಸಮಸ್ಯೆ ಸೃಷ್ಟಿಸುತ್ತಾರೆ. ಸೆಟ್‌ನಲ್ಲೂ ಲೈಟ್‌ಬಾಯ್ಸ್‌, ಇತರರ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಇಲ್ಲಿ ಪ್ರತಿಯೊಬ್ಬರಿಗೂ ಆತ್ಮಾಭಿಮಾನ ಇದೆ. ಅದನ್ನು ಗೌರವಿಸಬೇಕು.

5. ಸಿನಿಮಾದ ಪ್ರೊಮೋ ಮಾಡಿ ಹಾಕಿದ ತಕ್ಷಣ ಇನ್‌ವೆಸ್ಟ್‌ ಮಾಡುವವರು ಸಿಗುತ್ತಾರೆ ಎಂಬ ಮನಸ್ಥಿತಿ ನಮ್ಮ ನಿರ್ಮಾಪಕರಲ್ಲಿ ಇದೆ. ಹೂಡಿಕೆ ಮಾಡುವವರು ಸಿಗದಿದ್ದರೆ ಪ್ರಾಜೆಕ್ಟ್‌ ನಿಲ್ಲಿಸುತ್ತಾರೆ. ಮತ್ತೆ ಯಾರೋ ಇನ್‌ವೆಸ್ಟರ್‌ ಸಿಕ್ಕಿದಾಗ ಸಿನಿಮಾ ಮಾಡಲು ಹೊರಡುತ್ತಾರೆ. ಆ ಹೊತ್ತಿಗೆ ನಮ್ಮ ಡೇಟ್ಸ್‌ ಹೊಂದಾಣಿಕೆ ಆಗಬೇಕಲ್ವಾ.. ಈಗ ಚಿಕ್ಕ ಬಜೆಟ್‌ ಚಿತ್ರಕ್ಕೂ 6 ಕೋಟಿ ರು.ಗಳಷ್ಟಾದರೂ ಬೇಕು. ನೀವು ಆರ್ಥಿಕವಾಗಿ ಬಲಿಷ್ಠರಾಗಿದ್ದರೆ ಮಾತ್ರ ನಿರ್ಮಾಣಕ್ಕಿಳಿಯಿರಿ. ಇಲ್ಲದಲ್ಲಿ ಅನಗತ್ಯ ಗೊಂದಲ ಸೃಷ್ಟಿಸದಿರಿ.

ಸಿನಿಮಾ ಬರಹಗಾರರಿಗೆ ಹೆಚ್ಚಿನ ಬೆಲೆ ನೀಡಿ

6. ನಮ್ಮ ನಿರ್ಮಾಪಕರು ಸಿನಿಮಾ ಪ್ರಮೋಶನ್‌ಗೆ ದುಡ್ಡು ಸುರಿಯಲು ಹಿಂದೇಟು ಹಾಕುವುದಿಲ್ಲ. ಅದಕ್ಕೆ ತನ್ನ ತಕರಾರಿಲ್ಲ. ಆದರೆ ಬರಹಗಾರರಿಗೆ ಸಿಗಬೇಕಾದ ಗೌರವ, ಸಂಭಾವನೆ ನೀಡಲು ಹಿಂದೇಟು ಹಾಕುತ್ತಾರೆ. ಬರಹಗಾರರೇ ಸಿನಿಮಾದ ಅಂತರಾಳದ ಅರಿವಿರುವವರು. ನಾನು ‘ಕಾಂತಾರ’ ಸಿನಿಮಾ ಮಾಡುವಾಗ ಅಲ್ಲಿ ಬರಹಗಾರರೇ ಸಹ ನಿರ್ದೇಶಕರೂ ಆಗಿ ನಮಗೆ ದೃಶ್ಯವನ್ನು, ಅಲ್ಲಿರಬೇಕಾದ ಎಮೋಶನ್‌ ಅನ್ನು ವಿವರಿಸುತ್ತಿದ್ದರು. ಸಿನಿಮಾ ಅಷ್ಟು ತೀವ್ರವಾಗಿ ಬರುವುದರ ಹಿಂದೆ ಅವರ ಕೊಡುಗೆಯೂ ಇತ್ತು. ಆದರೆ ಹೆಚ್ಚಿನ ಸಿನಿಮಾಗಳಲ್ಲಿ ಬರಹಗಾರರು ಯಾವ ಫೀಲಿಂಗ್‌ ಇಟ್ಟುಕೊಂಡು ಬರೆದಿದ್ದಾರೆ ಅನ್ನುವುದು ಉಳಿದವರಿಗೆ ತಿಳಿದಿರುವುದಿಲ್ಲ. ಸೀನ್‌ ಪೇಪರ್‌ ನಮ್ಮ ಕೈಗೆ ಬರುವಾಗ ಬೇರೆಯೇ ಸ್ವರೂಪ ಪಡೆದುಕೊಂಡಿರುತ್ತದೆ. ಹೀಗಿದ್ದಾಗ ಸಿನಿಮಾ ಪರಿಣಾಮಕಾರಿಯಾಗಿ ಬರಲು ಹೇಗೆ ಸಾಧ್ಯ? ಸಿನಿಮಾ ಬರಹಗಾರರಿಗೆ ಹೆಚ್ಚಿನ ಬೆಲೆ ನೀಡಿ, ಅವರಲ್ಲಿ ಶಕ್ತಿ ತುಂಬಿ. ಅವರನ್ನು ಬೆಳೆಸಿ, ಆಗ ಇಂಡಸ್ಟ್ರಿಯೂ ಉಳಿಯುತ್ತದೆ, ಬೆಳೆಯುತ್ತದೆ.